ಪ್ರೇಮಿಗಳ ದಿನದಂದು ಸಮುದ್ರ ಪಾಲಾದ ಪ್ರೇಮಿಗಳು

116
Share

ಪ್ರೇಮಿಗಳ ದಿನವನ್ನು ಆಚರಿಸಲು ಗೋವಾಕ್ಕೆ ಬಂದಿದ್ದ ಓರ್ವ ಪುರುಷ ಮತ್ತು ಅವನ ಸಂಗಾತಿಯು ಗೋವಾದಲ್ಲಿ ಅರಬ್ಬಿ ಸಮುದ್ರ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೃತರು, ಮುಂಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಭು ಶರ್ಮಾ (27) ಮತ್ತು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸುಪ್ರಿಯಾ ದುಬೆ (26) ರಾತ್ರಿ ಊಟದ ನಂತರ ದಕ್ಷಿಣ ಗೋವಾ ಜಿಲ್ಲೆಯ ಕೆನಕೋನಾ ತಾಲೂಕಿನ ಪಲೋಲೆಮ್ ಬೀಚ್ ಬಳಿ ನೀರಿನಲ್ಲಿ ಈಜಲು ಸಾಹಸ ಮಾಡಿದಾಗ ಈ ದುರ್ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಪಲೋಲೆಮ್ ಬಳಿಯ ಔರೆಮ್ ಬೀಚ್ ಸ್ಟ್ರೆಚ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಆಕೆಯ ಸಂಗಾತಿಯ ದೇಹವು ಮಧ್ಯಾಹ್ನ ಆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ ಎಂದು ಕೆನಕೋನಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ತಂಗಿದ್ದ ಹೋಟೆಲ್‌ನ ಸಿಬ್ಬಂದಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಸಮುದ್ರಕ್ಕೆ ಇಳಿಯುವ ಮೊದಲು ಇಬ್ಬರೂ ರಾತ್ರಿ ಊಟ ಮತ್ತು ಪಾನೀಯಗಳನ್ನು ಸೇವಿಸಿದ್ದರು ಎಂದು ಸಿಬ್ಬಂದಿ ಹೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಾವುಗಳಲ್ಲಿ ಯಾವುದೇ ಅನುಮಾನವು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


Share