ಎಲ್ಲ ಮಹಿಳೆಯರು ನಾಯಕಿಯರಾಗಿ ಬೆಳೆಯಬೇಕು- ಡಿಕೆಶಿ

208
Share

 

 

ಹಾಸನದ ಅರಕಲಗೂಡಿನಲ್ಲಿ ಭಾನುವಾರ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ಎಲ್ಲ ಮಹಿಳೆಯರು ನಾಯಕಿಯರಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ‘ನಾ ನಾಯಕಿ’ ಎಂಬ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಹೊಸ ಶತಮಾನದ ನಾಯಕಿಯರನ್ನು ತಯಾರಿ ಮಾಡುವುದು ‘ನಾ ನಾಯಕಿ’ ಉದ್ದೇಶ.

ಇಂದು ವಿಶ್ವ ತಾಯಂದಿರ ದಿನ. ಇದೊಂದು ಐತಿಹಾಸಿಕ ದಿನ. ಇದು ಪವಿತ್ರ ಕಾರ್ಯಕ್ರಮ.

ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಸ್ತ್ರೀಶಕ್ತಿ ಕಾರ್ಯಕ್ರಮ ಜಾರಿಗೆ ತರುವಲ್ಲಿ ನಾನು ಕೂಡ ಅದರ ಭಾಗವಾಗಿದ್ದೆ.

ಹೆಣ್ಣು ಕುಟುಂಬದ ಕಣ್ಣು. ಹೀಗಾಗಿ ಹೆಣ್ಣಿಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಸ್ತ್ರೀಶಕ್ತಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು.

ಕಾಂಗ್ರೆಸ್ ಪಕ್ಷ ಹೆಣ್ಣಿನ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ನಾನಿಂದು ಶ್ರೀಮತಿ ಸೋನಿಯಾ ಗಾಂಧಿಯವರು ರಾಷ್ಟ್ರೀಯ ಅಧ್ಯಕ್ಷರಾಗಿರುವ ಹಾಗೂ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಇಂದಿರಾಗಾಂಧಿ ಅವರ ಕಾಂಗ್ರೆಸ್ ಪಕ್ಷದ ಪರವಾಗಿ ಇಲ್ಲಿಗೆ ಬಂದಿದ್ದೇನೆ.

ಇಡೀ ಪ್ರಪಂಚದಲ್ಲಿ ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದವರು ಯಾರಾದರೂ ಇದ್ದರೆ ಅದು ಶ್ರೀಮತಿ ಸೋನಿಯಾ ಗಾಂಧಿ ಅವರು ಮಾತ್ರ. ಆ ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನಿಂದು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ.

ನಮ್ಮ ಕನಸುಗಳು ಜೀವನಕ್ಕೆ ಸ್ಫೂರ್ತಿ. ನಮ್ಮ ನಂಬಿಕೆ ಕೆಲಸಕ್ಕೆ ಸ್ಫೂರ್ತಿ. ನಮ್ಮ ಪ್ರೀತಿ ಹೃದಯಕ್ಕೆ ಸ್ಫೂರ್ತಿ. ಹೀಗಾಗಿ ನಾವು ನಮ್ಮ ತಾಯಂದಿರನ್ನು ನೆನೆಸಿಕೊಳ್ಳಲು ಬಂದಿದ್ದೇವೆ.

ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ದೇವರ ನೆನಪು ಭಕ್ತಿಯೇ ಮೂಲ, ನೂರಾರು ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ.

ಹೀಗಾಗಿ ಇಂದು ನಮ್ಮ ಎಲ್ಲ ತಾಯಂದರಿಗೆ ನಮನ ಸಲ್ಲಿಸಲು ಸೇರಿದ್ದೇವೆ. ನಾವು ಇಂತಹುದೇ ಧರ್ಮದಲ್ಲಿ ಅಥವಾ ಇಂತಹವರ ಗರ್ಭದಲ್ಲಿ ಜನಿಸಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ಯಾವುದೇ ಜಾತಿ, ಯಾವುದೇ ಧರ್ಮವಿದ್ದರೂ ತಾಯಿಯ ಸ್ಥಾನವೇ ಅತ್ಯುನ್ನತ.

ನಾವು ನಮ್ಮ ಊರಿಗೆ ಹೋದರೆ ಗ್ರಾಮದೇವತೆ ಇದ್ದಾರೆ. ಹಾಸನದ ದೇವತೆ ಹಾಸನಾಂಬೆ ಎಂದು ಹೇಳುತ್ತೇವೆ.

ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅವರು ನನಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕೊಟ್ಟರೂ ಅವರ ಆಹ್ವಾನ ಪತ್ರಿಕೆಯಲ್ಲಿ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸಲಾಗಿದೆ. ಅಂದರೆ ನಮ್ಮಲ್ಲಿ ಮೊದಲು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ಸಂಸ್ಕೃತಿ. ನಮ್ಮ ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ.

ನಾವು ಭೂಮಿಯನ್ನು ಮಾತೃಭೂಮಿ ಎಂದು ಕರೆಯುತ್ತೇವೆ. ಹಿಂದೂಧರ್ಮದಲ್ಲಿ ಶಿವನನ್ನು ಪಾರ್ವತಿ ಪರಮೇಶ್ವರ ಎಂದು ವೆಂಕಟೇಶ್ವರನನ್ನು ಲಕ್ಷ್ಮಿವೆಂಕಟೇಶ್ವರ ಎಂದು ಗಣೇಶನನ್ನು ಗೌರಿ-ಗಣೇಶ ಎಂದು ಕರೆಯುತ್ತೇವೆ. ಅಂದರೆ ದೇವತೆಗಳನ್ನು ನಾವು ಕರೆಯುವಾಗ ಅವರ ಪತ್ನಿ ಅಥವಾ ತಾಯಿಯ ಹೆಸರಿನ ಜೊತೆಗೆ ಕರೆಯುತ್ತೇವೆ. ಇದು ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ಕೊಟ್ಟಿರುವ ಪ್ರಾಶಸ್ತ್ಯ.

ಭೀಷ್ಮರನ್ನು ಗಂಗಾಪುತ್ರ ಎಂದು ಕೃಷ್ಣನನ್ನು ದೇವಕಿನಂದನ ಅಥವಾ ರಾಧಾಕೃಷ್ಣ ಎಂದು ಕೌರವರನ್ನು ಗಾಂಧಾರಿ ಪುತ್ರರು ಎಂದು ಕರ್ಣನನ್ನು ಕುಂತಿಪುತ್ರ ಎಂದು ಕರೆಯುತ್ತೇವೆ.

ನಮ್ಮ ಯುವ ಮಿತ್ರ ಸಮಾಜ ಸೇವೆ ಮಾಡಲು ಮುಂದೆ ಬಂದಿದ್ದು, ನಮ್ಮ ತಾಯಂದಿರನ್ನು ಸ್ಮರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದಾಗ ನಾವೆಲ್ಲರೂ ಸೇರಿ ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ.

ನಮಗೆ ಅಧಿಕಾರ ಬೇಕು ಎಂದೇನಿಲ್ಲ. ಯಾರು ಜನ ಸೇವೆ ಮಾಡಿ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ ಅವರನ್ನು ಗುರುತಿಸುವುದು ಬಹಳ ಮುಖ್ಯ. ಯಾರು ಕೂಡ ಯಾವುದೇ ಕುರ್ಚಿಗೆ ಅಂಟಿಕೊಂಡು ಕೂರಲು ಸಾಧ್ಯವಿಲ್ಲ.

ಯಾರು ಸಮಾಜದ ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಪ್ರತಿ ಗ್ರಾಮದಲ್ಲೂ ಆಂಜನೇಯಸ್ವಾಮಿಯ ದೇವಾಲಯವನ್ನು ಕಾಣುತ್ತೇವೆ. ಆಂಜನೇಯ ಶ್ರೀ ರಾಮನ ಭಂಟ. ನಾವು ಆಂಜನೇಯ ದೇವಾಲಯ ನೋಡುತ್ತೇವೆಯೇ ಹೊರತು ಶ್ರೀರಾಮನ ತಂದೆ ದಶರಥನ ದೇವಾಲಯವನ್ನು ಕಾಣುವುದಿಲ್ಲ.

ನನ್ನ ತಾಯಿಯನ್ನು ನೆನೆಸಿಕೊಳ್ಳುತ್ತೇನೆ. ಅವರ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ನನಗೆ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನನ್ನ ತಾಯಿ ತೀರ್ಮಾನಿಸದಿದ್ದರೆ ನಾನು ಇವತ್ತು ಹೀಗೆ ಇಲ್ಲಿಗೆ ಬಂದು ನಿಮ್ಮ ಮುಂದೆ ಈ ರೀತಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ತಾಯಿಯೇ ನಮಗೆ ಮೊದಲ ಗುರು.

ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಪರಮ ಸುಖವಯ್ಯಾ ಎಂದು. ಅದೇ ರೀತಿ ಇಲ್ಲಿಗೆ ಬಂದು ಈ ಸಾವಿರಾರು ತಾಯಂದಿರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅರ್ಪಿಸುವ ಭಾಗ್ಯ ನನ್ನದಾಗಿದೆ.

ನಿಮ್ಮನ್ನು ನಾಯಕರನ್ನಾಗಿ ಮಾಡಬೇಕು. ನೀವೆಲ್ಲರೂ ನಾಯಕಿಯರಾಗಿ ಪರಿವರ್ತನೆಯಾಗಬೇಕು. ಕುಟುಂಬ, ಸಮಾಜವನ್ನು ಎದುರಿಸಿ ನೀವು ನಾಯಕಿಯರಾಗಿ ಬೆಳೆಯಬೇಕು.

ಇಂದು ನಮ್ಮ ಯುವ ಮಿತ್ರರಾದ ಶ್ರೀಧರಗೌಡ ಅವರು ತಾಯಂದಿರನ್ನು ನೆನೆಸಿಕೊಂಡು ಒಂದು ಪವಿತ್ರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ.

ನಾನು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತೇನೆ, ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದೇ ರೀತಿ ಅರಕಲಗೂಡಿನಲ್ಲಿ ಶ್ರೀಧರ್ ಗೌಡ ಅವರು ವಿಶ್ವ ತಾಯಂದಿರ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದು ಈ ಭಾಗದ ಇತಿಹಾಸದಲ್ಲಿ ಉಳಿಯಲಿದೆ.

ನಮ್ಮನ್ನು ಎಲ್ಲರೂ ಟೀಕೆ ಮಾಡುತ್ತಾರೆ. ಆದರೂ ನಾವು ಜನರ ಆಶೀರ್ವಾದ ಸಂಪಾದಿಸಬೇಕು. ಟೀಕೆ ಎದುರಿಸಿದರೆ ಮಾತ್ರ ನಾವು ನಾಯಕರಾಗಲು ಸಾಧ್ಯ. ಕಲ್ಲುಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ಕಲ್ಲಿಗೆ ಉಳಿಯೇಟು ಬಿದ್ದರೆ ಶಿಲೆಯಾಗಿ ನಿಲ್ಲುತ್ತದೆ. ಯಾರೋ ಏನು ಹೇಳಿದರೂ, ಬರೆದರೂ ಎಂದಮಾತ್ರಕ್ಕೆ ತಲೆಕೆಡಿಸಿ ಕೊಳ್ಳಬಾರದು.

ನೀವು ಜನಸೇವೆ ಮುಂದುವರಿಸಿಕೊಂಡು ಹೋಗಿ. ಬಹಳ ನಾಯಕರನ್ನು ತಯಾರು ಮಾಡುವ ಶಕ್ತಿ ಪಕ್ಷಕ್ಕಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ನಾವು ತೀರ್ಮಾನ ಮಾಡುತ್ತೇವೆ.

ನಮ್ಮ ತಾಯಿ ಗುರು ಹೌದು, ಗೆಳತಿಯೂ ಹೌದು, ದೇವರು ಕೂಡ ಹೌದು. ನಮ್ಮ ಅಮ್ಮನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆಕೆಯ ಸ್ವಾಭಿಮಾನವನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಒಂದು ಪ್ರಮುಖ ಘೋಷಣೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಲಿದೆ. ನಾವು ಹೆಣ್ಣು ಮಕ್ಕಳು ಹಾಗೂ ಯುವಕರ ಮೇಲೆ ನಂಬಿಕೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.

ಸಿದ್ದರಾಮಯ್ಯನವರ ಕಾಲದಲ್ಲಿ ನಮ್ಮ ಪಕ್ಷ ಕೊಟ್ಟ 150 ಆಶ್ವಾಸನೆಗಳಲ್ಲಿ ಶೇಕಡ 90 ರಷ್ಟು ಪೂರ್ಣಗೊಳಿಸಿದ್ದೇವೆ. ಆ ಮೂಲಕ ನಾವು ನುಡಿದಂತೆ ನಡೆದಿದ್ದೇವೆ.

ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಜನರಿಗೆ ನೀಡುವ ಉಚಿತ ಮನೆ,ನಿವೇಶನಗಳನ್ನು ಆಯಾ ಮನೆಯ ಹೆಣ್ಣುಮಕ್ಕಳ ಹೆಸರಿನಲ್ಲಿ ನೀಡಲಾಗುವುದು ಎಂಬ ಆಶ್ವಾಸನೆ ನೀಡುತ್ತೇವೆ.

ಹಿಂದೆ ಕನಕಪುರದಲ್ಲಿ ನಾನು ಸುಮಾರು ಏಳು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದೇನೆ. ಆ ಎಲ್ಲ ನಿವೇಶನಗಳನ್ನು ಆ ಮನೆಯ ತಾಯಿ ಅಥವಾ ಹೆಣ್ಣುಮಕ್ಕಳ ಹೆಸರಿಗೆ ನೀಡಿದ್ದೇನೆ.

ಹೆಣ್ಣಿಗೆ ರಕ್ಷಣೆ, ಧೈರ್ಯ ತುಂಬಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ಕೊಡಲು ಇಂತಹ ಕಾರ್ಯಕ್ರಮ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ, ಅನುದಾನ ಕೊಟ್ಟರೂ ಅದನ್ನು ಮಹಿಳೆಯ ಹೆಸರಿನಲ್ಲಿ ನೀಡಲಾಗುವುದು.

ಒಂದೊಮ್ಮೆ ಹೆಣ್ಣಿಗೆ ನೀಡಲು ಸಾಧ್ಯವಾಗದಿದ್ದರೆ ಆ ಕುಟುಂಬದ ಹೆಣ್ಣು ಹಾಗೂ ಗಂಡಿನ ಹೆಸರಿಗೆ ಜಂಟಿಯಾಗಿ ನೋಂದಣಿ ಮಾಡಲಾಗುವುದು. ಇದು ನಮ್ಮ ಪಕ್ಷದ ಪ್ರಣಾಳಿಕೆಯ ಭಾಗವಾಗಿದ್ದು, ಮುಂದೆ ಯಾರೇ ಮುಖ್ಯಮಂತ್ರಿಯಾದರೂ ಇದನ್ನು ಜಾರಿಗೆ ತರಲಾಗುವುದು.

ನಾವು ಮೇಕೆದಾಟು ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಹಾಸನದ ಜನತೆ, ಅರಕಲಗೂಡಿನ ನಾಯಕರು ಭಾಗವಹಿಸಿದ್ದರು. ಈ ಭಾಗದಿಂದ ಸುಮಾರು ಹತ್ತು ಸಾವಿರ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ನಿಮ್ಮ ಮುಂದಿನ ಜೀವನ ಹಸನು ಮಾಡಿಕೊಳ್ಳಲು ಈಗಿನಿಂದಲೇ ಭದ್ರಬುನಾದಿ ಹಾಕಿಕೊಳ್ಳಬೇಕು.

ನಾವು ಸಾಮಾನ್ಯವಾಗಿ ಜೀವನದಲ್ಲಿ ಪೆಟ್ಟು ತಿನ್ನುತ್ತೇವೆ. ನಮ್ಮ ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಬಹಳ ಆಳವಾಗಿರುತ್ತದೆ. ಹೀಗಾಗಿ ನಾವು ಮಾತನಾಡುವ ಸಂದರ್ಭದಲ್ಲಿ ಬಹಳ ಜಾಗರೂಕರಾಗಿರಬೇಕು. ಎಲ್ಲಾ ವರ್ಗದವರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗಬೇಕು.

ದಾನ-ಧರ್ಮಕ್ಕೆ ಕಣ್ಣಿರುವುದಿಲ್ಲ, ನ್ಯಾಯನೀತಿಗೆ ಸಾವಿರುವುದಿಲ್ಲ, ಜೀವ ಚಿಕ್ಕದು, ಜೀವನ ದೊಡ್ಡದು. ಸಾಯುವವನಿಗೆ ಒಂದು ದಾರಿಯಾದರೆ, ಸಾಧಿಸುವವನಿಗೆ ನೂರಾರು ದಾರಿ. ಅದೇ ರೀತಿ ಹೆಣ್ಣುಮಕ್ಕಳು ದೊಡ್ಡ ಮಟ್ಟದ ಸಾಧನೆ ಮಾಡಿ ಈ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದೀರಿ.

ನಾವು ಯಾವುದೇ ವ್ಯಕ್ತಿ ಪೂಜೆ ಮಾಡುವುದು ಬೇಡ, ಪಕ್ಷದ ಪೂಜೆ ಮಾಡೋಣ. ಈ ದೇಶದ ನಾಯಕಿ ಸೋನಿಯಾ ಗಾಂಧಿ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಈ ದೇಶಕ್ಕೆ ಪ್ರಾಣತ್ಯಾಗ ಮಾಡಿದ ನಾಯಕರೆಂದರೆ ಶ್ರೀಮತಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಮಾತ್ರ. ನಾವೆಲ್ಲರೂ ಅವರನ್ನು ಸ್ಮರಿಸಬೇಕು.

ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸದಸ್ಯರನ್ನು ಮಾಡಿದ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರವು ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿದೆ.

ಯಾರೆಲ್ಲಾ ಪ್ರಾಮಾಣಿಕವಾಗಿ ಸದಸ್ಯತ್ವವನ್ನು ಮಾಡಿದ್ದಿರೋ ಅವರನ್ನು ಅಭಿನಂದಿಸುತ್ತೇವೆ.

ಈಗಲೂ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಮನೆಮನೆಗೆ ಹೋಗಿ ಸದಸ್ಯತ್ವ ಮಾಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಸಮಗ್ರತೆಯನ್ನು ಕಾಪಾಡಲು ಸಾಧ್ಯ. ಸಮಾನತೆಯಿಂದ ಬದುಕಲು ನಾವು-ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ನಮ್ಮಲ್ಲಿ ಕೆಟ್ಟ ಮಗ ಹುಟ್ಟಬಹುದು, ಕೆಟ್ಟ ತಂದೆ ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ನನ್ನ ತಾಯಂದಿರಿಗೂ ನಾನು ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ.

ನಿಮ್ಮ ಪ್ರೀತಿ ವಿಶ್ವಾಸ ನನ್ನ ಹಾಗೂ ಪಕ್ಷದ ಮೇಲೆ ಇರಲಿ ಎಂದು ಮನವಿ ಮಾಡುತ್ತೇನೆ.


Share