ಎಂಪಿ ಆದ್ಯಾತ್ಮಿಕ ಅಂಗಳ -*ನಿತ್ಯಸತ್ಯ ಬೆಳಕು ದೀಪಾರಾಧನೆ – ಒಂದು ಚಿಂತನೆ.

59
Share

 

*ನಿತ್ಯಸತ್ಯ ಬೆಳಕು ದೀಪಾರಾಧನೆ – ಒಂದು ಚಿಂತನೆ..!*

ನಾವು ದೀಪವನ್ನು ಬೆಳಗಿಸುತ್ತೇವೆ. ಅದು ಕೇವಲ ಸಾಂಪ್ರದಾಯಿಕವಾದ ಕ್ರಿಯೆ ಆದರೆ ಸಾಲದು. ನಾವು ದೀಪ ಪ್ರಜ್ವಲನೆ ಮಾಡುವ ಕ್ರಿಯೆಯ ಹಿನ್ನೆಲೆಯಲ್ಲಿ ಏನಾದರೂ ಚಿಂತನೆ ಇರಬೇಕಲ್ಲವೇ ?? ಹಾಗಾದರೆ, ಬೆಳಗಿಸುವಾಗ ನಾವು ಏನನ್ನು ಚಿಂತನೆ ಮಾಡಬೇಕು ? ಇದಕ್ಕೆ ನಮ್ಮ ಪ್ರಾಚೀನರು ಅನೇಕ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

*ಭೋ ದೀಪ ಬ್ರಹ್ಮರೂಪಸ್ತ್ವಮಂಧಕಾರನಿವಾರಕ…*

ವಹ್ನಿಮಂಡಲದಲ್ಲಿರುವ ಸ್ವಪ್ರಕಾಶನಾದ ಭಗವಂತನ ತೇಜೋಮಯರೂಪದ ಉಪಾಸನೆಯ ಜೊತೆಗೆ,
ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನವು ತುಂಬುವ ಹಾಗೆ ಭಗವಂತನ ಅನುಗ್ರಹ ನಮಗಾಗಲಿ ಎಂಬುದು ನಮಗೆ ಅನೇಕ ಪ್ರಾಚೀನರು ಕೊಡುವ ಸಂದೇಶ.

ಅದರಂತೆ, ದೀಪಾವಳಿಯ ಈ ಸಂದರ್ಭದಲ್ಲಿ ಪಿತೃಲೋಕಗಳಿಂದ ಭೂಮಿಗೆ ಬಂದು ಮರಳಿ ಗಗನ ಮಾರ್ಗದಲ್ಲಿ ಸಾಗುವ ಪಿತೃಗಳು, ಬೆಳಗಿಸಿದ ದೀಪವನ್ನು ಕಂಡು ಹರಸಲಿ ಎಂಬ ಉದ್ದೇಶವೂ ಕೂಡ ಇದೆ. ಹೀಗೆ ಹಲವಾರು ಬಗೆಯ ಚಿಂತನೆಗಳನ್ನು ಪ್ರಯೋಜನಗಳನ್ನು ಕಾಣುತ್ತೇವೆ.

ಈ ಚಿಂತನೆಗಳ ಹಿನ್ನೆಲೆಯಲ್ಲಿ ಮನಸ್ಸಿಗೆ ಮೂಡಿದ, ದೀಪಾರಾಧನೆಯ ಕುರಿತಾದ ಒಂದು ಚಿಂತನೆಯನ್ನು ತತ್ವಪ್ರದೀಪನೆನಿಸಿದ ಶ್ರೀಪ್ರಾಣಪತಿ ಭಗವಂತನಲ್ಲಿ ಸಮರ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ದೋಷಗಳು ಇದ್ದಲ್ಲಿ ಅದನ್ನು ಮನ್ನಿಸಿ ಸರಿಯಾದ ಮಾರ್ಗದರ್ಶನ ಮಾಡಬೇಕೆಂದು ಹಿರಿಯರಲ್ಲಿ ಪ್ರಾರ್ಥಿಸುತ್ತಿದ್ದೇನೆ.

—–

ದೀಪವನ್ನು ನಾವು ಹೇಗೆ ಬೆಳಗಿಸುತ್ತೇವೆ? ಅದಕ್ಕೆ ಏನೇನು ಬೇಕು ?

ಅದಕ್ಕೆ ಹಣತೆ ಅಥವಾ ಪ್ರಣತಿ ಅಥವಾ ನೀಲಾಜನ ಬೇಕು. ಎಣ್ಣೆ ಅಥವಾ ತುಪ್ಪ ಬೇಕು. ಬತ್ತಿ ಬೇಕು; ಭಕ್ತಿ ಬೇಕು.. ಮತ್ತು ಅಗ್ನಿಯ ಸಂಪರ್ಕ ಮಾಡಿಸಬೇಕು. ಇಷ್ಟಿದ್ದರೆ ದೀಪವನ್ನು ಹಚ್ಚಲು ಸಾಧ್ಯ.

ಉರಿಯುವುದು ಬತ್ತಿ
ಉರಿಸುವುದು ಇಂಧನದ ಶಕ್ತಿ.
ಈ ಎರಡಕ್ಕೂ ಅಗ್ನಿ ಪ್ರಜ್ವಲನೆಯಿಂದಾಗಿ ಮುಕ್ತಿ.

ಏನಿದರ ಮಹತ್ವ ?

ಯಾವುದಕ್ಕೆ ನಾವು ಬತ್ತಿ ಎಂದು ಕನ್ನಡದಲ್ಲಿ ಕರೆಯುತ್ತೇವೆಯೋ ಅದನ್ನು ಸಂಸ್ಕೃತ ಭಾಷೆಯಲ್ಲಿ ‘ವರ್ತಿ’ ಎಂದು ಕರೆಯುತ್ತಾರೆ. ( ಉದಾಹರಣೆಗೆ.. ಸಾಜ್ಯಂ ತ್ರಿ’ವರ್ತಿ’ ಸಂಯುಕ್ತಂ ವಹ್ನಿನಾsಯೋಜಿತಂ ಮಯಾ… )

“ವರ್ತಿ” ಎಂಬ ಈ ಪದಕ್ಕೆ ಮತ್ತೊಂದು ಅರ್ಥ… ವರ್ತನೆ ಉಳ್ಳದ್ದು. ಆವರ್ತನ ಉಳ್ಳದ್ದು. ಅಂಗಡಿಯ ವ್ಯಾಪಾರಿಯು ಪದಾರ್ಥಗಳನ್ನು ತರುತ್ತಾನೆ ಮತ್ತು ಮಾರುತ್ತಾನೆ. ಅದರಲ್ಲಿ ಆವರ್ತನವಿದೆ. ಆದ್ದರಿಂದ ಅವನಿಗೆ ವರ್ತಕ ಎಂದು ಹೆಸರು. ಅದರಂತೆ, ವರ್ತಿ ಎಂದರೆ ಆವರ್ತನ ಉಳ್ಳದ್ದೆಂದು ಅರ್ಥೈಸಿಕೊಳ್ಳಲು ಬರುತ್ತದೆ. ಈ ಸಂಸಾರದಲ್ಲಿ ಜನನ ಮರಣಗಳ ಆವರ್ತನ ಇರುವವರೆಲ್ಲರೂ (ನಾವು ನೀವೆಲ್ಲರೂ) ವರ್ತಿಗಳೇ. ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿಗಳಿಂದ ಆರಂಭಿಸಿ ಮಹತ್ತತ್ವದ ಚತುರ್ಮುಖ ಬ್ರಹ್ಮದೇವರ ತನಕ ಎಲ್ಲರೂ ವರ್ತಿಗಳೇ!! ಹಾಗಾದರೆ, ಕ್ಷರರೆನಿಸಿದ ( ಕ್ಷರಃ ಸರ್ವಾಣಿ ಭೂತಾನಿ.. ) ಎಲ್ಲರನ್ನೂ ವರ್ತಿಯ ಅಥವಾ ಬತ್ತಿಯ ಸ್ಥಾನದಲ್ಲಿ ಮೊದಲು ಕಲ್ಪಿಸೋಣ.

ಬತ್ತಿಗೆ ತುಪ್ಪ ಅಥವಾ ಎಣ್ಣೆ ಎಂಬ ಇಂಧನ ಬೇಕು.
ಈ ಸ್ಥಾನದಲ್ಲಿ ನಾವು ಯಾವುದನ್ನು ಕಲ್ಪಿಸಬೇಕು ?
ನಮ್ಮ ಪ್ರಾಚೀನರು ಹೇಳಿರುವ ಚಿಂತನೆ ಏನು ?

“ಘೃತಪ್ರತೀಕಾಂ” ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ ….

“ತೈಲೇ ಲಕ್ಷ್ಮೀಃ” ಜಲೇ ಗಂಗಾ…

ತುಪ್ಪದಲ್ಲಿ ( ಎಲ್ಲಾ ಗೌವ್ಯ ಪದಾರ್ಥಗಳಲ್ಲಿ) ಹಾಗೂ ಎಣ್ಣೆಯಲ್ಲಿ ಲಕ್ಷ್ಮೀದೇವಿಯ ವಿಶೇಷ ಸನ್ನಿಧಾನವನ್ನು ನಮಗೆ ಪ್ರಾಚೀನರು ತಿಳಿಸಿದ್ದಾರೆ.

ನಾಶರಹಿತಳಾದ, ಅಕ್ಷರಾ ಎಂದು ಕರೆಯಲ್ಪಡುವ, ಕ್ಷರರಾದ ಸಮಸ್ತ ವರ್ತಿಗಳಿಗೂ ತಾಯಿಯಾದ ಲಕ್ಷ್ಮೀದೇವಿಯು, ತನ್ನಿಂದ ನಿಯಂತ್ರಿತರಾದ ಸಮಸ್ತ ವರ್ತಿಗಳನ್ನೂ ಮತ್ತು ಅವರ ಸಾಧನೆಗಳನ್ನು ಮಾತೃಪ್ರೇಮದಿಂದ ಭಗವಂತನಲ್ಲಿ ಸಲ್ಲಿಸಿದಾಗ… ವಿಶ್ವಕ್ಕೆ ತಂದೆ ಎನಿಸಿದ, ತೇಜೋಮಯನಾದ ಭಗವಂತ ಅಗ್ನಿ ರೂಪದಲ್ಲಿ ಅದನ್ನು ಸ್ವೀಕರಿಸುತ್ತಾನೆ. ಪಂಚಭೂತಗಳಲ್ಲಿ ಎಂದಿಗೂ ಮಲಿನವಾಗದ ಶುದ್ಧವಾದ ರೂಪ ಅಗ್ನಿಯದ್ದು. ಹಾಗಾಗಿ ಅತ್ಯಂತ ಶುದ್ಧನಾದ ಭಗವಂತನಿಗೆ ಸಮರ್ಪಿಸಬಹುದಾದ ಅತ್ಯುತ್ತಮ ಶುದ್ಧ ಅರ್ಪಣೆ ಎಂದರೆ ಶುದ್ಧ ತೇಜಸ್ಸಿನ ಅರ್ಪಣೆ. ಅದನ್ನು ಭಗವಂತ ತಾನು ನೇರವಾಗಿ ಸ್ವೀಕರಿಸದೇ, ಇಂಧನರೂಪದಲ್ಲಿ ಎಲ್ಲಿಯವರೆಗೆ ಶ್ರೀತತ್ವಳಾದ ಲಕ್ಷ್ಮೀದೇವಿ ಕೊಡುತ್ತಿರುತ್ತಾಳೋ ಅಲ್ಲಿಯವರೆಗೆ ಆಸ್ವಾದಿಸುತ್ತಾನೆ. ವರ್ತಿಯ ಭಕ್ತಿಯ ಸಾರವನ್ನು ತನಗೆ ಬೇಕೆನಿಸಿದ ಹಾಗೆ ಸ್ವೀಕರಿಸಿ, ಪಾಪಗಳನ್ನು ಸುಟ್ಟುಹಾಕುತ್ತಿದ್ದಾನೆ ಎಂಬ ಚಿಂತನೆ ನಮ್ಮದಾಗಬೇಕು. ಆಗ ನಾವು ಮಾಡಿದ ದೀಪಾರಾಧನೆಗೆ ವಿಶೇಷ ಮಹತ್ವ ಬರುತ್ತದೆ. ನಮ್ಮೆದುರಿನ ದೀಪದ ಬತ್ತಿಯಲ್ಲಿ ನಮ್ಮ ಭಕ್ತಿಯು ಭಗವಂತನ ನಿವೇದನೆಗಾಗಿ ಅಡಕವಾಗಿದೆ ಎಂಬ ಕಲ್ಪನೆ ಬಂದಾಗ ಮನಸ್ಸು ಪುಳಕಿತಗೊಳ್ಳುತ್ತದೆ.

ಬತ್ತಿಯ ಸಾರವನ್ನು ಸ್ವೀಕರಿಸಿದ ನಂತರ ಕೊನೆಯಲ್ಲಿ ಉಳಿವ ಮಸಿ ಅಥವಾ ಬೂದಿ ಏನೆಂದರೆ, (ಕಲಿಪ್ರವೇಶಕ್ಕೆ ಸಾಧ್ಯವೇ ಇರದ ಶ್ರೇಷ್ಠರಾದ ಬ್ರಹ್ಮವಾಯುಗಳೇ ಮೊದಲಾದ ದೇವತೆಗಳನ್ನು ಹೊರತುಪಡಿಸಿ, ಉಳಿದವರಲ್ಲಿ ಕಾಣಬಹುದಾದ) ದೋಷಗಳ ನಿವೃತ್ತಿಯ ಸಂಕೇತ. ಸಾಮಾನ್ಯವಾಗಿ ದೀಪದ ಸುಟ್ಟ ಮೊಗ್ಗನ್ನು ಅಥವಾ ಭಸ್ಮವಾಗದೇ ಉಳಿದ ಕಪ್ಪು ಭಾಗದ ಬತ್ತಿಯನ್ನು ಮುಟ್ಟಿದರೆ ಕೈತೊಳೆಯಲು ಹೇಳುತ್ತಾರೆ. ಕಾರಣ ಅದು ಕಲಿಯ ಆವಾಸದ ಸಂಕೇತ. ಎಲ್ಲೆಲ್ಲಿ ದೋಷಕ್ಕೆ ಅವಕಾಶ ಇದೆಯೋ ಅಲ್ಲಲ್ಲಿ ಕಲಿಗೆ ಸ್ಥಾನ ಮೀಸಲು. ಮಂಗಳಾರತಿ ಶಾಂತವಾದರೆ, ಹೊಗೆ ಬಾರದಂತೆ ಮುಚ್ಚಲು ಹೇಳುವುದೂ ಕೂಡ ಇದೇ ಕಾರಣಕ್ಕೆ. ಪಾಪಗಳನ್ನು ಸುಟ್ಟ ಬಳಿಕ ಅದರ ಚರಟ ಉಳಿದರೆ ಅದು ತನ್ನದ್ದೆಂದು ಓಡಿಬರುತ್ತಾನಂತೆ.

ಇದುವರೆಗೆ ನಾವು ನೋಡಿದಂತೆ..
ಬತ್ತಿ ಜೀವರನ್ನು ಪ್ರತಿನಿಧಿಸುತ್ತದೆ.
ತುಪ್ಪ/ಎಣ್ಣೆ ಲಕ್ಷ್ಮೀದೇವಿಯನ್ನು ಪ್ರತಿನಿಧಿಸುತ್ತದೆ.
ಅಗ್ನಿ ತೇಜೋಮಯನಾದ ಪರಮಾತ್ಮನ ಪ್ರತಿನಿಧಿ.
ಇನ್ನು ಉಳಿದದ್ದು.. ಹಲಗಾರತಿ ಅಥವಾ ಹಣತೆ. ಅದು ಈ ಸಂಸಾರಕ್ಕೆ ಪ್ರತಿನಿಧಿ. ಅದೇ ಸಾಧನೆ ನಡೆಯುವ ಸ್ಥಳ. ದೀಪವನ್ನು ಹಚ್ಚುವ ಆಕರ, ಕೇವಲ ‘ಹಣ’ತೆ
ಯಾಗದೆ, ‘ಪ್ರಣತಿ’ ಎನಿಸಿದಾಗ ದೇವರಿಗೆ ಪ್ರಿಯವಾಗುತ್ತದೆ.

ಹಾಗಾದರೆ, ದೀಪಹಚ್ಚುವಾಗ ಅಥವಾ ಆರತಿಯ ಸಮಯದಲ್ಲಿ ನಾವು ಚಿಂತಿಸಬೇಕಾದದ್ದು .. “ಎಲ್ಲಾ ಜೀವರಾಶಿಗಳ ಸಾಧನೆಗಳಿಗೆ ಅನುಗುಣವಾಗಿ ಅವರ ಸೇವೆಯನ್ನು ಲಕ್ಷ್ಮೀದೇವಿಯ ಮೂಲಕ ಸ್ವೀಕರಿಸಿ ಅನುಗ್ರಹ ಮಾಡುವವ ಭಗವಂತ. ಅವನು ಜಗಜ್ಜನ್ಮಾಧಿಕಾರಣ. ನಮ್ಮ ಎದುರು ಇರುವ ಜ್ಯೋತಿಯಲ್ಲಿ ಇದ್ದು ಅದನ್ನು ಬೆಳಗಿಸುತ್ತಿರುವವನೂ, ನಮ್ಮ ಹೃದಯದಲ್ಲಿ ಇರುವವನೂ, ಎದುರಿಗೆ ಕಾಣುವ ಪ್ರತಿಮೆಯಲ್ಲಿ ಅಥವಾ ಜಗತ್ತಿನಲ್ಲಿ ತುಂಬಿಕೊಂಡಿರುವವನೂ ಅವನೇ. ಅವನ ಈ ರೂಪಗಳೆಲ್ಲವೂ ಪೂರ್ಣ ಹಾಗೂ ಒಂದೇ ಆಗಿವೆ. ಅವನ ರೂಪಗಳಲ್ಲಿ ಭೇದವೇ ಇಲ್ಲ. ಅಂತಹ ಭಗವಂತ ನಮ್ಮೆದುರು ಇರುವ ಈ ದೀಪದಲ್ಲಿ ತೇಜೋಮಯನಾಗಿ ದರ್ಶನ ನೀಡುತ್ತಿದ್ದಾನೆ” ಎಂಬ ಭಾವವನ್ನು ತಂದುಕೊಳ್ಳಬೇಕು. ಏನೂ ಚಿಂತನೆ ಇರದೇ ದೀಪ ಹಚ್ಚುವದಕ್ಕಿಂತ ಭಗವಂತನನ್ನು ಸ್ಮರಿಸುತ್ತ ಮಾಡುವ ಕಾರ್ಯ ಹೆಚ್ಚು ಫಲಪ್ರದವಾಗುತ್ತದೆ.
——————-

☀ ? ?

ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಮ್.
ಯಚ್ಚನ್ದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ৷৷ (ಭಗವದ್ಗೀತಾ.. 15.12)

ಯಾವುದು ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗಿಸುತ್ತಲಿರುವ ಬೆಳಕೋ, ಚಂದ್ರನಲ್ಲಿ ಮತ್ತು ಅಗ್ನಿಯಲ್ಲಿ ಕೂಡಾ ಇದ್ದು ಬೆಳಗುತ್ತಿದೆಯೋ, ಅದು ನನ್ನದೇ ಬೆಳಕೆಂದು ತಿಳಿ.

ಪ್ರೀತೋಸ್ತು ಕೃಷ್ಣಪ್ರಭುಃ
ಶೇಷಗಿರಿ ಕೆ. ಎಂ.

*!! ಶ್ರೀಕೃಷ್ಣಾರ್ಪಣಮಸ್ತು !!*


Share