ಎಂಪಿ ಕವನಸಂಗ್ರಹ-ಭವಿಷ್ಯದ ಆಶಾಕಿರಣಗಳಾಗಿ…

237
Share

 

ಭವಿಷ್ಯದ ಆಶಾಕಿರಣಗಳಾಗಿ…

ವಿಶ್ವದ ಭವಿಷ್ಯ ರೂಪಿಸುವ
ಆಶಾಕಿರಣಗಳು ನೀವು ,
ಸಾಹಿತ್ಯ, ಸಂಗೀತ,ಕ್ರೀಡೆ,
ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕೆ ಗಟ್ಟಿಬೇರುಗಳು ನೀವು ,
ಸಮಾಜದ ಅಭ್ಯುದಯಕೆ ಪಥಿಕರು ನೀವು ,
ಏಕ ಈ ತಲ್ಲಣ,ಆತಂಕ..ಓ ಯುವ ಬಾಂಧವರೆ..,??

‘ಆನೆ ನಡೆದದ್ದೇ ಹಾದಿ ‘ ಎಂಬಂತೆ,
ನಿಮ್ಮ ನಡೆಯೇ ನಿಮ್ಮ ಪ್ರಗತಿಗೆ ದಾರಿದೀಪ…
ಏಕೆ ನಿರಾಸೆ,ನಿಟ್ಟುಸಿರು…
ಜಗವು ನಿಮ್ಮ ಮೇಲೆ ವಿಶ್ವಾಸವಿಟ್ಟಿದೆ…
‘ಏಳಿ ಎದ್ದೇಳಿ,ಗುರಿಮುಟ್ಟುವವರೆಗೂ ನಿಲ್ಲದಿರಿ ‘
ಸ್ವಾಮಿ ವಿವೇಕಾನಂದರ ವಾಣಿ
ನಿಮ್ಮನು ಜಾಗೃತಿಗೊಳಿಸಲಿ…

ಕ್ರೀಡೆ,ಸಂಗೀತ,ಸಾಹಿತ್ಯ, ವಿಜ್ಞಾನಗಳತ್ತ
ನೀವು ಬೆನ್ನು ತಿರುಗಿಸಿದ್ದೇಕೆ ?
ಗುಂಪು ಕಟ್ಟಿ ದುಶ್ಚಟಗಳ ದಾಸರಾಗಿದ್ದೇಕೆ ?
ಓದುವ ದಿನಗಳಲಿ ಆಸಕ್ತಿ ತೋರಿ,
ಮರುಭೂಮಿಯು‌ ಮಳೆ ನೀರ ಗುಟುಕಿಸಿಕೊಳ್ಳುವ ತೆರದಿ,
ವಿದ್ಯೆ ಯ ಒಪ್ಪಿಕೊಳ್ಳಲು ನಿಮಗೇನು ತೊಂದರೆ ??

ಕೃಷಿ, ಹೈನುಗಾರಿಕೆ, ತೋಟಗಾರಿಕೆಗಳಲಿ
ನವೀನ ಕೃಷಿ ಪದ್ದತಿಯ ಅಳವಡಿಸಿ
ಜೀವನದಲಿ ಯಶ ಕಂಡ ನೂರಾರು ಯುವ ಸಾಧಕರುಂಟು…
ಅವರಂತೆ ಬದುಕಲು ನಿಮಗೇನು ತೊಂದರೆ ???

ರಾಷ್ಟ್ರ ಕಾಯುವ ನೂರಾರು ಯುವ ಸೈನಿಕರು ,
ಕಾನೂನು‌ರಕ್ಷಿಸುವ ಯುವ ಆರಕ್ಷಕರು,
ಭವಿಷ್ಯದ ಸಮಾಜ ರೂಪಿಸುವ ಶಿಕ್ಷಕರು,
ಜನರ ಪ್ರಾಣ ಉಳಿಸುವ ವೈಧ್ಯರು, ವಿಜ್ಞಾನಿಗಳು
ನಿಮಗೆ ಏಕಾಗಬಾರದು ಮಾದರಿ ????

ಸಮಾಜದ ಹುಳುಕು ತೋರುವ ಪತ್ರಕರ್ತರು ,
ಜನರ ಅಭ್ಯುದಯಕೆ ದುಡಿವ ಸಮಾಜಸೇವಕರು ,
ಕೃಷಿಗೆ ಮಾರ್ಗದರ್ಶನ ನೀಡುವ ತಜ್ಞರು..
ನೀವೇಕಾಗಬಾರದು ? ಜನರ ಪ್ರಗತಿಗೆ ನೀವೇಕೆ ದುಡಿಯಬಾರದು ???

ದುಶ್ಚಟಗಳ ಸಹವಾಸ ಬಿಟ್ಟುಬಿಡಿ ,
ಜಾತಿ-ಧರ್ಮ-ಪಂಥಗಳ ಕಿತ್ತೆಸೆದು ಬಿಡಿ ,
ನಿಮ್ಮೂರ ಹಳ್ಳ-ತೊರೆ-ಪರಿಸರಗಳ ಉಳಿಸಿಬಿಡಿ ,.
ನಿಮ್ಮ ವೃತ್ತಿ ಯಾವುದಿರಲಿ..ಕ್ಷೇತ್ರ ಯಾವುದಿರಲಿ..
ಸಮಾಜದ ಅಭ್ಯುದಯಕೆ ನಾಂದಿ ಹಾಡಿಬಿಡಿ…

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು,
ಕೆ.ಆರ್.ನಗರ
ಮೈಸೂರು ಜಿಲ್ಲೆ,
ಮೊ:94496 80583
63631 72368


Share