ನನ್ನ ಗಮನಕ್ಕೆ ಬಾರದೆ ಖಡತ ವಿಲೇವಾರಿ ಆಗಬಾರದು

310
Share

 

ಕಾನೂನು ಬಾಹಿರ ಕೆಲಸ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ: ಕೆ.ಮರೀಗೌಡ

ಮೈಸೂರು: : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾನೂನು ಬಾಹಿರ ಕೆಲಸ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಇನ್ನು ಮುಂದೆ ಅದೇ ರೀತಿ ಆದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಾ ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳಿಗೆ ಎಚ್ಚರಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಹಾಗೂ ನೌಕರರ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ಹೆಸರಿಗೆ ಕಳಂಕ ಬರದಂತೆ ನಾವು ಕೆಲಸ ಮಾಡಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಮೂಡಾ ಆಸ್ತಿ ನಮ್ಮೆಲ್ಲರ ಆಸ್ತಿ. ಸಾರ್ವಜನಿಕರ ಆಸ್ತಿಯಾಗಿದ್ದು ಮೂಡಾ ಆಸ್ತಿಯನ್ನು ಅಕ್ರಮವಾಗಿ ವಶಕೊಂಡಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿರಿ. ಮೂಡಾ ಆಸ್ತಿ ಎಲ್ಲೆಲ್ಲಿ ಇದೆ ಪತ್ತೆ ಮಾಡಿ. ನಗರದ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಮೂಡಾ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಒತ್ತುವರಿಯಾಗಿವೆ. ಅವುಗಳನ್ನು ತೆರೆವುಗೊಳಿಸಬೇಕು, ಮೂಡಾಗೆ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ನಮೂದಿಸುವುದರೊಂದಿಗೆ ಅರ್ಜಿ ಎಲ್ಲಿಗೆ ಹೋಗಿದೆ ಎಂಬುದನ್ನು ಕಂಪ್ಯೂಟರ್‌ನಲ್ಲಿ ಎಂಟ್ರಿ ಮಾಡಿರಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ, ನನ್ನ ಗಮನಕ್ಕೆ ಬಾರದೆ ಯಾವುದೇ ಖಡತ ವಿಲೇವಾರಿ ಆಗಬಾರದು. ಕೋರ್ಟಿನಲ್ಲಿ ಖಾಸಗಿ ವ್ಯಕ್ತಿಗಳ ವಿರುದ್ಧ ಮೇಲ್ಮನವಿ ಸಲ್ಲಿಸದೆ ಮೂಡಾ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗಿ ಮೂಡಾಗೆ ನಷ್ಟ ಆಗುತ್ತಿರುವುದನ್ನು ತಪ್ಪಿಸ ಬೇಕಾಗಿದೆ. ಮೂಡಾಗೆ ಒಳ್ಳೆಯ ಹೆಸರು ಬರುವಂತೆ ಕೆಲಸಮಾಡಬೇಕು. ಪಿ.ಪಿ.ಪಿ ಯೋಜನೆಯಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಮೂಡಾಗೆ ಹಣ ಬರುವಂತೆ ಮಾಡಬೇಕು. ಸಿ.ಎ. ನಿವೇಶನ, ಹೆಚ್ ಪ್ರವರ್ಗದಡಿ ನಿವೇಶನ ಹಂಚಿಕೆ, ಶೇ. 50/50 ರಡಿ ರೈತರ ಸಹಭಾಗಿತ್ವದಡಿ ಬಡಾವಣೆ ನಿರ್ಮಿಸುವ ಯೋಜನೆ. ಗೃಹನಿರ್ಮಾಣ ಸಹಕಾರ ಸಂಘ ಹಾಗೂ ಖಾಸಗಿ ಬಡಾವಣೆ ಸಮಸ್ಯೆ ಬಗ್ಗೆ ಚರ್ಚಿಸಿದ ಅವರು ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ. ಮಾಡಬೇಡಿ. ಯಾರ ಬೆದರಿಕೆಗೂ ಹೆದರಬೇಡಿ ಎಂದ ಅವರು ಸ್ಥಗಿತವಾಗಿರುವ ಯೋಜನೆಗಳು ಹಾಗೂ ಸರ್ಕಾರದಿಂದ ಅನುಮೋದನೆ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡಿಸಿಕೊಡುತ್ತೇನೆ ಎಂದ ಅವರು ಎಲ್ಲರು ಹೊಂದಾಣಿಕೆಯಿಂದ ಕೆಲಸಮಾಡಿಕೊಂಡು ಹೋಗಬೇಕು ಎಂದರು.

ಸಭೆಯಲ್ಲಿ ಮೂಡಾ ಕಾರ್ಯದರ್ಶಿ ಶೇಖರ್. ನಗರಾಯೋಜನಾ ಸದಸ್ಯ ಶೇಷ, ಅಧೀಕ್ಷಕ ಅಭಿಯಂತರರಾದ ಚೆನ್ನಕೇಶವ, ಮುಖ್ಯಲೆಕ್ಕಾಧಿಕಾರಿ ಕವಿತಾ, ಆಪ್ತ ಸಹಾಯಕ ಗಂಗಾಧರ್, ಎಲ್ಲಾ ಸಿಬ್ಬಂದಿ ಹಾಜರಿದ್ದರು.

 


Share