MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 85

379
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 85

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

434 . ಓಂ ಸುರವಿದ್ವಿಷಾಮಂಕುಶಾಯ ನಮಃ
435 . ಓಂ ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಾಯ ನಮಃ
436 . ಓಂ ಕಮಂಡಲುಧರಾಯ ನಮಃ
437 . ಓಂ ಕಲ್ಪಾಯ ನಮಃ
438 . ಓಂ ಕಪರ್ದಿನೇ ನಮಃ

434. ಓಂ ಸುರವಿದ್ವಿಷಾಮಂಕುಶಃ –
ಭಾ: ದ್ವಿಷ ಸ್ಸುರಾಣಾಂ ಚ ವಿದಾಂ ಸುಷ್ಠು ಸಮ್ಯಗ್ರವಿದ್ವಿಷಾಂ।
ನಿಗ್ರಾಹಕತ್ವಾನ್ನಿರ್ದಿಷ್ಟೋ7ಸ್ಯಂಕುಶಃ ಸುರವಿದ್ವಿಷಾಮ್‌॥
‘ಸುರವಿದ್ವಿಷಾಂ’ ಎಂಬ ಪದವನ್ನು ‘ಸು-ರವಿ-ದ್ವಿಷಾಂ, ಸುರ-ವಿತ್- ದ್ವಿಷಾಂ’ ಎಂದು ಎರಡು ರೀತಿಯಲ್ಲಿ ಹೇಳಬಹುದು. ಸೂರ್ಯದೇವರನ್ನೂ ದೇವ, ಜ್ಞಾನ, ಜ್ಞಾನಿಗಳನ್ನೂ, ಜ್ಞಾನಮಾರ್ಗವನ್ನೂ, ದ್ವೇಷಿಸುವ ರಾಕ್ಷಸರನ್ನೂ ನಿಗ್ರಹಿಸುವ ಅಂಕುಶರೂಪದಲ್ಲಿ ಗಣೇಶನಿದ್ದಾನೆ. ಆದ್ದರಿಂದ ಅವನು ಸುರವಿದ್ವಿಷಾಮಂಕುಶನು.
ಓಂ ಸುರವಿದ್ವಿಷಾಮಂಕುಶಾಯ ನಮಃ

435. ಓಂ ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಃ-
ಭಾ: ಅಕಾರಾದ್ಯೇಕ ಪಂಚಾಶದ್ವಿಸರ್ಗಾಂತಾರ್ಣ ಬೋಧಿತಃ।
ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಃ॥
ವಿಸರ್ಗಾಂತಗಳಾದ ಅಕಾರಾದಿ ಐವತ್ತೊಂದು ಅಕ್ಷರಗಳಿಂದ ಗಣೇಶನು ಹೇಳಲ್ಪಟ್ಟಿದ್ದಾನೆ. ಆದ್ದರಿಂದ ಅವನಿಗೆ ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತನೆಂದು ಹೆಸರು.
ಓಂ ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಾಯ ನಮಃ
ಪ್ರಾಚಾತು ಅಸಮಸ್ತೇತಿ ವಿಸರ್ಗ ನಿರ್ಮುಕ್ತಂ ಆದ್ಯಕ್ಷರಂ ಪಠಿತ್ವಾ ಕೇವಲವಿಸರ್ಗಾಂತಪ್ರಥಮೈಕವಚನಪದೈಃ ಕೀರ್ತಿತಃ ಇತಿ ವ್ಯಾಖ್ಯಾತಂ. ತನ್ಮಾತೃಕಾಕ್ರಮಾನನುಗುಣತ್ವಾ ದಚಿಂತ್ಯಂ.
ಪ್ರಾಚೀನರು ಈ ನಾಮದ ವ್ಯಾಖ್ಯಾನದಲ್ಲಿ ಅಸಮಸ್ತ ಎಂದು ವಿಸರ್ಗವಿಲ್ಲದ ಅಕಾರವನ್ನು ಪಠಿಸಿ ಕೇವಲ ವಿಸರ್ಗಾಂತವಾದ ಪ್ರಥಮಾಏಕವಚನ ಪದಗಳಿಂದ ಮಾತ್ರ ಅವನು ಕೀರ್ತಿಸಲ್ಪಡುತ್ತಾನೆ ಎಂದು ಹೇಳಿದ್ದಾರೆ. ಹಾಗೆ ಹೇಳುವುದರಿಂದ ಅಕಾರಾದಿ ವರ್ಣಕ್ರಮಕ್ಕೆ ಧಕ್ಕೆ ಉಂಟಾಗುವುದರಿಂದ ಪ್ರಾಚೀನರ ಮತವು ಉಪೇಕ್ಷ್ಯವು.
ಕಮಂಡಲುಧರಃ ಕಲ್ಪಃ ಕಪರ್ದೀ ಕಲಭಾನನಃ।
ಕರ್ಮಸಾಕ್ಷೀ ಕರ್ಮಕರ್ತಾ ಕರ್ಮಾಕರ್ಮಫಲಪ್ರದಃ ॥

436. ಓಂ ಕಮಂಡಲುಧರಃ –
ಭಾ: ಕಮಂಡಲುಧರಶ್ಶುಂಡೇನಾಮೃತ ಕುಂಭದೃಕ್‌।
ತನ್ನ ಶುಂಡಾದಂಡದಿಂದ (ಸೊಂಡಿಲಿನಿಂದ) ಅಮೃತಕಲಶವನ್ನು ಧರಿಸಿದ್ದಾನೆ. ಆದ್ದರಿಂದ ಅವನು ಕಮಂಡಲುಧರನು.
ಓಂ ಕಮಂಡಲುಧರಾಯ ನಮಃ

437. ಓಂ ಕಲ್ಪಃ-
ಭಾ: ಕಲ್ಪಃ ಪ್ರಲಯಕಾಲಾತ್ಮಾ ಸಮರ್ಥಃ ಕಲ್ಪನೇಪಿ ವಾ೤
ಪ್ರಲಯಕಾಲ ಸ್ವರೂಪನಾದ್ದರಿಂದ ಅವನು ಕಲ್ಪನು. ಅಥವಾ ಸೃಷ್ಟಿಕಲ್ಪನೆಯನ್ನು ಮಾಡುವುದರಲ್ಲಿ ಸಮರ್ಥನಾದ್ದರಿಂದಲೂ ಅವನು ಕಲ್ಪನು.
ಓಂ ಕಲ್ಪಾಯ ನಮಃ

438. ಓಂ ಕಪರ್ದೀ-
ಭಾ: ವರಾಟಧಾರೀ ಮಲ್ಲಾರಿ ಸ್ತ್ವಂ ಕಪರ್ದ್ಯಥವಾ ಜಟೀ ।
ಕವಡೆ ಮತ್ತು ತಾವರೆ ಮಣಿಗಳಿಂದ ಮಾಡಿದ ಮಾಲೆಗಳನ್ನು ಧರಿಸಿ, ಮಲ್ಲರನ್ನು ಕುಸ್ತಿಯಲ್ಲಿ ಸೋಲಿಸುತ್ತಾನೆ. ಆದ್ದರಿಂದ ಅವನು ಕಪರ್ದಿಯು. ಅಥವಾ ಶಿವನ ಹಾಗೆ ಜಟಾಜೂಟವನ್ನು ಹೊಂದಿರುವುದರಿಂದಲೂ ಅವನು ಕಪರ್ದಿಯು.
ಓಂ ಕಪರ್ದಿನೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share