18/02/2022 ರ ಸರ್ಕಾರಿ ಅರ್ಜಿ ಆಹ್ವಾನ

368
Share

* : ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅವಧಿ ವಿಸ್ತರಣೆ
ಮೈಸೂರು, :- ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೈಸೂರು ತಾಲ್ಲೂಕಿನ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅವರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸುವ ಮೂಲಕ ಅರ್ಜಿಯನ್ನು ಇಲಾಖೆಯ ssp.postmatric.karnataka.gov.in ವೆಬ್‌ಸೈಟ್ ಮೂಲಕ 2022ರ ಫೆಬ್ರವರಿ 28 ರವರೆಗೂ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:0821-2520910 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ತಾಲ್ಲೂಕಿನ ಡಾ. ಬಾಬು ಜಗಜೀವನರಾಂ ಭವನ ಕಟ್ಟಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೆಶಕರು ಪ್ರಕಟಣೆಯಲಿ ತಿಳಿಸಿದ್ದಾರೆ.

* . ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ
ಮೈಸೂರು – ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು, ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ. ಎಸ್. ಮಂಜುನಾಥ ಸ್ವಾಮಿ ಅವರು ತಿಳಿಸಿದ್ದಾರೆ.
ಸರ್ಕಾರದ ಜಮೀನು ಲಭ್ಯವಿರುವ ಕಡೆ ಸ್ಮಶಾನಕ್ಕಾಗಿ 2 ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿರುತ್ತದೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರ ಅಡಿ ಪ್ರದತ್ತವಾದ ಅಧಿಕಾರದ ಅನ್ವಯ ಜಿಲ್ಲಾಧಿಕಾರಿಗಳು ರಾಜ್ಯದಲ್ಲಿ ಸರ್ಕಾರಿ ಜಮೀನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಗೋಮಾಳ ಜಮೀನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದಾಗ್ಯೂ ಸ್ಮಶಾನಕ್ಕಾಗಿ ಮೀಸಲಿಡಲು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)(3)ರಲ್ಲಿ ಜಿಲ್ಲಾಧಿಕಾರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ, ಸರ್ಕಾರಿ ಜಮೀನು ”ಬ” ಖರಾಬು ಎಂದು ವರ್ಗೀಕೃತವಾಗಿದ್ದಲ್ಲಿ, ಸ್ಮಶಾನದ ಉದ್ದೇಶವು ಸಾರ್ವಜನಿಕ ಉದ್ದೇಶವಾಗಿರುವುದರಿಂದ ಅಂತಹ ಜಮೀನುಗಳನ್ನು ಜಿಲ್ಲಾಧಿಕಾರಿ ಅವರ ಹಂತದಲ್ಲಿಯೇ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರ ಅನ್ವಯ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಒತ್ತುವರಿಯಿಂದ ತೆರವುಗೊಳಿಸಿರುವ ಸರ್ಕಾರಿ ಜಮಿನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರ ಅನ್ವಯ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ, ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳು ಇದ್ದಲ್ಲಿ ಜಿಲ್ಲಾಧಿಕಾರಿ ಅವರು ಅಂತಹ ಅನರ್ಹ ಅರ್ಜಿಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸುವುದು.
ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ದರದಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ ಅಥವಾ ಜಲಮೂಲಗಳಿಂದ ವರ್ಗೀಕೃತವಾದ ಜಮೀನುಗಳನ್ನು ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಎಲ್ಲಾ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರ್ ಅವರಿಗೆ ದೂರು ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share