ಮೇ 25 ರಂದು ನಂಜನಗೂಡು ಶೀ ಕಂಠೇಶ್ವರ ಸನ್ನಿಧಿಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ

215
Share

 

*ಮೇ 25 ರಂದು ನಂಜನಗೂಡು ಶೀ ಕಂಠೇಶ್ವರ ಸನ್ನಿಧಿಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ *

ಮೈಸೂರು  ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಸಪ್ತಪದಿ ಉಚಿತ ಸಾಮೂಹಿಕ ಸರಳ ವಿವಾಹವನ್ನು 2022 ರ ಮೇ 25 ರಂದು ನಂಜನಗೂಡಿನ ಶ್ರಿ ಕಂಠೇಶ್ವರ ದೇವಸ್ಥಾನದಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್ ಮಂಜುನಾಥಸ್ವಾಮಿ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಪ್ತಪದಿ ಉಚಿತ ಸರಳ ವಿವಾಹ ದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹವು ಮೇ 25 ರ ಬುಧವಾರ ಬೆಳಗ್ಗೆ 10. 55 ರಿಂದ 11:40 ರವರೆಗೆ ಕಟಕ ಶುಭ ಲಗ್ನ ದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಜಾರಿ ಮಾಡಿದೆ. ಯೋಜನೆ ವಿಶೇಷತೆ ಎಂದರೆ, ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯ ಆಡಳಿತ ಮಂಡಳಿಗಳೇ ಮಾಡುತ್ತವೆ ಎಂದು ಅವರು ತಿಳಿಸಿದರು.

ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು 2022ರ ಮೇ 13 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

*ವಧು-ವರರಿಗೆ ಒಟ್ಟು 55 ಸಾವಿರ ರೂ. ಪ್ರೋತ್ಸಾಹ ಧನ*

ಸಪ್ತಪದಿ ಯೋಜನೆಯಡಿ ವಿವಾಹವಾಗುವ ವಧು-ವರರಿಗೆ ಸರಕಾರ ಒಟ್ಟು 55 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದೆ. ವಧು-ವರರು ಪಂಚೆ, ಶರ್ಟ್‌, ಶಲ್ಯ, ಹೂವಿನ ಹಾರ, ಧಾರೆ ಸೀರೆ ಹಾಗೂ ರವಿಕೆ ಕೊಳ್ಳಲು ಅನುದಾನ ನೀಡುತ್ತಿದೆ. ವರನಿಗೆ ಪೋತ್ಸಾಹ ಧನವಾಗಿ ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯ ಖರೀದಿಗೆ 5 ಸಾವಿರ ರೂ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆಗಾಗಿ 10 ಸಾವಿರ ನೀಡಲಿದೆ. ವಧುವಿಗೆ ಚಿನ್ನದ ತಾಳಿ, ಎರೆಡು ಚಿನ್ನದ ಗುಂಡು ಒಟ್ಟು ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ನೀಡಲಾಗುತ್ತದೆ.

*ಷರತ್ತುಗಳು*
ವಧು-ವರರ ಎರಡು ಕಡೆಯ ತಂದೆ-ತಾಯಿಯರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು, ವಧು ವರರ ತಂದೆ-ತಾಯಿಯರು ನಿಧನರಾಗಿದ್ದು ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇದ್ದು ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು, ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್ ಪರಿಶೀಲಿಸುವುದು, ಸರ್ಕಾರದ ನಿಯಮದಂತೆ ಕನಿಷ್ಠ 21 ವರ್ಷ ಗಳು ಹೀಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು. ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶ ಕಲ್ಪಿಸ ತಕ್ಕದ್ದು. ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಡಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.

ಸಭೆಯಲ್ಲಿ ನಂಜನಗೂಡು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾದ ರವೀಂದ್ರ, ಮುಜರಾಯಿ ಇಲಾಖೆಯ ತಹಶೀಲ್ದಾರರಾದ ಕೃಷ್ಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾದ ಎಚ್.ಎಸ್ ಬಿಂದಿಯಾ, ವಾರ್ತಾಧಿಕಾರಿ ಟಿ. ಕೆ. ಹರೀಶ್ , ಸಮಾಜ ಕಲ್ಯಾಣ ಇಲಾಖೆಯ ರಾಜ್ ನಾಯಕ್, ಅರಮನೆ ಮುಜರಾಯಿ ಸಂಸ್ಥೆಯ ವ್ಯವಸ್ಥಾಪಕರಾದ ಎನ್.ಎಸ್ ಶೀಲಾ, ಅವರು ಉಪಸ್ಥಿತರಿದ್ದರು.


Share