ನಂಜನಗೂಡು ಶಾಸಕ ಹರ್ಷವರ್ಧನ್ ರವರ ಮಾನವೀಯ ಕಾರ್ಯಕ್ಕೆ ಸಿ ಎಮ್ ಮೆಚ್ಚುಗೆ

284
Share

ಶಾಸಕ ಹರ್ಷವರ್ಧನ್ ಮಾನವೀಯ ಕಾರ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ

ಬೆಂಗಳೂರು: ನಂಜನಗೂಡು ಕ್ಷೇತ್ರದ ಶಾಸಕರಾದ ಹರ್ಷವರ್ಧನ ಅವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಮಾನವೀಯ ಕಾರ್ಯಗಳಿಗೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಪ್ರಶಂಸೆ ವ್ಯಕ್ತಪಡಿಸಿದರು‌.

ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಹರ್ಷವರ್ಧನ್ ತಮ್ಮ ಕ್ಷೇತ್ರದ ಕೆಆರ್ ಪುರದಲ್ಲಿ ಜನರು ಕೈಯಿಂದಲೇ ಚರಂಡಿಗಳಲ್ಲಿನ ಹೊಲಸನ್ನು ಹೊತ್ತು ಹಾಕುವ ಅಮಾನವೀಯ ಪದ್ಧತಿ ಕೊನೆಗೊಂಡಿರುವ ಕುರಿತು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿ ಈ ಕುರಿತು ಮಾಹಿತಿ ಫಲಕವನ್ನು ಮುಖ್ಯಮಂತ್ರಿಗಳಿಗೆ ನೀಡಿದರು. ಶಾಸಕ ಬಿ ಹರ್ಷವರ್ಧನ್ ಅವರ ಮಾನವೀಯ ಕಾರ್ಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಅಜ್ಜ, ಮಾಜಿ ಸಚಿವ ಬಿ ಬಸವಲಿಂಗಪ್ಪ ಅವರು 50 ವರ್ಷಗಳ ಹಿಂದೆ ಮಲಹೊರುವ ಪದ್ಧತಿಯನ್ನು ಅಂತ್ಯಗೊಳಿಸುವ ಕುರಿತು ವಿಧಾನಸೌಧದಲ್ಲಿ ಘೋಷಣೆ ಮಾಡಿದ್ದರು. ಈಗ ತಾವು ಶಾಸಕರಾದ ನಂತರ ಮೊದಲ ಆದ್ಯತೆಯಾಗಿ ಕೆಆರ್ ಪುರದಲ್ಲಿ ಇಂದಿಗೂ ನಡೆದುಕೊಂಡು ಬಂದಿರುವ ಅಮಾನವೀಯ ಪದ್ಧತಿಗೆ ತಿಲಾಂಜಲಿ ನೀಡಿರುವ ಕುರಿತು ಮುಖ್ಯಮಂತ್ರಿಗಳಿಗೆ ಹರ್ಷವರ್ಧನ್ ಮಾಹಿತಿ ನೀಡಿದರು. ಸಮಸ್ಯೆಗಳನ್ನು ನಿವಾರಿಸಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಗ್ರಾಮದ ಜನರು ಈಗ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಗ್ರಾಮದ ಜನರಲ್ಲಿ ಸಂತಸ ಮೂಡಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಹರ್ಷವರ್ಧನ ಅವರು ನೀಡಿದ ಸಂಪೂರ್ಣ ಮಾಹಿತಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ಕಾರ್ಯ ಶ್ಲಾಘನೀಯ. ಇಡೀ ಕ್ಷೇತ್ರದಲ್ಲಿ ಇಂತಹ ಮಾದರಿ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿ ಪ್ರೋತ್ಸಾಹಿಸಿದರು.


Share