ಯುವಸಂಭ್ರಮ: ಭಕ್ತಿಯಗಡಲಲ್ಲಿ ಮಿಂದೆದ್ದ ಯುವ ಸಮೂಹ

23
Share

*ಯುವಸಂಭ್ರಮ: ಭಕ್ತಿಯಗಡಲಲ್ಲಿ ಮಿಂದೆದ್ದ ಯುವ ಸಮೂಹ*

ಮೈಸೂರು,ಅ.8.- ನವದುರ್ಗೆಯರ ದರ್ಶನ, ಮಹಿಷಾಸುರನ ಮರ್ಧನ, ದಸರಾ ವೈಭವ, ಮಂಟೆಸ್ವಾಮಿ ಸಿದ್ದಪ್ಪಾಜಿ ಸೇರಿದಂತೆ ಸುಂದರ ದೈವಿಕ ದರ್ಶನದಿಂದ ಇಂದಿನ ಯುವ ಸಂಭ್ರಮ ಭಕ್ತಿಯಗಡಲಲ್ಲಿ ತೇಲಿತು.

ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗರಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಕಾರ್ಯಕ್ರಮ ಸಾಕ್ಷಿಯಾಯಿತು.

ಯುವಸಂಭ್ರಮಕ್ಕೆ ಬಂದ ನಟ ಅಶ್ವಥ್ ನಿನಾಸಂ ಅವರು ವೇದಿಕೆಗೆ ಬಂದು ಮುಂಗಾರು ಮಳೆ ಚಿತ್ರದ ಡೈಲಾಗ್ ಹೊಡೆದು ಕಲಾಭಿಮಾನಿಗಳನ್ನು ರಂಜಿಸಿದರು.

ಮಂಡ್ಯದ ರೋಟರಿ ಕಾಂಪೋಸೀಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಂತರ ಚಿತ್ರದ ವರಾಹ ರೂಪಂ ಹಾಡಿಗೆ ಮನಮೋಹಕವಾಗಿ ನರ್ತಿಸುವ ಮೂಲಕ ನೆರೆದಿದ್ದಂತಹ ಪ್ರೇಕ್ಷಕರನ್ನು ಭಕ್ತಿಯ ಕಡಲಲ್ಲಿ ತೇಲಿಸಿದರು. ಚಾಮರಾಜನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೋಗಿ ಚಿತ್ರದ ಏಳು ಮಲೆ ಮ್ಯಾಲೆರಿ ಕುಂತನಮ್ಮ ಗೀತೆಗೆ ನರ್ತಿಸಿದರು.

ಮೈಸೂರಿನ ಜೆ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರಪೂಜಿತ ಗಣೇಶನ ಗೀತೆಗೆ ಹೆಜ್ಜೆಹಾಕಿ ಯುವಸಂಭ್ರಮ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಗೀತೆ ಸಲಾಂ ಸೋಲ್ಜರ್ ಹಾಡಿಗೆ ಹೆಜ್ಜೆ ಹಾಕಿ ಸೈನಿಕರ ದೇಶ ಪ್ರೇಮವನ್ನು ನೃತ್ಯದ ಮೂಲಕ ಪ್ರದರ್ಶಿಸಿ ನೆರೆದಿದ್ದ ಜನರಿಗೆ ತಿಳಿಸಿದರು. ಗುಂಡ್ಲುಪೇಟೆಯ ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಚಾಮುಂಡಿ ದೇವಿಯ ನವ ಅವತಾರಗಳ ವೇಷಭೂಷಣ ತೊಟ್ಟು ನರ್ತಿಸುತ್ತಿದ್ದಂತೆ ಸಭಿಕರ ಎದೆಯ ಧಿಮಿತ ಹೆಚ್ಚಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಚಾಮರಾಜನಗರದ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಹಾಡುಗಳಿಗೆ ಹೆಜ್ಜೆಹಾಕಿ ಮನಮುಟ್ಟುವಂತೆ ಪ್ರದರ್ಶಿಸಿದರು. ಮಂಡ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜನಪದ ಕಲೆಯಾದ ಕಂಸಾಳೆ ನೃತ್ಯದ ಮೂಲಕ ಸಭಿಕರನ್ನು ಮನರಂಜಿಸಿದರು.

ಮಹಿಳಾ ಸಬಲೀಕರ ಹಾಗೂ ಮಹಿಳಾ ಸ್ವಯಂ ರಕ್ಷಣ ಕಲೆಯ ಬಗ್ಗೆ ತಿಳಿಸಲು ಒಂಟಿಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಚೌಕ ಚಿತ್ರದ ಅಪ್ಪಾ ಐ ಲವ್ ಯು ಪಾ ಹಾಗೂ ದುರ್ಗಿ ಅವತಾರದಲ್ಲಿ ಕುಣಿದು ನೆರೆದಿದ್ದವರನ್ನು ರಂಜಿಸಿದರು. ಧಾರವಾಡದ ಆರ್.ವಿ.ಪಾಟೀಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರೈತರ ಕಷ್ಟದ ಬಗ್ಗೆ ಹಾಗೂ ಮಣ್ಣಿನೊಂದಿಗೆ ಯಾವ ರೀತಿಯಲ್ಲಿ ಸಂಬಂಧವನ್ನು ಬೆಸೆದುಕೊಂಡಿದ್ದಾನೆ ಎಂಬುದನ್ನು ನೃತ್ಯದ ಮೂಲಕ ತಿಳಿಸಿದರು.

ವಿಕಲ ಚೇತನ ಅಭ್ಯುಧಯ ಸೇವಾ ಸಂಸ್ಥೆಯ ತಂಡದ ವಿಶೇಷ ಚೇತನರು ಪರಿಸರ ಸಂರಕ್ಷಣೆಯ ಬಗ್ಗೆ ನೃತ್ಯ ಮಾಡಿ ಸಭಿಕರ ಗಮನ ಸೆಳೆದರು.


Share