ಅಕ್ಟೋಬರ್ 6 ರಿಂದ ಯುವ ಸಂಭ್ರಮ ಆರಂಭ

34
Share

ಯುವ ಸಂಭ್ರಮ ಪೋಸ್ಟರ್ ಬಿಡುಗಡೆ
*ಅಕ್ಟೋಬರ್ 6 ರಿಂದ ಯುವ ಸಂಭ್ರಮ ಆರಂಭ – ಸೀಮಾ ಲಾಟ್ಕರ್*

ಮೈಸೂರು.ಅ.4- ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಯುವ ಸಂಭ್ರಮ ಕಾರ್ಯಕ್ರಮವು ಅಕ್ಟೋಬರ್ 6 ರಿಂದ ಅಕ್ಟೋಬರ್ 13 ರವರೆಗೆ ನಡೆಯಲಿದೆ ಎಂದು ದಸರಾ ಉಪ ವಿಶೇಷ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದ ಸೀಮಾ ಲಾಟ್ಕರ್ ರವರು ತಿಳಿಸಿದರು.

ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಯುವ ಸಂಭ್ರಮ ಉಪಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಟು ದಿನಗಳು ಯುವ ಸಂಭ್ರಮ ನಡೆಯಲಿದ್ದು ಪ್ರತಿದಿನ ಸಂಜೆ 5:00ಯಿಂದ ರಾತ್ರಿ 10 ಗಂಟೆವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮoದಿರದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 400 ಕಾಲೇಜು ತಂಡಗಳು ಭಾಗವಹಿಸುತ್ತಿವೆ. ಒಂದು ಕಾಲೇಜು ತಂಡದಿoದ ಗರಿಷ್ಠ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ತಂಡ ನೃತ್ಯ ಪ್ರದರ್ಶನಕ್ಕೆ ಐದು ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದ್ದು, ಪ್ರತಿದಿನ 50 ಕಾಲೇಜು ತಂಡಗಳು ಪ್ರದರ್ಶನ ನೀಡಲಿವೆ. ಒಟ್ಟು 1200 ವಿದ್ಯಾರ್ಥಿಗಳು ಯುವ ಸಂಭ್ರಮದ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾರತದ ಸ್ವಾತಂತ್ರ‍್ಯ ಚಳುವಳಿ ಹಾಗೂ ಕರ್ನಾಟಕದ ಏಕೀಕರಣ, ಲಿಂಗಸಮಾನತೆಯೊoದಿಗೆ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸ್ವಯಂ ರಕ್ಷಣಾ ಕಲೆ, ಮೊಬೈಲ್ ನಿಂದ ಪುಸ್ತಕದೊಳಗೆ ಯುವಜನತೆಯ ನಡಿಗೆ, ಬಹುತ್ವದ ಸಮಾಜಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು, ಭಾರತದ ಸುಸ್ಥಿರ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ ವಿವಿಧತೆಯಲ್ಲಿ ಏಕತೆ, ಚಂದ್ರಯಾನ ಮೂರರ ಹಿನ್ನೆಲೆಯಲ್ಲಿ ವೈಜ್ಞಾನಿಕ ಪ್ರಗತಿಗೆ ಮೈಸೂರು ಸಂಸ್ಥಾನದ ಕೊಡುಗೆ, ಭಾರತದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳ ಅರಿವಿನ ಮುಖೇನ ಪ್ರಜಾಪ್ರಭುತ್ವ ಬಲಪಡಿಸೋಣ, ಮಾದಕ ವ್ಯಸನ ಮುಕ್ತ ಸಮಾಜದೆಡೆಗೆ ಯುವಜನತೆಯ ನಿಲುವು, ಸಾಂಸ್ಕೃತಿಕ ಸೌರಭದ ಮುಖೇನ ಸಾಮಾಜಿಕ ಮಾನವೀಯ ಮೌಲ್ಯಗಳ ಅನಾವರಣ, ಮಾದರಿ ಕರ್ನಾಟಕವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ, ಕರ್ನಾಟಕ ಜಾನಪದ ಪರಂಪರೆ ಹಾಗೂ ದೇಶಿ ಸಂಸ್ಕೃತಿ, ಜೈ ಜವಾನ್ ಜೈ ಕಿಸಾನ್, ಸಂಗೀತ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಇತರೆ ಸಾಂಸ್ಕೃತಿಕ ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯ ಕಲೆಗಳು, ಕ್ರೀಡಾ ಜಗತ್ತು ಹಾಗೂ ಯುವಜನತೆ, ಆರೋಗ್ಯ ಮತ್ತು ಕ್ಷೇಮ, ಮೈಸೂರು ದಸರಾ ವೈಭವ ಅಂದು ಇಂದು, ವನ್ಯಜೀವಿ ಮಾನವ ಸಂಘರ್ಷ ಹಾಗೂ ಪರಿಸರ ಸಂರಕ್ಷಣೆ, ಸುಳ್ಳು ಸುದ್ದಿ ಪರಿಣಾಮ ಮತ್ತು ನಿಯಂತ್ರಣ ಹಾಗೂ ಆಧುನಿಕ ಸ್ಪರ್ಧಾತ್ಮಕ ಜಗತ್ತಿಗೆ ಶಿಕ್ಷಣವೇ ಮೂಲ ಮಂತ್ರ. ಈ ವಿಷಯಗಳನ್ನು ವಸ್ತು ವಿಷಯವನ್ನಾಗಿ ನೀಡಿದ್ದು, ಇವುಗಳನ್ನು ಆಧರಿಸಿ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿವೆ ಎಂದರು.
ಯುವ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ಅಕ್ಟೋಬರ್ 6 ರಂದು ಸಂಜೆ 5:00ಗೆ ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟರಾದ ವಶಿಷ್ಠ ಸಿಂಹ ಹಾಗೂ ಖ್ಯಾತ ಚಲನ ಚಿತ್ರ ನಟಿ ಹರಿಪ್ರಿಯ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಲು ಸಾಧ್ಯವಾಗದ ತಂಡಗಳಿಗೆ ರಾತ್ರಿ ವಾಸ್ತವ್ಯ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದರು.
ಯುವ ಸಂಭ್ರಮ ಉಪಸಮಿತಿ ವತಿಯಿಂದ ಯುವ ಸಂಭ್ರಮ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ವಿ.ಆರ್ ಶೈಲಜಾ, ಕಾರ್ಯಪಾಲಕ ಅಭಿಯಂತರರಾದ ಆರ್ ಪ್ರತಾಪ್ ಹಾಗೂ ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ನಿಂಗರಾಜು ಆರ್ ಭಾಗವಹಿಸಿದ್ದರು.

Share