ಎಂಎಸ್‌ಡಿ ಅರ್ಧ ಶತಕ ವ್ಯರ್ಥ; ಚೊಚ್ಚಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದ ಕೆಕೆಆರ್

217
Share

 

ಎಂಎಸ್‌ಡಿ ಅರ್ಧ ಶತಕ ವ್ಯರ್ಥ; ಚೊಚ್ಚಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದ ಕೆಕೆಆರ್

ಮುಂಬೈ: 15ನೇ ಆವೃತ್ತಿ ಐಪಿಎಲ್‍ನ ಮೊದಲ ಪಂದ್ಯದಲ್ಲಿ ಚೆನ್ನೈ ನೀಡಿದ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ತಂಡ ಇನ್ನೂ 9 ಎಸೆತ ಬಾಕಿ ಇರುವಂತೆಯೇ 133 ರನ್‌ ಸಿಡಿಸಿ ಗೆಲುವಿನ ನಗೆ ಬೀರಿತು.

ಚೆನ್ನೈ ನೀಡಿದ 132 ರನ್‍ಗಳ ಟಾರ್ಗೆಟ್‍ನ್ನು ಕೋಲ್ಕತ್ತಾ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್‌ ಸಿಡಿಸಿ ಗೆದ್ದು, 14ನೇ ಸೀಸನ್ ಐಪಿಎಲ್‍ನ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ.

ಕೆಕೆಆರ್ ಪರ ಆರಂಭಿಕ ಜೋಡಿ ಅಜಿಂಕ್ಯಾ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ನೀಡಿತು. ವೆಂಕಟೇಶ್ ಅಯ್ಯರ್ 16 ರನ್ (16 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಈ ಮೊದಲು ರಹಾನೆ ಜೊತೆ ಮೊದಲ ವಿಕೆಟ್‍ಗೆ 43 ರನ್ (38 ಎಸೆತ) ಜೊತೆಯಾಟವಾಡಿದರು.

ಬಳಿಕ ನಿತೇಶ್ ರಾಣಾ 21 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಇನ್ನೊಂದೆಡೆ ಅರ್ಧಶತಕದ ಹೊಸ್ತಿಲಲ್ಲಿದ್ದ ರಹಾನೆ 44 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದ ಟಾಪ್ ತಂಡಗಳು

ಅಂತಿಮವಾಗಿ ಸ್ಯಾಮ್ ಬಿಲ್ಲಿಂಗ್ಸ್ 25 ರನ್‌ (21 ಎಸೆತ, 1 ಸಿಕ್ಸ್‌, 1 ಬೌಂಡರಿ) ಮತ್ತು ಶ್ರೇಯಸ್ ಅಯ್ಯರ್ ಅಜೇಯ 20 ರನ್‌ (20 ಎಸೆತ, 1 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾರ ಆಯ್ಕೆ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದರೆ, ಡೆವೂನ್ ಕಾನ್ವೇ 3 ರನ್‍ಗೆ ಸುಸ್ತಾದರು. ಬಳಿಕ ಬಂದ ರಾಬಿನ್ ಉತ್ತಪ್ಪ, ಬೌಂಡರಿ, ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರು ಕೂಡ ಅವರ ಆಟ 28 ರನ್ (21 ಎಸೆತ, 2 ಬೌಂಡರಿ, 2 ಸಿಕ್ಸ್) ಅಂತ್ಯಗೊಂಡಿತು. ಇವರೊಂದಿಗೆ ಅಂಬಾಟಿ ರಾಯುಡು 15 ರನ್ (17 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

ಧೋನಿ ಭರ್ಜರಿ ಬ್ಯಾಟಿಂಗ್
61 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಧೋನಿ ಆಸರೆಯಾದರು. ಈ ಜೋಡಿ ಕೆಕೆಆರ್ ಬೌಲರ್‌ಗಳ ಬೆವರಿಳಿಸಿತು. ಧೋನಿ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟ್ ಬೀಸಿ ಅಜೇಯ 50 ರನ್ (38 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಡೇಜಾ ಅಜೇಯ 26 ರನ್ (28 ಎಸೆತ, 1 ಸಿಕ್ಸ್) ಬಾರಿಸಿ ಮಿಂಚಿದರು. ಈ ಜೋಡಿ ಆರನೇ ವಿಕೆಟ್‍ಗೆ ಅಜೇಯ 70 ರನ್ (56 ಎಸೆತ) ಜೊತೆಯಾಟವಾಡಿತು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.

ಕೆಕೆಆರ್ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.


Share