ಎಲ್ಲರೂ ನೋಡಲೇ ಬೇಕಾದ ಶಾಸ್ತ್ರಿಯವರ ಚಿತ್ರ ಟಾಸ್ಕೆಂಟ್ ಫೈಲ್ಸ್……..!*

42
Share

ಕೃಪೆ – ಲೇಖನ ರಾಮ್ ಮೈಸೂರು*

*ಎಲ್ಲರೂ ನೋಡಲೇ ಬೇಕಾದ ಶಾಸ್ತ್ರಿಯವರ ಚಿತ್ರ ಟಾಸ್ಕೆಂಟ್ ಫೈಲ್ಸ್……..!*

ಇತ್ತೀಚೆಗೆ ಬಾಲಿವುಡ್ ಟ್ರೆಂಡ್ ಬದಲಾಗಿದೆ. ಮ್ಯಾಜಿಕ್‌ ತೋರಿಸಿ ವ್ಹಾ…… ಅನಿಸಿಕೊಳ್ಳುವುದಕ್ಕಿಂತ ವಾಸ್ತವದ ಲಾಜಿಕ್ ತೋರಿಸಿ ವಾವ್…….ವಾವ್… ಅನ್ನಿಸಿಕೊಳ್ಳುವ ಕಡೆಗೆ ಹೆಜ್ಜೆಯಿಟ್ಟಿದೆ. ಇದಕ್ಕೆ ಉತ್ತಮ ಉದಾಹರಣೆ *ಟಾಸ್ಕೆಂಟ್ ಫೈಲ್ಸ್* ಚಿತ್ರ. ಇದು ಹೊಸತನದ ತನಿಖಾ ಸಿನಿಮಾದ ಟ್ರೆಂಡ್ ಹುಟ್ಟು ಹಾಕಿದ ವಿಭಿನ್ನ ಚಿತ್ರ. ದೇಶದಾದ್ಯಂತ ಸಂಚಲನ ಮೂಡಿಸಿದ ಉರಿ ನಂತರ ಅದೇ ಹಾದಿಯಲ್ಲಿ ಸಾಗಿದ ಹಾಗೂ ದೇಶದ ವಿಚಾರ, ಅದರಲ್ಲೂ ಇತಿಹಾಸದ ಗರ್ಭದಲ್ಲಿ ಹುದುಗಿ ಹೋದ ಸತ್ಯ ಶೋಧನೆ ಮಾಡುವ ಪ್ರಯತ್ನದ ಚಿತ್ರ. *2019ರಲ್ಲಿ ತೆರೆ ಕಂಡ ಈ ಚಿತ್ರ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯದ ಹರಿಕಾರ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಗೂಢ ಸಾವಿನ ವಿಚಾರದ ಮೇಲೆ ಬೆಳಕು ಚೆಲ್ಲಿರುವ ಚಿತ್ರ.* ಚಿತ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅನುಮಾನಾಸ್ಪದ ಸಾವಿನ ವಿಚಾರದ ಮೂಲಕ ದೇಶದಲ್ಲಿ ಹಿಂದೆ ಇದ್ದ ಪರಿಸ್ಥಿತಿ. 50 ವರ್ಷದ ನಂತರವೂ ಬದಲಾಗಿರದ ದೇಶದ ದುಸ್ಥಿತಿ, ದೇಶದ ಸ್ವಯಂ ಘೋಷಿತ ಅಭಿವೃದ್ದಿಯ ಹರಿಕಾರರಾಗಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಮನಸ್ಥಿತಿ ಸೇರಿದಂತೆ ಎಲ್ಲವನ್ನೂ ಕನ್ನಡಿ ಹಿಡಿದು ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸತ್ಯವನ್ನು ಮರೆ ಮಾಚಬಹುದು ಆದರೆ ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಅನ್ನೋದು ಸಿನಿಮಾದ ಬಹು ಮುಖ್ಯ ಸಂದೇಶ. ಚಿತ್ರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವು, ಸಾವಿನ ಮುನ್ನಾ, ಸಾವಿನ ನಂತರ ಆದ, ಆಗುತ್ತಿರುವ ಬೆಳವಣಿಗೆಯ ಕಥೆಯ ಹಂದರವನ್ನು ಹೊಂದಿದೆ. ಸಿನಿಮಾ‌ದಲ್ಲಿ ಆರಂಭಕ್ಕೂ ಮುನ್ನವೇ ಇದೊಂದು ದಾಖಲೆಗಳು, ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಗಳು ಹಾಗೂ ಅನೇಕ ತಜ್ಞರ ಸಂದರ್ಶನ ಇತ್ಯಾದಿ ಇತ್ಯಾದಿ ಇತ್ಯಾದಿ ಅಂಶಗಳನ್ನು ಆಧಾರಿಸಿ ತಯಾರಾಗಿರುವ ಸಿನಿಮಾ. ಈ ಸಿನಿಮಾದ ಮೂಲಕ ಯಾವುದೇ ಧರ್ಮ, ಜಾತಿ, ಸಮುದಾಯ, ವ್ಯಕ್ತಿಗೆ ನೋವು ಮಾಡವ ಉದ್ದೇಶ ಇಲ್ಲ ಎಂಬ ಸ್ಪಷ್ಟನೆಯನ್ನು ನೀಡಲಾಗಿದೆ. ಆದರೆ ಸಿನಿಮಾ‌ ನೋಡಿದ ಪ್ರತಿಯೊಬ್ಬ ನಿಜ ಭಾರತೀಯನಿಗೆ, ಅದರಲ್ಲೂ ದೇಶ ಭಕ್ತಿಯ ನಶೆಯಲ್ಲಿರುವ ಭವ್ಯ ಭಾರತದ ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಈ ಸಿನಿಮಾ ನೋವುನ್ನುಂಟು ಮಾಡುತ್ತದೆ. ಆದರೆ ಅದು ಸಿನಿಮಾದಿಂದಲ್ಲ ಸಿನಿಮಾದ ನಂತರ ನಮಗೆ ಅರಿವಾಗುವ ನಮ್ಮ ದೇಶದ ರಾಜಕೀಯ ಇತಿಹಾಸ ಹಾಗೂ ಅನೇಕ ಕಟು ಸತ್ಯಗಳಿಂದ ಮತ್ತು ದೇಶದ ರಾಜಕಾರಣ ರಾಜಕಾರಣಿಗಳ ನಡವಳಿಕೆ‌ ಹಾಗೂ ದೇಶದ ಪರಿಸ್ಥಿತಿಯ ವಿಚಾರವಾಗಿ ಅನ್ನೋದೇ ದುರಂತ.

*ಸಿನಿಮಾ ಕಥೆ*

ಸಿನಿಮಾ ಆರಂಭವಾಗುವುದು ತನ್ನ ಕೆಲಸದ ಉಳಿವಿಗಾಗಿ ಜಬರ್‌ದಸ್ತ ಸುದ್ದಿಯ ಹುಡುಕಾಟದಲ್ಲಿರುವ ಕಿರಿಯ ಪತ್ರಕರ್ತೆಯ ಪರಿಸ್ಥಿತಿಯನ್ನು ತೋರಿಸುವ ಮೂಲಕ. ರೋಚಕ ಸುದ್ದಿಯ ಹುಡುಕಾಟದಲ್ಲಿದ್ದ ಆಕೆಗೆ ಒಬ್ಬ ಅನಾಮಿಕನಿಂದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ಸುತ್ತಲಿನ ಅನುಮಾನಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅದುವರೆಗೂ ಯಾವುದೇ ಗಂಭೀರವಾದ ಮತ್ತು ಸತ್ಯಕ್ಕೆ ಹತ್ತಿರವಾದ ಸುದ್ದಿ ಮಾಡದೆ, ಕೇವಲ ಕೆಲ ನಂಬಿಕೆಗೆ ಅರ್ಹವಲ್ಲದ ಸುದ್ದಿಯ ಮೂಲಗಳ ಮಾಹಿತಿಯ ಆಧಾರದ ಮೇಲೆ ಸುದ್ದಿ ಮಾಡಿದ್ದ ಯುವ ಪತ್ರಕರ್ತೆಗೆ ಈ ಸುದ್ದಿ ಒಂದು ಬೆಂಚ್ ಮಾರ್ಕ್ ಆಗುತ್ತದೆ. ಈಕೆಯ ಆ ಒಂದು ವರದಿ ಇಡೀ ದೇಶದಲ್ಲೇ ಸಂಚಲನ ಮೂಡಿಸಿ ಆಡಳಿತ ಪಕ್ಷಕ್ಕೆ ಕಸಿವಿಸಿಯುಂಟು ಮಾಡುತ್ತದೆ. ವಿರೋಧ ಪಕ್ಷದವರಿಗೆ ಒಂದು ಹೊಸ ವಿಷಯವನ್ನು ನೀಡಿದಂತಾಗುತ್ತದೆ. ನಂತರ ನಡೆಯುವ ಬೆಳವಣಿಗೆಯಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷದವರು ಪೂರ್ವ ಒಪ್ಪಂದ ಮಾಡಿಕೊಂಡು ಪರಸ್ಪರ ಸಹಕಾರ ಕೊಡುವ ಒಪ್ಪಂದದ ಷರತ್ತಿನ ಮೇಲೆ ನಾಮಕಾವಸ್ತೆಗೆ ಒಂದು ಕಮಿಟಿ ಮಾಡೋದು, ವಿರೋದ ಪಕ್ಷದ ನಾಯಕ ಅದರ ಅಧ್ಯಕ್ಷನಾಗೋದು. ನಿವೃತ್ತ ಜಡ್ಜ್, ಒಂದು ಧರ್ಮದ‌ ಪರ ಗುರುತಿಸಿಕೊಂಡ ಲೇಖಕಿ, ಮತ್ತೊಂದು ಧರ್ಮದ ಪ್ರತಿನಿಧಿ, ಮಗದೊಂದು ಧರ್ಮದ ಎನ್.ಜಿ.ಓ ಮುಖ್ಯಸ್ಥೆ. ಯುವ ರಾಜಕಾರಣಿ ಹಾಗೂ ತಮ್ಮ ಸಾಮಾಜಿಕ‌ ಸ್ಥಾನ‌ಮಾನಕ್ಕಾಗಿ ಹೋರಾಟ ನಡೆಸುವ ಮತ್ತಿಬ್ಬರು ಕಮಿಟಿಗೆ ಆಯ್ಕೆಯಾಗುತ್ತಾರೆ.‌ ಇದರ ಜೊತೆಗೆ ಸುದ್ದಿ ಬ್ರೇಕ್ ಮಾಡಿ ಸಂಚಲನ ಮೂಡಿಸಿದ ಯುವ ಪತ್ರಕರ್ತೆಯೂ ಕಮಿಟಿ ಸೇರುತ್ತಾರೆ.

*ಸಿನಿಮಾದ ಅಸಲಿ ಆರಂಭ…….!*

ಕಮಿಟಿ ರಚನೆಯಾದ ನಂತರವೇ ನಿಜ ಸಿನಿಮಾ‌ ಆರಂಭವಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ 1966ರಲ್ಲಿ ಪಾಕಿಸ್ತಾನದ ವಿರುದ್ದದ ಯುದ್ದ ಗೆದ್ದ ನಂತರ, ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ಒಪ್ಪಂದಕ್ಕಾಗಿ ಉಜ್ಬೇಕಿಸ್ಥಾನದ ರಾಜಧಾನಿ ಟಾಸ್ಕೆಂಟ್‌ನಲ್ಲಿ ವೇದಿಕೆ ಸಿದ್ದವಾಗಿರುತ್ತದೆ. ಅಲ್ಲಿಗೆ ಪಾಕಿಸ್ತಾನದ ಪ್ರಧಾನಿ ಹಾಗೂ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತೆರಳಿರುತ್ತಾರೆ. ಅಲ್ಲಿ ಸಾಕಷ್ಟು ಹಗ್ಗ, ಜಗ್ಗಾಟಗಳ‌ ನಂತರ ಸಂಧಾನ ಯಶಸ್ವಿಯಾಗುತ್ತದೆ. ಸಂಧಾನ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ದಿನಗಳಲ್ಲಿ ಅಲ್ಲಿಯೇ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾವನ್ನಪ್ಪುತ್ತಾರೆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಾವು, ಸಾವಿನ ನಂತರದ ಬೆಳವಣಿಗೆ ಬಗ್ಗೆ ಕಮಿಟಿಯಲ್ಲಿ ಅದ್ಬುತವಾದ ಚರ್ಚೆಯಾಗುತ್ತದೆ.‌ ಆದರೆ ಕಮಿಟಿಯಲ್ಲಿದ್ದ ಯಾರೊಬ್ಬರಿಗೂ ಶಾಸ್ತ್ರಿಯವರ ಸಾವಿನ ಸತ್ಯವನ್ನು ತಿಳಿದುಕೊಳ್ಳುವ ಗೊಡವೆ ಇರುವುದಿಲ್ಲ.‌ ಎಲ್ಲರಿಗೂ ಕೇವಲ ತಮ್ಮ ತಮ್ಮ ಸ್ವಾರ್ಥದ ಸ್ವ ಹಿತಾಸಕ್ತಿಯಿರುತ್ತದೆ. ಇದನ್ನು ನಿರ್ದೇಶಕ ಮನಮುಟ್ಟುವಂತೆ ವಿವರಿಸಿದ್ದಾರೆ. ಅಷ್ಟೇ ಅಲ್ಲ ಇದು ದೇಶದಲ್ಲಿ ಹಿಂದೆ ರಚಿಸಲ್ಪಟ್ಟಿದ್ದ, ಸದ್ಯ ರಚಿಸಲಾಗಿರುವ ಕಮಿಟಿಗಳ‌ ಕಾರ್ಯವೈಖರಿಗೆ ಹಿಡಿದ ಕೈ ಗನ್ನಡಿ ಎಂದರೂ ತಪ್ಪಾಗಲಾರದು.

ಇನ್ನು ಸಾಕಷ್ಟು ನಾಟಕೀಯ ಬೆಳವಣಿಗೆ ನಂತರ ಶಾಸ್ತ್ರಿಯವರ ಸಾವು ಸಹಜ ಸಾವಲ್ಲ. ಅದೊಂದು ವ್ಯವಸ್ಥಿತ ಕೊಲೆ. ಆ ಕೊಲೆಯನ್ನು ಯಾರು ಮಾಡಿದರು ? ಏಕೆ ಮಾಡಿದರು ? ಯಾವ ಕಾರಣಕ್ಕಾಗಿ ಮಾಡಿದರು ? ಇದರಲ್ಲಿ ದೇಶದ ಹೊರಗಿನವರ ಪಾತ್ರವೇನು ? ಅವರಿಗೆ ಆದ ಲಾಭ ಏನು ? ದೇಶದ ಒಳಗಿನವರ ಪಾತ್ರವೇನು ? ಅವರಿಗೆ ಆದ ಲಾಭವೇನು ? ಇವೆಲ್ಲವನ್ನೂ ನಿರ್ದೇಶಕರು ಪ್ರೇಕ್ಷಕರಿಗೆ ನೇರವಾಗಿ ಹೇಳದೆ ಸಾಂದರ್ಭಿಕ ಸಾಕ್ಷಿ, ಶಾಸ್ತ್ರಿಗಳ ಸಾವಿನ ನಂತರ ಆದ ಬೆಳವಣಿಗೆಗಳು, ಆದ ಲೋಪಗಳು, ಉತ್ತರ ಸಿಗದ ಪ್ರಶ್ನೆಗಳು ಹುಟ್ಟು ಹಾಕುವ ಅನುಮಾನಗಳ ಮೂಲಕವೇ ಅರ್ಥ ಮಾಡಿಸುವಲ್ಲಿ 100ಕ್ಕೆ 100ರಷ್ಟು ಯಶಸ್ವಿಯಾಗಿದ್ದಾರೆ. ಇನ್ನು ಸಿನಿಮಾದಲ್ಲಿ ವಿರೋಧ ಪಕ್ಷದ ನಾಯಕನಾಗಿ ಹಿರಿಯ ಅನುಭವಿ ರಾಜಕಾರಣಿಯಾಗಿ ಮಿಥನ್ ದಾ ಅಭಿನಯ ಮತ್ತು ಬಾಡಿ ಲಾಂಗ್ವೇಜ್ ಅತ್ಯದ್ಬುತ. ಯುವ ಪತ್ರಕರ್ತೆಯಾಗಿ ಶ್ವೇತಾ ಬಸು ಪ್ರಸಾದ್ ನಟನೆ ಮನಮುಟ್ಟುವಂತಿದೆ. ಆಡಳಿತ ಪಕ್ಷದ ನಾಯಕನಾಗಿ ನಾಜಿರುದ್ದೀನ್ ಶಾ. ಕಮಿಟಿಯ ಸದಸ್ಯರಾಗಿ ನಟಿಸಿರುವ ಎಲ್ಲಾ ಕಿರಿಯ ಹಿರಿಯ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇದರ ಜೊತೆಗೆ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅರ್ಬಾಜ್ ಖಾನ್ ಸೇರಿದಂತೆ ಎಲ್ಲಾ ನಟರು ಚಿತ್ರದ ಗೆಲುವಿಗೆ ಶಕ್ತಿ ಮೀರಿ ನಟಿಸಿದ್ದಾರೆ. ಜೊತೆಗೆ ಮಿಥುನ್‌ ದಾ ಕಮಿಟಿ ಅಧ್ಯಕ್ಷನಾಗಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ನ್ಯಾಯದ ಪರ ಹೋರಾಡುವ ಹಾಗೂ ಸಮಾಜದ ಪರಿಸ್ಥಿತಿಯ ವಾಸ್ತವವನ್ನು ಬಿಚ್ಚಿಡುವ ಪಾತ್ರದ ಮೂಲಕ ಹಾಗೂ ಯುವ ಪತ್ರಕರ್ತೆಗೆ ಪ್ರಕರಣದ ಬಗ್ಗೆ ಪ್ರತಿ ಹಂತದಲ್ಲೂ ಅನಾಮಿಕನಾಗಿ ಗೈಡ್ ಮಾಡುವ ಮೂಲಕ ಹೀರೋ ಆಗಿ ಬಿಂಬಿತರಾಗುತ್ತಾರೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಆತ ಅದೆಲ್ಲಾ ಮಾಡಿದ್ದು ಕೇವಲ ಕೇವಲ ಮುಂದಿನ ಚುನಾವಣೆಗೆ ಒಂದು ಪ್ರಮುಖ ವಿಷಯದ ಹುಡುಕಾಟದಲ್ಲಿ ಅಂತಾ ಆತನೇ ಒಪ್ಪಿಕೊಳ್ಳುವ ಮೂಲಕ ಈ ದೇಶದ ರಾಜಕಾರಣಿಗಳ ಕಥೆ ಇಷ್ಟೇ ಅನ್ನೋದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ಇನ್ನು ಸಿನಿಮಾ ನೋಡಿದ ನಂತರ ಬಹುತೇಕರಿಗೆ ನಮ್ಮ ದೇಶದ ರಾಜಕಾರಣ ರಾಜಕಾರಣಿಗಳದ್ದು ಹಿಂದಿನಿಂದಲೂ ಇದೇ ಕಥೆನಾ ? ‌ನಮ್ಮ ಸೋ ಕಾಲ್ಡ್ ನೇತಾರರು ನಾಯಕರು ಅಧಿಕಾರಕ್ಕಾಗಿ ಈ ಹಿಂದೆಯೂ ಈ ಮಟ್ಟದ ಅಧೋಗತಿಗಿಳಿದಿದ್ದರಾ ? ನಮ್ಮ ಸಮಾಜದ ಆಧಾರ ಸ್ಥಂಭಗಳಂತಿರುವವರು, ಎನ್.ಜಿ.ಓ ವಿಚಾರವಾದಿಗಳು, ಸಾಹಿತಿಗಳು, ಲೇಖಕರು ಇತ್ಯಾದಿ ಇತ್ಯಾದಿ ಇತ್ಯಾದಿಗಳ ಮೂಲ ಉದ್ದೇಶ ಹಿಂದಿನಿಂದಲೂ ಇಷ್ಟೇನಾ ? ಅನ್ನೋ ಸಾಕಷ್ಟು ಪ್ರಶ್ನೆಗಳು ಮನಸಿನಲಿ ಕಾಡಿದರು, ಅಯ್ಯೋ ಬಿಡಿ ಇದಕ್ಕೆ ನಾವು ಏನು ಮಾಡಲು ಸಾಧ್ಯವಿಲ್ಲ ಅಂತಾ ಕೈ ಕೈ ಹಿಸುಕಿಕೊಂಡು. ಛೇ….. ನಮ್ ದೇಶ ಯಾವತ್ತು ಬದಲಾಗಲ್ಲ, ನಮ್ ದೇಶದ ಕಥೆ ಇಷ್ಟೇನೇ, ಅಂತಾ ಗೊಣಗಾಡುವುದನ್ನು ಬಿಟ್ಟರೆ ಬೇರೆನೂ ಮಾಡಲು ನಮ್ಮಿಂದ ಸಾಧ್ಯವಿಲ್ಲವಲ್ಲ ಅಂತಾ ಅನಿಸದೆ ಇರಲಾರದು. ಇದು ವಾಸ್ತವ ಮತ್ತು ಕಟು ಸತ್ಯ ಕೂಡ. ಕಡೆಯದಾಗಿ ಈ ಎಲ್ಲಾ ವಿಚಾರವನ್ನು ಪರಿಣಾಮಕಾರಿಯಾಗಿ ತೋರಿಸಿರುವ ಟಾಸ್ಕೆಂಟ್ ಫೈಲ್ಸ್ ಒಂದು ಅತ್ಯುತ್ತಮ ತನಿಖಾ ಚಿತ್ರ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂದು ಶಾಸ್ತ್ರೀಜಿ ಅವರ ಹುಟ್ಟುಹಬ್ಬ. ಹೀಗಾಗಿ ಖಂಡಿತಾ ಇವತ್ತೇ ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ನೋಡಿ.

*ರಾಮ್ ಮೈಸೂರು*


Share