ಗಣರಾಜ್ಯೋತ್ಸವ ಅರ್ಥಪೂರ್ಣವಾಗಿರಲಿ- ಮಣಿಕಂಠ ತ್ರಿಶಂಕರ್,

140
Share

ಗಣರಾಜ್ಯೋತ್ಸವ ಅರ್ಥಪೂರ್ಣವಾಗಿರಲಿ
ಮಣಿಕಂಠ ತ್ರಿಶಂಕರ್, ಮೈಸೂರು.
ಜನವರಿ 26, ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ದಿನವೇ ಪ್ರಜಾರಾಜ್ಯೋತ್ಸವ, ಪ್ರಜೆಗಳ ಪ್ರಭುತ್ವವುಳ್ಳ ಪ್ರಜಾರಾಜ್ಯದ ಹಬ್ಬವಿದು. ಆದರೆ ಇಂದು ಈ ಹಬ್ಬ ಕೇವಲ ಸರಕಾರಿ ಹಬ್ಬವಾಗಿರುವುದು ನಿಜಕ್ಕೂ ವಿಷಾದನೀಯ. ನಮ್ಮ ಸಾಂಸ್ಕೃತಿಕ ಹಬ್ಬಗಳಲ್ಲಿ ಕಾಣುವ ಯಾವುದೇ ಸಂಭ್ರಮ ನಮ್ಮ ರಾಷ್ಟ್ರೀಯ ಹಬ್ಬಗಳಲ್ಲಿ ಕಾಣುವುದೇ ಇಲ್ಲ. ಅಂದು ಯಾರೂ ಮನೆಯಲ್ಲಿ ಹೊಸ ಬಟ್ಟೆ ಹಾಕಿಕೊಳ್ಳುವುದಿಲ್ಲ. ಸಡಗರದಿಂದ ಸ್ವತಂತ್ರ ದೇವಿಯನ್ನು ಪೂಜಿಸುವುದಿಲ್ಲ. ಅಂದು ಯಾರೂ ಮನೆಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಕೈಮುಗಿಯವುದಿಲ್ಲ. ಹೊಟ್ಟೆಗಾಗಿ ನಿತ್ಯ ದುಡಿಯುವ ಶೇ.40ರಷ್ಟು ಭಾರತೀಯ ಪ್ರಜೆಗಳಿಗೆ ಗಣರಾಜ್ಯೋತ್ಸವ ಎಂದರೆ ಏನೆಂದೇ ಗೊತ್ತಿಲ್ಲ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯೇ ಕಾರಣ, ಈ ರಾಷ್ಟ್ರೀಯ ಹಬ್ಬಗಳನ್ನು ನಾವು ಆರಂಭದಲ್ಲೇ ಸಾರ್ವಜನಿಕ ಹಬ್ಬಗಳನ್ನಾಗಿಸದೇ ಕೇವಲ ಸರಕಾರದ ಕಾರ್ಯಕ್ರಮಗಳನ್ನಾಗಿಸಿಕೊಂಡಿರುವುದೇ ಇದಕ್ಕೆ ಕಾರಣ.
ಪ್ರಜಾಪ್ರಭುತ್ವ ಅಂದಾಗ ತಕ್ಷಣ ನೆನಪಾಗುವ ಹೆಸರು ಆಬ್ರಾಹಿಂ ಲಿಂಕನ್, ಪ್ರಜಾಪ್ರಭುತ್ವ ರಾಜಕೀಯ ಪದ್ಧತಿಗೆ ವ್ಯಾಖ್ಯಾನ ಬರೆದ ಅವರು ಹೇಳುತ್ತಾರೆ- ‘ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿರುವುದೇ ಪ್ರಜಾಪ್ರಭುತ್ವ’ ಮಾಸ್ತಿ ವೆಂಕಟೇಶ ಅಯಂಗಾ‌ ಹೇಳುತ್ತಾರೆ- ‘ಯಾವನೂ ತಾನು ಅಸಹಾಯಕ ಎಂದುಕೊಳ್ಳದಂತೆ, ಬೇರೆ ಯಾವನೂ ತಾನು ಶ್ರೇಷ್ಟ ಅಂದುಕೊಳ್ಳದಂತೆ, ದೈನ್ಯ, ದಾಷ್ಟ್ರ ಎರಡೂ ತಪ್ಪು ಎಂಬ ದೃಷ್ಟಿಯನ್ನು ಜನಸಾಮಾನ್ಯರ ಆಸ್ತಿಯನ್ನಾಗಿ ಮಾಡುವುದೇ ಪ್ರಜಾಪ್ರಭುತ್ವ,’ ಡಾ|| ಎಸ್‌.ರಾಧಾಕೃಷ್ಣನ್ ಹೇಳುತ್ತಾರೆ- ‘ಪ್ರಜಾಪ್ರಭುತ್ವ ಪದ್ಧತಿ ಎನ್ನುವುದು ಸರಕಾರದ ಒಂದು ವಿಧಾನ ಮಾತ್ರವಲ್ಲ, ಅದು ಜೀವನದ ಒಂದು ವಿಧಾನವೂ ಹೌದು. ಅದು ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಗೌರವಗಳಲ್ಲಿ ಇಟ್ಟ ನಂಬಿಕೆಯೂ ಆಗಿರುತ್ತದೆ.’ ನಮ್ಮದು ಪ್ರಜೆಗಳಿಂದ ಪರೋಕ್ಷವಾಗಿ ಆಳಲ್ಪಡುತ್ತಿರುವ ಹಲವು ರಾಜ್ಯಗಳನ್ನುಳ್ಳ ಗಣರಾಜ್ಯ ಆಯಾ ರಾಜ್ಯಗಳಿಗೆ ತಮ್ಮದೇ ಆದ ಸಂಸ್ಕೃತಿ-ಪರಂಪರೆಗಳಿದ್ದರೂ ವೈವಿಧ್ಯತೆಯಲ್ಲಿಯೇ ಐಕ್ಯತೆಯನ್ನುಳಿಸಿಕೊಂಡು 13 ವರ್ಷಗಳಿಂದಲೂ ನಮ್ಮ ಗಣರಾಜ್ಯ ಅಭಾದಿತವಾಗಿ ಸಾಗಿಕೊಂಡು ಬರುತ್ತಲಿದೆ. ನಮ್ಮದು ಇಡೀ ಜಗತ್ತಿನಲ್ಲೇ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ಹೆಮ್ಮೆಯ ದೇಶ!
1947ರ ಆಗಸ್ಟ್ 15ರಂದು ಸ್ವತಂತ್ರಗೊಂಡ ದೇಶ 1950ರ ಜನವರಿ 26ರಂದು ಗಣರಾಜ್ಯವಾಯಿತು. ತ್ರಿವರ್ಣ ಧ್ವಜ ದೇಹಲಿಯ ಕೆಂಪುಕೋಟೆಯ ಮೇಲೇರಿ ಈಗ 73 ವರ್ಷಗಳು. ಏಳು ದಶಕಗಳು ಒಂದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕಡಿಮೆ ಅವಧಿಯೇನೂ ಅಲ್ಲ. ಆದರೆ ಒಡೆದು ಆಳುವ ನೀತಿಯಲ್ಲಿ ನಿಮಣರಾದ ಆಂಗ್ಲರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ನೀಡಿದ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಿತು. ಭಾರತವು ಭವಿಷ್ಯತ್ತಿನಲ್ಲಿ ಎಂದಿಗೂ ಚೇತರಿಸಿಕೊಳ್ಳಬಾರದೆಂದೇ ಭಾವಿಸಿದ್ದ ಬ್ರಿಟಿಷರು ಅಖಂಡ ಭಾರತವನ್ನು ತುಂಡರಿಸಿ ರಾಷ್ಟ್ರೀಯ ಐಕ್ಯತೆಗೆ ನೀಡಿದ ಬಾರೀ ಪೆಟ್ಟು ಈಗಲೂ ಆಗಾಗ ವೇದನೆ ನೀಡುತ್ತಿದೆ.
ನಮ್ಮ ದೇಶದ ಸಾರ್ವಭೌಮತ್ವದ ಮೂಲಭೂತ ದಾಖಲೆಯೇ ನಮ್ಮ ಸಂವಿಧಾನ. 1946ರಲ್ಲಿ ಡಾ|| ಬಿ.ಆರ್. ಅಂಬೇಡ್ಕರ್‌ರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಂವಿಧಾನ ರಚನಾ ಸಮಿತಿ ನಾಲ್ಕು ವರ್ಷಗಳ ಕಾಲ ಸರ್ವ ರೀತಿಯಿಂದಲೂ ಚಿಂತನ-ಮಂಥನ ನಡೆಸಿ, ಸಂವಿಧಾನ ಕರಡನು ರಚಿಸಿ 1948ರ ಫೆಬ್ರವರಿ ತಿಂಗಳಲ್ಲಿ ರಾಜ್ಯ ವ್ಯವಸ್ಥಾಪಕ ಸಭೆಗೆ ಒಪ್ಪಿಸಿತು. ಈ ಸಂವಿಧಾನದ ಕರಡನ್ನು ಕುರಿತು ಮೂರು ಬಾರಿ ಸುದೀರ್ಘ ಚರ್ಚೆ ನಡೆದು 1949ರ ನವಂಬರ್ ತಿಂಗಳ 26ರಂದು ಅದನ್ನು ಒಪ್ಪಲಾಯಿತು. ನಂತರ ಜನವರಿ 26, 1950ರಂದು ಅದನ್ನು ಭಾರತದ ಸಂವಿಧಾನವೇದು ಘೋಷಿಸಲಾಯಿತು. ಅಂದು ಗಣರಾಜ್ಯಗಳನ್ನೊಳಗೊಂಡ ಭಾರತ ಸಾರ್ವಭೌಮಾಧಿಕಾರ ಹೊಂದಿತು. ಪ್ರಜಾಪ್ರಭುತ್ವ ರಾಜಕಿಯ ಪದ್ಧತಿಯನ್ನು ನಮ್ಮ ದೇಶದ ಆಡಳಿತ ಪದ್ಧತಿಯನ್ನಾಗಿ ಸ್ವೀಕರಿಸಿದೆವು. ಆ ದಿನವನ್ನೇ ಅಂದರೆ ಜನವರಿ 26ನ್ನು ಪ್ರತಿವರ್ಷ ಗಣರಾಜೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ನಮ್ಮ ಗಣರಾಜ್ಯ ಈಗ ಸಾಕಷ್ಟು ಪ್ರಗತಿ ಸಾಧಿಸಿದೆ. ಬದುಕಿನ ಸರ್ವ ಕ್ಷೇತ್ರಗಳಲ್ಲಿ ಜಗತ್ತಿನ ಮುಂದುವರೆದ ದೇಶಗಳು ಬೆರಳು ಕಚ್ಚಿಕೊಳ್ಳುವ ಹಾಗೆ ಬೆಳೆದಿದ್ದೇವೆ. ಕೃಷಿಯಲ್ಲಿ ಸ್ವಾವಲಂಬನೆ, ಕೈಗಾರಿಕೋದ್ಯಮದಲ್ಲಿ ಸಫಲತೆ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ, ಸಾರಿಗೆ- ಸಂಪರ್ಕ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ….. ಇನ್ನೂ ಅನೇಕ ವಲಯಗಳಲ್ಲಿ ಬಹುಮುಖ ಪ್ರಗತಿ ಸಾಧಿಸಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ತನ್ನದೇ ಆದ ರೀತಿಯಲ್ಲಿ ಜಗತ್ತಿನ ಗಮನ ಸೆಳೆಯುತ್ತಿದೆ. ನ್ಯೂಕ್ಲಿಯ‌ ಕ್ಲಬ್ ಸದಸ್ಯತ್ವಕ್ಕೆ 1998ರಲ್ಲಿ ಸೇರಿದ ಭಾರತ ವಿಶ್ವ ಶಾಂತಿಯ ಪ್ರಯತ್ನದಲ್ಲಿ ಸದಾ ಮುಂದೆ ಇದೆ.
ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿ ಭಾರತೀಯನಿಗೆ ಸ್ವತಂತ್ರ ಭಾರತದ ಬಗೆಗಿದ್ದ ಭಾವನೆಗಳೆಲ್ಲ ಬೆಂದು ಹೋದ-ಹೋಗುತ್ತಿರುವ ಭಯಾನಕ ಅನುಭವವಾಗುತ್ತಿದೆ. ಸ್ವತಂತ್ರ ಭಾರತದ ರಾಮರಾಜ್ಯ ರಾವಣ ರಾಜ್ಯವಾಗಿ ಮಾರ್ಪಟ್ಟಿದೆ. ಅಬ್ರಾಹಿಮ್‌ ಲಿಂಕನ್‌ರು ಹೇಳುತ್ತಾರೆ-‘ಪ್ರಜೆಗಳು ಯಾವಾಗ ಪ್ರಜಾಪ್ರಭುತ್ವವನ್ನು ಸಾಧಿಸಿ ತಮ್ಮ ಪ್ರಭುಗಳು ತಾವೇ ಆಗುತ್ತಾರೆಯೋ ಅದೇ ನಿಜವಾದ ಪ್ರಜಾಪ್ರಭುತ್ವ’. ಆದರೆ ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ಎಲ್ಲವೂ ಅದಲು-ಬದಲು. ಇಲ್ಲಿ ಪ್ರಜೆಗಳು ಪ್ರಭುಗಳಲ್ಲ. ಬದಲಾಗಿ ಪಜೆಗಳು ಮತ ನೀಡಿ ಅಧಿಕಾರ ಕೊಟ್ಟ ಪ್ರತಿನಿಧಿಗಳು ಪ್ರಭುಗಳು. ನಿಜ ಹೇಳಬೇಕೆಂದರೆ ಪ್ರತಿನಿಧಿಗಳು ಸಾರ್ವಜನಿಕರ ಸೇವಕರು, ಈ ಮಾತಿಗೆ ಇಲ್ಲಿ ಅರ್ಥವೇ ಇಲ್ಲ. ಪ್ರಜಾಪ್ರಭುತ್ವದ ಸರಕಾರ ಪದ್ಧತಿಯು ಪ್ರತಿಯೊಬ್ಬ ವ್ಯಕ್ತಿಯ ಒಳಿತಿಗಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಕೆಲ ಜನರಿಗೆ ಮಾತ್ರ ಎಲ್ಲಾ ಸವಲತ್ತುಗಳನ್ನು ಕೊಟ್ಟು ಇತರರಿಗೆ ಆ ಸವಲತ್ತುಗಳನ್ನು ನಿರಾಕರಿಸಿದರೆ ಅದು ಪ್ರಜಾಪ್ರಭುತ್ವದ ಸರಕಾರ ಅನಿಸಿಕೊಳ್ಳುವುದಿಲ್ಲ.
ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸುವಂತಾಗಿದೆ. ನಮ್ಮ ದೇಶದಲ್ಲಿ ಒಂದೆಡೆ ಗುಡಿಸಲುಗಳು ಕಂಡರೆ ಇನ್ನೊಂದೆಡೆ ಗಗನ ಚುಂಬೀ ಮಹಲುಗಳು ರಾರಾಜಿಸುತ್ತಿವೆ. ಇಲ್ಲಿ ಅದೆಷ್ಟೋ ಜನಕ್ಕೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ. ಇನ್ನರ್ಧ ಜನ ತಿಂದು ತೇಗಿ ಬೀದಿಗೆ ಅನ್ನ ಎಸೆಯುತ್ತಿದ್ದಾರೆ. ಈಗ ನೀವೇ ಹೇಳಿ-‘ಇದು ಪ್ರಜಾಪ್ರಭುತ್ವವೇ?’ ಗಣರಾಜ್ಯೋತ್ಸವದ ಧ್ವಜ ಹಾರಿಸುವ ಯಾರೇ ಆಗಲಿ ಆತ್ಮ ವಂಚನೆ ಮಾಡಿಕೊಳ್ಳಬಾರದು. ತಾವು ಇದಕ್ಕೆ ಅರ್ಹರೇ ಎಂದು ತಾವೇ ಪ್ರಶ್ನಿಸಿಕೊಂಡು ಬದಲಾದರೆ ಅದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನು? ಬನ್ನಿ, ಬದಲಾಗೋಣ. ಭವ್ಯ ಭರತ ಕಟ್ಟೋಣ.
Box :-
‘ಗಣರಾಜ್ಯೋತ್ಸವ’ ನಮ್ಮ ರಾಷ್ಟ್ರೀಯ ಹಬ್ಬ. ಅಂದರೆ ಜಾತಿ- ಮತ, ಬಡವ ಶ್ರೀಮಂತರೆನ್ನದೇ ಭಾರತದ ಪ್ರಜೆಗಳೆಲ್ಲರೂ ತುಂಬು ಹೃದಯದಿಂದ ಆಚರಿಸುವ ಹಬ್ಬ. ಹಾಗೆ ನೋಡಿದರೆ ನಮ್ಮ ಎಲ್ಲ ಸಾಂಸ್ಕೃತಿಕ ಹಬ್ಬಗಆಗಿಂತಲೂ ಇದು ಶ್ರೇಷ್ಠ, ನಾವು ವರ್ಷವಿಡೀ ಆಚರಿಸುವ ಸಾಂಸ್ಕೃತಿಕ ಹಬ್ಬಗಳ ಆಚರಣೆಗೆ ಅವಕಾಶ ಕೊಟ್ಟಿರುವುದೇ ಗಣರಾಜ್ಯೋತ್ಸವ, ಅಂದರೆ ಆಂಗ್ಲರ ಗುಲಾಮರಾಗಿದ್ದ ಎಲ್ಲ ಭಾರತೀಯರು ಸರ್ವ ಸ್ವತಂತ್ರರಾಗಿ ಸಾರ್ವಭೌಮ ಅಧಿಕಾರವನ್ನು ಹೊಂದಿದ ದಿನವೇ ಗಣರಾಜ್ಯೋತ್ಸವ, ಅಂದು ನಾವು ಯಾವುದೇ ಧರ್ಮಾಚರಣೆಗೆ, ಹಬ್ಬಗಳಾಚರಣೆಗೆ ಸರ್ವ ಸ್ವತಂತ್ರರಾದೆವು. ಅದಕ್ಕೆಂದೇ ಪ್ರಜಾರಾಜ್ಯೋತ್ಸವ ಎಲ್ಲ ಭಾರತಿಯರ ಹಬ್ಬ.


Share