ಮೇಲುಕೋಟೆಯಲ್ಲಿ ತೊಟ್ಟಿಲು ಮಡು ಜಾತ್ರೆ

40
Share

https://youtu.be/ZTB3h3R19yk?si=wRpFfPB_qmmszYMU

ತೊಟ್ಟಿಲುಮಡು ಜಾತ್ರೆ ( ಅಷ್ಟ ತೀರ್ಥ ಸ್ನಾನ )
ಇಂದು ಮೇಲುಕೋಟೆಯಲ್ಲಿ ತೊಟ್ಟಿಲು ಮಡಿಲು ಜಾತ್ರೆ ನಡೆಯಲಿದೆ. ಈ ಉತ್ಸವದ ಮುಖ್ಯ ಉದ್ದೇಶವೆಂದರೆ ಮಕ್ಕಳಾಗದವರು ಅಥವಾ ಮದುವೆ ಆಗಿಲ್ಲದವರು ಹಿರಿಯರಿಂದ ಹಣ್ಣು ಕಾಯಿಗಳನ್ನು ಮುಡುಪು ಕಟ್ಟಿಸಿಕೊಂಡು ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ, ಗಿರಿ ಪ್ರದಕ್ಷಿಣೆಯಿಂದ ಬೆಟ್ಟವನ್ನು ಹತ್ತಿ ಅಲ್ಲಿ ನಿವೇದನವಾದ ಪೊಂಗಲ್ ಪ್ರಸಾದವನ್ನು ಸೇವಿಸಬೇಕು. ಇದರಿಂದ ಮಕ್ಕಳಾಗದವರು ಹಾಗೂ ಮದುವೆ ಆಗದವರಿಗೆ ಅವರ ಕೋರಿಕೆ ಈಡೇರುತ್ತದೆ ಎಂದು ಪ್ರತೀತಿ ಇದೆ. ಇದನ್ನು ಅಷ್ಟ ತೀರ್ಥ ಸ್ನಾನವೆಂದೂ ಕರೆಯುತ್ತಾರೆ. ಇದು ಇಂದು ಬೆಳಗ್ಗೆ ಮೊದಲು ಚೆಲುವನಾರಾಯಣ ಸ್ವಾಮಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಕಲ್ಯಾಣಿಗೆ ಕೊಂಡೊಯ್ದು ಅಲ್ಲಿ ತೀರ್ಥ ಸ್ನಾನವಾದ ಬಳಿಕ ಅಲ್ಲಿಂದ ದೇವಸ್ಥಾನಕ್ಕೆ ವಾಪಸ್ ಆಗಿ ಅಲ್ಲಿ ವಿಜಯ ಮಾಡುತ್ತಾರೆ. ಇದಾದ ನಂತರ ಶಟಾರಿಯನ್ನು ( ಪಾದುಕೆ ) ಮಾತ್ರ ದಕ್ಷಿಣದ ಮೂಲಕ ಇಲ್ಲಿಯ ರಾಯ ಗೋಪುರದ ಮೂಲಕ ವಿಜಯ ಮಾಡಿಸುತ್ತಾರೆ . ನಂತರ ಅಷ್ಟ ತೀರ್ಥ ಉತ್ಸವ ಪ್ರಾರಂಭವಾಗುತ್ತದೆ. ಮೊದಲು ದತ್ತಾತ್ರೇಯರ ವೇದ ಪುಷ್ಕರಣಿ, ಧನುಷ್ಕೋಟಿ, ಯಾದವ ತೀರ್ಥ, ಧರ್ಭಾ ತೀರ್ಥ, ಫಲಶಾತೀರ್ಥ, ಪದ್ಮ ತೀರ್ಥ, ಮೈತ್ರೇಯ ತೀರ್ಥ , ನಾರಾಯಣ ತೀರ್ಥ ಹಾಗೂ ವೈಕುಂಠ ಗಂಗೆ ಅಥವಾ ತೊಟ್ಟಿಲುಮಡುವಿಗೆ ಶಠಾರಿಯನ್ನು ತರುತ್ತಾರೆ.
ಇದರ ವಿಶೇಷವೆಂದರೆ ಹಿಂದೆ ತ್ರಿವಿಕ್ರಮಾವತಾರದಲ್ಲಿ ವಿಷ್ಣುವಿನ ಒಂದು ಪಾದವನ್ನು ಬ್ರಹ್ಮನು ತೊಳೆದಾಗ ಬಿದ್ದ ತೀರ್ಥ . ಶ್ರೀ ವೈಕುಂಠ ನಿವಾಸಿಗಳಾದ ನಿತ್ಯಮುಕ್ತರು ವಿರಜಾ ನದಿ ತೀರ್ಥದಿಂದ ಬಿದ್ದ ನೀರು ಇಲ್ಲಿ ವೈಕುಂಠ ಗಂಗೆಯಾಗಿ ಪ್ರವಹಿಸುತ್ತದೆ ಎಂದು ಪ್ರತೀತಿ ಇದೆ. ಇದು ಒಂದು ಕಡೆ ತೊಟ್ಟಿಲಾಗಿಯೂ ಒಂದು ಕಡೆ ಮಡುವಾಗಿಯೂ ಹರಿಯುತ್ತದೆ ಎಂದು ಪ್ರತೀತಿ. ( ನದಿ ಹಿಂದೆ ಬೆಟ್ಟದಲ್ಲಿ ಹುಟ್ಟಿ ಇಲ್ಲಿ ದಕ್ಷಿಣದಿಂದ ತಿರುಗಿ ಪೂರ್ವಕ್ಕೆ ಹರಿಯುತ್ತದೆ) . ಸ್ನಾನಕ್ಕೆ ದೇವರ ಶ್ರೀ ಪಾದುಕೆ ಬರುವ ಹೊತ್ತಿಗೆ ಸಂಜೆ ಆಗಿರುತ್ತದೆ. ತೀರ್ಥ ಸ್ನಾನವಾದ ಬಳಿಕ ಕದಂಬ , ಮೊಸರನ್ನ ನೈವೇದ್ಯ ಮಾಡಿ ಎಲ್ಲರಿಗೂ ಪ್ರಸಾದ ಹಂಚುತ್ತಾರೆ. ಇಲ್ಲಿ ಸಾವಿರಾರು ಮಂದಿ ಭಕ್ತರು ಸೇರಿರುತ್ತಾರೆ. ಇದಕ್ಕೆ ತೊಟ್ಟಿಲು ಮಡು ಜಾತ್ರೆ ಎಂದೇ ಹೆಸರು. ಇದಾದ ನಂತರ ಗಿರಿ ಪ್ರದಕ್ಷಿಣೆಗೆ ದೇವರ ಪಾದುಕಾ ಸಮೇತ ಹೊರಡುತ್ತಾರೆ. ಈ ಪ್ರದಕ್ಷಿಣೆಯಿಂದ ಶ್ರೀ ಯೋಗ ನರಸಿಂಹ ಸ್ವಾಮಿ ಬೆಟ್ಟದ ಪ್ರದಕ್ಷಿಣೆ ಆದರೆ ಸಮಸ್ತ ಕ್ಷೇತ್ರವನ್ನು ನಾವು ಪ್ರದಕ್ಷಿಣೆ ಮಾಡಿದಂತೆ ಆಗುತ್ತದೆ. ಈ ಗಿರಿ ಪ್ರದಕ್ಷಿಣೆ ಹಾಗೂ ದೇವರ ತೀರ್ಥ ಸ್ನಾನವಾಗುವಾಗ ವೇದಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ನಿರಂತರವಾಗಿ ನಡೆಯುತ್ತಾ ಇರುತ್ತದೆ.

ವರದಿ : ಟಿ.ವಿ.ಪದ್ಮ ಸೋಮಶೇಖರ್


Share