ದಿವ್ಯಾಂಗರು ದೇವರ ಮಕ್ಕಳು,ವಿಶೇಷ ಗೌರವ ನೀಡಿ, ಬೊಮ್ಮಾಯಿ

79
Share

 

ದಿವ್ಯಾಂಗರು ದೇವರ ಮಕ್ಕಳು, ಇವರಿಗೆ ವಿಶೇಷ ಗೌರವ ನೀಡಿ – ಸಿ.ಎಂ. ಬಸವರಾಜ ಬೊಮ್ಮಾಯಿ

ಮೈಸೂರು ಜ 29(ಕರ್ನಾಟಕ ವಾರ್ತೆ) ದಿವ್ಯಾಂಗರು ದೇವರ ಮಕ್ಕಲಾಗಿದ್ದು, ಇವರನ್ನು ನಾವು ವಿಶೇಷವಾಗಿ ಗೌರವ ನೀಡಿ ನೋಡಿಕೊಳ್ಳಬೇಕು ಎಂದು ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಅಧಿಕಾರಿತಾ ಶಿಬಿರ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲತೆ ಮನಸ್ಸಿನ ಕೊರತೆ ಆಗಬಾರದು. ಒಂದು ಅಂಗವಿಕಲ ಆಗಿದ್ದರೆ ಬೇರೆ ಚಟುವಟಿಕೆಯಲ್ಲಿ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ ಎಂದರು.
ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಮಿತಿ ಇಲ್ಲ. ಅಗತ್ಯ ಸಲಕರಣೆಗಳನ್ನು ವಿತರಿಸಬಹುದು. ನಾನು ಅಧಿಕಾರಕ್ಕೆ ಬಂದ ತಕ್ಷಣ ವಿಕಲಚೇತನರಿಗೆ ಮಾಶಾಸನ ಹೆಚ್ಚಿಸಲಾಗಿದೆ. ರಾಜ್ಯ ಸರಕಾರವು ಇದೆ ರೀತಿ ಕಾರ್ಯಕ್ರಮಗಳನ್ನು ಮಾಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ಬಜೆಟ್ ನಲ್ಲಿ ವಿಕಲಚೇತನರಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಇದರ ಪ್ರಯೋಜನ ವಿಕಲಚೇತನರಿಗೆ ತಲುಪಬೇಕು. ಎಲ್ಲಾ ವರ್ಗದ ಜನ ಅಭಿವೃದ್ಧಿ ಆಗಬೇಕು. ಆಗ ಸಮಾಜ ಅಭಿವೃದ್ಧಿ ಆಗುತ್ತದೆ ಎಂದರು.

ಚಾಮರಾಜನಗರ ಲೋಕಸಭಾ ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡಿ ಅಲಿಂಕೊ ಸಂಸ್ಥೆಯಿಂದ ವಿಕಲಚೇತನರಿಗೆ ಕೃತಕ ಅಂಗಾಂಗಳ ಜೋಡಣೆಯನ್ನು ಮಾಡುತ್ತಾ ಬಂದಿದೆ. ಇದೊಂದು ಮಾನವೀಯ ಸೇವೆಗೆ ಸಂಬಂದಿಸಿದ ಕಾರ್ಯಕ್ರಮ. ದೇಶದ 68 ಲೋಕಸಭಾ ಕ್ಷೇತ್ರಗಳಲ್ಲಿ ಇದೆ ರೀತಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಕರ್ನಾಟಕದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಆಯ್ಕೆಯಾಗಿದೆ ಇದು ನಮ್ಮ ಸುದೈವ. ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಚಾಮರಾಜನಗರದಲ್ಲಿ 1690 ವಿಕಲ ಚೇತನರಿಗೆ ವಿತರಿಸಲಾಗಿದೆ. ಇಂದು ನಂಜನಗೂಡಿನಲ್ಲಿ 1691 ಜನರಿಗೆ 1.5 ಕೋಟಿ ವೆಚ್ಚದಲ್ಲಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ ಅವರು ಮಾತನಾಡಿ 1500 ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳ ವಿತರಣೆ ನಡೆಯುತ್ತಿದೆ. ಇದರಿಂದ ವಿಕಲಚೇತನರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಕೃತಕ ಅಂಗಾಂಗಳ ಜೋಡಣೆಯನ್ನು ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಹರ್ಷವರ್ಧನ್, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ ಕೋಟೆ ಶಿವಣ್ಣ, ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರಾದ ನಿಜಗುಣ, ನಗರಸಭಾ ಉಪಾಧ್ಯಕ್ಷೆ ನಾಗಮಣಿ, ಪ್ರಾದೇಶಿಕ ಆಯುಕ್ತರಾದ ಬಿ ಜಿ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಆರ್ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಗಳಾದ ಆರ್ ಲೋಕನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share