*ಓ ಬಸವ……….!ರಾಮ್ ಮೈಸೂರು

65
Share

 

*ಓ ಬಸವ……….!*

ನಾವಾಗಿಲ್ಲ ನಿಮ್ಮವರು,
ನಮಗಿಷ್ಟ ಭೇಧ ಭಾವ ಮಾಡುವವರು.
ಜಾತಿಯ ವಿಷ ಬೀಜವ ಬಿತ್ತುವವರು,
ಧರ್ಮದ ಹೆಸರಲ್ಲಿ ಬಡಿದಾಡುವವರು.

*ಕ್ಷಮಿಸು ಬಿಡು ಬಸವ*

ಕಳುವು ಮಾಡುತ್ತಿರುವೆವು ಹೆದರದೆ,
ಕೊಲೆ‌ ಮಾಡುತ್ತಿರುವೆವು ಬೆದರದೆ.
ಇರಲಾರೆವು ಹುಸಿಯ ನುಡಿಯದೆ,
ಬದುಕಲಾರೆವು ಅಸಹ್ಯಪಡದೆ.

*ಕ್ಷಮಿಸು ಬಿಡು ಬಸವ*

ನೀರು ಕಂಡರೆ ಕಲುಷಿತಗೊಳಿಸುವೆವು,
ಮರ‌ವ ಕಂಡರೆ ಕಡಿದು ಹಾಕುವೆವು.
ಸ್ವಾರ್ಥವೇ ನಮ್ಮ ಮನೆ ದೇವರು,
ಅಸೂಯೆ ದ್ವೇಷ ನಮ್ಮುಸಿರು.

*ಕ್ಷಮಿಸು ಬಿಡು ಬಸವ*

ಪರರ ಏಳಿಗೆ ಸಹಿಸಲಾರೆವು,
ಮತ್ತೊಬ್ಬರ ಕಾಲೆಳೆದು ಬದುಕುತ್ತಿರುವೆವು.
ನಮ್ಮನ್ನೇ ನಾವು ಯಾಮಾರಿಕೊಳ್ಳುತ್ತಿರುವೆವು,
ಸಂಬಂಧಗಳ ಮರೆತಿರುವೆವು.

*ಕ್ಷಮಿಸು ಬಿಡು ಬಸವ*

ನಮಗೋ ಗುರು ವಚನ ಬೇಕಿಲ್ಲ,
ಜ್ಞಾನದ ಅವಶ್ಯಕತೆಯಿಲ್ಲ.
ಸಾಮಾಜಿಕ ಸಮಾನತೆ ಮೇಲೆ ನಂಬಿಕೆಯಿಲ್ಲ,
ಅನೀತಿಯೇ ತಾಂಡವವಾಡುತ್ತಿದೆ ಮನದಲೆಲ್ಲಾ.

*ಕ್ಷಮಿಸು ಬಿಡು ಬಸವ*

ನಡೆಯುತ್ತಿದ್ದರೆ ಜಾತಿ ನಡುವೆ ಜಗಳ,
ನಮಗೋ ಮಜಬೂತಾದ ಕವಳ.
ಅದರಲ್ಲೇ ಉರುಳಿಸಿ ರಾಜಕೀಯ ದಾಳ,
ಸೃಷ್ಟಿಸುವೆವು ತಳಮಳ.

*ಕ್ಷಮಿಸಬೇಕಾದರೆ ಬಸವ*

ಬದಲಾಗಿ ಬದಲಾಯಿಸಿ
ಬಸವಣ್ಣನ ಅನುಕರಿಸಿ
ಬಸವ ತತ್ವಗಳನ್ನು ಅನುಸರಿಸಿ
ಬಸವಣ್ಣನವರ ಕನಸನ್ನು ಉಳಿಸಿ ಬೆಳೆಸಿ.

*ಬಸವ ಜಯಂತಿ ಶುಭಾಶಯಗಳು*

*ರಾಮ್ ಮೈಸೂರು*


Share