ವಿಶ್ವಕಂಡ ಮಹದದ್ಭುತ ಇಂಜಿನಿಯರ್ ವಿಶ್ವೇಶ್ವರಯ್ಯ

1678
Share

ವಿಶ್ವಕಂಡ ಮಹದದ್ಭುತ ಇಂಜಿನಿಯರ್ ವಿಶ್ವೇಶ್ವರಯ್ಯ
-ಬನ್ನೂರು ಕೆ. ರಾಜು
ಸಾಹಿತಿ-ಪತ್ರಕರ್ತ

ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸದಾಶಯದ ಹಂಬಲದಂತೆ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಹಿಡಿದಿಟ್ಟು ಕನ್ನಂಬಾಡಿ ಕಟ್ಟೆ ಕಟ್ಟಿ ಬೆಂಗಾಡನ್ನೆಲ್ಲಾ ಬಂಗಾರದ ಬೆಳೆಯಾಗಿಸಿದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಬಂಗಾರದ ಮನುಷ್ಯನ ಮೆದುಳಿಗೆ ಇಂದಿನ ಯಾವ ಅತ್ಯಾಧುನಿಕ ಕಂಪ್ಯೂಟರ್‌ಗಳೂ ಸಮವಲ್ಲ. ಅಂಥ ಅದ್ಭುತ ಮೆದುಳಿನ ವಿಶ್ವೇಶ್ವರಯ್ಯನವರ ತಲೆಯಲ್ಲರಳಿ ಕಾರ್ಯರೂಪಗೊಂಡ ಯೋಜನೆಗಳು ಅಸಂಖ್ಯಾತ, ಅಭಿವೃದ್ದಿಯ ಪಥದಲ್ಲಿ ಆಧುನಿಕ ಭಾರತವನ್ನು ಕರೆದೊಯ್ದವರ ಪೈಕಿ ಮೊದಲ ಸಾಲಿನಲ್ಲೇ ಮಿನುಗುವ ಹೆಸರು ಇವರದು. ಅಷ್ಟೇ ಅಲ್ಲ ಜಗತ್ಪ್ರಸಿದ್ದ ವಾಸ್ತು ಶಿಲ್ಪವರೇಣ್ಯರಾಗಿ, ಅದ್ಬುತ ಅಭಿಯಂತರರಾಗಿ ವಿಶ್ವೇಶ್ವರಯ್ಯನವರ ಹೆಸರು ಜಗತ್ತಿನಲ್ಲಿ ಅಜರಾಮರ. ವಿಶ್ವೇಶ್ವರಯ್ಯನವರಂಥ ವಿಸ್ಮಯದೋಪಾದಿಯ ಮೇಧಾವಿ ಇಂಜಿನಿಯರನ್ನು ಇನ್ನೆಂದಿಗೂ ಕಾಣಲಾಗದೆಂದು ಜಗತ್ತು ಎಂದೋ ನಿರ್ಧರಿಸಿಯಾಗಿದೆ. ಇಂಥ ಮೇಧಾವಿ, ನಿಸ್ಪಾರ್ಥಿ, ದೇಶಪ್ರೇಮಿ, ಕಾಯಕಯೋಗಿ, ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ ಈ ನಾಡಿಗೆ, ಈ ದೇಶಕ್ಕೆ, ಈ ಪ್ರಪಂಚಕ್ಕೆ ಕೊಟ್ಟ ಅನುಪಮ ಕೊಡುಗೆ ಒಂದೆರಡಲ್ಲ ಅಸಂಖ್ಯಾತ, ಇವತ್ತಿಗೂ ಅವು ವಿಶ್ವೇಶ್ವರಯ್ಯನವರ ಹೆಸರನ್ನೇ ಪಠಿಸುತ್ತಿವೆ.

ಹಿಂದೂಸ್ಥಾನ್ ಏರ್‌ಕ್ರಾಪ್ಟ್ ಫ್ಯಾಕ್ಟರಿ (ಈಗಿನ ಹೆಚ್‌ಎಎಲ್), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಚೇಂಬರ್ ಆಫ್ ಕಾಮರ್ಸ್, ಮೈಸೂರು ಪೇಪರ್ ಮಿಲ್ಸ್, ಮೈಸೂರು ವಿಶ್ವವಿದ್ಯಾನಿಲಯ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬೆಂಗಳೂರು ಮುದ್ರಣಾಲಯ, ಬೆಂಗಳೂರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆ (ಈಗ ಇದು ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜ್ ಆಗಿದೆ), ಮೈಸೂರು ಗಂಧದೆಣ್ಣೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಕೆ.ಆರ್. ಮಿಲ್, ಸಾರ್ವಜನಿಕ ಗ್ರಂಥಾಲಯಗಳು, ಕನ್ನಡ ಸಾಹಿತ್ಯ ಪರಿಷತ್, ಚನ್ನಪಟ್ಟಣದ ರೇಷ್ಮೆ ಕೈಗಾರಿಕೆ, ಜೋಗದ ಜಲ ವಿದ್ಯುತ್ ಯೋಜನೆ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ನಂದಿ ಬೆಟ್ಟದ ರೋಪ್‌ವೇ, ಮಿಥಿಕ್ ಸೊಸೈಟಿ, ಕಬ್ಬನ್ ಪಾರ್ಕ್, ಸೆಂಚುರಿ ಕ್ಲಬ್, ಮಲೆನಾಡು ಅಭಿವೃದ್ದಿ ಮಂಡಳಿ, ಕೃಷಿ ಶಾಲೆ, ವಾಣಿಜ್ಯ ಶಾಲೆ, ಮೈಸೂರಿನಲ್ಲಿ ಪ್ರತ್ಯೇಕವಾದ ರೈಲ್ವೆ ವಿಭಾಗ ಸ್ಥಾಪನೆ, ಮಂಗಳೂರಿನ ಹೆಂಚು ಮತ್ತು ಇಟ್ಟಿಗೆಯ ಕಾರ್ಖಾನೆ, ಬೆಂಕಿ ಕಡ್ಡಿ ಕಾರ್ಖಾನೆ, ತುಂಗಭದ್ರಾ ಜಲಾಶಯ, ಪ್ಯಾರಾಸಿಟಾಯ್ಡ್ ಲ್ಯಾಬೊರೇಟರಿ, ಭಟ್ಕಳ ಬಂದರು, ಹಿಂದೂ ಮಾಡರ್ನ್ ಹೋಟೆಲ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ದೇಶದಲ್ಲಿಯೇ ಮೊಟ್ಟ ಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಕನ್ನಂಬಾಡಿಗೆ ವಿಶ್ವದಲ್ಲಿಯೇ ಮೊದಲ ಸ್ವಯಂ ಚಾಲಿತ ಗೇಟ್‌ಗಳ ಅಳವಡಿಕೆ… ಹೀಗೆ ಹೇಳುತ್ತಾ ಹೋದರೆ ವಿಶ್ವೇಶ್ವರಯ್ಯನವರ ಮೆದುಳಿನ ಮಹದದ್ಭುತ ಶಕ್ತಿಯಿಂದ ಯೋಜನೆಗಳಾಗಿ ರೂಪುಗೊಂಡು ನಾಡಿಗೆ ಸಮರ್ಪಣೆಗೊಂಡ ಸಾಧನೆಯ ಶಿಖರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ವಿಶ್ವೇಶ್ವರಯ್ಯನವರು ನಾಡಿಗೆ ನೀಡಿದ ಕೊಡುಗೆಯಾಯಿತಷ್ಟೆ.

ಹೀಗೆಯೇ ನಾಡಿನಿಂದಾಚೆಗೂ ದೇಶವ್ಯಾಪಿ ವಿಶ್ವೇಶ್ವರಯ್ಯನವರ ಸಾಧನೆಯ ಹೆಗ್ಗುರುತುಗಳಿದ್ದು ಪೂನಾದ ಜಲನಿರ್ಗಮನ ಯೋಜನೆ, ಭೂಪಾಲ್ ನಗರದ ನೀರು ಸರಬರಾಜು ಹಾಗೂ ವಿದ್ಯುಚ್ಛಕ್ತಿ ಯೋಜನೆ ಮತ್ತು ಬಿಹಾರ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಗಂಗಾನದಿ ಸೇತುವೆ ನಿರ್ಮಾಣ, ಗ್ವಾಲಿಯರ್‌ನ ಟ್ರಿಗ್ಗಾ ಅಣೆಕಟ್ಟಿನ ಪುನನಿರ್ಮಾಣ, ಮುಂಬೈನ ಸಿಂಧ್‌ನಲ್ಲಿರುವ ಸುಕ್ಕೂರು ಅಣೆಕಟ್ಟು ಯೋಜನೆ, ಒರಿಸ್ಸಾ ಪ್ರಾಂತ್ಯದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ, ಮುಂಬೈನ ಆಟೋಮೊಬೈಲ್ ಕಂಪನಿ ಮುಂತಾದವು ವಿಶ್ವೇಶ್ವರಯ್ಯನವರ ಸಾಧನೆಗಳಾಗಿದ್ದು, ಭಾರತೀಯರೆಲ್ಲರೂ ಹೆಮ್ಮೆ ಪಡುವಂತಿದೆ., ಹಾಗೆಯೇ ದೇಶದಿಂದಾಚೆಗೂ ಇವರ ಮೇಧಾವಿತನದ ಮಹತ್ತರ ಮೈಲುಗಲ್ಲುಗಳನ್ನು ಕಾಣಬಹುದಾಗಿದ್ದು, ಇವುಗಳಲ್ಲಿ ಅಮೆರಿಕಾದ ಪನಾಮ ನದಿಗೆ ಅಳವಡಿಸಿರುವ ವಿಶ್ವೇಶ್ವರಯ್ಯನವರು ಆವಿಷ್ಕರಿಸಿದ ಸ್ವಯಂಚಾಲಿತ ತೂಬಿನ ಬಾಗಿಲುಗಳು ಮತ್ತು ಆಸ್ಟ್ರೇಲಿಯಾದ ಹೇಡನ್ ನಗರದ ಜಲನಿರ್ಗಮನ ಯೋಜನೆ ಪ್ರಮುಖವೆನಿಸಿವೆ.

ವಿಶ್ವೇಶ್ವರಯ್ಯನವರು ಒಳ್ಳೆಯ ಲೇಖಕರೂ ಅಗಿದ್ದು ತಮ್ಮ ಜೀವನಾನುಭವದಿಂದ ಹಲವಾರು ಕೃತಿಗಳನ್ನುರಚಿಸಿದ್ದರು. ಅವುಗಳಲ್ಲಿ ರೀ ಕನ್‌ಸ್ಟ್ರಕ್ಟಿಂಗ್ ಇಂಡಿಯಾ (೧೯೨೦) ಮತ್ತು ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ (೧೯೩೪) ಹಾಗೂ ಮೆಮೊರಿಸ್ ಆಫ್ ಮೈ ವರ್ಕಿಂಗ್ ಲೈಫ್ (೧೯೫೧ )ಕೃತಿಗಳು ಪ್ರಮುಖವಾದವು. ಇವು ಅತ್ಯಂತ ಉತ್ಕೃಷ್ಟ ಕೃತಿಗಳಾಗಿದ್ದು, ಇಂದಿಗೂ ಭಾರತೀಯರಿಗಷ್ಟೆ ಅಲ್ಲದೆ ವಿದೇಶಿಯರಿಗೂ ಮಾರ್ಗದರ್ಶಕ ಗ್ರಂಥಗಳಾಗಿವೆ.

ಇಂಥ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿದ್ದು ೧೮೬೦ ಸೆಪ್ಪಂಬರ್ ೧೫ ರಂದು. ಜನ್ಮಸ್ಥಳ ಕರ್ನಾಟಕದ ಹಿಂದಿನ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮ. ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಯ ನಂದಿಗ್ರಾಮದಿಂದ ಸುಮಾರು ೨ ಕಿ.ಮೀ. ಉತ್ತರಕ್ಕೆ ತಿರ್‍ನಹಳ್ಳಿ ಎಂಬ ಊರಿದ್ದು, ಅಲ್ಲಿಂದ ಪಶ್ಚಿಮಕ್ಕೆ ಒಂದು ಕಿ.ಮೀ. ಗೂ ಕಡಿಮೆ ಅಂತರದಲ್ಲಿರುವ ಚಿಕ್ಕಹಳ್ಳಿ ಇದು. ಇವರ ಪೂರ್ವಿಕರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮೋಕ್ಷಗುಂಡಂ ಎಂಬ ಗ್ರಾಮದವರಾಗಿದ್ದು ಬಹಳ ಹಿಂದೆಯೇ ಅಂದರೆ ೧೬೨೪ ರಲ್ಲೇ ಇಲ್ಲಿಗೆ ಬಂದು ನೆಲೆಸಿದ್ದರು. ತಂದೆ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿಗಳು ಸಂಪ್ರದಾಯಸ್ಥ ಬ್ರಾಹ್ಮಣರೂ, ವೇದಶಾಸ್ತ್ರಗಳಲ್ಲಿ ನಿಪುಣರೂ, ಸಂಸ್ಕೃತ ವಿದ್ವಾಂಸರೂ, ಯೋಗಾಭ್ಯಾಸ ಮಾಡಿದವರೂ ಅನುಭವಿ ಆಯುರ್ವೇದ ವೈದ್ಯರೂ ಆಗಿದ್ದರು. ತಾಯಿ ಸುಸಂಸ್ಕೃತೆ ಶ್ರೀಮತಿ ವೆಂಕಟಲಕ್ಷ್ಮಮ್ಮ. ಈ ದಂಪತಿಗಳಿಗೆ ನಾಲ್ಕು ಗಂಡು ಮತ್ತು ಎರಡು ಹೆಣ್ಣುಮಕ್ಕಳು ಸೇರಿ ಒಟ್ಟು ಆರು ಮಕ್ಕಳು. ಇವರಲ್ಲಿ ಎರಡನೇಯವರೇ ವಿಶ್ವೇಶ್ವರಯ್ಯನವರು. ಜ್ಞಾನದ ನಿಧಿಯಾಗಿ, ವಿದ್ವತ್ತಿನ ಗಣಿಯಾಗಿ ಸರಸ್ವತಿಯ ನೆಲೆವೀಡಾದ ಕುಟುಂಬವಾದರೂ ಬಡಬ್ರಾಹ್ಮಣರು ಎಂಬ ಮಾತಿಗೆ ಅನ್ವರ್ಥವಾಗಿ ಕಿತ್ತು ತಿನ್ನುವ ಬಡತನ ಇವರದ್ದಾಗಿತ್ತು. ಇಂತಹ ಕುಟುಂಬದಲ್ಲಿ ಹುಟ್ಟಿದ ವಿಶ್ವೇಶ್ವರಯ್ಯನವರು ಮುಂದೆ ವಿಶ್ವವೇ ಬೆರಗಾಗುವಂತೆ ಬೆಳೆದದ್ದು, ಭಾರತರತ್ನವಾಗಿ ಬೆಳಗಿದ್ದು, ಸಾಧನೆಯ ಹಿಮಾಲಯವೇ ತಾವಾದದ್ದು ಒಂದು ವಿಸ್ಮಯವೇ ಸರಿ !…

ಕಡುಕಷ್ಟದಲ್ಲೇ ಬದುಕನ್ನು ಕಟ್ಟಿಕೊಂಡ ವಿಶ್ವೇಶ್ವರಯ್ಯನವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವರು. ಆಗ ಅವರು ಕುಟುಂಬಸಹಿತ ಮುದ್ದೇನಹಳ್ಳಿಯನ್ನು ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಬಂದು ಸೋದರ ಮಾವ ಹೆಚ್. ರಾಮಯ್ಯನವರನ್ನು ಆಶ್ರಯಿಸಿದ್ದರು. ಸುಸಂಸ್ಕೃತರೂ, ಸುಶಿಕ್ಷಿತರೂ, ಶಿಸ್ತಿನ ಸಿಪಾಯಿಗಳೂ ಆಗಿದ್ದ ಮಾನವೀಯ ಮೌಲ್ಯದ ಸಾಕಾರ ಮೂರ್ತಿಯಂತಿದ್ದ ಸೋದರ ಮಾವ ರಾಮಯ್ಯನವರೇ ಆಗ ವಿಶ್ವೇಶ್ವರಯ್ಯನವರ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಕರಾಗಿದ್ದರು. ಹಾಗಾಗಿ ಅವರ ಪ್ರಭಾವವೇ ವಿಶ್ವೇಶ್ವರಯ್ಯನವರ ಮೇಲೆ ಹೆಚ್ಚುಂಟು. ಅಂತೆಯೇ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಮುದ್ದೇನಹಳ್ಳಿ ಸಮೀಪದ ಕಂದವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೂ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲೂ ಹಾಗೂ ಪ್ರೌಢಶಿಕ್ಷಣವನ್ನು ಬೆಂಗಳೂರಿನ ವೆಸ್ಲಿಯರ್ ಮಿಷನ್ ಪ್ರೌಢಶಾಲೆಯಲ್ಲೂ ಕಲಿತ ವಿಶ್ವೇಶ್ವರಯ್ಯನವರಿಗೆ ಶ್ರೀಕೃಷ್ಣಗಿರಿಯ ರಾಘವೇಂದ್ರರಾಯರು ಮತ್ತು ಬಿ. ವೆಂಕಟಪತಿ ಅಯ್ಯಂಗಾರರು ಹಾಗೂ ನಾಥಮುನಿನಾಯ್ಡು ಅವರುಗಳು ಮೆಚ್ಚಿನ ಗುರುಗಳಾಗಿದ್ದರು. ಕಷ್ಟವೆನ್ನದೆ ವಿದ್ಯೆಯನ್ನು ಇಷ್ಟಪಟ್ಟು ಕಲಿತ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿ ೧೮೮೧ರಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಎ. ಪದವಿ ಗಳಿಸಿದರು. ಆನಂತರ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಅವರಿಗಿದ್ದ ಬಡತನವನ್ನು ಸೂಕ್ಷ್ಮವಾಗಿ ಅರಿತಿದ್ದ ಅಂದಿನ ಸೆಂಟ್ರಲ್ ಕಾಲೇಜ್ ಪ್ರಿನ್ಸಿಪಾಲ್ ಚಾರ್ಲ್ಸ್‌ವಾಟರ್ ಅವರು ಆಗ ದಿವಾನರಾಗಿದ್ದ ರಂಗಾಚಾರ್ಲ್ ಅವರಿಗೆ ಹೇಳಿ ವಿಶ್ವೇಶ್ವರಯ್ಯನವರಿಗೆ ನೆರವು ದೊರಕಿಸಿಕೊಟ್ಟಿದ್ದರು. ಇದರಿಂದ ಅವರಿಗೆ ಸರ್ಕಾರದ ವಿದ್ಯಾರ್ಥಿ ವೇತನ ಸಿಕ್ಕಿ ಉನ್ನತ ಶಿಕ್ಷಣಕ್ಕೆ ಮುಂಬೈಗೆ ಹೋಗಿ ಪುಣೆಯ ಸೈನ್ಸ್ ಕಾಲೇಜು ಸೇರಿ ಎಲ್.ಸಿ.ಇ. ಮತ್ತು ಎಫ್.ಸಿ.ಇ.ಎಲ್. (ಇಂಜಿನಿಯರಿಂಗ್) ಪರೀಕ್ಷೆಗಳಲ್ಲಿ ಇಡೀ ಮುಂಬೈ ಪ್ರಾಂತ್ಯಕ್ಕೆ ಮೊದಲ ಸ್ಥಾನಗಳಿಸಿ ೧೮೮೩ರಲ್ಲಿ ಇಂಜಿನಿಯರ್ ಪದವಿಪಡೆದಿದ್ದರು. ಆಗ ಜೀಮಬರ್‌ಕ್ಲೆ ಎಂಬ ಬಹುಮಾನ ಇವರಿಗೆ ದೊರೆತಿತ್ತು.

ವಿದ್ಯಾರ್ಥಿ ದಿಶೆಯಲ್ಲೇ ತಮ್ಮ ಅಗಾಧ ಪ್ರತಿಭೆಯಿಂದ ಕೀರ್ತಿ ಶಿಖರ ಏರಿದ್ದ ೨೩ರ ತರುಣ ಇಂಜಿನಿಯರ್ ಪದವೀಧರ ವಿಶ್ವೇಶ್ವರಯ್ಯನವರನ್ನು ಕರೆದು ಮುಂಬೈ ಸರ್ಕಾರ ಕೆಲಸಕೊಟ್ಟಿತ್ತು. ಮುಂಬೈ ಪ್ರಾಂತ್ಯದ ನಾಸಿಕ್ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯನವರು ಮೊದಲಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರದ ದಿನಗಳಲ್ಲಿ ಅವರು ಹಂತ ಹಂತವಾಗಿ ವಿವಿಧ ಹುದ್ದೆಗಳನ್ನೇರಿ, ಹಲವು ಸ್ಥಾನಗಳನ್ನು ಅಲಂಕಿರಿಸಿ ಜಗತ್ತೇ ಬೆರಗುಗೊಳ್ಳುವಂತೆ ಸಾಧನೆಯ ಹಿಮಾಲಯವನ್ನೇ ಸೃಷ್ಟಿಸಿದ್ದು ಈಗ ನಮ್ಮ ಕಣ್ಮುಂದಿನ ಇತಿಹಾಸವಾಗಿದೆ.

ದಿವಾನ್ ವಿ.ಪಿ. ಮಾಧವರಾಯರ ಸಲಹೆಯ ಮೇರೆಗೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರೇ ಖುದ್ದು ಮುಂಬೈನಲ್ಲಿದ್ದ ವಿಶ್ವೇಶ್ವರಯ್ಯನವರನ್ನು ಬರಮಾಡಿಕೊಂಡು ೧೯೦೯ರ ನವೆಂಬರ್ ೧೫ರಂದು ಅವರನ್ನು ಮೈಸೂರಿನ ಮುಖ್ಯ ಇಂಜಿನಿಯರ್ ಆಗಿ ನೇಮಿಸಿದ್ದರು. ವಿಶ್ವೇಶ್ವರಯ್ಯನವರು ಆ ಹುದ್ದೆಗೆ ಬರುವಾಗ ಆ ಹುದ್ದೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕ್ಯಾಪ್ಟನ್ ಡಾಸ್ ಎಂಬ ಯೂರೋಪಿಯನ್ ಅಕಾಲ ಮರಣಕ್ಕೆ ತುತ್ತಾಗಿ ಆ ಹುದ್ದೆ ಖಾಲಿ ಇತ್ತು. ಇದನ್ನು ತುಂಬಿದ ವಿಶ್ವೇಶ್ವರಯ್ಯನವರು ತಮ್ಮ ಬುದ್ದಿಶಕ್ತಿಯ ಕೌಶಲ್ಯದಿಂದ ಅಭಿವೃದ್ಧಿಯ ಪಥವನ್ನು ನಾಡಿಗೆ ಎಳೆದುತಂದಿದ್ದರು. ಇದರಿಂದ ಕನ್ನಡ ನಾಡಿಗೆ ಆದಂತಹ ಮಹದದ್ಭುತ ಅಭಿವೃದ್ಧಿ ಕಾರ್ಯಗಳು ಅನನ್ಯವಾದುವು. ವಿಶ್ವೇಶ್ವರಯ್ಯನವರ ಮೇಧಾವಿತನಕ್ಕೆ ಮಾರು ಹೋಗಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ೧೯೧೨ರ ನವೆಂಬರ್‌ನಲ್ಲಿ ಟಿ. ಆನಂದರಾಯರು ದಿವಾನ್ ಪದವಿಯಿಂದ ನಿವೃತ್ತರಾದ ನಂತರ ಇವರನ್ನೇ ದಿವಾನರಾಗಿ ನೇಮಕ ಮಾಡಿದ್ದರು.

೧೯೧೨ ನವೆಂಬರ್ ೧೦ರಂದು ವಿಶ್ವೇಶ್ವರಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರ ಅಭಿಲಾಷೆಯಂತೆ ದಿವಾನ್ ಪದವಿಯನ್ನು ಅಲಂಕರಿಸಿದ್ದರು. ಆಗಲೂ ಅಷ್ಟೆ ವಿಶ್ವೇಶ್ವರಯ್ಯನವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಅವರಿಗೂ ಮತ್ತು ಮಹಾರಾಜರಿಗೂ ಅಭಿವೃದ್ಧಿಯ ಹರಿಕಾರರೆಂಬ ಹೆಸರನ್ನು ತಂದು ಕೊಟ್ಟಿತ್ತು. ದಿವಾನರಾಗಿ ಅವರು ಕಾರ್ಯನಿರ್ವಹಿಸಿದ್ದು ಕೇವಲ ಏಳು ವರ್ಷಗಳು ಮಾತ್ರವೇ. ಆದರೂ ಏಳು ಶತಮಾನಗಳಲ್ಲಿ ಮಾಡುವಷ್ಟು ಕೆಲಸಗಳನ್ನು ಮಾಡಿ ೧೯೧೯ರ ಡಿಸೆಂಬರ್ ೯ರಂದು ದಿವಾನ್ ಪದವಿಯಿಂದ ನಿವೃತ್ತಿ ಹೊಂದಿದ್ದರು. ಅವರು ನಿವೃತ್ತರಾದರೂ ಕೂಡ ಅವರ ಬುದ್ಧಿಶಕ್ತಿಯನ್ನು ಬಳಸಿಕೊಳ್ಳಲು ಮುಂಬಯಿ ಸರ್ಕಾರ ತಾಂತ್ರಿಕ ಮತ್ತು ಔದ್ಯಮಿಕ ಶಿಕ್ಷಣ ಸಮಿತಿಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿಕೊಂಡಿತ್ತು.

ವಿಶ್ವೇಶ್ವರಯ್ಯನವರಿಗೆ ಎಷ್ಟೊಂದು ಡಿಮ್ಯಾಂಡ್ ಇತ್ತೆಂದರೆ ಅವರು ಒಪ್ಪಿಕೊಂಡಿದ್ದ ಕೆಲಸ ಪೂರ್ಣಗೊಳ್ಳುವುದನ್ನೇ ಕಾದು ಭಾರತ ಸರ್ಕಾರ ಅವರ ಸೇವೆಯನ್ನು ಬಯಸಿ ನ್ಯೂ ಕ್ಯಾಪಿಟಲ್ ಎನ್‌ಕ್ವೈರಿ ಕಮಿಟಿ (೧೯೨೫), ಬ್ಯಾಕ್ ಬೇ ಎನ್‌ಕ್ವೈರಿ ಕಮಿಟಿ (೧೯೨೩), ಇರಿಗೇಷನ್ ಕಮಿಟಿ (೧೯೩೨) ಗಳ ಅಧ್ಯಕ್ಷರಾಗಿ ವಿಶ್ವೇಶ್ವರಯ್ಯನವರನ್ನು ನೇಮಿಸಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ನಂತರ ಪಟ್ಟಕ್ಕೆ ಬಂದ ಶ್ರೀ ಜಯಚಾಮರಾಜ ಒಡೆಯರ್ ಸಹ ಇವರ ಸೇವೆಯನ್ನು ಬಳಸಿಕೊಳ್ಳಲು ಬಯಸಿದರಾದರೂ ಇದಕ್ಕೆ ವಿಶ್ವೇಶ್ವರಯ್ಯನವರು ಒಪ್ಪದೆ ಮಾರ್ಗದರ್ಶಕರಾಗಷ್ಟೇ ಇರಲು ಸಮ್ಮತಿಸಿದ್ದರು. ಆವಾಗಲೇ ಬೆಂಗಳೂರಿನಲ್ಲಿ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ವಿಮಾನ ಕಾರ್ಖಾನೆ ಆರಂಭವಾದದ್ದು. ಇದಕ್ಕಾಗಿ ತಮಗೆ ಸಂದ ಗೌರವಧನವನ್ನು ಒಂದು ಪೈಸೆಯನ್ನೂ ಬಳಸಿಕೊಳ್ಳದೆ, ಮಹಾರಾಜರ ಹೆಸರಿನಲ್ಲೇ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜ್ ಅನ್ನು ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ್ದರು. ಇದು ಅವರಿಗಿದ್ದ ಅಪಾರವಾದ ಶಿಕ್ಷಣಪರ ಕಾಳಜಿಗೊಂದು ಸಣ್ಣ ಸಾಕ್ಷಿಯಷ್ಟೆ. ಸ್ವಾತಂತ್ರ್ಯಾನಂತರವೂ ಭಾರತ ಸರ್ಕಾರವು ಇವರ ಸಲಹೆ, ಸಹಕಾರ, ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಲೇ ಇತ್ತು.

ಇಂಥ ಮಹಾಮೇಧಾವಿ ವಿಶ್ವೇಶ್ವರಯ್ಯನವರಿಗೆ ೧೯೧೫ರಲ್ಲಿ ಬ್ರಿಟಿಷ್ ಸರ್ಕಾರ “ಸರ್” ಎಂಬ ಗೌರವವನ್ನೂ ೧೯೫೫ರಲ್ಲಿ ಭಾರತ ಸರ್ಕಾರವು ತನ್ನ ಅತ್ಯುನ್ನತ ಪ್ರಶಸ್ತಿಯಾದ “ಭಾರತ ರತ್ನ” ವನ್ನೂ ನೀಡಿ ಗೌರವಿಸಿವೆ. ಇವರಿಗೆ ಬಂದಿರುವ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳಿಗಂತೂ ಲೆಕ್ಕವಿಲ್ಲ. ಹಾಗೆಯೇ ಇವರಿಗೆ ಸಂದಿರುವ ಪ್ರಶಸ್ತಿಗಳು ಅನಂತಾನಂತ ಇವರಿಗೆ ನೂರು ತುಂಬಿದ ಸಂದರ್ಭದಲ್ಲಿ ೧೯೬೦ ರಲ್ಲಿ ಬೆಂಗಳೂರಿನಲ್ಲಿ ನಡೆದ ಶತಮಾನೋತ್ಸವದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರೇ ಖುದ್ದು ಹಾಜರಿದ್ದು ವಿಶ್ವೇಶ್ವರಯ್ಯನವರನ್ನು ಅಭಿನಂದಿಸಿದ್ದರು. ಭಾರತಸರ್ಕಾರ ಇವರ ಗೌರವಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ದೇಶವೇ ಅಭಿಮಾನದಿಂದ ಇವರನ್ನು ತುಂಬಿಕೊಂಡಿದೆ.

ಶತಾಯುಷಿಯಾಗಿದ್ದು ತಾವು ಬದುಕಿರುವತನಕವೂ ಭಾರತದ ಅಭಿವೃದ್ದಿಗಾಗಿ ತುಡಿಯುತ್ತಿದ್ದ, ಮಿಡಿಯುತ್ತಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ತಮ್ಮ ೧೦೨ನೇ ವರ್ಷದಲ್ಲಿ ೧೯೬೨ರಲ್ಲಿ ಏಪ್ರಿಲ್ ೧೪ರ ಬೆಳಿಗ್ಗೆ ೬-೧೫ಕ್ಕೆ ವಿಧಿವಶರಾದರು. ಭಾರತ ರತ್ನವಾಗಿ ವಿಶ್ವದ ಉದ್ದಗಲಕ್ಕೂ ಮಿಂಚಿ ಇಂದು ಮರೆಯಾಗಿದ್ದರೂ ಅವರೆಂದೂ ಮರೆಯಾಗದವರಾಗಿದ್ದಾರೆ. ವಿಶ್ವೇಶ್ವರಯ್ಯನವರನ್ನು ಸದಾ ನೆನಪಿಸಿಕೊಳ್ಳುವ ಹಬ್ಬವಾಗಿ ಅವರ ಜನ್ಮದಿನ ಸೆಪ್ಪಂಬರ್ ೧೫ನ್ನು ದೇಶಾದ್ಯಂತ ಇಂಜಿನಿಯರಿಂಗ್ ದಿನಾಚರಣೆಯನ್ನಾಗಿ ಪ್ರತೀವರ್ಷ ಆಚರಿಸಲಾಗುತ್ತಿದೆ. ಇದು ದೇಶ ಅವರಿಗೆ ಸಲ್ಲಿಸುತ್ತಿರುವ ಒಂದು ಮಹಾಗೌರವವೇ ಸರಿ.

ವಿಷಾದನೀಯ ವಿಷಯವೆಂದರೆ ವಿಶ್ವೇಶ್ವರಯ್ಯನವರ ಸಾಂಸಾರಿಕ ಜೀವನ ಮಾತ್ರ ಸುಖಕರವಾಗಿರಲಿಲ್ಲ ಸುಗುಣವಂತೆ ಸಾವಿತ್ರಮ್ಮನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅವರ ಜೋಡಿ ಹೆಚ್ಚು ದಿನ ಬಾಳ್ವೆ ಮಾಡಲು ವಿಧಿ ಬಿಡದೆ ಸಾವಿತ್ರಮ್ಮನನ್ನು ಕರೆದೊಯ್ದಿತ್ತು. ಆಗ ತಾಯಿ ವೆಂಕಟಲಕ್ಷ್ಮಮ್ಮ ಮತ್ತು ಸೋದರಮಾವ ರಾಮಯ್ಯನವರು ವಿಶ್ವೇಶ್ವರಯ್ಯನವರಿಗೆ ಮತ್ತೊಂದು ಮದುವೆ ಮಾಡಿದರು ಸತಿ-ಪತಿಗಳೊಂದಾಗಿ ಸಂತಸದಿಂದ ಸಂಸಾರ ಮಾಡುತ್ತಿದ್ದ ಸಮಯದಲ್ಲೇ ವಿಧಿಯ ಕ್ರೂರ ಕಣ್ಣು ಇವರ ಮೇಲೆ ಬಿದ್ದು ಹೆರಿಗೆ ಸಮಯದಲ್ಲಿ ಅವರ ಎರಡನೆಯ ಹೆಂಡತಿಯೂ ಸಾವಿಗೀಡಾದರು. ಕೆಲವು ದಿನಗಳ ನಂತರ ತಾಯಿಯ ಒತ್ತಾಯಕ್ಕೆ ಮಣಿದು ವಿಶ್ವೇಶ್ವರಯ್ಯನವರು ಮೂರನೇ ಮದುವೆಯನ್ನೂ ಆದರು, ಆದರೆ ಇಲ್ಲೂ ಸಹ ಅವರು ಸುಖ ಕಾಣಲಾಗಲಿಲ್ಲ ದಾಂಪತ್ಯ ಜೀವನವೆಂಬುದು ಅವರಿಗೆ ದುರಂತಮಯವಾಗಿತ್ತು. ಈ ನೋವಿನಲ್ಲೇ ಅವರು ಕೊನೆಯವರೆಗೂ ಜಿತೇಂದ್ರಿಯರಾಗಿಯೇ ಉಳಿದರು.


Share