ಪ್ರಧಾನಿ ಮೋದಿ ಹುಟ್ಟಿದ ಹಬ್ಬ ವಿವಿಧ ಕಾರ್ಯಕ್ರಮಗಳಿಗೆ ಸಾಹಿತಿ S.L. ಭೈರಪ್ಪ ಚಾಲನೆ

397
Share

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಉದ್ಯಾನವನದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

ಮೋದಿ ಅವರ ಆರು ವರ್ಷದ ಆಡಳಿತದ ಬಗ್ಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಆಯೋಜಿಸಲಾಗಿದ್ದ ಆನ್‌ಲೈನ್ ರಸಪ್ರಶ್ನೆಯ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡುವ ಮೂಲಕ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತ ಹಾಗೂ ಕಲಾವಿದ ಅಭಿಷೇಕ್ ಮೋರೆ ಐದೇ ನಿಮಿಷದಲ್ಲಿ ಪ್ರಧಾನಿ ಮೋದಿ ಅವರ ಚಿತ್ರ ಬಿಡಿಸಿ ಗಮನ ಸೆಳೆದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಎಲ್.ಭೈರಪ್ಪ, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದವರು ಮಾತ್ರ ಪ್ರಧಾನಿಗಳಾಗಿದ್ದಾರೆ. ಅದು ಅವರ ಪಕ್ಷದ ತೀರ್ಮಾನವೇ ಹೊರತು ಜನರ ತೀರ್ಮಾನವಲ್ಲ. ಆದರೆ ಜನರ ಮೂಲಕ ಆಯ್ಕೆಯಾಗಿ ಬಂದ ಮೊದಲ ಪ್ರಧಾನಿ ನರೇಂದ್ರ ಮೋದಿ. ನೇರವಾಗಿ ಜನರ ಬಳಿ ಮತ ಯಾಚಿಸಿ ತಮ್ಮ ಕೆಲಸದ ಆಧಾರದ ಮೇಲೆ ಪ್ರಧಾನಿಯಾಗಿದ್ದಾರೆ ಎಂದು ಮೋದಿಯವರನ್ನು ಕೊಂಡಾಡಿದರು.

ಜವಹಾರ್‌ಲಾಲ್ ನೆಹರೂ ಮೋತಿಲಾಲ್ ನೆಹರೂ ಅವರ ಮಗ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷರಾದವರು. ಅಂದು ಕಾಂಗ್ರೆಸ್ ಅಧ್ಯಕ್ಷನೇ ಮುಂದಿನ ಪ್ರಧಾನಿ ಎಂದು ಎಲ್ಲರಿಗೂ ತಿಳಿದಿತ್ತು. ಒಮ್ಮೆ ಅಧ್ಯಕ್ಷರ ಆಯ್ಕೆಗೆ ೧೨ ಮತಗಳಿತ್ತು. ಅಷ್ಟೂ ಮತಗಳು ವಲ್ಲಭಾಯ್ ಪಟೇಲ್‌ಗೆ ಬಂತು. ಆಗ ಸಭೆಯಿಂದ ಎದ್ದು ಹೋಗುವ ಸಂದರ್ಭದಲ್ಲಿ ಗಾಂಧಿ ಮಾಡಿದ ಒಂದು ತಪ್ಪಿಗೆ ನೆಹರೂ ಪ್ರಧಾನಿಯಾದರು. ಅಂದೇ ವಲ್ಲಭಾಯ್ ಪಟೇಲ್ ಪ್ರಧಾನಿಯಾಗಿದ್ದರೆ ಮುಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ, ದೇಶ ಈ ರೀತಿ ಇರುತ್ತಿರಲಿಲ್ಲ

ನಾನು ಆರು ವರ್ಷಗಳ ಕಾಲ ಗುಜರಾತ್‌ನ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ್ದೆ. ಆತ ಎಷ್ಟು ದೂರದೃಷ್ಟಿಯ ವ್ಯಕ್ತಿ ಎಂಬುದು ಗುಜರಾತ್ ಅಭಿವೃದ್ಧಿಯಿಂದಲೇ ತಿಳಿಯುತ್ತದೆ. ನರ್ಮದಾ ನದಿ ಸಮುದ್ರಕ್ಕೆ ಸೇರುವ ಬದಲು ಅದಕ್ಕೆ ಅಣೆಕಟ್ಟು ಕಟ್ಟಬೇಕು ಎಂದು ಮೋದಿ ತೀರ್ಮಾನಿಸಿದಾಗ ಬೇರೆ ರಾಜ್ಯಗಳು ವಿರೋಧ ಮಾಡಿದವು. ಆದರೆ ಅವರಿಗೆ ಅದರ ಪ್ರಾಮುಖ್ಯತೆ ತೋರಿಸಿ ಅವರಿಗೂ ವಿದ್ಯುತ್ ಕೊಟ್ಟು ಅನ್ಯೂನ್ಯತೆಯಿಂದ ಕೆಲಸ ಮಾಡಿದರು. ಆ ನೀರಿನ ಮೂಲಕ ಬರದ ಪ್ರದೇಶವಾಗಿದ್ದ ಜಿಲ್ಲೆಗಳು ನೀರಾವರಿ ಪ್ರದೇಶ ಆಗಿದೆ ಎಂದರು.

ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಮೋದಿ ನಿದ್ದೆ ಮಾಡಿರಲಿಲ್ಲ. ಮೋದಿ ಅಧಿಕಾರ ವಹಿಸಿಕೊಂಡಾಗ ಭಾರತ ಯಾವ ಸ್ಥಿತಿಯಲ್ಲಿತ್ತು, ಈಗ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆರ್ಟಿಕಲ್ ೩೭೦ ಕಾಯ್ದೆ ರದ್ದು ಮಾಡಲು ಕಾರಣವೇನು ಎಂಬುದನ್ನು ಮನಗಾಣಬೇಕು. ಕೇಂದ್ರ ರಾಜ್ಯಕ್ಕೆ ಜಿಎಸ್‌ಟಿ ಪಾಲು ನೀಡಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡುವ ಮೊದಲು ಮೋದಿ ಬೇರೆ ರೀತಿಯಲ್ಲಿ ರಾಜ್ಯಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕು. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸಾಕಷ್ಟು ಖರ್ಚು ಮಾಡಿದೆ. ಆದರೆ ವಿಪಕ್ಷಗಳು ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಇಲ್ಲಿ ಅವರ ಅಪರೂಪದ ಚಿತ್ರಗಳನ್ನು ನೋಡಿದರೆ ಅವರು ನಡೆದು ಬಂದ ಹಾದಿ ತಿಳಿಯುತ್ತದೆ. ಬೇರೆ ಪ್ರಧಾನಿಗಳನ್ನು ಇವರಿಗೆ ಹೋಲಿಸಿದಾಗ ಯಾಕೆ ಇವರು ಉತ್ತಮರು ಎಂದು ತಿಳಿಯುತ್ತದೆ. ಇವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅಂತಹವು. ೨೦೨೯ರ ಚುನಾವಣೆಯ ವೇಳೆಗೆ ಇವರು ಮತ್ತೊಬ್ಬ ಪ್ರಧಾನಿಯನ್ನು ತಯಾರು ಮಾಡಿ ವಾನಪ್ರಸ್ಥಕ್ಕೆ ಹೋಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಹೇಳಿದರು.

ನಂತರ ಕೇಂದ್ರದ ೭೦ ಯೋಜನೆಗಳ ಬ್ಯಾನರ್ ಅನ್ನು ‘ಭಾರತ್ ಡಿವೈಡೆಡ್ ಬೈ ಸ್ಟೇಟ್ಸ್, ಯುನೈಟೆಡ್ ಬೈ ಸ್ಕೀಮ್ಸ್ ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಲಾಯಿತು. ‘ಮೋದಿಸ್ ಎಕ್ಸಿಬಿಷನ್ ರಿಮೆಂಬರ್ಸ್‌ ಮೈಸೂರು ಎಕ್ಸಿಬಿಷನ್’ ಎಂಬ ಶೀರ್ಷಿಕೆಯಲ್ಲಿ ಅವರ ಜೀವನದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರಧಾನ ಮಂತ್ರಿ ಮಾತೃವಂದನಾ ಕಾರ್ಯಕ್ರಮ (ಮದರ್ ಆಫ್ ಡೆವಲಪಿಂಗ್ ಇಂಡಿಯಾ – ಮೋದಿ/ಎಮ್‌ಒಡಿಐ) ಅಡಿಯಲ್ಲಿ ಗರ್ಭಿಣಿಯರಿಗೆ ಸನ್ಮಾನ, ರಾಷ್ಟ್ರೀಯ ಪೋಷಣ್ ಅಭಿಯಾನದ (ಡೋಂಟ್ ಈಟ್ ಲೆಸ್, ಈಟ್ ರೈಟ್) ಅಡಿಯಲ್ಲಿ ಐದು ಜನ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಲಾಯಿತು.

ಪೌರಕಾರ್ಮಿಕ ಕುಮಾರ್ ಮೋದಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಸೆಲ್ಫೀ ವಿತ್ ಮೋದಿ ಪರಿಕಲ್ಪನೆಯನ್ನು ಮಹಿಳಾ ಪೊಲೀಸ್ ಪೇದೆಯ ಬಳಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ತೋಂಟದಾರ್ಯ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಡಾ.ಲಕ್ಷ್ಮೀನಾರಾಯಣ್, ಜಿಲ್ಲಾಧಿಕಾರಿ ಬಿ.ಶರತ್, ಸಾಹಿತಿ ಪ್ರಧಾನ ಗುರುದತ್ತ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.


Share