ಎಂಪಿ ಫೋಕಸ್:ಮಾನವೀಯತೆಯ ಜಡ್ಜ್ ಹಾಗೂ ಮಾನವೀಯತೆ ಮರೆತ ವೈದ್ಯರು…

28
Share

ಚಿತ್ರ ಕೃಪೆ ಟಿವಿ9

*ಒಂದು‌ ನೋವಿನ ಕಥೆ – ಕಡ್ಡಾಯವಾಗಿ ಓದಿ……!*

*ಮಾನವೀಯತೆಯ ಜಡ್ಜ್ ಹಾಗೂ ಮಾನವೀಯತೆ ಮರೆತ ವೈದ್ಯರು…….!*

ಇದು ನಿಜಕ್ಕೂ ಎಲ್ಲರಿಗೂ ಬೇಸರ ತರಿಸುವ ವ್ಯವಸ್ಥೆಯ ಬಗ್ಗೆ ಅಸಮಾಧಾನಗೊಳಿಸುವ ಬರಹ. ಇಂತಹ ಘಟನೆ ಮತ್ತೆ ಎಲ್ಲೂ ಮರುಕಳಿಸದಿರಲಿ ಅನ್ನೋ ಆಶಾಭಾವನೆಯೊಂದಿಗೆ ನಾನು ಇದನ್ನು ಬರೆಯುತ್ತಿದ್ದೇನೆ. ಇಂತಹ ಘಟನೆ ಹಿಂದೆಂದೂ ಆದ ಉದಾಹರಣೆಯಿಲ್ಲ. ಕರ್ತವ್ಯನಿರತ ಮಹಿಳಾ ನ್ಯಾಯಾಧೀಶರೊಬ್ಬರು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಅಂದರೆ ಬರೋಬ್ಬರಿ 5 ಗಂಟೆಗಳ ಕಾಲ ಖುದ್ದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಅನಾರೋಗ್ಯದಿಂದ ಬಳಲುತ್ತಿದ್ದ ವಿಶೇಷ ಚೇತನ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡಿದ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ವಿಶೇಷ ಚೇತನ ಮಗು ಕೊನೆಯುಸಿರಳೆದಿದೆ. ವೈದ್ಯರ ವರ್ತನೆ ಹಾಗೂ ಅವರು ನಡೆದುಕೊಂಡ ರೀತಿಯಿಂದ ಜಿಗುಪ್ಸೆಗೊಂಡ ನ್ಯಾಯಾಧೀಶರು ಆ ವೈದ್ಯರ ವಿರುದ್ದ ಲಿಖಿತವಾಗಿ ಪೊಲೀಸರಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

*ಘಟನೆಯ ವಿವರ*

ಇಂತಹ ಅಮಾನುಷ ಕಂಡು ಕೇಳರಿಯದ ಘಟನೆ ನಡೆದಿರುವುದು ಮೈಸೂರಿನ ಬಡವರ ಪಾಲಿನ ಕಾಮಧೇನುವಾಗಿರುವ ಕೆ ಆರ್ ಆಸ್ಪತ್ರೆ ಹಾಗೂ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲೆ ಗೋಣಿಕೊಪ್ಪದ ಬೊಮ್ಮಾಡು ಹಾಡಿ ನಿವಾಸಿಗಳ 12 ವರ್ಷದ ವಿಶೇಷ ಚೇತನ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ಉಸಿರಾಟದ ತೊಂದರೆಯಾದರೆ ಮಗುವಿನ ಪರಿಸ್ಥಿತಿ ನೋಡಿ ಪೋಷಕರ ಕೈ ಕಾಲು ಆಡುವುದಿಲ್ಲ. ಇನ್ನು ಈ ಮಗು ವಿಶೇಷ ಚೇತನ ಬೇರೆ ಅವರ ಅಪ್ಪನ ಪರಿಸ್ಥಿತಿ ಊಹಿಸಿಕೊಳ್ಳುವುದು ಅಸಾಧ್ಯ. ತಕ್ಷಣ ಮಗುವನ್ನು ಎತ್ತಿಕೊಂಡು ಗೋಣಿಕೊಪ್ಪದ ಆಸ್ಪತ್ರೆಗೆ ಓಡಿದ್ದಾರೆ. ಅಲ್ಲಿ ಮಗುವಿನ ಪರಿಸ್ಥಿತಿ ನೋಡಿದ ವೈದ್ಯರು ವಿರಾಜಪೇಟೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಮಕ್ಕಳ ವೈದ್ಯರಿಲ್ಲದ ಕಾರಣ ಮಡಿಕೇರಿಯ ಆಸ್ಪತ್ರೆಗೆ ಸಾಗ ಹಾಕಿದ್ದಾರೆ. ಮಡಿಕೇರಿ ಆಸ್ಪತ್ರೆಯಲ್ಲೂ ಏನು ಆಗಿಲ್ಲ. ಮಗುವಿಗೆ ಹೃದಯ ಸಮಸ್ಯೆಯಿದೆ ಮೈಸೂರಿನ ಜಯದೇವ ಆಸ್ಪತ್ರೆಗೆ ಹೋಗಿ ಅಂತಾ ಹೇಳಿದ್ದಾರೆ. ಮೈಸೂರು ಹೆಸರು ಕೇಳುತ್ತಿದ್ದಂತೆ ಆ ವಿಶೇಷ ಚೇತನ ಮಗುವಿನ ಅಪ್ಪ ಅಮ್ಮನ ಜಂಘಾಬಲವೇ ಕುಸಿದಿದೆ. ಯಾರು ಅರಿಯದ ಊರಲ್ಲಿ ಹೇಗೆ ಅಂತಾ ಕಂಗಾಲಾಗಿದ್ದಾರೆ. ತಕ್ಷಣ ಅವರ ನೆನೆಪಿಗೆ ಬಂದವರು ತಮ್ಮದೇ ಊರಿನ ಜಡ್ಜ್‌ಮ್ಮ. ಹೌದು ತಮ್ಮ ಊರಿನವರು ಮೈಸೂರಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ ಅನ್ನೋದು ತಿಳಿದ ದಂಪತಿ ತಕ್ಷಣ ತಮ್ಮ ಊರಿನ ಜಡ್ಜ್‌ಮ್ಮ ಗೌರವಾನ್ವಿತ ನ್ಯಾಯಾಧೀಶರಾದ ಶಿಲ್ಪಾ ಅವರಿಗೆ ಪೋನು ಹಚ್ಚಿ ಎಲ್ಲವನ್ನೂ ಹೇಳಿದ್ದಾರೆ. ಮಾನವೀಯ ಕಳಕಳಿಯುಳ್ಳ ನ್ಯಾಯಾಧೀಶರು ಮುಗ್ದ ಅಪ್ಪ ಅಮ್ಮನಿಗೆ ಧೈರ್ಯ ಹೇಳಿ ಮೈಸೂರಿಗೆ ಬರುವಂತೆ ತಿಳಿಸಿದ್ದಾರೆ.

*ಮಗುವಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದ ಜಡ್ಜ್ ಶಿಲ್ಪಾ – ಕರ್ತವ್ಯ ಮರೆತ ವೈದ್ಯರು*

ತಮ್ಮ ಊರಿನ ದಂಪತಿ ಸಮಸ್ಯೆಗೆ ಸಿಲುಕಿರುವುದು ತಿಳಿದು ಮೈಸೂರಿನ ನ್ಯಾಯಾಧೀಶರಾದ ಶಿಲ್ಪಾ ಅವರು ತಮ್ಮ ಪರಿಚಯದವರ ಮೂಲಕ ವ್ಯವಸ್ಥೆ ಮಾಡಿ ಸುಮ್ಮನಾಗಬಹುದಿತ್ತು. ಆದರೆ ಆ ನ್ಯಾಯಾಧೀಶರಿಗೆ ತಮ್ಮ ಊರು ಊರಿನ ಜನ ಅಂದರೆ ವಿಶೇಷ ಅಭಿಮಾನ. ಜೊತೆಗೆ ವಿಶೇಷ ಚೇತನ ಮಗು ಈ ಕಾರಣಕ್ಕೆ ತಾವೇ ಖುದ್ದು ಮಗು ಮಗುವಿನ ಅಪ್ಪ ಅಮ್ಮನ ಜೊತೆ ಮೈಸೂರಿನ ಜಯದೇವ ಆಸ್ಪತ್ರೆಗೆ ತೆರಳಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಮಗುವಿಗೆ ಅತ್ಯುತ್ತಮ ಚಿಕಿತ್ಸೆ ಸಿಕ್ಕಿದೆ. ಮಗುವಿನ ಸಂಪೂರ್ಣ ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಯಿಲ್ಲ‌ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಮಗುವನ್ನು ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ‌ ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿ ನ್ಯಾಯಾಧೀಶರು ಚೆಲುವಾಂಬ ಆಸ್ಪತ್ರೆಗೆ ಬಂದಿದ್ದಾರೆ.

*ಅಸಲಿ ಸರ್ಕಸ್…..!*

ಮಗುವನ್ನು ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಮನೆಗೆ ಹೊರಡೋಣ ಅಂತಾ ಚೆಲುವಾಂಬ ಆಸ್ಪತ್ರೆಗೆ ಬಂದ ನ್ಯಾಯಾಧೀಶರಿಗೆ ಬಿಗ್ ಶಾಕ್ ಎದುರಾಗಿತ್ತು. ಉಸಿರಾಟದಿಂದ ಬಳಲುತ್ತಿದ್ದ ವಿಶೇಷ ಚೇತನ ಮಗುವನ್ನು ತಿರುಗಿಯೂ ನೋಡದ ವೈದ್ಯರು ಬೆಡ್ ಇಲ್ಲ ಅನ್ನೋ ಸಿದ್ದ ಉತ್ತರ ನೀಡಿ ಕೈ ತೊಳೆದುಕೊಂಡಿದ್ದಾರೆ. ಮಗುವನ್ನು ಒಮ್ಮೆ ನೋಡಿ ಅಂತಾ ಹೇಳಿದ ನ್ಯಾಯಾಧೀಶರ‌ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಬರ, ಬರುತ್ತಾ ಮಗುವಿನ ಪರಿಸ್ಥಿತಿ ಬಿಗಡಾಯಿಸಲು ಅರಂಭವಾಗಿದೆ. ಹೀಗಾಗಿ ಸಮಯ ವ್ಯರ್ಥ ಮಾಡದೇ ಖುದ್ದು ನ್ಯಾಯಾಧೀಶರು ಮಗುವನ್ನು ಕರೆದುಕೊಂಡು ಜೆಎಸ್‌ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಗುವನ್ನು ಐಸಿಯುವಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಮಗುವಿಗೆ ಇನ್‌ಕ್ಯೂಬೇಟರ್ ಅಳವಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿ ದಿನ 25 ಸಾವಿರದಿಂದ 30 ಸಾವಿರ ವೆಚ್ಚವಾಗಬಹುದೆಂದು ತಿಳಿಸಿದ್ದಾರೆ. ಕಾಫಿ ತೋಟದಲ್ಲಿ ಕೆಲದ ಮಾಡುವ ಬಡ ಜನರ ಬಳಿ ಅಷ್ಟು ಹಣ ಎಲ್ಲಿರಲು ಸಾಧ್ಯ ? ನ್ಯಾಯಾಧೀಶರೇ ಒಂದು ದಿನದ ಹಣ ಪಾವತಿಸುವುದಾಗಿ ಹೇಳಿದ್ದಾರೆ. ಆದ್ರೆ ಕನಿಷ್ಠ 10 ದಿನ ಮಗವಿಗೆ ಅಲ್ಲಿ ಚಿಕಿತ್ಸೆ ನೀಡಬೇಕೆಂದು ತಿಳಿಸಿದಾಗ ವಿಧಿಯಿಲ್ಲದೆ ಮಗುವನ್ನು ಅಲ್ಲಿಂದ ಕೆ ಆರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಬರುವ ಮುನ್ನ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿದ್ದಾರೆ ಅವರಿಂದ ಡಾ ನಯಾಜ್ ಎಂಬುವವರ ನಂಬರ್ ಪಡೆದು ಅವರಿಗೂ ಕರೆ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿ ಕೆ ಆರ್ ಆಸ್ಪತ್ರೆಗೆ ಬಂದರೆ ಮತ್ತದೆ ರಾಗ ಮತ್ತದೆ ಹಾಡು. ರಾತ್ರಿ ಪಾಳಯದಲ್ಲಿದ್ದ ವೈದ್ಯ ಡಾ ಚೈತ್ರಾ ಬಾಗಿಲು ತೆಗೆದಿಲ್ಲ. ಸಾಕಷ್ಟು ಸಮಯದ ನಂತರ ತಡವಾಗಿ ಬಾಗಿಲು ತೆಗೆದ ಡಾ ಚೈತ್ರಾ ಮೊದಲು ನ್ಯಾಯಾಧೀಶರ ಜೊತೆಯಿದ್ದ ಕೋರ್ಟ್ ಕಾನ್ಸಟೇಬಲ್ ವಿರುದ್ದ ಹರಿಹಾಯ್ದಿದ್ದಾರೆ. ನಿದ್ದೆ ಹಾಳುಮಾಡಿದಕ್ಕೆ ಕೆಂಡಾಮಂಡಲರಾಗಿದ್ದಾರೆ. ಪರಿಸ್ಥಿತಿ ವಿವರಿಸಿ ತಾನೊಬ್ಬ ನ್ಯಾಯಾಧೀಶೆ ಎಂದು ತಿಳಿಸಿದರು ಆಕೆಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲವಂತೆ. ಅಲ್ಲೇ ಇದ್ದ ಪಿ ಜಿ ವಿದ್ಯಾರ್ಥಿ ಸಯ್ಯದ್‌‌ಗೆ ಮಗುವನ್ನು ನೋಡಲು ಹೇಳಿದ್ದಾರೆ. ಆತ ನ್ಯಾಯಾಧೀಶರಿಗೆ ಏನೋ ಉಪಕಾರ ಮಾಡುವಂತೆ ಮಾತನಾಡಿ ಕಾಟಾಚಾರಕ್ಕೆ ಮಗುವನ್ನು ನೋಡಿದ್ದಾನೆ. ನಂತರ ಇಬ್ಬರು ಕೆ ಆರ್ ಆಸ್ಪತ್ರೆಯಲ್ಲಿ 12 ವರ್ಷದ ಮಕ್ಕಳನ್ನು ದಾಖಲಿಸಿಕೊಳ್ಳುವುದಿಲ್ಲ ನೀವು ಚೆಲುವಾಂಬ ಆಸ್ಪತ್ರೆಗೆ ಹೋಗಿ ಅಂದಿದ್ದಾರೆ. ನಡೆದ ಎಲ್ಲಾ ಘಟನೆ ವಿವರಿಸಿ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವ ಬಗ್ಗೆ ಹೇಳಿದರು ಅವರು ಸುತಾರಾಂ ಒಪ್ಪಿಲ್ಲ.

*ವೈದ್ಯರ ವಿರುದ್ದ ಎಫ್ ಐ ಆರ್*

ಅಲ್ಲಿಯವರೆಗೂ ತಾಳ್ಮೆಯಿಂದಿದ್ದ ನ್ಯಾಯಾಧೀಶರ ತಾಳ್ಮೆಯ ಕಟ್ಟೆಯೊಡೆದಿದೆ. ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಲಿಖಿತ ರೂಪದಲ್ಲಿ ಕೊಡುವಂತೆ ತಾಕೀತು ಮಾಡಿದ್ದಾರೆ. ಆಗ ಮನಸಿಲ್ಲದ ಮನಸಲ್ಲಿ ವಿಶೇಷ ಚೇತನ ಮಗುವನ್ನು ಕೆ ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಆಗ ಸಮಯ ಮಧ್ಯರಾತ್ರಿ 2 ಗಂಟೆ. ಅಂದರೆ ರಾತ್ರಿ 9 ಗಂಟೆಯಿಂದ ಆರಂಭವಾದ ಈ ಪ್ರಕ್ರಿಯೆ ಬರೋಬ್ಬರಿ 5 ಗಂಟೆಗಳ ನಂತರ ಮುಗಿದಿದೆ. ಇದು ನ್ಯಾಯಾಧೀಶರನ್ನು ಚಿಂತೆಗೀಡು ಮಾಡಿದೆ. ಒಬ್ಬ ನ್ಯಾಯಾಧೀಶೆಯಾಗಿ ಒಂದು ವಿಶೇಷ ಚೇತನ ಮಗುವಿಗೆ ಅದರ ಹಕ್ಕನ್ನು ಕೊಡಿಸಲು ಇಷ್ಟೋಂದು ಕಷ್ಟ ಪಡಬೇಕಾದರೆ ಜನ ಸಾಮಾನ್ಯರ ಪರಿಸ್ಥಿತಿ ? ಊಹಿಸಲು ಅಸಾಧ್ಯವೆನಿಸಿದೆ. ಹೀಗಾಗಿ ಗಟ್ಟಿ‌ ಮನಸು ಮಾಡಿದ ನ್ಯಾಯಾಧೀಶರು ಈ ಸಂಬಂಧ ಖುದ್ದು ಲಿಖಿತ ದೂರು ನೀಡಿದ್ದಾರೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ಹಾಗೂ ಲೋಕಾಯುಕ್ತದಲ್ಲೂ ಪ್ರಕರಣ ದಾಖಲಾಗಿದೆ.

*ಮಗವಿನ ಚಿಕಿತ್ಸೆಗೆ ಡಾ ರಾಜೇಂದ್ರ ಕುಮಾರ್ ಕ್ರಮ…..!*

ಬೆಳಗ್ಗೆ ಸಂಪೂರ್ಣ ಘಟನೆಯನ್ನು ಚೆಲುವಾಂಬ ಆಸ್ಪತ್ರೆಯ ಮುಖ್ಯಸ್ಥರಾದ ಡಾ ರಾಜೇಂದ್ರ ಕುಮಾರ್ ಅವರಿಗೆ ನ್ಯಾಯಾಧೀಶರು ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಡಾ ರಾಜೇಂದ್ರ ಕುಮಾರ್ ಸ್ವತಃ ತಾವೇ ಕೆ ಆರ್ ಆಸ್ಪತ್ರೆಗೆ ತಮ್ಮ ವೈದ್ಯರ ಜೊತೆ ತೆರಳಿ ಮಗುವನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಸುಮಾರು 5 ದಿನ ಚಿಕಿತ್ಸೆ ನೀಡಲಾಗಿದೆ. ಆದರೆ ದುರಾದೃಷ್ಟವಶಾತ್ ವಿಶೇಷ ಚೇತನ ಮಗು ಬದುಕುಳಿದಿಲ್ಲ.

*ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು*

ಹೌದು ಕೆ ಆರ್ ಆಸ್ಪತ್ರೆ ಚೆಲುವಾಂಬ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಬಹುಶಃ ಇದು ಕೊನೆಯೂ ಅಲ್ಲ. ಮೇಲ್ನೋಟಕ್ಕೆ ಇದಕ್ಕೆ ಅಲ್ಲಿನ ವೈದ್ಯರು ಸಿಬ್ಬಂದಿ ಕಾರಣ ಅನಿಸಿದರು. ಅಸಲಿ ಈ ಸಮಸ್ಯೆಗೆ ಕಾರಣ ನಮ್ಮನ್ನಾಳುವ ಜನಪ್ರತಿನಿಧಿಗಳು. ಕೆ ಆರ್ ಆಸ್ಪತ್ರೆ ಖಂಡಿತಾ ಬಡವರ ಪಾಲಿನ ಕಾಮಧೇನು ಅದರಲ್ಲಿ ಎರಡು ಮಾತಿಲ್ಲ. ಆದರೆ ಕಾಮಧೇನುವೇ ಬಡವಾದರೆ ? ಇದು ಸದ್ಯ ನಮ್ಮ ಕೆ ಆರ್ ಆಸ್ಪತ್ರೆ ಪರಿಸ್ಥಿತಿ. ಇಲ್ಲಿ ಸೌಲಭ್ಯದ ಕೊರತೆ ಇದೆ. ಆಧುನಿಕ ಚಿಕಿತ್ಸಾ ವಿಧಾನದ ಕೊರತೆಯಿದೆ. ಇದರ ಜೊತೆಗೆ ದೊಡ್ಡ ಸಮಸ್ಯೆ ಎಂದರೆ ಅಕ್ಕ ಪಕ್ಕದ ಮಂಡ್ಯ ಹಾಸನ ಕೊಡಗು ಚಾಮರಾಜನಗರ ಚಿಕ್ಕಮಗಳೂರು ಸೇರಿದಂತೆ ಬಹುತೇಕ ಜಿಲ್ಲೆಯ ಆಸ್ಪತ್ರೆಗಳು. ಸ್ವಲ್ಪ ಗಂಭೀರ ಪ್ರಕರಣವಿದ್ದರು ಅವರು ಅಲ್ಲಿ ಚಿಕಿತ್ಸೆ ನೀಡುವುದಿಲ್ಲ. ಬದಲಾಗಿ ಮೈಸೂರಿನ ದೊಡ್ಡಾಸ್ಪತ್ರೆಗೆ ಹೋಗಿ ಎಂದು ಕಳುಹಿಸುತ್ತಾರೆ. ಇದರಿಂದ ಕೆ ಆರ್ ಆಸ್ಪತ್ರೆ ಎಂಬ ಕಾಮಧೇನುವಿನ ಮೇಲೆ ಒತ್ತಡ ಹೆಚ್ಚಾಗಿದೆ. ಸಿಎಂ ನಮ್ಮ‌ ಜಿಲ್ಲೆಯವರೇ ಅಗಿದ್ದಾರೆ. ಆದರೂ ಕೆ ಆರ್ ಆಸ್ಪತ್ರೆಗೆ ಕಾಯಕಲ್ಪ ಕೊಡುವ ಕೆಲಸವಾಗುತ್ತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು‌‌.

*ಕೊನೆ ಮಾತು……!*

ವಿಶೇಷ ಚೇತನ ಮಗುವಿಗೆ ಕನಿಷ್ಠ ಚಿಕಿತ್ಸೆ ಕೊಡಿಸಿದ ಸಮಾಧಾನ ನ್ಯಾಯಾಧೀಶರಿಗೆ ಸಿಕ್ಕಿದೆ. ಒಂದು ವೇಳೆ ಇದು ಆಗದಿದ್ದರೆ ಎಲ್ಲೋ ಒಂದು ಕಡೆ ಒಂದು ಕ್ಷಣಕ್ಕೆ ವ್ಯವಸ್ಥೆಯ ಮಧ್ಯೆ ತಾನು ಅಸಹಾಯಕಳಾದೆ ಅನ್ನೋ ಕೀಳರಿಮೆ ಅವರಿಗೆ ಜೀವನ ಪರ್ಯಂತ ಕಾಡುವ ಸಾಧ್ಯತೆಯಿತ್ತು. ಆದರೆ ಈಗ ಅವರಿಗೆ ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ನಿರಾಳಭಾವ ಸಿಕ್ಕಿದೆ. ಖಂಡಿತಾ ಸಾವು ಬದುಕು ಯಾರ ಕೈನಲ್ಲೂ ಇಲ್ಲ ಆದರೆ ಪ್ರತಿಯೊಬ್ಬರ ಸಾವು ಗೌರವಯುತವಾಗಿರಬೇಕು ಅದು ಪ್ರತಿಯೊಬ್ಬರ ಹಕ್ಕು ಕೂಡಾ. ಹಕ್ಕು ಅನ್ನುವುದಕ್ಕಿಂತ ಹೆಚ್ಚಾಗಿ ನಾಗರೀಕತೆ ಮಾನವೀಯತೆ. ಇಂತಹ ಘಟನೆ ಎಂದೂ ಮರುಕಳಿಸದಿರಲಿ. ಮೃತಪಟ್ಟ ವಿಶೇಷ ಚೇತನ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ತಂದೆ ತಾಯಿಗೆ ಮಗುವಿನ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ.

*ರಾಮ್ ಮೈಸೂರು*


Share