ರೈಲ್ವೆ ಸಚಿವಾಲಯದಿಂದ ಪ್ರಯಾಣಿಕರಲ್ಲಿ ಮನವಿ

394
Share

ಪ್ರಯಾಣಿಕರಲ್ಲಿ ರೈಲ್ವೆ ಸಚಿವಾಲಯದ ಮನವಿ
ವಲಸಿಗರು ತಮ್ಮ ಮನೆಗಳಿಗೆ ಹಿಂದಿರುಗಲು, ಭಾರತೀಯ ರೈಲ್ವೆಯು ದೇಶಾದ್ಯಂತ ಪ್ರತಿದಿನ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ಸೇವೆಯನ್ನು ಪಡೆಯುತ್ತಿರುವ ಕೆಲವು ಜನರು ಈ ಮೊದಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಕೋವಿಡ್ – 19 ಜಾಗತಿಕ ಪಿಡುಗಿನ ಸಂದರ್ಭವು ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಪ್ರಯಾಣ ಮಾಡುವಾಗ ಮೊದಲೇ ಅಸ್ತಿತ್ವದಲ್ಲಿದ್ದ ಆರೋಗ್ಯ ಸಮಸ್ಯೆಗಳಿಂದ ಸಾವು ಸಂಭವಿಸಿದ ಕೆಲವು ದುರದೃಷ್ಟಕರ ಪ್ರಕರಣಗಳು ಘಟಿಸಿವೆ.
17.05.2020 ರ ದಿನಾಂಕದ ಗೃಹ ಸಚಿವಾಲಯದ ಆದೇಶ ಸಂಖ್ಯೆ 40-3 / 2020-ಡಿಎಂ- I (ಎ) ಗೆ ಅನುಗುಣವಾಗಿ, ಕೋವಿಡ್ -19 ರಿಂದ ದುರ್ಬಲ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ, ರೈಲ್ವೆ ಸಚಿವಾಲಯವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ(ಉದಾಹರಣೆಗೆ – ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ-ನಾಳೀಯ ಕಾಯಿಲೆಗಳು, ಕ್ಯಾನ್ಸರ್, ರೋಗನಿರೋಧಕ ಕೊರತೆಯ ಪರಿಸ್ಥಿತಿಗಳು) ವ್ಯಕ್ತಿಗಳು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಅನಿವಾರ್ಯವಿಲ್ಲದಿದ್ದಲ್ಲಿ ರೈಲು ಪ್ರಯಾಣವನ್ನು ಮಾಡಬಾರದೆಂದು ಕೋರುತ್ತದೆ.
ಪ್ರಯಾಣದ ಅಗತ್ಯತೆಯಿರುವ ದೇಶದ ಎಲ್ಲಾ ನಾಗರಿಕರಿಗೆ ರೈಲು ಸೇವೆಗಳನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಪರಿವಾರ 24 X7 ಕಾರ್ಯನಿರ್ವಹಿಸುತ್ತಿದೆ. ಆದರೆ ನಮ್ಮ ಪ್ರಯಾಣಿಕರ ಸುರಕ್ಷತೆಯು ನಮ್ಮ ದೊಡ್ಡ ಕಾಳಜಿಯಾಗಿದೆ. ಆದ್ದರಿಂದ, ನಾವು ಈ ವಿಷಯದಲ್ಲಿ ಎಲ್ಲಾ ನಾಗರಿಕರ ಸಹಕಾರವನ್ನು ಬಯಸುತ್ತೇವೆ. ಯಾವುದೇ ತೊಂದರೆ ಅಥವಾ ತುರ್ತು ಸಂದರ್ಭದಲ್ಲಿ ದಯವಿಟ್ಟು ನಿಮ್ಮ ರೈಲ್ವೆ ಪರಿವಾರವನ್ನು ಸಂಪರ್ಕಿಸಲು ಹಿಂಜರಿಯಬೇಡಿ ಮತ್ತು ನಾವು ಯಾವಾಗಲೂ ನಿಮಗೆ ಸಹಾಯ ಮಾಡುತ್ತೇವೆ (ಸಹಾಯವಾಣಿ ಸಂಖ್ಯೆ – 139 ಮತ್ತು 138)
ನೈರುತ್ಯ ರೈಲ್ವೆಯು ಇದುವರೆಗೆ 169 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದ್ದು 2,42,094 ಪ್ರಯಾಣಿಕರಿಗೆ ತಮ್ಮ ಮನೆಯನ್ನು ತಲುಪಲು ಅನುಕೂಲವಾಗಿದೆ.
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈರುತ್ಯ ರೈಲ್ವೆ
ಹುಬ್ಬಳ್ಳಿ


(Public Relations Branch, South Western Railway, Rail Soudha, Gadag Road, Hubballi-580020)


Share