ಬಿಜೆಪಿ ಮೇಲೆ ಮಾಡಿರುವ ಟೀಕೆಗೆ ಕ್ಷಮೆ ಯಾಚಿಸುವುದಿಲ್ಲ : ಮಲ್ಲಿಕಾರ್ಜುನ್ ಖರ್ಗೆ

159
Share

ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ಭುಗಿಲೆದ್ದರೂ, ಪ್ರತಿಪಕ್ಷದ ನಾಯಕರು, ”ನಾನು ಹೇಳಿದ್ದು ರಾಜಕೀಯವಾಗಿ ಸದನದ ಹೊರಗೆ, ಒಳಗೆ ಅಲ್ಲ, ಕ್ಷಮೆ ಯಾಚಿಸುವ ಅಗತ್ಯವಿಲ್ಲ. ಎರಡನೆಯದಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವಿಲ್ಲ ಎಂದು ನಾನು ಈಗಲೂ ಹೇಳಬಲ್ಲೆ ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜಸ್ಥಾನದ ಅಲ್ವಾರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ದೇಶಕ್ಕಾಗಿ ನಿಂತಿದೆ, ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದೆ ಮತ್ತು ಅದರ ನಾಯಕರು ಮಹತ್ತ್ಯಾಗವನ್ನು ಮಾಡಿದ್ದರೆ, ಬಿಜೆಪಿ ದೇಶಕ್ಕಾಗಿ ತನ್ನ ಒಂದು ನಾಯಿಯನ್ನು ಸಹ ಕಳೆದುಕೊಂಡಿಲ್ಲ ಎಂದು ಖರ್ಗೆ ಹೇಳಿದ್ದಾರೆ.
“ರಾಜಸ್ಥಾನದ ಆಳ್ವಾರ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ನಾನು ಹೇಳಿದ್ದು ಸದನದ ಹೊರಗೆ. ನಾನು ಹೇಳಿದ್ದು ರಾಜಕೀಯವಾಗಿ ಸದನದ ಹೊರಗೆ, ಒಳಗೆ ಅಲ್ಲ. ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಎರಡನೆಯದಾಗಿ, ನಾನು ಈಗಲೂ ಹೇಳಬಲ್ಲೆ” ಎಂದು ಪುನರುಚ್ಛರಿಸಿದ್ದಾರೆ.
“ನಾನು ಹೇಳಿದ್ದನ್ನ ಹೊರಗೆ ಹೇಳಿದರೆ ಅವರಿಗೆ ಕಷ್ಟವಾಗುತ್ತದೆ. ‘ಮಾಫಿ ಮಾಂಗ್ನೆ ವಾಲೇ ಲೋಗ್’ ( ಕ್ಷಮೆ ಯಾಚಿಸುತ್ತಿರುವವರು ) ಸ್ವಾತಂತ್ರ್ಯ ಹೋರಾಟದ ಜನರ ಕ್ಷಮೆ ಕೇಳುತ್ತಿದ್ದಾರೆ … ನಾನು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಆತ್ಮಾರ್ಪಣೆ ಮಾಡಿದ್ದಾರೆ ಎಂದು ಹೇಳಿದ್ದೇನೆ. ನಿಮ್ಮಲ್ಲಿ ಯಾರು ಈ ದೇಶದ ಏಕತೆಗಾಗಿ ನಿಮ್ಮ ಜೀವ ಕೊಟ್ಟಿದ್ದಾರೆ ?” ಎಂದು ಕೇಳಿದ್ದಾರೆ.
‘ಅವಹೇಳನಕಾರಿ ಹೇಳಿಕೆ’ಗಾಗಿ ಖರ್ಗೆ ಕ್ಷಮೆಯಾಚಿಸಬೇಕು ಎಂದು ಪಿಯೂಷ್ ಜೈನ್ ಅವರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಖರ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.


Share