ನಮ್ಮ ಚುನಾವಣೆ – ಹೀಗೊಂದು ಹಗಲುಗನಸು……..! ರಾಮ್

117
Share

 

*ನಮ್ಮ ಚುನಾವಣೆ – ಹೀಗೊಂದು ಹಗಲುಗನಸು……..!*

ಚುನಾವಣೆ, ಬೆಳಗ್ಗೆಯಿಂದ ರಾತ್ರಿವರೆಗೂ ಎಡೆಬಿಡದ ಪ್ರಚಾರದ ಅಬ್ಬರ. ಕಿವಿ ತೂತಾಗುವಷ್ಟು ನಾಯಕರ ಆರೋಪ, ಪ್ರತ್ಯಾರೋಪದ ಭರಾಟೆ. ನಾಯಕರ ಎಲ್ಲೆ ಮೀರಿದ ಮಾತುಗಳು, ಮಕ್ಕಳು, ಮಹಿಳೆಯರ ಜೊತೆ ಕುಳಿತು ಕೇಳಾಗದಂತಹ ಪದ ಬಳಕೆ, ಅಬ್ಬಬ್ಬಾ…. ಒಂದಾ ಎರಡಾ ಈ ಬಾರಿಯ ಚುನಾವಣೆ ನಿಜಕ್ಕೂ ಅಸಹ್ಯ ಅನ್ನುವಷ್ಟರ ಮಟ್ಟಕ್ಕೆ ತಲುಪಿರೋದು ಸುಳ್ಳಲ್ಲ. ಇದೆಲ್ಲದರ ನಡುವೆ ಬೆಳಗಿನ ಜಾವ ನಾ ಕಂಡ ಅದೊಂದು ಕನಸು ಕಣ್ಣು ಬಿಡುವವರೆಗೂ ಖುಷಿ ಕೊಟ್ಟಿದ್ದು ಸುಳ್ಳಲ್ಲ………!

*ಕಂಡೆ ನಾನೊಂದು ಕನಸು……!*
ಚುನಾವಣಾ ಆಯೋಗ ಮಹತ್ವದ ಪತ್ರಿಕಾಗೋಷ್ಠಿ ಕರೆದಿತ್ತು. ಎಲ್ಲರ ಚಿತ್ತ ಚುನಾವಣಾ ಆಯೋಗದತ್ತ ನೆಟ್ಟಿತ್ತು. ಯಾವತ್ತು ಚುನಾವಣಾ ದಿನ ಅನ್ನೋದಕ್ಕಿಂತ, ಚುನಾವಣಾ ಆಯೋಗ ಈ ಚುನಾವಣೆಯಲ್ಲಿ ಕೆಲ ಮಹತ್ವದ ಮಾರ್ಪಾಡುಗಳನ್ನು ತಂದಿದೆ ಅನ್ನೋ ವಿಚಾರ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ನಾನಂತು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಾ ಕುಳಿತಿದ್ದೆ.

*ಕಡ್ಡಾಯ ಮತದಾನ* :
ಎಸ್ ಮೊದಲ ಬಾಲಿನಲ್ಲೇ ಚುನಾವಣಾ ಆಯೋಗ ಸಿಕ್ಸರ್ ಬಾರಿಸಿತ್ತು. ದೇಶದ ಎಲ್ಲಾ ಚುನಾವಣೆಗಳಲ್ಲಿ ಮತದಾರರು ಕಡ್ಡಾಯ ಮತದಾನ ಮಾಡಲೇಬೇಕೆಂಬ ನಿಯಮ ಜಾರಿ ಮಾಡಿತ್ತು. ಆರೋಗ್ಯದ ವಿಚಾರಕ್ಕೆ ವಿನಾಯತಿ ಹೊರತುಪಡಿಸಿ ಇನ್ನು ಯಾವುದೇ ಕಾರಣಕ್ಕೂ ಮತದಾನದಿಂದ ಯಾವ ಮತದಾರರು ತಪ್ಪಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮತದಾನ ಮಾಡದಿದ್ದರೆ ಅವರು ಮೂಲಭೂತ ಸೌಕರ್ಯ ಕೇಳುವ ಹಕ್ಕು ಕಳೆದುಕೊಳ್ಳುತ್ತಾರೆ. ಎಲ್ಲಾ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಾರೆ. ಸರ್ಕಾರದ ಯಾವುದೇ ಯೋಜನೆಗಳು ಅವರಿಗೆ ಸಿಗುವುದಿಲ್ಲ. ನೀರು, ಕರೆಂಟ್ ಹೀಗೆ ಯಾವುದೇ ಸಮಸ್ಯೆಯಾದರು ಕೇಳುವ ಹಕ್ಕು ಕಳೆದುಕೊಳ್ಳುತ್ತಾರೆ. ಮತದಾನ ಮಾಡದವರು ದೇಶದ ಎರಡನೇ ದರ್ಜೆ ಪ್ರಜೆಗಳಾಗಿ ಬದುಕಬೇಕು‌.

*ಅಭ್ಯರ್ಥಿಗಳಿಗೆ ವಿದ್ಯಾಭ್ಯಾಸ ಕಡ್ಡಾಯ*
ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಪ್ರತಿಯೊಬ್ಬ ಅಭ್ಯರ್ಥಿಗೆ ಕನಿಷ್ಠ ಪದವಿ ಕಡ್ಡಾಯವೆಂಬ ನಿಯಮ ಜಾರಿಯಾಗಿತ್ತು. ರಾಷ್ಟ್ರಮಟ್ಟದ ಚುನಾವಣೆಗೆ ಸ್ಪರ್ಧೆ ಮಾಡುವವರಿಗೆ ಅಂತರಾಷ್ಡ್ರಿಯವಾಗಿ ವ್ಯವಹರಿಸಲು ಇಂಗ್ಲಿಷ್, ದೇಶಿಯವಾಗಿ ವ್ಯವಹರಿಸಲು ಹಿಂದಿ, ಪ್ರಾದೇಶಿಕವಾಗಿ ವ್ಯವಹರಿಸಲು ಸ್ಥಳೀಯ ಭಾಷೆ ಓದುವುದು, ಬರೆಯುವುದು ಕಡ್ಡಾಯವಾಗಿ ಬರಬೇಕು. ಪ್ರತಿ ಅಭ್ಯರ್ಥಿ ಸಂವಿಧಾನ ಹಾಗೂ ಪ್ರಚಲಿತ ವಿಚಾರವಾಗಿ 100 ಅಂಕದ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಫೇಲ್ ಆದವರಿಗೆ ಸ್ಪರ್ಧೆ ಮಾಡಲು ಅವಕಾಶವಿಲ್ಲ.

*ಚುನಾವಣೆಗೆ ನಿಲ್ಲುವವರು ಜನಪ್ರತಿನಿಧಿಗಳು – ಬೇರೆ ಉದ್ಯಮ, ಕೆಲಸ ಮಾಡುವ ಆಗಿಲ್ಲ*
ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಜನರ ಪ್ರತಿನಿಧಿಗಳಾಗಿ ಕೆಲಸ ಮಾಡುವ ಉದ್ಯೋಗಿಗಳು. ಅದಕ್ಕಾಗಿ ಸರ್ಕಾರ ಜನರ ತೆರಿಗೆ ಹಣದಲ್ಲಿ ಅವರಿಗೆ ಸಾಕಷ್ಟು ಸವಲತ್ತು, ಸಂಬಳ, ಭತ್ಯೆ ನೀಡುತ್ತದೆ. ಹೀಗಾಗಿ ಜನರನ್ನು ಪ್ರತಿನಿಧಿಸುವ ಕೆಲಸ ಹೊರತುಪಡಿಸಿ ಬೇರೆ ಯಾವುದೇ ಕೆಲಸ ಅವರು ಮಾಡುವಂತಿಲ್ಲ. ಯಾವುದೇ ಉದ್ಯಮ ನಡೆಸುವಂತಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕಚೇರಿಯಲ್ಲಿ ಅಥವಾ ಸಾರ್ವಜನಿಕವಾಗಿ ಅವರು ಜನರಿಗೆ ಸಿಗುವಂತಿರಬೇಕು. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ವೈಯಕ್ತಿಕ ಕೆಲಸ ಮಾಡಿಕೊಳ್ಳಬೇಕು *( ಅದು ತುರ್ತು ಸಂದರ್ಭ ಹೊರತುಪಡಿಸಿ )*

*ಅಬ್ಬರದ ಪ್ರಚಾರಕ್ಕೆ ಬ್ರೇಕ್*
ಚುನಾವಣೆಗೆ ನಿಂತ ಅಭ್ಯರ್ಥಿ ಮಾತ್ರ ಏಕಾಂಗಿಯಾಗಿ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಪ್ರಚಾರ ಮಾಡಬಹುದು. ಅವರನ್ನು ಹೊರತುಪಡಿಸಿ ಬೇರೆ ಯಾರು ಅವರ ಪರವಾಗಿ ಅಥವಾ ಅವರ ಜೊತೆಯಾಗಿ ಪ್ರಚಾರದಲ್ಲಿ ಭಾಗಿಯಾಗುವಂತಿಲ್ಲ. ಅವರನ್ನು ಬಿಟ್ಟು ಉಳಿದವರೆಲ್ಲಾ ಮತದಾರರಾಗಿರುತ್ತಾರೆ. ಇ‌ನ್ನು ಒಂದು ಬಾರಿ ಮಾತ್ರ ಬಹಿರಂಗ ಸಮಾವೇಶಕ್ಕೆ ಅವಕಾಶ. ಜಿಲ್ಲಾಡಳಿತವೇ ಸಮಾವೇಶದ ಸಂಪೂರ್ಣ ಜವಾಬ್ದಾರಿ ವಹಿಸುತ್ತದೆ. ಆದರೆ ಸಮಾವೇಶದಲ್ಲಿ ನೇರವಾಗಿ ಯಾವ ಮತದಾರರು ಭಾಗಿಯಾಗಲು ಅವಕಾಶವಿಲ್ಲ. ಸಮಾವೇಶದ ನೇರಪ್ರಸಾರವನ್ನು ಜಿಲ್ಲಾಡಳಿತದ ವತಿಯಿಂದ ಎಲ್ಲಾ ಪ್ರಮುಖ ಟಿವಿ ಚಾನೆಲ್, ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ಜೊತೆಗೆ ಪ್ರತಿ ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ. ಜಿಲ್ಲಾ ಪಂಚಾಯತಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆ ಮೂಲಕ ಸಮಾವೇಶದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು. *ಇನ್ನು ಕಡ್ಡಾಯವಾಗಿ ಜಾತಿ ಧರ್ಮ ಆಧಾರಿತ ಸಭೆಗಳನ್ನು ಮಾಡುವಂತಿಲ್ಲ. ಮಠ ಮಾನ್ಯಗಳಿಗೆ ಭೇಟಿ ನೀಡುವಂತಿಲ್ಲ*

*ಆರೋಪ – ಪ್ರತ್ಯಾರೋಪಕ್ಕೆ ಬ್ರೇಕ್*
ಇನ್ನು ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಆರೋಪ, ಪ್ರತ್ಯಾರೋಪಕ್ಕೆ ಬ್ರೇಕ್. ಯಾರು ಮತ್ತೊಬ್ಬರ ಬಗ್ಗೆ ಆರೋಪ, ಪ್ರತ್ಯಾರೋಪ ಟೀಕೆ, ಟಿಪ್ಪಣಿಗಳನ್ನು ಮಾಡುವಂತಿಲ್ಲ. ಅಭ್ಯರ್ಥಿ ತಾನು ಮಾಡಿರುವ ಹಾಗೂ ಮುಂದೆ ಮಾಡುವ ಕೆಲಸದ ಬಗ್ಗೆ ಮಾತ್ರ ಮಾತನಾಡಬೇಕು. ಮತ್ತೊಬ್ಬರು ಏನು ಮಾಡಿಲ್ಲ ಎಂಬುದನ್ನು ಸೇರಿದಂತೆ ಮತ್ತೊಬ್ಬರ ಯಾವುದೇ ವಿಚಾರದ ಬಗ್ಗೆ ಚಕಾರವೆತ್ತುವಂತಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘನೆಯಾದರೆ ಅಂತವರು ಸ್ಪರ್ಧೆಯಿಂದ ಅಮಾನತುಗೊಳ್ಳುತ್ತಾರೆ.

*ಆಮಿಷ ಭರವಸೆಗಳಿಗೆ ಕಾನೂನು ಮುದ್ರೆ…..!*
ಚುನಾವಣೆಗೆ ಸ್ಪರ್ಧೆ ಮಾಡುವುವರು ಮತದಾರರಿಗೆ ನೀಡುವ ಆಮಿಷ, ಭರವಸೆಗಳ ಬಗ್ಗೆ ಅಫಿಡೆವಿಟ್ ನೀಡಬೇಕು. ಅದಕ್ಕೆ ಕಾಲಮಿತಿ ನಿಗದಿ ಮಾಡಬೇಕು. ನೀಡಿದ ಭರವಸೆಗೆ ಸಕಾರಣವನ್ನು ನೀಡಬೇಕು. ಅದು ಸೂಕ್ತವೇ, ಇಲ್ಲವೇ ? ಎಂಬುದನ್ನು ತಜ್ಞರ ಸಮಿತಿಯಿಂದ ಸರ್ಟಿಫಿಕೇಟ್ ಪಡೆಯಬೇಕು. ಭರವಸೆ ಈಡೇರಿಸಲು ಕಾಲಮಿತಿ ನಿಗದಿಪಡಿಸಬೇಕು‌. ಆ ಕಾಲ ಮಿತಿಯಲ್ಲಿ ಈಡೇರದಿದ್ದರೆ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆಂದು ಅಫಿಡೆವಿಟ್ ಸಲ್ಲಿಸಬೇಕು‌. ನೀಡಿದ ಭರವಸೆ ಎಲ್ಲಾ ಮತದಾರರಿಗೂ ಕಡ್ಡಾಯವಾಗಿ ತಲುಪಬೇಕು. ಒಬ್ಬರಿಗೆ ತಪ್ಪಿದರು ನಿಮ್ಮ ಸ್ಥಾನಕ್ಕೆ ಕ‌ಂಟಕ.

*ಆಸ್ತಿ ವಿವರ – ಹೆಚ್ಚಾಗದಂತೆ ಎಚ್ಚರ….!*
ಚುನಾವಣೆಗೆ ಸ್ಪರ್ಧೆ ಮಾಡುವವರು ತಮ್ಮ ಸಂಪೂರ್ಣ ಆಸ್ತಿ ವಿವರವನ್ನು ಸಲ್ಲಿಸಬೇಕು. ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಪ್ರತಿ ವರ್ಷ ನಿಮ್ಮ ಸಂಬಳ, ಖರ್ಚು, ವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ವರದಿ ನೀಡಬೇಕು. ಮುಂದಿನ ಬಾರಿ ಸ್ಪರ್ಧೆ ಮಾಡುವಾಗ ಹಿಂದಿನ ಆಸ್ತಿ, ಈಗ ಗಳಿಸಿದ ಆಸ್ತಿ ಬಗ್ಗೆ ಎಲ್ಲವನ್ನೂ ಸಂಪೂರ್ಣ ಮಾಹಿತಿಯೊಂದಿಗೆ ನೀಡಬೇಕು‌. ಬೇರೆ ಉದ್ಯೋಗ, ಉದ್ಯಮ ಮಾಡಲು ಅವಕಾಶವಿಲ್ಲದ ಕಾರಣ ಜನಪ್ರತಿನಿಧಿಗೆ ಬರುವ ಆದಾಯ ಮಾತ್ರ ನಿಮ್ಮ ಗಳಿಕೆಯಾಗಿರಬೇಕು.

*ಮಾಧ್ಯಮಗಳಿಗೂ ಬ್ರೇಕ್*
ಇನ್ನು ಚುನಾವಣೆ ಘೋಷಣೆಯಾದ ದಿನದಿಂದ ಮುಗಿಯುವವರೆಗೂ ಎಲ್ಲಾ ಮಾಧ್ಯಮಗಳಲ್ಲಿ ಅಭಿಪ್ರಾಯಾಧರಿತ ಕಾರ್ಯಕ್ರಮಗಳಿಗೆ ಬ್ರೇಕ್. ಯಾವುದೇ ವ್ಯಕ್ತಿ, ಪಕ್ಷ, ಅಭ್ಯರ್ಥಿ ಪರ ಸ್ಟೋರಿ, ಸಂದರ್ಶನ ಪ್ರಸಾರ ಮಾಡುವಂತಿಲ್ಲ. ಜಿಲ್ಲಾಡಳಿತ ನೀಡಿದ ವಿಚಾರಗಳನ್ನಷ್ಟೇ ಪ್ರಸಾರ ಮಾಡಬೇಕು. ಚುನಾವಣೆ ಮುಗಿದ ನಂತರ ಎಂದಿನಂತೆ ನಿಮ್ಮ ಕೆಲಸ ಮುಂದುವರಿಸಬಹುದು. ಆದರೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಸಹಕರಿಸಬೇಕು. *ಇದು ಮಾಧ್ಯಮದ ಹಕ್ಕನ್ನು ಕಸಿದು ನಿರ್ಬಂಧಿಸುವುದಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶ*

*ಫಲಿತಾಂಶ – ಅಂತ್ಯ*
ಇನ್ನು ಮತಗಳು ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚಾಗಿದ್ದರೆ ಯಾವ ಅಭ್ಯರ್ಥಿಗೂ ಜಯ ಸಿಗುವುದಿಲ್ಲ. ಬದಲಿಗೆ ಮರು ಚುನಾವಣೆ ಹಾಗೂ ಈ ಹಿಂದೆ ಸ್ಪರ್ಧೆ ಮಾಡಿದ ಯಾರು ಸ್ಪರ್ಧೆ ಮಾಡುವಂತಿಲ್ಲ. ಇನ್ನು ಫಲಿತಾಂಶ ಬಂದ ಮರುಕ್ಷಣದಿಂದ ಎಲ್ಲರೂ ಎಲ್ಲಾ ರಾಜಕೀಯ ಜಿದ್ದಾಜಿದ್ದು ಮರೆತು ಮುಂದೆ ಸಾಗಬೇಕು. ಯಾವುದೇ ರಾಗ, ದ್ವೇಷ ಅಸೂಯೆ ಸಾಧಿಸದೇ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಆಗಬೇಕು.

ಅಬ್ಬಾ ನನ್ನ ಖುಷಿಗೆ ಪಾರವೇ ಇರಲಿಲ್ಲ. ಕುಣಿದು ಕುಪ್ಪಳಿಸುತ್ತಿದೆ. ಸದ್ಯ ಕೊನೆಗೂ ಒಂದು ಮಹತ್ತರ ಬದಲಾವಣೆ ಆಯ್ತು. ಬಹು ದಿನಗಳ ಕನಸು ನನಸಾಯ್ತು ಅಂತಾ. ಇನ್ನೇನು ಮುಖ್ಯ ಚುನಾವಣಾಧಿಕಾರಿಗಳು ಎಲ್ಲವನ್ನೂ ಓದಿದ ನಂತರ ಎಲ್ಲಾ ನಿಯಮಗಳ ಪತ್ರಕ್ಕೆ ಸಹಿ ಹಾಕಿ ಮುದ್ರೆ ಒತ್ತಬೇಕು. ಇದ್ದಕ್ಕಿದ್ದಂತೆ ಎಲ್ಲವೂ ಮಸುಕು ಮಸುಕಾಗ ತೊಡಗಿತ್ತು. ಅಷ್ಟರಲ್ಲಿ ನನ್ನ ಮಗ ಅಪ್ಪಾ, ಅಪ್ಪಾ….. ಗಂಟೆ ಐದಾಯ್ತು ಎದ್ದೇಳು, ನಾನು
ಕ್ರಿಕೆಟ್‌ಗೆ ಹೋಗ್ಬೇಕು ಅಂತಾ ನನ್ನ ಎಬ್ಬಿಸಿದ. ಕಣ್ ಬಿಟ್ ನಾನು ಪಟ್ ಅಂತಾ ಬದಲಾವಣೆಯನ್ನು‌ ಖಚಿತಪಡಿಸಿಕೊಳ್ಳಲು ಟಿವಿ ಆನ್ ಮಾಡಿದೆ…..! ಅಯ್ಯೋ ಅದೇ ಅಬ್ಬರದ ಭಾಷಣ, ಆರೋಪ ಪ್ರತ್ಯಾರೋಪ. ಯಪ್ಪಾ…….‌! ಅಂದ್ರೆ ಇದುವರೆಗೂ ನಾ ಕಂಡಿದ್ದು ಕನಸು…..! ಅಲ್ಲಲ್ಲಾ ಹಗಲುಗನಸು ಅಂತಾ ಗೊತ್ತಾಯ್ತು……..! ಬಿಟ್ಟ ಕಣ್ಣು ಬಿಟ್ಟವನಂತೆ ಮತ್ತೆ ಬಿದ್ದುಕೊಂಡೆ.

*ಕೊನೆ ಮಾತು*
ಇದು ನಾ ಕಂಡ ಕನಸಲ್ಲ, ನನ್ನಂತಹ ಕೋಟ್ಯಾಂತರ ಭಾರತೀಯರ ಮನದ ಕನಸು. ಇಂತಹದ್ದೇ ಸಾವಿರ ಬೇರೆ ಬೇರೆ ಕನಸು ನಿಮ್ಮದಾಗಿರುತ್ತದೆ. ನಿಮ್ಮ ಕನಸುಗಳ‌ನ್ನು ತಿಳಿಸಿ. ಆ ಎಲ್ಲಾ ಕನಸುಗಳ ನನಸು ಮಾಡಲು ಪ್ರಯತ್ನಿಸೋಣ, ಪ್ರಾರ್ಥಿಸೋಣ. ಖಂಡಿತಾ ಒಂದಲ್ಲ ಒಂದು ದಿನ ಈ ಕನಸುಗಳೆಲ್ಲಾ ನನಸಾಗುತ್ತವೆ. ಯಾಕಂದ್ರೆ ಭರವಸೆಯೇ ಬದುಕು‌. ಆ ಭರವಸೆಯೊಂದಿಗೆ ಕಾಯೋಣ,‌ಬದುಕೋಣ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share