ಅಭಿಮನ್ಯುವಿನಂತೆ ಹೋರಾಡಿದ ಮಿತುನ್‌, ಟೈಗರ್ಸ್‌ಗೆ ಜಯ

214
Share

ಅಭಿಮನ್ಯುವಿನಂತೆ ಹೋರಾಡಿದ ಮಿತುನ್‌, ಟೈಗರ್ಸ್‌ಗೆ ಜಯ
ಮೈಸೂರು, ಆಗಸ್ಟ್‌, 09, 2022:
ಅಭಿಮನ್ಯುವಿನಂತೆ ಹೋರಾಡಿದ ಅಭಿಮನ್ಯು ವಿತುನ್‌ ಅವರು ಸಿಡಿಸಿದ ಅಜೇಯ 51 ರನ್‌ಗಳ ಸಾಹಸದಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದೆ.
ನಾಯಕ ಮಿಥುನ್‌ 22 ಎಸೆತಗಳನ್ನೆದುರಿಸಿ 5 ಸಿಕ್ಸರ್‌ ಹಾಗೂ 2 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 51 ರನ್‌ ಗಳಿಸಿ ಜಯದ ರೂವಾರಿ ಎನಿಸಿದರು. ವಿಜೆಡಿ ನಿಯಮದಂತೆ ಹುಬ್ಬಳ್ಳಿ ಟೈಗರ್ಸ್‌ಗೆ 16 ಓವರ್‌ಗಳಲ್ಲಿ 137 ರನ್‌ ಗುರಿ ನೀಡಲಾಗಿತ್ತು. ಟೈಗರ್ಸ್ 15.5 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿತು.
137ರನ್‌ ಜಯದ ಗುರಿಹೊತ್ತ ಹುಬ್ಬಳ್ಳಿ ಟೈಗರ್ಸ್‌ ಆರಂಭ ಉತ್ತಮವಾಗಿರಲಿಲ್ಲ. 18ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಶಿಶಿರ್‌ ಭವಾನೆ ಮತ್ತು ಶಿವಕುಮಾರ್‌ ಕೆಲ ಹೊತ್ತು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು, ಆದರೆ 16 ರನ್‌ ಗಳಿಸಿ ಆಡುತ್ತಿದ್ದ ಭವಾನೆ ಬೆಂಗಳೂರಿನ ಸುಚಿತ್‌ ಎಸೆತದಲ್ಲಿ ಸ್ಟಂಪ್‌ ಆಗುವ ಮೂಲಕ ತಂಡ ಮತ್ತೊಂದು ಆಘಾತ ಅನುಭವಿಸಿತು. 4 ಬೌಂಡರಿ ಸಿಡಿಸುವ ಮೂಲಕ ಶಿವಕುಮಾರ್‌ ಜಯದ ಹಾದಿಯನ್ನು ತೋರಿಸಿದ್ದರು, ಆದರೆ ಸುಚಿತ್‌ ಎಸೆತದಲ್ಲಿ ಅಬ್ಬರದ ಹೊಡೆತಕ್ಕೆ ಮನ ಮಾಡಿ ಕ್ಲೀನ್‌ ಬೌಲ್ಡ್‌ ಆಗುವ ಮೂಲಕ ಪೆವಿಲಿಯನ್‌ ಹಾದಿ ಹಿಡಿದರು. ಶಿವಕುಮಾರ್‌ 30 ರನ್‌ ಗಳಿಸಿದರು.
ಮಳೆಯಿಂದಾಗಿ ಪಂದ್ಯವನ್ನು 16 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಬೆಂಗಳೂರು ಬ್ಲಾಸ್ಟರ್ಸ್‌ 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 119 ರನ್‌ ಗಳಿಸಿತ್ತು. ಹುಬ್ಬಳ್ಳಿ ಟೈಗರ್ಸ್‌ಗೆ ವಿಜೆಡಿ ನಿಯಮಾನುಸಾರ 16 ಓವರ್‌ಗಳಲ್ಲಿ 137 ರನ್‌ ಜಯದ ಗುರಿ ನೀಡಲಾಯಿತು.
ಬೆಂಗಳೂರು ಸಾಧಾರಣ ಮೊತ್ತ:
ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ಬ್ಲಾಸ್ಟರ್ಸ್‌ ಪರ ನಾಯಕ ಮಯಾಂಕ್‌ ಅಗರವಾಲ್‌ (43) ಹೊರತುಪಡಿಸಿದರೆ ಉಳಿದ ಆಟಗಾರರು ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ತೋರಲಿಲ್ಲ. ಮೊದಲ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ಮಯಾಂಕ್‌ ಅಗರ್ವಾಲ್‌ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 43 ರನ್‌ ಗಳಿಸಿದರು. ಪರಿಣಾಮ 119 ರನ್‌ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ಮಳೆಯಿಂದಾಗಿ ಪಂದ್ಯವನ್ನು 16 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಜಗದೀಶ್‌ ಸುಚಿತ್‌ (12*) ಮತ್ತು ಶಿವಕುಮಾರ್‌ ರಕ್ಷಿತ್‌ (15*) ಮಳೆಯ ಕಾರಣ ನಾಟೌಟ್‌ ಆಗಿ ಉಳಿದರು. ಹುಬ್ಬಳ್ಳಿ ಟೈಗರ್ಸ್‌ ಪರ ಸೌರಭ್‌ ಶ್ರೀವಾಸ್ತವ್‌ 31ಕ್ಕೆ 2 ವಿಕೆಟ್‌ ಗಳಿಸಿದರೆ, ವಾಸುಕಿ ಕೌಶಿಕ್‌, ಜಹೂರ್‌ ಫಾರೂಖಿ ಮತ್ತು ಶಿವಕುಮಾರ್‌ ತಲಾ 1 ವಿಕೆಟ್‌ ಗಳಿಸಿ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್:‌
ಬೆಂಗಳೂರು ಬ್ಲಾಸ್ಟರ್ಸ್‌: 16 ಓವರ್‌ಗಳಲ್ಲಿ 5 ವಿಕೆಟ್‌ಗೆ 119. (ಮಯಾಂಕ್‌ ಅಗರ್ವಾಲ್‌ 43, ಅನೀಶ್‌ 14, ಸೂರಜ್‌ ಅಹುಜಾ 20, ಸುಚಿತ್‌ 12*, ರಕ್ಷಿತ್‌ 15*, ಶ್ರೀವಾಸ್ತವ್‌ 31ಕ್ಕೆ 2)
ಹುಬ್ಬಳ್ಳಿ ಟೈಗರ್ಸ್‌: 15.5 ಓವರ್‌ಗಳಲ್ಲಿ 139, (ಅಭಿಮನ್ಯು ಮಿಥುನ್‌ 51*, ಶಿವಕುಮಾರ್‌ 30, ಭವಾನೆ 16, ಸೊಲಾಂಕಿ 13, ಸುಚಿತ್‌ 21ಕ್ಕೆ 2)


Share