ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥ(ಭಾಷ್ಯಾ),6/8/21, ಪುಟ – 1

543
Share

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು ಇಂದಿನಿಂದ MP(ಮೈಸೂರು ಪತ್ರಿಕೆ)-ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು, ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ. ಗಣೇಶನ ಸಹಸ್ರನಾಮಾವಳಿ ಅರ್ಥ ಓದುವುದರ ಮೂಲಕ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ. (ಸಂಪಾದಕ)

ಶ್ರೀ ಗಣೇಶ ಸಹಸ್ರನಾಮ ಭಾಷ್ಯಾರ್ಥ

ಕನ್ನಡ ಭಾಷಾನುವಾದ : ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರು ,
ಅವಧೂತ ದತ್ತ ಪೀಠ,
ಮೈಸೂರು.

ಅವಧೂತ ದತ್ತಪೀಠಾಧಿಪತಿ ಪರಮಪೂಜ್ಯ ಶ್ರೀ ಗಣಪತಿಸಚ್ಚಿದಾನಂದ ಸ್ವಾಮೀಜಿಯವರ ದಿವ್ಯಾನುಗ್ರಹ ಸಂದೇಶ

ಜ್ಞಾನಾರ್ಥವಾಚಕೋ ‘ ಗ ‘ ಈ ‘ ಣ’ಶ್ಚ ನಿರ್ವಾಣ ವಾಚಕಃ ।
ತಯೋರೀಶಂ ಪರಂಬ್ರಹ್ಮ ಗಣೇಶಂ ಪ್ರಣಮಾಮ್ಯಹಮ್ ||

‘ ಗ ‘ ಕಾರವು ಜ್ಞಾನದ ಪ್ರತೀಕ . ‘ ಣ ‘ ಕಾರವು ನಿರ್ವಾಣವನ್ನು ಸೂಚಿಸುತ್ತದೆ . ಜ್ಞಾನ – ನಿರ್ವಾಣಗಳಿಗೆ , ಈಶನಾದ , ಪರಬ್ರಹ್ಮನಾದ ಗಣೇಶನಿಗೆ ನಮಸ್ಕರಿಸುತ್ತೇನೆ .
ಗಣಪತಿಯು ವರೇಣ್ಯನಿಗೆ ತಾನೇ ಉಪದೇಶಿಸಿದ ಶ್ರೀಗಣೇಶಗೀತೆಯಲ್ಲಿ ಗಣೇಶನ ಅದ್ಭುತಶಕ್ತಿ , ಮಹಿಮೆಯನ್ನು ವಿವರವಾಗಿ ತಿಳಿಸಲಾಗಿದೆ . ಗಣೇಶನೇ ವಿಶ್ವವನ್ನು ಸೃಜಿಸಿದನು . ನಂತರ ಆ ವಿಶ್ವದಲ್ಲಿ ತಾನೇ ಪ್ರವೇಶಿಸಿದನು . ಆದಕಾರಣ ಜಗತ್ತೆಲ್ಲವೂ ಗಣೇಶಮಯವಾಗಿದೆ . ಗಣೇಶನು ಆನಂದಸ್ವರೂಪನಾಗಿರುವ ಪರಬ್ರಹ್ಮನೇ ಆಗಿದ್ದಾನೆ . ಚತುರ್ವಿಧಪುರುಷಾರ್ಥಗಳ ಸಾಧನಗೆ ಗಣಪತಿಯನ್ನು ಆಧರಿಸಲೇಬೇಕು . ಸರ್ವಕಾರ್ಯಾರಂಭಗಳಲ್ಲಿ ಗಣಪತಿಗೆ ಅಗ್ರಪೂಜೆ . ಗಣೇಶನ ದೇಹದಲ್ಲಿ ಸಮಸ್ತ ದೇವತೆಗಳೂ ಇದ್ದಾರೆ . ನಿರಾಕಾರ ಸ್ವರೂಪನಾದರೂ ಭಕ್ತರ ಉಪಾಸನೆಗೆ ಅನುಕೂಲವಾಗುವಂತೆ ಸಗುಣಬ್ರಹ್ಮರೂಪವನ್ನು ತಾಳುತ್ತಾನೆ . ಇಂತಹ ಶಾಶ್ವತನಾದ ಜಗನ್ನಿಯಾಮಕನಾದ ಪರಬ್ರಹ್ಮನಾದ ಗಣೇಶನ ವಿಚಾರವನ್ನು ತಿಳಿದಷ್ಟೂ , ಇನ್ನೂ ತಿಳಿಯುವುದು ಹಾಗೆಯೇ ಉಳಿಯುತ್ತದೆ . ಗಣೇಶನನ್ನು ಕವಿಗಳು , ಸಂಗೀತವಿದ್ವಾಂಸರು , ಗೃಹನಿರ್ಮಾಣ ಮಾಡುವವರು , ವಿವಾಹ ಮಾಡುವವರು , ಸಮಸ್ತ ಜನಗಳೂ ಆದಿಯಲ್ಲಿ ಪ್ರಾರ್ಥನೆ ಮಾಡಿ ನಂತರ ತಮ್ಮ ಕಾರ್ಯಾರಂಭವನ್ನು ಮಾಡುತ್ತಾರೆ . ಬ್ರಹ್ಮ , ವಿಷ್ಣು , ಶಿವ , ಪಾರ್ವತಿ , ರಾಮ , ಕೃಷ್ಣ , ಆದಿಶೇಷ , ಮನ್ಮಥ ಆದಿಯಾಗಿ ಸಮಸ್ತ ದೇವತೆಗಳೂ ತಮ್ಮ ಕಾರ್ಯದಲ್ಲಿ ಜಯಗಳಿಸಲು ಗಣಪತಿಯನ್ನು ಪ್ರಾರ್ಥಿಸಿಯೇ ಮುಂದುವರೆದಿದ್ದಾರೆ . ಗಣೇಶ ಉಪನಿಷತ್ತು , ಗಣೇಶಗೀತೆ , ಗಣೇಶಪುರಾಣ ಇತ್ಯಾದಿಗಳು ನಮಗೆ ಗಣೇಶನ ಅಂತರಾರ್ಥಗಳನ್ನು ತಿಳಿಸುತ್ತವೆ .
ಸಂಸ್ಕೃತ ಸಾಹಿತ್ಯದಲ್ಲಿ ಸೂತ್ರಗಳಂತೆ ಸಹಸ್ರನಾಮಗಳೂ ಅಸಾಧಾರಣವಾಗಿದೆ . ಸೂತ್ರಾರ್ಥಗಳನ್ನು ತಿಳಿಯುವುದೂ ಕಷ್ಟ . ಅದೇ ರೀತಿ ಸಹಸ್ರನಾಮಗಳಲ್ಲಿ ಅಂತರಾರ್ಥಗಳನ್ನು ತಿಳಿಯುವುದು ಕಷ್ಟ .
ಶ್ರೀಲಲಿತಾ ಸಹಸ್ರನಾಮ , ಶ್ರೀವಿಷ್ಣು ಸಹಸ್ರನಾಮಗಳು , ಭಕ್ತರ ಪ್ರಚಲಿತವಾಗಿವೆ . ಗಣೇಶ ಸಹಸ್ರನಾಮವನ್ನು ಕೆಲವರು ಮಾತ್ರ ಬಲ್ಲರು . ಈ ಗಣೇಶ ಸಹಸ್ರನಾಮವು ಸಹಾ , ಮಾನವರಿಗೆ ಧರ್ಮ , ಅರ್ಥ , ಕಾಮ , ಮೋಕ್ಷಗಳನ್ನು ಪಡೆಯಲು ಉತ್ತಮ ಸಾಧನೋಪಕರಣವಾಗಿದೆ . ಅದರಲ್ಲಿರುವ ರಹಸ್ಯ ತತ್ವಗಳನ್ನು ವಿವರಿಸುತ್ತಾ ಭಾಸ್ಕರರಾಯ ದೀಕ್ಷಿತರೆಂಬುವರು ಅದ್ಭುತವಾದ ಭಾಷ್ಯವನ್ನು ಬರೆದಿದ್ದಾರೆ . ಆದರೆ ಅದು ಸಂಸ್ಕೃತಭಾಷೆಯಲ್ಲಿದೆ . ಇದು ಸಾಮಾನ್ಯ ಜನರಿಗೆ ಎಟುಕುವುದಿಲ್ಲ . ಪಂಡಿತ , ಪಾಮರರೆಲ್ಲರಿಗೂ ಸಮಾನಾವಕಾಶವನ್ನು ಕಲ್ಪಿಸಬೇಕು ಎಂಬ ಸದಭಿಪ್ರಾಯದಿಂದ ಬಾಲಸ್ವಾಮಿ ಈ ಗಣೇಶ ಸಹಸ್ರನಾಮದ ಭಾಸ್ಕರರಾಯ ದೀಕ್ಷಿತರ ಸಂಸ್ಕೃತಭಾಷ್ಯವನ್ನು , ವಿಷಯಕ್ಕೆ ಚಾಚೂ ಚ್ಯುತಿಯಿಲ್ಲದಂತೆ ಶುದ್ಧ ಕನ್ನಡಭಾಷೆಯಲ್ಲಿ ಅನುವಾದಮಾಡಿ , ಅಲ್ಲಲ್ಲಿ ಸೂಕ್ತ ವಿವರಗಳನ್ನು ನೀಡಿ , ಬಹಳ ಸುಲಭ ಶೈಲಿಯಲ್ಲಿ ರಚಿಸಿದ್ದಾರೆ . ಇವರ ಈ ಶ್ರದ್ಧಾ ಭಕ್ತಿಪೂರ್ವಕ ಪ್ರಯತ್ನವನ್ನು ನೋಡಿ ನಮಗೆ ಬಹಳ ಸಂತೋಷವಾಗಿದೆ . ಈ ಗ್ರಂಥವು ಕನ್ನಡ ಸಾರಸ್ವತಲೋಕಕ್ಕೆ ಒಂದು ಅಪೂರ್ವ ಕೊಡುಗೆಯಾಗಿದೆ . ಇವರ ಶ್ರಮ ಸಾರ್ಥಕವಾಗಲಿ , ಕನ್ನಡಾಭಿಮಾನಿಗಳೆಲ್ಲರೂ ಈ ಪುಸ್ತಕವನ್ನು ಅಧ್ಯಯನಮಾಡಿ , ಅರ್ಥಮಾಡಿಕೊಂಡು , ವಿಚಾರಮಂಥನಮಾಡಿ , ಆತ್ಮಾವಲೋಕನ ಮಾಡಿಕೊಳ್ಳುವಂತಾಗಲಿ , ಮಾನವರ ಆಧ್ಯಾತ್ಮಪ್ರಗತಿಗೆ ಈ ಹೊತ್ತಿಗೆಯು ದಾರಿದೀವಿಗೆಯಾಗಲಿ , ಓದಿದವರು , ಕೇಳಿದವರು ಎಲ್ಲರೂ ಶ್ರೀಗಣೇಶನಕೃಪೆಗೆ ಪಾತ್ರರಾಗಲಿ , ಸರ್ವರಿಗೂ ಗಣೇಶನು ಸಮಸ್ತ ಸನ್ಮಂಗಳಗಳನ್ನು ಉಂಟುಮಾಡಲಿ ಎಂದು ಹಾರೈಸುತ್ತೇವೆ .
– ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಅವಧೂತ ದತ್ತಪೀಠಾಧಿಪತಿ.

ಮೊದಲ ಮಾತು

ಶ್ರೀ ಗಣಪತಿ ಸಚ್ಚಿದಾನಂದ ಸದ್ಗುರುಭ್ಯೋ ನಮಃ

ನಾವು ನೋಡಿದ್ದನ್ನು , ಓದಿದ್ದನ್ನು ಕೇಳಿದ್ದನ್ನು , ಅನುಭವಿಸಿ ಆನಂದಿಸಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುವುದು ಉತ್ತಮ ಲಕ್ಷಣವೆಂದು ಶಾಸ್ತ್ರಗಳು ಸಾರುತ್ತಿವೆ . ಅದೇ ಶಾಸ್ತ್ರ ಪಂಕ್ತಿಯನ್ನು ಮನೋಧಾರಣೆ ಮಾಡಿ ಅಮೋಘವಾದ ಗಣೇಶ ಸಹಸ್ರನಾಮ ಸ್ತೋತ್ರದ ‘ ಖದ್ಯೋತ ‘ ಭಾಷ್ಯದ ಈ ಕನ್ನಡಾನುವಾದವನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ .
ಇದನ್ನು ಪಠಿಸಿದವರೆಲ್ಲರಿಗೂ ಗುರ್ವನುಗ್ರಹದಿಂದ ಆಧ್ಯಾತ್ಮ , ವ್ಯವಹಾರಗಳ ವಿಘ್ನಗಳೆಲ್ಲವೂ ದೂರವಾಗಿ ಅವರ ಜೀವನದಲ್ಲಿ ಬೆಳಕು ತುಂಬಿ ತುಳುಕಲಿ ಎಂಬುದು ನಮ್ಮ ಆಶಯವು .
ನಿರ್ಗುಣನಾದ ಪರಮಾತ್ಮ , ಜೀವಿಗಳನ್ನು ಅನುಗ್ರಹಿಸಲೆಂದೇ ಸಗುಣರೂಪವನ್ನು ಧರಿಸಿದನೆಂದೂ ಆ ರೂಪಗಳನ್ನೇ ಈಶ್ವರ , ಅವತಾರ – ಇತ್ಯಾದಿ ನಾಮಗಳಿಂದ ಸಂಬೋಧಿಸುತ್ತಾರೆಂದೂ ಉಪನಿಷತ್ತುಗಳು ಬೋಧಿಸುತ್ತವೆ . ‘ ಲೋಕೋ ಭಿನ್ನರುಚಿ ‘ ಎಂಬಂತೆ ಒಬ್ಬೊಬ್ಬ ಸಾಧಕನದು ಒಂದೊಂದು ತರಹದ ರುಚಿ . ತಮ್ಮ ತಮ್ಮ ರುಚಿಗೆ ತಕ್ಕಂತೆ ಸಾಧಕರು , ಉಪಾಸಕರು ಉಪಾಸನೆ ಮಾಡುತ್ತಿರುತ್ತಾರೆ . ಜನ್ಮ ಸಂಸ್ಕಾರಾನುಸಾರವಾಗಿ ಭಿನ್ನ ಭಿನ್ನ ಜೀವಿಗಳ ಮನಸ್ಸು ಭಿನ್ನ ಭಿನ್ನ ರೂಪಗಳಲ್ಲಿ ಲಗ್ನವಾಗುತ್ತಿರುತ್ತದೆ .
ಗಣೇಶನ ರೂಪವು ಒಂದು ವಿಶಿಷ್ಟವಾದ ರೂಪ , ಅದು ಅಕ್ಷರ ಸ್ವರೂಪವಾದರೂಪ ಎಂಬ ಮಾತು ನಮ್ಮದಲ್ಲ , ಗಣೇಶಾಥರ್ವಶೀರ್ಷದ , ಬಿಂದುರುತ್ತರರೂಪಂ , ನಾದಸ್ಪಂಧಾನಂತೆ . ಗಣೇಶನ ರೂಪವು ಎಲ್ಲಿಲ್ಲಿ ನೋಡಬೇಕೆಂದು ಸಂಕಲ್ಪಿಸುತ್ತೇವೆಯೋ ಅಲ್ಲೆಲ್ಲಾ ಕಾಣಿಸುವಂತಹ ರೂಪ . ಗೋಡೆಯಲ್ಲಿಯೂ ನೋಡಬಹುದೆಂದು ಒಬ್ಬ ಹಿರಿಯ ಉಪಾಸಕರು ಹೇಳುತ್ತಾರೆ . ಗಣೇಶನ ರೂಪವನ್ನು ನೋಡಬೇಕೆಂಬ ಮನಸ್ಸಿದ್ದಲ್ಲಿ ಸುಣ್ಣ ಗುರುವಿನ ಅನುಗ್ರಹದಿಂದ ನಾವು ಕೂಡಾ ಬಾಲ್ಯದಿಂದಲೇ ಎಲ್ಲೆಲ್ಲೂ ಗಣೇಶ : ರೂಪವನ್ನು ನೋಡುವುದೆಂಬ ಉಪಾಸನೆಯನ್ನು ಮಾಡುತ್ತಾ ಬರುತ್ತಿದ್ದೇವೆ , ಕೃಪೆಯಿಂದ ಬಿಳಿಯಗೋಡೆಯಲ್ಲಿಯೂ ಗಣಪತಿಯು ದರ್ಶನ ನೀಡಿದ್ದಾನೆ . ಬಹುಶಃ ಇದನ್ನೇ ನಿರ್ಗುಣದಲ್ಲಿ ಸಗುಣೋಪಾಸನೆಯೆಂದೂ , ಸಗುಣದಿಂದ ನಿರ್ಗುಣಪ್ರಾಪ್ತಿಯೆಂದೂ ತಿಳಿಯಬಹುದೇನೋ !
ನಿರ್ಗುಣ ಗಣಪತಿಯ ಉಪಾಸನೆಯ ಫಲವೇನೋ ಎಂಬಂತೆ ಒಂದಾನೊಂದು ಶುಭ ಮುಹೂರ್ತದಲ್ಲಿ ಶ್ರೀರಾಮ್ ಎಂಬ ಆಶ್ರಮವಾಸಿ ನಮಗೊಂದು ಪುಸ್ತಕವನ್ನು ತಂದರ್ಪಿಸಿದ . ಆ ಪುಸ್ತಕದ ರಟ್ಟಿನ ಮೇಲಿದ್ದ ಗಣೇಶನ ಚಿತ್ರವು ನಮ್ಮ ಮನ ಸೆಳೆಯಿತು . ಐದು ನಿಮಿಷಗಳ ಕಾಲ ಅದನ್ನೇ ನೋಡುತ್ತಾ ಇದ್ದುಬಿಟ್ಟೆವು . ಅದಾದನಂತರ ಆ ಪುಸ್ತಕದ ಹೆಸರನ್ನು ನೋಡಿ ಆನಂದವೂ , ಆಶ್ಚರ್ಯವೂ , ಸಂಕಲ್ಪವೂ , ಏಕಕಾಲದಲ್ಲಿ ಉಂಟಾದವು . ಆನಂದಕ್ಕೆ ಅದು ಗಣೇಶ ಸಹಸ್ರನಾಮವಾಗಿತ್ತು . ಭಾಸ್ಕರರಾಯರ ‘ ಖದ್ಯೋತ ‘ ಭಾಷೆ ಸಹಿತ ಎಂಬ ಅಕ್ಷರಗಳು ಆಶ್ಚರ್ಯಕ್ಕೆ ಕಾರಣವಾದವು . ಈ ಭಾಷ್ಯವನ್ನು “ ಕನ್ನಡಾನುವಾದ ಮಾಡಬೇಕೆಂಬ ಸಂಕಲ್ಬವೂ ಕೂಡಾ ಅದೇ ಸಮಯದಲ್ಲಿ ಕಾರಣ ನಮಗೇ ತಿಳಿಯದಂತೆ ನಮ್ಮಲ್ಲಿ ಮೂಡಿತು . ಈ ಸಂಕಲ್ಪಕ್ಕೆ ಗುರುಪ್ರೇರಣೆಯೂ ಜೊತೆಗೂಡಿತು .
ಪುಸ್ತಕವನ್ನು ತೆಗೆದು ನೋಡಿದೆವು. ಅದು ರಾಜಮಂಡ್ರಿ ವಾಸಿಗಳಾದ ಶರ್ಮರವರು ರಚಿಸಿದ ಸಹಸ್ರನಾಮದ ತೆಲುಗು ಅನುವಾದ ಗ್ರಂಥ . ಆದರೆ ಅದನ್ನು ಹಾಗೆಯೇ ಕನ್ನಡಕ್ಕನುವಾದಿಸುವ ಹಾಗಿರಲಿಲ್ಲ . ಕಾರಣ ಆ ಪುಸ್ತಕದಲ್ಲಿ ಪೂರ್ವೋತ್ತರ ಪೀಠಿಕೆಗಳ ಮೂಲವಾಗಲೀ , ಅನುವಾದವಾಗಲೀ ಇರಲಿಲ್ಲ . ಚೆನ್ನೈ ನಗರದ ಭಕ್ತರಾದ ಜಯರಾಮನ್‌ರವರಿಗೆ ಖದ್ಯೋತ ಭಾಷ್ಯ ಮೂಲವನ್ನು ಸಂಪಾದಿಸಲು ತಿಳಿಸಿದೆವು . ಅವರು ಅತಿಪ್ರಯಾಸದೊಂದಿಗೆ ಕಾಶಿ ವಿಶ್ವವಿದ್ಯಾಲಯದಿಂದ ಮೂಲವನ್ನು ಸಂಪಾದಿಸಿ ತಂದುಕೊಟ್ಟರು . “ ಒಳ್ಳೆಯ ಕೆಲಸಕ್ಕೆ ಒಂದುನೂರು ವಿಘ್ನಗಳು ” ಎಂಬಂತೆ ಆ ಮೂಲಗ್ರಂಥದಲ್ಲಿ ಮುದ್ರಿತಾಕ್ಷರಗಳ ಸಂಖ್ಯೆಗಿಂತ ಲುಪ್ತಾಕ್ಷರಗಳ ಸಂಖ್ಯೆಯೇ ಹೆಚ್ಚಾಗಿತ್ತು . ಆದರೇನಂತೆ ಕೈಗೆ ಮೂಲ ಸಿಕ್ಕಿತಲ್ಲ ಎಂಬ ಸಂತೋಷದಿಂದಾದ ಆವೇಶದಿಂದ ಒಂದು ಶುಭ ಮುಹೂರ್ತದಲ್ಲಿ ( ಮೂಲ ಸಿಕ್ಕಿದ ದಿನವೇ , ಬುಧವಾರ , ಹಸ್ತ ನಕ್ಷತ್ರ , ಪಂಚಮಿ ೦೬-೦೮ ೦೮ ) ಕನ್ನಡಾನುವಾದವನ್ನು ಪ್ರಾರಂಭಮಾಡಿಯೇಬಿಟ್ಟೆವು . ಸುಮ್ಮನಿರಲಾರದೆ ಗಣಪತಿಹಬ್ಬದೊಳಗೆ ಕನ್ನಡಾನುವಾದವನ್ನು ಸಂಪೂರ್ಣ ಗೊಳಿಸಬೇಕೆಂದು ಕೂಡಾ ಸಂಕಲ್ಪಿಸಿದೆವು . ಆದರೆ ಗಂಭೀರರಾಯರ ಪುತ್ರರು ರಚಿಸಿದ ಗಂಭೀರವಾದ ಭಾಷ್ಯದ ಅನುವಾದವು ಒಂದು ತಿಂಗಳಿನಲ್ಲಿ ಮುಗಿಯುವ ಕೆಲಸವಲ್ಲವೆಂದು ನಮಗೆ ಭಾಸವಾಗಿರಲಿಲ್ಲ . ಅದು ಪಂಚಮ ಚಾತುರ್ಮಾಸ್ಯದ ಸಮಯವೂ ಕೂಡಾ ಆಗಿದ್ದುದರಿಂದ ಭಕ್ತರ ಒತ್ತಡ , ಪ್ರವಚನಗಳ ಮತ್ತು ಚಟುವಟಿಕೆಗಳ ಪ್ರಕ್ರಿಯೆ ಅಧಿಕವಾಗಿತ್ತು . ಗಣೇಶ , ಗುರುಗಳ ಅನುಗ್ರಹದಿಂದ “ ನಡೆನಡೆದು ಇರುವೆಯೂ ಸಹ ಸಮುದ್ರವನ್ನೇ ದಾಟಬಲ್ಲದು ” ಎಂಬಂತೆ ನಮ್ಮ ಸಂಕಲ್ಪವು ನೆರವೇರಿತು . ಸರಿಯಾಗಿ ಗೌರೀ ಹಬ್ಬದ ದಿನದಂದೇ ಅನುವಾದವು ಸಂಪೂರ್ಣವಾಯಿತು . ಮುದ್ರಣ ವಿಷಯದಲ್ಲಿ ಗಣೇಶನು ಮತ್ತೆ ತನ್ನ ವಿಶ್ವರೂಪವನ್ನು ತೋರಿದ , ವಿಘ್ನಗಳ ಸುರಿಮಳೆಯಾಯಿತು . ಗುರುಕೃಪೆಯಿಂದಲೇ ಅದನ್ನೂ ನಿವಾರಿಸಿಕೊಂಡು ಇದೀಗ ಶ್ರೀಗಣೇಶ ಸಹಸ್ರ ನಾಮದ ಭಾಷ್ಯಾರ್ಥವನ್ನು ನಿಮ್ಮ ಕೈಯಲ್ಲಿಡುತ್ತಿದ್ದೇವೆ .
ಆನಂದಿಸುತ್ತಾ ಓದಿ ಅನುಭವಿಸಿ ಗುರುಗಣೇಶರ ಕೃಪೆಗೆ ಪಾತ್ರರಾಗಿ .
ಈ ಪುಸ್ತಕವನ್ನು ರೂಪಿಸುವ ವಿಷಯದಲ್ಲಿ ನಾವು ಪ್ರಪ್ರಥಮವಾಗಿ ನಮ್ಮ ಸದ್ಗುರುಗಳಾದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು
ಹಾಗೂ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಪ್ರತಿಷ್ಠಿತನಾದ ವಿಜಯವಾಡದ ಕ್ಷಿಪ್ರ ಗಣಪತಿಯ ಸನ್ನಿಧಿಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಥರ್ವಶೀರ್ಷವನ್ನು ಕಲಿಯಲು ಸ್ವಾಮೀಜಿಯವರು ನಮಗೆ ಆಜ್ಞಾಪಿಸಿದರು. ಆಗ ನಮ್ಮ ಹೃದಯಭೂಮಿಯಲ್ಲಿ ಗಣಪತಿತತ್ತ್ವದ ಬೀಜಾಂಕುರವಾಯಿತು .. ಅದು ಕ್ರಮವಾಗಿ ಸಸಿಯಾಗಿ , ಮಹಾವೃಕ್ಷವಾಯಿತು . ಇದೀಗ ಈ ಗ್ರಂಥದ ರೂಪದಲ್ಲಿ ಫಲಗಳನ್ನು ಕೊಡುವ ಮಟ್ಟಿಗೆ ಬೆಳೆದುನಿಂತಿದೆಯಂದರೆ ಅದು ಕೇವಲ ನಾವು ಪ್ರೇಮದಿಂದ ಅಪ್ಪಾಜಿ ಎಂದು ಸಂಬೋಧಿಸುವ ಶ್ರೀಸ್ವಾಮೀಜೀಯವರ ಅನುಗ್ರಹವಲ್ಲದೇ ಬೇರೆ ಅಲ್ಲ .
ಇನ್ನು ಬರೆಯುವುದು ಒಂದು ಸಾಧನೆಯಾದರೇ ಅದನ್ನು ಯಂತ್ರಸ್ಟೀಕರಿಸುವುದು , ಅಚ್ಚುನಲ್ಲಿ ತಪ್ಪುಗಳಿಲ್ಲದೇ ತಿದ್ದುವುದು , ಮುದ್ರಣಮಾಡುವುದು , ಎಂಬುವ ಬಹಳ ಮುಖ್ಯವಾದ ಹಂತಗಳು . ಯಂತ್ರಸ್ಥೀಕರಿಸಿದ ಶ್ರೀರಾಮ್ , ಸುಬ್ಬು , ಮುದ್ರಣ ದೋಷಗಳನ್ನು ಸರಿತಿದ್ದಿದ ಟಿ.ಆರ್ . ಕೃಷ್ಣಪ್ಪ , ಕವಿತಾ ಶ್ರೀನಿವಾಸ್ , ಡಾ || ಸ್ವರ್ಣಪ್ರಸಾದ್ , ಸೂಕ್ತ ಸಲಹೆಗಳನ್ನು ನೀಡಿದ ಕುಪ್ಪಾ ವಿಶ್ವನಾಥಶರ್ಮ , ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿರುವ ರಮ್ಯಾ ಕ್ರಿಯೇಷನ್ಸ್‌ನ ವಾಸುದೇವಭಟ್ – ಇವರೆಲ್ಲರಿಗೂ ಗಣೇಶನ ಪೂರ್ಣಾನುಗ್ರಹ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇವೆ .
ಓದುಗರೆಲ್ಲರ ಕುಟುಂಬಗಳ ಕಷ್ಟಗಳನ್ನೆಲ್ಲಾ ನಿವಾರಿಸಿ , ಎಲ್ಲರ ಜೀವನಗಳನ್ನೂ ಆ ಪರಬಹ್ಮ ಸ್ವರೂಪನಾದ ಗಣೇಶನು ಹಸನು ಮಾಡಲೆಂದು ಅವನ ಪಾದಾರವಿಂದಗಳಲ್ಲಿ ದಂಡವತ್ ಪ್ರಣಾಮಗಳನ್ನು ಸಲ್ಲಿಸುತ್ತಾ …….. .
ಜಯ ಗುರು ದತ್ತ

ಇತಿ
ಶ್ರೀಗುರು ಗಣೇಶ ದತ್ತಸ್ಮರಣೆಗಳೊಂದಿಗೆ
ಶ್ರೀಶ್ರೀದತ್ತವಿಜಯಾನಂದ ತೀರ್ಥ ಸ್ವಾಮೀಜಿ
—————————————

ಶ್ರೀ ಗಣೇಶಸಹಸ್ರನಾಮಭಾಷ್ಯ
( ಕನ್ನಡ ಭಾಷಾನುವಾದ )

ಓಂ ಗಣೇಶ್ವರೋ ಗಣಕ್ರೀಡೋ ಗಣನಾಥೋ ಗಣಾಧಿಪಃ
ಏಕದಂಷ್ಟೋ ವಕ್ರತುಂಡೋ ಗಜವಕ್ರೋ ಮಹೋದರಃ

1. ಓಂ ಗಣೇಶ್ವರಃ :-
ಭಾಷ್ಯ : ವಿಯದಾದಿ ಪ್ರಪಂಚಸ್ಯ ಸಮೂಹೋ ಗಣ ಉಚ್ಯತೇ
ತದಾತ್ಮಕಸ್ತದೀಶಶ್ಚ ತೇನ ದೇವೋ ಗಣೇಶ್ವರಃ ॥
ಆಕಾಶವೇ ಮೊದಲಾದ ಪ್ರಪಂಚ ಸಮೂಹವೆಲ್ಲವೂ ಗಣವೆಂದು ಹೇಳಲ್ಪಡುತ್ತದೆ . ಆ ಗಣಗಳ ಸ್ವರೂಪನೂ ಅದರ ಈಶನೂ ಆದ್ದರಿಂದ ಆ ದೇವನು ಗಣೇಶ್ವರನೆನ್ನಿಸಿಕೊಳ್ಳುತ್ತಾನೆ .

(ನಾಳೆಗೆ ಮುಂದುವರಿಯುವುದು)

1. ಓಂ ಗಣೇಶ್ವರಾಯ ನಮಃ,

ಕೃಪೆ : ಶ್ರೀ ರಾಗರಾಗಿಣೀ ಟ್ರಸ್ಟ್

ಸೂಚನೆ : ಪ್ರತಿನಿತ್ಯ ಮುಂಜಾನೆ ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳದಲ್ಲಿ ಗಣೇಶ ಸಹಸ್ರ ನಾಮಾವಳಿಯ ಅರ್ಥ ಪ್ರಕಟವಾಗುತ್ತದೆ.

( ಸಂಗ್ರಹ )
* ಭಾಲರಾ
ಬೆಂಗಳೂರು


Share