ಅರಮನೆ ಆವರಣದಲ್ಲಿ ಶ್ರೀಗಂಧದ ನೂತನ ಮ್ಯೂಸಿಎಂ ಸ್ಥಾಪನೆಗೆ ಚಿಂತನೆ; ಸಚಿವ ಎಸ್ ಟಿ ಎಸ್

330
Share

ಅರಮನೆ ಆವರಣದಲ್ಲಿ ಶ್ರೀಗಂಧದ ನೂತನ ಮ್ಯೂಸಿಎಂ ಸ್ಥಾಪನೆಗೆ ಚಿಂತನೆ; ಸಚಿವ ಎಸ್ ಟಿ ಎಸ್

  • ಅರಣ್ಯ ಭವನದ ಜಾಗ ಚಿಕ್ಕದು ಹಿನ್ನೆಲೆ ಅಲ್ಲಿಗೆ ಸ್ಥಳಾಂತರಕ್ಕೆ ಕ್ರಮ
  • ಅರಣ್ಯ ಸಚಿವ ಆನಂದ್ ಸಿಂಗ್ ಜೊತೆ ಶೀಘ್ರ ಚರ್ಚೆ

ಮೈಸೂರು: ಶ್ರೀಗಂಧ ಮ್ಯೂಸಿಎಂ ಅನ್ನು ಅರಮನೆಯಲ್ಲಿ ತೆರೆಯುವ ಚಿಂತನೆ ಇದ್ದು, ಈ ಬಗ್ಗೆ ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಜೊತೆ ಚರ್ಚಿಸಿ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇಲ್ಲಿನ ಅಶೋಕಪುರಂನಲ್ಲಿರುವ ಶ್ರೀಗಂಧದ ವಸ್ತು ಸಂಗ್ರಹಾಲಯ ವೀಕ್ಷಣೆ ಮಾಡಿದ ಸಚಿವರು, ಸ್ಯಾಂಡಲ್ ಅಂದರೆ ಏನು? ಅದು ಹೇಗಿರಲಿದೆ? ಅದರ ಉಪಯೋಗಗಳೇನು..?
ಗುಣಮಟ್ಟಗಳ ಆಧಾರದಲ್ಲಿ ಶ್ರೀಗಂಧದ ವರ್ಗೀಕರಣ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಚಿವರು ಪಡೆದುಕೊಂಡರು.

ವಸ್ತುಸಂಗ್ರಹಾಲಯ ಉದ್ಘಾಟನೆ ಬಗ್ಗೆ ಶೀಘ್ರ ಮಾಹಿತಿ

ರೈತರು ಸಹ ಈಗ ಶ್ರೀಗಂಧವನ್ನು ಬೆಳೆಯಬಹುದಾಗಿದೆ. ಹೀಗೆ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಶ್ರೀಗಂಧವನ್ನು ಹೊಸತಾಗಿ ಬೆಳೆಯಲು ಉದ್ದೇಶಿಸಿರುವ ರೈತರಿಗೆ ಬೆಳೆ ಹಾಗೂ ಅದರ ಉಪಯೋಗದ ಮಾಹಿತಿ ನೀಡುವ ಉದ್ದೇಶದಿಂದ ಮ್ಯೂಸಿಯಂ ಸ್ಥಾಪಿಸಲಾಗಿದೆ. ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ನೂತನ ಮ್ಯೂಸಿಎಂ ಅನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿತ್ತು. ಅವರೂ ಸಹ ಒಪ್ಪಿಗೆ ನೀಡಿದ್ದರು. ಆದರೆ, ಅರಣ್ಯ ಭವನದಲ್ಲಿ ಜಾಗ ಚಿಕ್ಕದು ಹಾಗೂ ಹೆಚ್ಚು ಜನರನ್ನು ಸೆಳೆಯುವ ಪ್ರದೇಶದಲ್ಲಿ ಇಲ್ಲ. ಇಲ್ಲಿಗೆ ದೊಡ್ಡ ವಾಹನದಲ್ಲಿ ಭೇಟಿ ನೀಡಲೂ ಕಷ್ಟ. ಜೊತೆಗೆ ಅರಮನೆ ಆವರಣದಲ್ಲಿ ಮ್ಯೂಸಿಯಂ ತೆರೆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಆದಾಯ ಸಹ ಹೆಚ್ಚಳಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮ್ಯೂಸಿಎಂ ಅನ್ನು ಅರಮನೆ ಆವರಣದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬಳಿಕ ಮುಖ್ಯಮಂತ್ರಿಗಳ ದಿನಾಂಕವನ್ನು ಗೊತ್ತುಪಡಿಸಿಕೊಂಡು ಉದ್ಘಾಟನೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅಧಿಕಾರಿಗಳಿಂದ ಮಾಹಿತಿ

ರೈತರು ತರುವ ಶ್ರೀಗಂಧದ ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಿ ಗೋಡೋನ್ ನಲ್ಲಿಡಲಾಗುವುದು. ಹೀಗೆ ಸಂಗ್ರಹ ಮಾಡಿದ ಶ್ರೀಗಂಧವನ್ನು ವರ್ಷದಲ್ಲಿ 2 ಬಾರಿ ಹರಾಜು ಹಾಕಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಧಿಕಾರಿಗಳ ಜೊತೆ ಸಚಿವರ ಸಭೆ

ವೀಕ್ಷಣೆಗೂ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಮ್ಯೂಸಿಯಂ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಶ್ರೀಗಂಧಕ್ಕೆ ಭಾರಿ ಪ್ರಮಾಣದ ಬೇಡಿಕೆ ಹಾಗೂ ಹಣ ಇರುವುದರಿಂದ ಅದಕ್ಕೆ ರಕ್ಷಣೆ ಮುಖ್ಯವಾಗುತ್ತದೆ. ಜೊತೆಗೆ ಈಗ ಮ್ಯೂಸಿಯಂ ತೆರೆಯಲು ಉದ್ದೇಶಿಸಿರುವ ಅರಣ್ಯ ಇಲಾಖೆ ಜಾಗದಲ್ಲಿ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮ್ಯೂಸಿಯಂ ತೆರೆದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದಲ್ಲದೆ, ಆದಾಯವನ್ನೂ ನಿರೀಕ್ಷಿಸಬಹುದಾಗಿದೆ ಎಂದು ಅರಣ್ಯಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಅವರೊಂದಿಗೆ ಶೀಘ್ರದಲ್ಲಿ ಮಾತುಕತೆ ನಡೆಸಿ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ. ಶ್ರೀಗಂಧದ ರಕ್ಷಣೆ ಹಾಗೂ ಪ್ರಚಾರದ ಅಗತ್ಯವಿದೆ. ಅಲ್ಲದೆ, ಮೈಸೂರಿಗೂ ಶ್ರೀಗಂಧಕ್ಕೂ ಸಾಕಷ್ಟು ನಂಟು ಇದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್,
ಎಪಿಸಿಸಿಎಫ್ ಜಗತ್ ರಾಮ್, ಸಿಸಿಎಫ್ ಹೀರಾಲಾಲ್, ಡಿಸಿಎಫ್ ಗಳಾದ ಪ್ರಶಾಂತ್ ಕುಮಾರ್, ಅಲೆಕ್ಸಾಂಡರ್ ಹಾಗೂ ಎಸಿಎಫ್ ಗಳಾದ ರಂಗಸ್ವಾಮಿ, ಅನುಶಾ ಹಾಜರಿದ್ದರು.


Share