ಜಾತಿ ಸಮೀಕ್ಷೆ ಸಮಾಜವನ್ನು ವಿಭಜಿಸುವುದಿಲ್ಲ: ಮುಖ್ಯಮಂತ್ರಿ ಸಿಎಂ

19
Share

 

*ಜಾತಿ ಸಮೀಕ್ಷೆ ಸಮಾಜವನ್ನು ವಿಭಜಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಮೈಸೂರು,ಅ.7:- ಜಾತಿ ಗಣತಿ ಸಮಾಜವನ್ನು ವಿಭಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ ಎಂದು ಪ್ರಧಾನಿಗಳು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಡತನ ನಿವಾರಣೆ ಕಾರ್ಯಕ್ರಮ ರೂಪಿಸುವಾಗ ಸಮ ಸಮಾಜ ನಿರ್ಮಾಣ ಮಾಡಬೇಕು. ಯಾವ ಜಾತಿ ಸ್ವಾತಂತ್ರ‍್ಯ ಬಂದು 76 ವರ್ಷಗಳಾದರೂ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಯಾವ ಸ್ಥಿತಿಗತಿಯಲ್ಲಿದೆ ಎಂದು ತಿಳಿಯಬೇಕು. ನಮ್ಮದು ಜಾತಿ ವ್ಯವಸ್ಥೆಯ ಸಮಾಜವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಇರುವ ಜಾತಿಗಳನ್ನು ಮುಖ್ಯವಾಹಿನಿಗೆ ತರಲು ಅಂಕಿಅAಶಗಳು ಅಗತ್ಯ. ಅದಕ್ಕಾಗಿ ಜಾತಿಗಣತಿ ಮಾಡಬೇಕು. ಸಾಮಾಜಿಕ- ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಸಮೀಕ್ಷೆ ಆಗಬೇಕು. ಇದು ಖಂಡಿತವಾಗಿಯೂ ಸಮಾಜವನ್ನು ಒಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳಿಗೆ ತೊಂದರೆ ಇಲ್ಲ. ಬರ ಪರಿಹಾರಕ್ಕೂ ಕೇಂದ್ರ ಸರ್ಕಾರಕ್ಕೆ 4860 ಕೋಟಿ ರೂ.ಗಳನ್ನು ಕೋರಿದ್ದೇವೆ. ಆದರೆ ಬೆಲೆ ನಷ್ಟವಾಗಿರುವುದು 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ. ಎಲ್ಲಾ ಸೇರಿ ಒಟ್ಟು 3000 ಕೋಟಿ ರೂ.ಗಳಿಗೂ ನಷ್ಟ ಉಂಟಾಗಿದೆ. ಎನ್. ಡಿ.ಆರ್.ಎಫ್ ನಿಯಮಗಳ ಪ್ರಕಾರ 4860 ಕೋಟಿ ರೂ.ಗಳನ್ನು ಕೋರಿದ್ದೇವೆ. ಕೇಂದ್ರ ಬರ ಅಧ್ಯಯನ ತಂಡ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಅವರು ವರದಿ ನೀಡಿದ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ನಿಗದಿ ಮಾಡಲಿದೆ ಎಂದರು.

ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರದಿ ಪಡೆಯಲಿಲ್ಲ. ಈಗ ಬೇರೆ ಅಧ್ಯಕ್ಷರಿದ್ದು, ಅವರಿಗೆ ಕಾಂತರಾಜು ವರದಿ ಇದ್ದಂತೆಯೇ ಮಾಡಿಕೊಡುವಂತೆ ಹೇಳಿದ್ದೇನೆ. ಅವರು ನವೆಂಬರ್‌ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ ಎಂದರು.

ಬಹಳ ಹಿಂದುಳಿದವರು ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವರ್ಗ ಬೇಕು ಎಂದು ಕರ್ನಾಟಕದಲ್ಲಿ ಬೇಡಿಕೆ ಇರುವ ಬಗ್ಗೆ ಉತ್ತರಿಸಿ ಅದನ್ನು ಮಾಡಲು ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಬಂದ ನಂತರ ಪರಿಶೀಲಿಸಲಾಗುವುದು ಎಂದರು.

ಕೇAದ್ರ ಬರ ಅಧ್ಯಯನ ತಂಡ ಸರಿಯಾಗಿ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಅಧ್ಯಯನ ತಂಡಕ್ಕೆ ಎಲ್ಲೆಡೆ ಭೇಟಿ ಮಾಡಿ,ಜನರ ಅಹವಾಲು ಕೇಳಬೇಕು, ಜನಪ್ರತಿನಿಧಿಗಳ ಮಾತನ್ನೂ ಆಲಿಸುವಂತೆ ಸೂಚಿಸಿದ್ದೇನೆ ಎಂದರು.

ಕೇಂದ್ರ ಬರ ಅಧ್ಯಯನ ತಂಡ ಕಾವೇರಿ ಕಣಿವೆಗೆ ಭೇಟಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ನಾವು ತೀರ್ಮಾನಿಸುವುದಿಲ್ಲ. ಕೇಂದ್ರ ತಂಡ ಭೇಟಿ ನೀಡಬೇಕಾದ ಸ್ಥಳಗಳನ್ನು ನಿರ್ಧರಿಸುತ್ತದೆ. ಜಿಲ್ಲೆಗಳನ್ನು ಅವರೇ ಪಟ್ಟಿ ಮಾಡಿಕೊಳ್ಳುತ್ತಾರೆ ಎಂದರು. ಹಸಿರು ಬರ ಇದೆ. ಗಿಡ ಇದ್ದರೆ ಸಾಲದು, ಬೆಳೆ ಬರಬೇಕು ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶವಿಲ್ಲ ಎಂದು ಹೇಳಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಡಿಯುವವರನ್ನು ತಡೆಯಲು ಆಗುವುದಿಲ್ಲ, ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದಿರುವ ಬಗ್ಗೆ ಮಾತನಾಡಿ, ಹೊಸತಾಗಿ ತೆರೆಯುತ್ತೇವೆ ಎಂದು ಹೇಳಿಲ್ಲ. ಹೊಸತಾಗಿ ಕೊಡುತ್ತೇವೆ ಎಂದು ಹೇಳಿಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಹೊಸ ಪರವಾನಾಗಿಯನ್ನು ಕೊಡಬೇಕಾದ ಅಗತ್ಯ ಇಲ್ಲ ಎಂದರು.

ಸಾರ್ವಜನಿಕ ಅಭಿಪ್ರಾಯ ಏನಿದೆ ಎಂದು ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಹೊಸ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ,ಶಾಸಕ ದರ್ಶನ್ ಧೃವನಾರಾಯಣ್,ವಿ.ಪ.ಸದಸ್ಯರಾದ ಡಿ.ತಿಮ್ಮಯ್ಯ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಗಾಯತ್ರಿ ಕೆ.ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share