MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 31

292
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 31

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

156 . ಓಂ ಸೋಮಾರ್ಕಘಂಟಾಯ ನಮಃ
157 . ಓಂ ರುದ್ರಶಿರೋಧರಾಯ ನಮಃ
158 . ಓಂ ನದೀನದಭುಜಾಯ ನಮಃ
159 . ಓಂ ಸರ್ಪಾಂಗುಳೀಕಾಯ ನಮಃ
160 . ಓಂ ತಾರಕಾನಖಾಯ ನಮಃ

156. ಓಂ ಸೋಮಾರ್ಕಘಂಟಃ-
ಭಾ: ಕಂಧರೋರ್ಧ್ವಂ ಮಾಂಸಪಿಂಡಾವುನ್ನತೌ ಘಂಟಿಕೇ ಮತೇ ।
ತೇ ರವೀಂದೂ ಯಸ್ಯ ಸೋಮಾರ್ಕ ಘಂಟಃ ಕಥಿತೋ ಹಿ ಸಃ ॥

ಆನೆಗಳ ಕಂಠದ ಮೇಲ್ಭಾಗದಲ್ಲಿ ಉಬ್ಬಿದ ಮಾಂಸಪಿಂಡಗಳನ್ನು ಘಂಟೆಗಳೆಂದು ಕರೆಯುತ್ತ್ತಾರೆ. ಗಣೇಶನ ಘಂಟೆಗಳು ಸೂರ್ಯ-ಚಂದ್ರರೇ ಆಗಿದ್ದಾರೆ. ಆದಕಾರಣ ಅವನು ಸೋಮಾರ್ಕಘಂಟನು. (ಅಥವಾ ಆನೆಗಳಿಗೆ ಘಂಟೆಗಳನ್ನು ಕಟ್ಟುವುದು ಅಭ್ಯಾಸ. ವಿನಾಯಕನು ಗಜಮುಖನಾದ್ದರಿಂದ ಸೂರ್ಯ-ಚಂದ್ರರನ್ನೇ ಅಲಂಕಾರದ ಘಂಟೆಗಳನ್ನಾಗಿ ಅಲಂಕರಿಸಿಕೊಂಡಿದ್ದಾನೆ ಎಂದು ಕೂಡಾ ತಿಳಿಯಬಹುದು.)
ಓಂ ಸೋಮಾರ್ಕಘಂಟಾಯ ನಮಃ

157. ಓಂ ರುದ್ರಶಿರೋಧರಃ-
ಭಾ: ಯಸ್ಯ ಗ್ರೀವಾ ರುದ್ರ ಏವ ಸವೈ ರುದ್ರಶಿರೋಧರಃ ।

ಅವನ ಶಿರಸ್ಸಿನ ಅಧರಭಾಗವು (ಕೆಳಭಾಗವಾದ ಕಂಠವು) ರುದ್ರನೇ ಆಗಿದ್ದಾನೆ. ಆದ್ದರಿಂದ ಆ ಶಿವಪುತ್ರನು ರುದ್ರಶಿರೋಧರನು.
ಓಂ ರುದ್ರಶಿರೋಧರಾಯ ನಮಃ

158. ಓಂ ನದೀನದ ಭುಜಃ-
ಭಾ: ಗಂಗಾ ಶೋಣಾದಯೋ ನದ್ಯೋ ನದಾ ಯಸ್ಯ ಭುಜಾ ಸ್ಸತು ।
ನದೀನದಭುಜಃ ಸಿಂಧುನದೀ ನಂದತಿ ವಾ ಭುಜೈಃ ॥

ಕ.ವಿ- ಗಂಗಾ ಮೊದಲಾದ ನದಿಗಳು, ಶೋಣಾ ಮೊದಲಾದ ನದಗಳು, ಅವನ ಭುಜಗಳಾಗಿರುವುದರಿಂದ ಅವನು ನದೀನದಭುಜನು. (ಎಂಟು ಸಾವಿರ ಧನುಃ ಪ್ರಮಾಣಕ್ಕೆ ಕಡಿಮೆಯಿಲ್ಲದಷ್ಟು ದೂರ ಪ್ರವಹಿಸುವ ಜಲಪ್ರವಾಹಕ್ಕೆ ನದಿ ಎಂದು ಹೆಸರು. ಪಶ್ಚಿಮಾಭಿಮುಖವಾಗಿ ಹರಿಯುವ ಗಂಡುಹೊಳೆಗೆ ‘ನದ’ವೆಂದು ಹೆಸರು. ನದೀ ಎಂಬುದು ಸ್ತ್ರೀಲಿಂಗ. ನದವೆಂಬುದು ಪುಂಲಿಂಗ.
ಸಿಂಧೂನದಿಯು ಗಣೇಶನ ಭುಜಗಳ ಸ್ಪರ್ಶದಿಂದ ಸಂತೋಷಪಡುತ್ತಿದೆ. ಆದ್ದರಿಂದಲೂ ಅವನು ನದೀನದಭುಜನು.)
ಭಾ:- ಅತ್ರ ಪ್ರಥಮ ಪಕ್ಷೇ ‘ಪುಮಾನ್ ಸ್ತ್ರಿಯಾ’ ಇತ್ಯೇಕ ಶೇಷಾಭಾವಶ್ಛಾಂದಸಃ ।

ಈ ನಾಮದಲ್ಲಿ ‘ಪುಮಾನ್ ಸ್ತ್ರಿಯಾ’ ಎಂಬ ಪಾಣಿನೀ ಸೂತ್ರವನ್ನು ಅನುಸರಿಸಿ ಏಕಶೇಷವಾಗಬೇಕಿತ್ತು. ಆದರೆ ಗಣೇಶ ಸಹಸ್ರನಾಮವು ಛಂದಸ್ಸಾದ್ದರಿಂದ ಹಾಗಾಗಲಿಲ್ಲ. ಆದ್ದರಿಂದ ಈ ಪ್ರಯೋಗವನ್ನು ಛಾಂದಸ ಪ್ರಯೋಗವೆಂದು ತಿಳಿಯಬೇಕು. (ಈ ಕೊನೆಯ ಭಾಷ್ಯ ಪಂಕ್ತಿಯಿಂದ ಗಣೇಶ ಸಹಸ್ರನಾಮಕ್ಕೆ ವೇದ ಸಮಾನತ್ವವು ಸಿದ್ಧಿಸಿತು.)
ಓಂ ನದೀನದಭುಜಾಯ ನಮಃ

159. ಓಂ ಸರ್ಪಾಂಗುಳೀಕಃ-
ಭಾ: ಸರ್ಪಾಂಗುಳೀಕಃ ಶೇಷಾದ್ಯಾ ಅಂಗುಲ್ಯೋ ಯಸ್ಯ ಪನ್ನಗಾಃ ।

ಶೇಷಾದಿ ನಾಗದೇವತೆಗಳು ಬೆರಳುಗಳಾಗಿ ಇರುವುದರಿಂದ ಆ ಸರ್ಪಸೂತ್ರನು ಸರ್ಪಾಂಗುಳೀಕನು.
ಓಂ ಸರ್ಪಾಂಗುಳೀಕಾಯ ನಮಃ

160. ಓಂ ತಾರಕಾನಖಃ-
ಭಾ: ಧ್ರುವಾದ್ಯಾ ಯನ್ನಖಾಸ್ತಾರಾಃ ಸ ಸ್ಮೃತಸ್ತಾರಕಾನಖಃ ।

ಧ್ರುವನಕ್ಷತ್ರವೇ ಮೊದಲಾದ ತಾರೆಗಳು ಅವನ ಉಗುರುಗಳಾಗಿ ಇರುವುದರಿಂದ ಅವನು ತಾರಕಾನಖನು.
ಓಂ ತಾರಕಾನಖಾಯ ನಮಃ

ಭ್ರೂಮಧ್ಯಸಂಸ್ಥಿತಕರೋ ಬ್ರಹ್ಮವಿದ್ಯಾ ಮದೋತ್ಕಟಃ
ವ್ಯೋಮನಾಭಿಃ ಶ್ರೀಹೃದಯೋ ಮೇರುಪೃಷ್ಠೋ7ರ್ಣವೋದರಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share