ಮೈಸೂರು ; ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಪ್ರತಿಭಟನೆ

273
Share

ಮೈಸೂರು: ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಡಿಯಲ್ಲಿ 50,000ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಜೀವನ ಕಂಡುಕೊಂಡಿದ್ದಾರೆ. ಆದರೆ ಸರ್ಕಾರ ಚಿಲ್ಲರೆ ಮಾರಾಟಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಖಂಡನೀಯ. ಕೋವಿಡ್ ಲಾಕ್‍ಡೌನ್ ಮತ್ತಿತರೆ ನಿರ್ಬಂಧಗಳಿಂದ ಕಳೆದ ಕೆಲ ವರ್ಷಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಹಿನ್ನಡೆ ಅನುಭವಿಸಿದ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಇದ ವಿನಾಶಕಾರಿಯಾಗಿದೆ. ಅತಿಯಾದ ತಂಬಾಕು ಕಾನೂನುಗಳು ಕೂಡಾ ಅವುಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳಿಂದ ಶೋಷಣೆಗಳು ಹಾಗೂ ಭ್ರಷ್ಟಾಚಾರ ಹೆಚ್ಚಿಸುತ್ತಿವೆ ಎಂದು ಕಿಡಿಕಾರಿದರು.
ಜಾಹೀರಾತು ಮತ್ತು ವ್ಯಾಪಾರ ಹಾಗೂ ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಷೇಧ ಕಾಯ್ದೆ ಅನ್ವಯ ನಮ್ಮ ಸದಸ್ಯರು ಈಗಾಗಲೇ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದು ಅವರ ಅನಕ್ಷರತೆ ಹಾಗೂ ಅಜ್ಞಾನದ ಲಾಭ ಪಡೆದು ಶೋಷಿಸುತ್ತಿದ್ದಾರೆ. ಮಾರಾಟಗಾರರು ಲೈಸೆನ್ಸ್ ಪಡೆಯಬೇಕು, ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೈಸನ್ಸ್ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಹಲವು ಜವಾಬ್ದಾರಿಗಳಿದ್ದರೂ ಇವುಗಳೊಂದಿಗೆ ನಿಯಂತ್ರಣಕ್ಕೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ದೂರಿದರು.
ಈ ಸಂಘವು ಕರ್ನಾಟಕ ರಾಜ್ಯದಾದ್ಯಂತ 2 ಲಕ್ಷಕ್ಕೂ ಹೆಚ್ಚು ಕಿರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಸಂಸ್ಥೆಯಾಗಿದೆ. ಇದು 10 ಲಕ್ಷಕ್ಕೂ ಹೆಚ್ಚು ಬಡವರಲ್ಲಿ ಬಡ ಚಿಲ್ಲರೆ ವ್ಯಾಪಾರಿಗಳ ಹಾಗೂ ಅವರ ಕುಟುಂಬಗಳ ಜೀವನೋಪಾಯ ಮತ್ತು ಅವರ ಜೀವನಗಳು ಮತ್ತು ಜೀವನೋಪಾಯಗಳ ಕುರಿತಂತೆ ಸಮಸ್ಯೆಗಳೂ ಹೆಚ್ಚಾಗುತ್ತಿರುವುದನ್ನು ಕೂಡಾ ಪ್ರತಿನಿಧಿಸುತ್ತದೆ.
ಹೀಗಾಗಿ ನಗರಾಭಿವೃದ್ಧಿ ಇಲಾಖೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಕರ್ನಾಟಕ ಮುನಿಸಿಪಾಲಿಟಿಗಳ ಮಾದರಿ ಬೈಲಾ ಅನುಷ್ಠಾನ ಮಾಡಬಾರದು. ಬದಲಿಗೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಆದಾಯ ನಷ್ಟದಿಂದ ಹೊರಬರಲು ನೆರವಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳನ್ನು ಕೋರುವುದೇನೆಂದರೆ ನಗರಾಭಿವೃದ್ಧಿ ಇಲಾಖೆಯ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಕರ್ನಾಟಕ ಮುನಿಸಿಪಾಲಿಟಿಗಳು (ಸಿಗರೇಟುಗಳು ಮತ್ತಿತರೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಗಳು ಮತ್ತು ತನಿಖೆ) ಮಾದರಿ ಬೈಲಾಗಳು, 2020 ಅನುಷ್ಠಾನ ಮಾಡಬಾರದು ಹಾಗೂ ಬದಲಿಗೆ ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಆದಾಯ ನಷ್ಟದಿಂದ ಹೊರಬರಲು ನೆರವಾಗಿ ಎಂದು ವಿನಯಪೂರ್ವಕವಾಗಿ ಕೋರುತ್ತೇವೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗುರುಸ್ವಾಮಿ, ನೂರುಲ್ಲಾ, ಕೀರ್ತಿ, ಶಬ್ಬೀರ್, ಸೌಕತ್, ಮೋಹನ್, ರಾಜೇಂದ್ರ, ನಾರಾಯಣಶೆಟ್ಟಿ, ಪ್ರದೀಪ್, ಪ್ರಕಾಶ್, ಗುರುದೇವ್, ರಾಜಾರಾಂ, ರಾಮದೇವ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.


Share