ನೇಮಕಾತಿಯ ಲೋಪದೋಷ ಸರಿಪಡಿಸುವಂತೆಆಗ್ರಹಿಸಿ ಪ್ರತಿಭಟನೆ

246
Share

 

ಮೈಸೂರಿನ ರೈಲ್ವೆ ವಿಭಾಗಿಯ ವ್ಯವಸ್ಥಾಪಕರ ಕಾರ್ಯಾಲಯಕ್ಕೆ ಇಂದು ಅಖಿಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿಯ(AIUYSC) ವತಿಯಿಂದ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ RRB- NTPC ನೇಮಕಾತಿಯ ಲೋಪದೋಷಗಳನ್ನು ಸರಿಪಡಿಸುವಂತೆ ನಮ್ಮ ಬೇಡಿಕೆಗಳು ಇರುವ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟಿಸಿ ರೈಲ್ವೆ ಸಚಿವರಿಗೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಛೇರಿ ಅಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸುನಿಲ್ ಟಿ.ಆರ್, ನಿರಂಜನ್, ನೀತು ಶ್ರೀ ,ಸಂಜು, ಲಾವಣ್ಯ ಮಧುಸೂದನ್ ಮತ್ತು ಪ್ರಮೋದ್‌ರವರು ಪಾಲ್ಗೊಂಡಿದ್ದರು.

ಬಿಹಾರ ಮತ್ತು ಯುಪಿಯಲ್ಲಿ ರೈಲ್ವೆ ಮಂಡಳಿಯು ನಡೆಸುತ್ತಿದ್ದ ಆರ್‌ಆರ್‌ಬಿ-ಎನ್‌ಟಿಪಿಸಿ ರೈಲ್ವೇ ಪರೀಕ್ಷೆಯಲ್ಲಿನ ಲೋಪದೋಷಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಯುವಕರನ್ನು ಪೊಲೀಸರು ಮಾನವೀಯವಾಗಿ ಥಳಿಸಿರುವುದನ್ನು AIUYSC ನ ಅಖಿಲ ಭಾರತ ಸಮಿತಿಯು ಬಲವಾಗಿ ಖಂಡಿಸುತ್ತದೆ ಮತ್ತು ಧರಣಿ ನಿರತ ಯುವಕರೊಂದಿಗೆ ತನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ.

ಮೊದಲಿಗೆ ಧರಣಿ ನಿರತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಯುವಕರು ರೈಲು ಮಾರ್ಗದ ಮೇಲೆ ಕುಳಿತು ಧರಣಿ ನಡೆಸಬೇಕಾಯಿತು. ದೇಶದ ಯುವಕರ ಮೇಲೆ ಪೊಲೀಸ್ ಬಲ ಪ್ರಯೋಗಿಸುತ್ತಿರುವ ರೀತಿ ಅತ್ಯಂತ ಅಮಾನವೀಯ ಮತ್ತು ಖಂಡನೀಯ. ಪೊಲೀಸರು ಹಾಸ್ಟೆಲ್ ಕೊಠಡಿಗಳಿಗೆ ನುಗ್ಗಿ ಲಾಠಿ ಬೀಸಿ ಕಲ್ಲು ತೂರಾಟ ನಡೆಸಿದ್ದಲ್ಲದೆ, ಯುವಕರ ವಿರುದ್ಧ ಗುಂಡು ಸಹ ಹಾರಿಸಿದರು. ಕೊನೆಗೆ ಸಂಜೆ ತಡವಾಗಿ, ಪರೀಕ್ಷೆಯನ್ನು ಸ್ಥಗಿತಗೊಳಿಸುವ ಬೇಡಿಕೆಯನ್ನು ಅಂಗೀಕರಿಸಲು ಸರ್ಕಾರ ಒಪ್ಪಿಗೆ ನೀಡಿತು ಮತ್ತು ಆದ್ದರಿಂದ ಚಳವಳಿಯನ್ನು ಹಿಂಪಡೆಯಲಾಯಿತು. ಆದರೆ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿಲ್ಲ. ಸರ್ಕಾರ ಬೇಷರತ್ತಾಗಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟವನ್ನು ತೀವ್ರಗೊಳಿಸುವಂತೆ ಧರಣಿ ನಿರತ ಯುವಕರಲ್ಲಿ AIUYSC ಮನವಿ ಮಾಡುತ್ತದೆ.

AIUYSC ನ ಮೈಸೂರು ಜಿಲ್ಲಾ ನಾಯಕರಾದ ಸುನಿಲ್ ಟಿ ಆರ್ ಅವರು ತಮ್ಮ ಹೇಳಿಕೆಯಲ್ಲಿ, ದೇಶದಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಏರಿದೆ ಮತ್ತು ದೇಶದ ಯುವಕರು ಸಂಕಷ್ಟದಲ್ಲಿದ್ದಾರೆ, ಹತಾಶರಾಗಿದ್ದಾರೆ. ಅವರು ಉದ್ಯೋಗಗಳಿಗೆ ಒತ್ತಾಯಿಸುತ್ತಿದ್ದಾರೆ, ಸರ್ಕಾರಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ, ರೈಲ್ವೆಯ ಖಾಸಗೀಕರಣವನ್ನು ವಿರೋಧಿಸುತ್ತಿದ್ದಾರೆ. ಆದರೆ ಇವುಗಳ ಬಗ್ಗೆ ಸರ್ಕಾರಗಳು ಕಿವುಡಾಗಿವೆ. ಕೊರೊನಾ ನೆಪವೊಡ್ಡಿ ಸರ್ಕಾರಿ ಇಲಾಖೆಗಳು ನೇಮಕಾತಿ ಮಾಡುತ್ತಿಲ್ಲ. ಒಂದು ಕಾಲದಲ್ಲಿ 23 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಿದ ರೈಲ್ವೆಯಲ್ಲಿ ಈಗ ಕೇವಲ 12 ಲಕ್ಷ ಹುದ್ದೆಗಳು ಉಳಿದಿವೆ. ಮತ್ತು ಕೇಂದ್ರವು ಈಗ ರೈಲ್ವೆಯನ್ನು ಮಾರಾಟ ಮಾಡಲು ಉತ್ಸುಕವಾಗಿದೆ.

ಸರ್ಕಾರಗಳು ಉದ್ಯೋಗ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬರುತ್ತಿದ್ದು ನಂತರ ಪೊಲೀಸರನ್ನು ಬಳಸಿಕೊಂಡು ಯುವಕರಿಗೆ ಕಿರುಕುಳ ನೀಡುತ್ತಿವೆ. ಕಾರ್ಪೊರೇಟ್ ಕಂಪನಿಗಳ ಪಾದ ಸೇವೆಗೈಯುವ ಸರ್ಕಾರಗಳಿಗೆ ಚುನಾವಣೆ ವೇಳೆಗೆ ಮಾತ್ರ ಯುವಕರು ನೆನಪಾಗುತ್ತಿರುವುದು ಸ್ಪಷ್ಟವಾಗಿದೆ. ಇನ್ನೊಂದು ಕಡೆ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರಿಗೆ ಬೆದರಿಕೆ ಹಾಕಲು, ಪ್ರತಿಭಟಿಸುವವರನ್ನು ಗುರುತಿಸಿ ಅವರಿಗೆ ಉದ್ಯೋಗ ನೀಡುವುದಿಲ್ಲ ಎಂದು ಆದೇಶಗಳನ್ನು ಹೊರಡಿಸಲಾಗುತ್ತಿದೆ. ಆದರೆ ನೇಮಕಾತಿಯಲ್ಲಿ ಪರೀಕ್ಷೆ ವಿಳಂಬ, ಫಲಿತಾಂಶ ವಿಳಂಬ ಅಥವಾ ಹುದ್ದೆಗೆ ಸೇರಿಸಿಕೊಳ್ಳಲು ಆಗುತ್ತಿರುವ ವಿಳಂಬದ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ?

ಇದೇ ಸಂದರ್ಭದಲ್ಲಿ, ರೈಲ್ವೇ ಸಚಿವಾಲಯವು ತಕ್ಷಣವೇ ನ್ಯಾಯಾಂಗ ಸಮಿತಿಯನ್ನು ರಚಿಸಬೇಕು, ಸಂತ್ರಸ್ತ ಯುವಕರಿಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು AIUYSC ಒತ್ತಾಯಿಸುತ್ತದೆ. ಅದೇ ರೀತಿ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುವ ಯುವಜನ ಚಳವಳಿಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು AIUYSC ಆಗ್ರಹಿಸುತ್ತದೆ.

ಈಗಾಗಲೇ 2019ರಲ್ಲಿ RRB NTPCಯ 35 ಸಾವಿರ ಹುದ್ದೆಗಳು ಮತ್ತು RRC ಡಿ ಗ್ರೂಪ್‌ನ 1 ಲಕ್ಷ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಎರಡೂ ಹುದ್ದೆಗಳಿಗೆ ಸುಮಾರು 2.4 ಕೋಟಿಗಳಷ್ಟು ಯುವಜನರು ಅರ್ಜಿ ಸಲ್ಲಿಸಿದ್ದರು. ಆದರೆ ಅದರಲ್ಲಿ ಹಲವಾರು ಗೊಂದಲಗಳು ಮತ್ತು ಸಮಸ್ಯೆಗಳು ಇರುವುದರಿಂದ ಅವುಗಳನ್ನು ಪ್ರಶ್ನಿಸಿ ಹೋರಾಟ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಏಕಾಏಕಿ ಲಾಠಿ ಚಾರ್ಜ್ ಮಾಡಲಾಗಿದೆ. ಇದನ್ನು ನಾವು ಖಂಡಿಸುತ್ತಾ ಇಂತಹ ಅನ್ಯಾಯದ ವಿರುದ್ಧ ನಾವೂ ಸಹ ಕರ್ನಾಟಕದಲ್ಲಿ ಒಂದು ಬಲಿಷ್ಠ ಹೋರಾಟವನ್ನು ಕಟ್ಟಬೇಕಾಗುತ್ತದೆ.
ಎಂಬುದಾಗಿ ಸಮಿತಿಯ ಮತ್ತೊಬ್ಬ ಪದಾಧಿಕಾರಿಯಾಗಿದ ನೀತುಶ್ರೀ ಮಾತನಾಡಿದರು.

ನಮ್ಮ ಬೇಡಿಕೆಗಳು : –

1. NTPC ನೇಮಕಾತಿ ಪ್ರಕ್ರಿಯೆಯ ಲೋಪದೋಷಗಳನ್ನು ಈ ಕೂಡಲೇ ಸರಿಪಡಿಸಿ.

2. ಯಾವ ಸೂಚನೆ ನೀಡದೇ ಅಸಹಾಯಕ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಿ.

3. ಪ್ರತಿಭಟನಾಕಾರರಿಗೆ ನೀಡಿರುವ ಅನರ್ಹತೆಯ ಬೆದರಿಕೆಯನ್ನು ಬೇಷರತ್ತಾಗಿ ಹಿಂಪಡೆಯಿರಿ.

4. 2019 ರಲ್ಲಿ CENನಲ್ಲಿ ಘೋಷಿಸಿದಂತೆ ‘ಡಿ’ ಗ್ರೂಪ್ ನೇಮಕಾತಿಯನ್ನು ಒಂದೇ ಪರೀಕ್ಷೆಯಲ್ಲಿ ಪೂರ್ಣಗೊಳಿಸಿ. ಹೋರಾಟ ಸಮಿತಿ ಆಗ್ರಹಿಸಿದೆ.

 


Share