ಬೈಕ್ ರೇಸಿನಲ್ಲಿ ಪ್ರಾಣ ಕಳೆದುಕೊಂಡ 13 ವರ್ಷದ ಬಾಲಕ

59
Share

ಚೆನ್ನೈ: ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಬೆಂಗಳೂರಿನ 13 ವರ್ಷದ ರೈಡರ್ ಕೊಪ್ಪರಂ ಶ್ರೇಯಸ್ ಹರೀಶ್ ಎಂಬುವ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಈ ಘಟನೆಯು ರೂಕಿ ಓಟದ ಪ್ರಾರಂಭದ ನಂತರ ಸಂಭವಿಸಿದೆ. ಶ್ರೇಯಸ್ ಮೊದಲ ಲ್ಯಾಪ್‌ನಲ್ಲಿ ಟರ್ನ್ ಮಾಡುತ್ತಿದ್ದಾಗ ಜಾರಿದ್ದು, ನಂತರ ಅವರ ಹೆಲ್ಮೆಟ್ ಕಳಚಿ ಬಿದ್ದಿದೆ. ಹದಿಹರೆಯದವನ ಹಿಂದೆ ಬಂದ ಸವಾರ ಅಪಘಾತವನ್ನು ತಡೆಯಲು ಸಾಧ್ಯವಾಗದೆ ಅವನ ಮೇಲೆ ವಾಹನ ಚಕಾಯಿಸಿದ ಪರಿಣಾಮ, ತಲೆಗೆ ಗಾಯವಾಯಿತಂತೆ.
ರೇಸ್‌ಗೆ ತಕ್ಷಣವೇ ಕೆಂಪು ಬಾವುಟ ತೋರಿಸಿ ಶ್ರೇಯಸ್‌ನನ್ನು ಟ್ರ್ಯಾಕ್‌ನಲ್ಲಿ ನಿಲ್ಲಿಸಲಾಗಿದ್ದ ಟ್ರಾಮಾ ಕೇರ್ ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದ ಎಂದು ವರಫಿಯಾಗಿದೆ. ಆ ಕ್ಷಣದಲ್ಲಿ ಬಾಲಕನ ತಂದೆ ಕೊಪ್ಪರಂ ಹರೀಶ್ ಪಕ್ಕದಲ್ಲೆ ಇದ್ದರಂತೆ.
ಘಟನೆಯ ನಂತರ, ಚಾಂಪಿಯನ್‌ಶಿಪ್‌ನ ಪ್ರವರ್ತಕ, ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MMSC), ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದ್ದಾರೆ. ಎಂಎಂಎಸ್ಸಿ ಅಧ್ಯಕ್ಷ ಅಜಿತ್ ಥಾಮಸ್ “ಇಷ್ಟು ಯುವ ಮತ್ತು ಪ್ರತಿಭಾವಂತ ಸವಾರನನ್ನು ಕಳೆದುಕೊಂಡಿರುವುದು ದುರಂತ. ಶ್ರೇಯಸ್ ತನ್ನ ಅದ್ಭುತ ರೇಸಿಂಗ್ ಪ್ರತಿಭೆಯಿಂದ ಅಲೆಯನ್ನು ಸೃಷ್ಟಿಸುತ್ತಿದ್ದ.
MMSC ಹೃತ್ಪೂರ್ವಕ ಸಂತಾಪವನ್ನು ಸೂಚಿಸುತ್ತದೆ” ಎಂದಿದ್ದಾರೆ.
ಕಳೆದ ತಿಂಗಳು ತನ್ನ 13ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಬೆಂಗಳೂರಿನ 8ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್, ರೂಕಿ ವಿಭಾಗದಲ್ಲಿ ಸ್ಪರ್ಧಿಸುವಾಗ ಸತತ ನಾಲ್ಕು ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹಲವು ರೇಸ್‌ಗಳನ್ನು ಗೆದ್ದಿದ್ದರು.
2021 ರಲ್ಲಿ ಮೋಟಾರ್‌ಸ್ಪೋರ್ಟ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್, ಮಿನಿಜಿಪಿ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಮೇ ತಿಂಗಳಲ್ಲಿ ಸ್ಪೇನ್‌ನಲ್ಲಿ ನಡೆದ ಮಿನಿಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು. ಅವರು ಆಗಸ್ಟ್‌ನಲ್ಲಿ ಮಲೇಷ್ಯಾದಲ್ಲಿ ನಡೆಯುವ MSBK ಚಾಂಪಿಯನ್‌ಶಿಪ್‌ನಲ್ಲಿ (250cc ವಿಭಾಗ) CRA ಮೋಟಾರ್‌ಸ್ಪೋರ್ಟ್ಸ್ ಅನ್ನು ಪ್ರತಿನಿಧಿಸಬೇಕಿತ್ತು.
18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಬಾಲಕನಿಗೆ ಈ ತರಹದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೆ ” FMSCI 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸವಾರರಿಗೆ ಸ್ಪರ್ಧೆಯ ಪರವಾನಗಿಗಳನ್ನು ನೀಡುತ್ತದೆ, ಅವರು ರೇಸ್ ಟ್ರ್ಯಾಕ್‌ನ ನಿಯಂತ್ರಿತ ಪರಿಸರದಲ್ಲಿ ಸವಾರಿ ಮಾಡಲು ಅನುಮತಿಸುತ್ತಾರೆ. ಪರವಾನಗಿಯು ಅವರಿಗೆ ರಸ್ತೆಯಲ್ಲಿ ಸವಾರಿ ಮಾಡಲು ಅನುಮತಿಯನ್ನು ನೀಡುವುದಿಲ್ಲೆ” ಎಂದು ಮೂಲವೊಂದು ಮಾದ್ಯಮಕ್ಕೆ ತಿಳಿಸಿದೆ.


Share