ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀಪಾದವಲ್ಲಭ ಪುಟ-145

457
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ
ಪುಟ – 144
ವಿಶೇಷ ಸೂಚನೆ : ಭಜನೆ ಆಲಿಸಿ ಚರಿತ್ರೆ ಪಠನೆ ಮಾಡಿ .

ಅಧ್ಯಾಯ – 17
ನನ್ನ ಮಾತುಗಳನ್ನು ಕೇಳಿದ ಆ ಆಗಂತುಕರು ಕುಸಿದುಬಿದ್ದರು. ಆಶ್ಚರ್ಯದಲ್ಲೆಲ್ಲ ಆಶ್ಚರ್ಯ ! ನಾನು ನುಡಿದ ಕೆಲವು ಮಾತುಗಳು ಅವರ ಗತ .ಜೀವನಕ್ಕೆ ಸಂಬಂಧಿಸಿದ ಕಾರಣ ನನ್ನ ಭವಿಷ್ಯವಾಣಿ ಕೂಡ ಖಚಿತವಾಗಿ ನಡೆದೇ ತೀರುವುದು ಎಂದು ಅವರಿಗೆ ಅನ್ನಿಸಿತ್ತು . ಅವರು ತಮ್ಮ ದೋಷಗಳನ್ನು ಅಂಗೀಕರಿಸಿದರು. ಜ್ಯೋತಿಷ್ಯದಲ್ಲಿ ಎಷ್ಟು ಮಾತ್ರವೂ ಪಾಂಡಿತ್ಯವಿರದ ನಾನು ಅವರ ದೃಷ್ಟಿಯಲ್ಲಿ ಒಬ್ಬ ದೊಡ್ಡ ಜ್ಯೋತಿಷಿಯಾಗಿ ಪರಿಣಮಿಸಿದೆನು . ಹತ್ತಿರದಲ್ಲಿದ್ದ ಮರದ ನೆರಳಿನಲ್ಲಿ ನಾವು ಕುಳಿತುಕೊಂಡೆವು . ಅವರ ವೃತ್ತಾಂತವನ್ನು ಸವಿವರಾಗಿ ಹೇಳಬೇಕೆಂದು ನಾನು ಕೋರಿದೆನು . ಆಗ ಅವರು , ” ಸ್ವಾಮಿ ? ನೀವು ತ್ರಿಕಾಲಜ್ಞರು , ಸರ್ವಜ್ಞರು . ಆದರೂ ನೀವು ಕೇಳುತ್ತಿದ್ದೀರೆಂದು ನಾವು ಹೇಳುತ್ತಿದ್ದೇವೆ . ನಾವಿಬ್ಬರೂ ಅಣ್ಣತಮ್ಮಂದಿರು , ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಬ್ರಾಹ್ಮಣ ಧರ್ಮಗಳು ನಮ್ಮಲ್ಲಿ ಉಳಿದೇ ಇಲ್ಲ , ಸರ್ವ ಭ್ರಷ್ಟರಾಗಿದ್ದೇವೆ . ಗೋಮಾಂಸ ಭಕ್ಷಕರೊಡನೆ ಸ್ನೇಹ ಬೆಳೆಸಿದೆವು . ಸುರಾಪಾನದ ಅಭ್ಯಾಸ ಮಾಡಿಕೊಂಡೆವು . ವ್ಯಭಿಚಾರಕ್ಕೂ ಬಿದ್ದೆವು . ಎಲ್ಲಾ ದುರಾಚಾರಗಳಿಂದ ನಾವು ಸರ್ವ ಭ್ರಷ್ಟರಾದೆವು . ಒಂದು ಗುಡ್ಡದ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತಿದ್ದ ಈಕೆಯನ್ನು ನೋಡಿದೆವು . ನಮ್ಮ ಮನಸ್ಸಿನ ಕೋರಿಕೆಯನ್ನು ಹೇಳಿದೆವು . ಆಕೆ ನಿರಾಕರಿಸಿದಳು . ನನ್ನ ಕಾಮಾಕಾಂಕ್ಷೆಯನ್ನು ಆಕೆ ತೀರಿಸಲಿಲ್ಲವೆಂದು ಬಲವಂತವಾಗಿಯಾದರೂ ಅನುಭವಿಸಬೇಕೆಂದುಕೊಂಡೆವು . ಅದೇನು ವಿಚಿತ್ರವೊ ಏನೋ , ಸಿಕ್ಕಿದಳು ಎನ್ನುವ ಹಾಗಾಗಿ ತಪ್ಪಿಸಿಕೊಳ್ಳುತ್ತಿದ್ದಳು . ಆಕೆಯನ್ನು ಓಡಿಸಿಕೊಂಡು ಬರುತ್ತಿದ್ದೆವು . ಪುಣ್ಯವಶದಿಂದ ನಿಮ್ಮ ದರ್ಶನಭಾಗ್ಯವು ಸಿಕ್ಕಿತು ” ಎಂದು ಹೇಳಿದರು . ಅದಕ್ಕೆ ನಾನು , “ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ವಿವೇಚನೆ ಮಾಡುವ ಶಕ್ತಿಯನ್ನು ಪರಮಾತ್ಮ ನಮಗೆ ಪ್ರಸಾದಿಸಿದ್ದಾನೆ . ನಾವು ಒಳ್ಳೆಯ ದಾರಿಯಲ್ಲಿ ನಡೆದರೆ ಒಳ್ಳೆಯ ಫಲವನ್ನು ಹೊಂದಬಹುದು . ಕೆಟ್ಟ ದಾರಿಯಲ್ಲಿ ನಡೆದರೆ ಕೆಟ್ಟ ಫಲಗಳನ್ನು ಅನುಭವಿಸಬೇಕಾಗುವುದು . ಈ ತಾಯಿ ಸದಾಚಾರಿಣಿಯಾಗಿ ತೋರುತ್ತಿದ್ದಾಳೆ , ಅವಳನ್ನು ನೀವು ದುರಾಚಾರಿಣಿ ಎಂದು ಅಂದುಕೊಂಡಿರಿ . ಮೇಲಾಗಿ ಅತ್ಯಂತ ಹೇಯವಾದ ಕೋರಿಕೆಗಳಿಂದ ಆಕೆಯನ್ನು ಸಮೀಪಿಸಿದಿರಿ . ನೀವು ಪಶ್ಚಾತ್ತಾಪ ಪಡುತ್ತಿದ್ದೀರಿ . ನಿಮ್ಮ ಪಾಪಗಳನ್ನು ಪ್ರಭು ಕ್ಷಮಿಸುತ್ತಾನೋ ಇಲ್ಲವೋ ನನಗೆ ತಿಳಿಯದು . ಆದರೆ ನಿಮಗೆ ನಾನೊಂದು ಶುಭವಾರ್ತೆಯನ್ನು ಹೇಳುತ್ತಿದ್ದೇನೆ . ತ್ರಿಲೋಕಾರಾಧ್ಯನೂ ತ್ರಿಮೂರ್ತಿಸ್ವರೂಪನೂ ಆದ ಶ್ರೀದತ್ತನು ಪ್ರಸ್ತುತ ಕಾಲದಲ್ಲಿ ನರರೂಪಧಾರಿಯಾಗಿ ಶ್ರೀಪಾದವಲ್ಲಭರೂಪದಿಂದ ಈ ಲೋಕದಲ್ಲಿ ಸಂಚರಿಸುತ್ತಿದ್ದಾನೆ . ಅವನ ದಿವ್ಯಚರಣಗಳು ಮಾತ್ರವೇ ಮಹಾಪಾಪಿಗಳನ್ನು ಉದ್ಧರಿಸಬಲ್ಲವು . ಇದನ್ನು ಬಿಟ್ಟರೆ ಬೇರೆ ಉಪಾಯವೇ ಇಲ್ಲ . ನಾನು ಅವರ ದಿವ್ಯಲೀಲೆಗಳೆಷ್ಟನ್ನೋ ಕೇಳಿದ್ದೇನೆ . ಅವರ ಪ್ರಸ್ತುತ ನಿವಾಸವಾದ ಕುರುಗಡ್ಡೆಗೆ ಪ್ರಯಾಣ ಮಾಡುತ್ತಿದ್ದೇನೆ . ಅಮ್ಮಾ ! ನಿನ್ನ ವೃತ್ತಾಂತವನ್ನು ತಿಳಿಯಪಡಿಸು ” ಎಂದು ಆಕೆಯನ್ನು ಕೇಳಿದೆನು .
ಅದಕ್ಕೆ ಆಕೆ , ‘ ಸ್ವಾಮಿ ! ತಾವು ನನ್ನನ್ನು ಈ ಪಾಪಾತ್ಮರಿಂದ ರಕ್ಷಿಸಿದಿರಿ . ನೀವು ನನಗೆ ಪಿತೃಸಮಾನರು . ನಾನು ಸದ್ಬ್ರಾಹ್ಮಣ ವಂಶದಲ್ಲಿ ಜನಿಸಿದೆನು . ತಿಳುವಳಿಕೆ ಬರುವ ಹೊತ್ತಿಗೆ ವಿವಾಹವಾಯಿತು . ನನ್ನ ದೌರ್ಭಾಗ್ಯವನ್ನು ಏನೆಂದು ಹೇಳಲಿ . ನನ್ನ ಪತಿ ನಪುಂಸಕ , ಕ್ಷಣಕ್ಷಣವೂ ನನ್ನನ್ನು ಕಾಡುತ್ತಿದ್ದನು . ಯೌವನ ಸಂಬಂಧವಾದ ಕೋರಿಕೆಗಳೆಲ್ಲವನ್ನೂ ಪಕ್ಕಕ್ಕಿಟ್ಟು ಪತಿಯನ್ನೇ ದೈವವೆಂದು ಭಾವಿಸಿ ಸೇವೆಯನ್ನು ಮಾಡುತ್ತಿದ್ದೆನು . ನನ್ನ ಗಂಡನಿಗೆ ನನ್ನನ್ನು ಹಿಂಸಿಸಿ ಆನಂದಿಸುವುದು ಒಂದು ಕೆಟ್ಟ ಹವ್ಯಾಸ . ನನಗೆ ಪರಪುರುಷರೊಡನೆ ಸಂಬಂಧವಿದೆಯೆಂದು ಪದೇ ಪದೇ ಹೇಳುತ್ತಿದ್ದನು . ನಾನು ಪುಷ್ಪಗಳಿಂದ ಅಲಂಕರಿಸಿಕೊಂಡರೆ ಮಿಂಡನಿಗಾಗಿ ಕಾಯುತ್ತಿದ್ದೀಯೆಂದು , ಅಲಂಕಾರ ಮಾಡಿಕೊಳ್ಳದಿದ್ದರೆ ವಿಧವೆಯಂತೆ ಏಕೆ ಅಮಂಗಳವಾಗಿ ಕಾಣಿಸಿಕೊಳ್ಳುತ್ತಿದ್ದೀಯೆಂದೂ , ಮನೆಯಲ್ಲಿರುವ ಚಿಕ್ಕಮಕ್ಕಳನ್ನು ಮುದ್ದಿಸಿದರೆ ನಿನಗೆ ಮಕ್ಕಳಾಗಲಿಲ್ಲವೆಂದು ಒಳಗೊಳಗೇ ಕೊರಗುತ್ತಿದ್ದೀಯೆಂದು , ನಾನು ಸರಿಯಾಗಿ ಊಟ ಮಾಡಿದರೆ ನೀನು ಸಿಕ್ಕಾಪಟ್ಟೆ ತಿಂದು ಮನೆಯನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದೀಯೆಂದು , ಕಡಿಮೆ ತಿಂದರೆ ಅತ್ತೆ ಮನೆಯಲ್ಲಿ ಊಟ ಹಾಕುವುದಿಲ್ಲವೆಂದು ಅಕ್ಕ ಪಕ್ಕದವರೆಲ್ಲರೂ ತಿಳಿದುಕೊಳ್ಳಲೆಂದು ಕಡಿಮೆ ತಿನ್ನುತ್ತಿದ್ದೀಯೆಂದು , ಉಪವಾಸ ಮಾಡಿದರೆ ನನ್ನ ಪೀಡೆಯನ್ನು ಬಿಡಿಸಿಕೊಳ್ಳುವುದಕ್ಕೆ ರಹಸ್ಯವಾಗಿ ಯಾವುದೋ ಮಂತ್ರವನ್ನು ಜಪಿಸುತ್ತಾ ಆ ಮಂತ್ರಾಧಿಷ್ಠಾನ ದೇವತಾ ಪ್ರೀತಿಗಾಗಿ ಉಪವಾಸ ಮಾಡುತ್ತಿದ್ದೀಯೆಂದು ಎಲ್ಲಕ್ಕೂ ನನ್ನನ್ನು ನಿಂದಿಸುತ್ತಾ ಅದರಿಂದ ಆನಂದ ಪಡುವುದೇ ಅವರಿಗೆ ಪರಿಪಾಠವಾಗಿತ್ತು . ಅವನು ಏನೇ ಅಂದರೂ ಅತ್ತೆಯವರಾಗಲೀ ಮಾವನವರಾಗಲೀ , ಮನೆಯ ಉಳಿದ ಹಿರಿಯರಾಗಲೀ ತುಟಿ ಪಿಟಕ್ಕೆನ್ನುತ್ತಿರಲಿಲ್ಲ . ಈ ಭೂಲೋಕದಲ್ಲಿರುವಾಗಲೇ ನರಕವೆಂದರೆ ಹೇಗಿರುವುದೆಂದು ನಮ್ಮ ಅತ್ತೆಯ ಮನೆಯ ಅನುಭವದಿಂದ ತಿಳಿದುಕೊಂಡೆ . ಈ ವಿಧವಾಗಿ ಕಾಲವು ನನಗೆ ವಿಷಾದಭರಿತವಾಗಿ ನಡೆಯುತ್ತಿತ್ತು ‘ ಎಂದು ಹೇಳಿದಳು .
(ಮುಂದುವರೆಯುವುದು )
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ –
145
ಅಚ್ಯುತನ ಭಜಿಸುವ. ಹುಚ್ಚನಂತೆ ಕಾಣುವ !
ಸಂಸಾರ ಸಾಗರದಿ ನಿರಾಧಾರನಿವ.
ಕಷ್ಟ ಬಂದರೂ ಇವನ ಇಷ್ಟದಂತೆಯೇ ಇರುವ .
ಅಕ್ಕರೆಯಿಲ್ಲದ ಜನರು ನಗುವುದಾದರೆ ನಗಲಿ
– ಸಚ್ಚಿದಾನಂದ

(ಸಂಗ್ರಹ )
* ಭಾಲರಾ
ಬೆಂಗಳೂರು

ಜೈ ಗುರುದತ್ತ .


Share