ಕಾವೇರಿಗೆ ಮೊದಲ ಮೊದಲ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಬೊಮ್ಮಾಯಿ

280
Share

 

# ಕೆ ಆರ್ ಎಸ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ

ಮಂಡ್ಯ.ನ.02 ಕೆಆರ್‌ಎಸ್‌ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಮೊದಲ ಬಾರಿಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಸಿಎಂ ಬೊಮ್ಮಾಯಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಎಂ, ಮೊದಲ ಬಾರಿಗೆ ಬಂದು ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಕೆ.ಆರ್.ಎಸ್ ಗೆ ಒಂದು ಇತಿಹಾಸ ಇದೆ, ಅವತ್ತಿನ ಮಹಾರಾಜರು, ಮತ್ತು ಆಡಳಿತದವರು ಉತ್ತಮ ಕೆಲಸವನ್ನು ಮಾಡಿದ್ದಾರೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಮನಸ್ಸು ಮಾಡದಿದ್ರೆ, ಮಂಡ್ಯ ಮೈಸೂರು ಇಷ್ಟರ ಮಟ್ಟಿಗೆ ಇರುತ್ತಿರಲಿಲ್ಲ ಎಂದರು.

ದಶಕಗಳಿಂದ ಅನ್ನವನ್ನು ಕಾವೇರಿ ಮಾತೆ ಕೊಡ್ತಿದ್ದಾಳೆ‌,ಕೆ.ಆರ್.ಎಸ್ ಡ್ಯಾಂ ಅನ್ನು ನಾವು ಮುಂಬರುವ 100 ವರ್ಷ ಉಳಿಸಿಕೊಳ್ಳಲು, ಸಂಪೂರ್ಣ ಅಧುನೀಕರಣ ಮಾಡಬೇಕು ಎಂದರು.

ನೀರಾವರಿ ಸಚಿವನಾಗಿದ್ದಾಗ, ಗೇಟ್ ನೋಡಿದೆ, ಗೇಟ್ ನಲ್ಲಿ ರಂದ್ರಗಳಿದ್ದವು, ಡ್ಯಾಂ ಗೆ 75 ವರ್ಷವಾಗಿದೆ, ಗೇಟ್ ಬದಲಾವಣೆ ಮಾಡಿಲ್ಲ, ಎರಡು ದಿನ ನನಗೆ ನಿದ್ದೆ ಬರಲಿಲ್ಲ, ಎಲ್ಲಾ ಮ್ಯಾಪ್ ತಯಾರು ಮಾಡಿ ಎಂದು ಹೇಳಿದ್ದೆ ಎಂದರು.

ಡ್ಯಾಂ ಸುರಕ್ಷಿತೆಯಾಗಬೇಕಾದರೇ, ಗೇಟ್ ಸುರಕ್ಷತೆ ಮಾಡಬೇಕು ಎಂದು ಅವರು ಹೇಳಿದರು.

ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟೆ ಗಳಲ್ಲಿ, 14 ಅಣೆಕಟ್ಟುಗಳು ನೆಲಸಮವಾಗಿವೆ,11 ಅಣೆಕಟ್ಟುಗಳನ್ನು ಅಧುನೀಕರಣ ಮಾಡಲಾಗಿದೆ ಎಂದರು.

1600ಕೋಟಿ ವೆಚ್ಚದಲ್ಲಿ ವಿಸಿ ನಾಲೆ ಅಧುನೀಕರಣ ಮಾಡಲು, ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇವೆ, ಅನ್ನ ಕೊಡುವ ನೀರಾವರಿ ಯೋಜನೆ, ಎಲ್ಲದಕ್ಕೂ ನಮ್ಮ ಸರ್ಕಾರ ಸಹಕಾರ ಕೊಡುತ್ತದೆ ಎಂದರು‌.

2012 ರಲ್ಲಿ 14 ಟಿಎಂಸಿ ನೀರು ಬಿಡಬೇಕೆಂದು ಕೊರ್ಟ್ ಆದೇಶ ಇತ್ತು, ಕೋರ್ಟ್ ಹೋಗಿದ್ದೆ , ಬಳಿಕ ಮಳೆಯಾಗಿ ರೈತರಿಗೆ ಬೇಸಿಗೆ ಕಾಲದಲ್ಲಿ ರೈತರಿಗೆ ನೀರು ಒದಗಿಸುವ ಕೆಲಸವಾಯಿತು ಎಂದರು.
ಮಹಾರಾಜರು ಮಾಡಿರು ಆಸ್ತಿ, ಇದನ್ನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾವೇರಿ ಪೂಜೆ ಮಾಡುವಾಗ ಎಲ್ಲ ಶಾಸಕರು, ಮಂತ್ರಿಗಳು ಬಂದಿದ್ದಾರೆ, ತುಂಬಾ ಸಂತೋಷವಾಗಿದೆ, ಹಲವು ಯೋಜನೆಗಳನ್ನ ಪೂರ್ಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇವೆ ಎಂದರು.

ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ, ತಮಿಳುನಾಡಿನವರು ಕ್ಯಾತೆ ತೆಗೆದಿದ್ದಾರೆ, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.

ನಾವು ನಮ್ಮ ಯೋಜನೆ ಪೂರ್ಣಗೊಳಿಸಲು ಬದ್ದರಾಗಿದ್ದೇವೆ, ನ್ಯಾಯ ಸಮ್ಮತ್ತ ಯೋಜನೆ,
ಎರಡೂ ರಾಜ್ಯ ಗಳ ಮಧ್ಯೆ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು, ಈ ಯೋಜನೆಯನ್ನ ಪೂರ್ಣಗೊಳಿಸುತ್ತೇವೆ ಎಂದರು.

ಬಾಗೀನ ಅರ್ಪಣೆ ಬಳಿಕ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು, ಮಂಡ್ಯ, ಮೈಸೂರು ಭಾಗದ ಜನರ ಜೀವನಾಡಿ ಆಗಿರುವ ಕೆಆರ್‌ಎಸ್ ಡ್ಯಾಂ ತುಂಬಿರುವುದು ರೈತರಲ್ಲಿ ಹರ್ಷ ತಂದಿದೆ.
ಕೆಆರ್‌ಎಸ್ ಡ್ಯಾಂ‌ನಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಗುತ್ತಿದೆ. ಅಂದು ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ಜಲಾಶಯ ನಿರ್ಮಾಣ ಮಾಡುವಾಗ ಹಣದ ಅಭಾವ ಉಂಟಾಗಿ, ಅರಮನೆಯಲ್ಲಿದ್ದ ಚಿನ್ನ, ಬೆಳ್ಳಿಯನ್ನು ಮುಂಬೈ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದ್ದರು. ಮಹಾರಾಜರು ಅವತ್ತು ನೀಡಿದ ಕೊಡುಗೆಯನ್ನ ಸಚಿವರು ಸ್ಮರಿಸಿಕೊಂಡರು.

ಜಲಾಶಯದಿಂದ 3.36 ಲಕ್ಷ ಎಕರೆ ಭೂಮಿಗೆ ನೀರು ಹರಿಸಲಾಗುತ್ತದೆ. ಇವತ್ತು ಡ್ಯಾಂ ತುಂಬಿರುವುದರಿಂದ ರೈತರ ಬೆಳೆಗಳಿಗೆ, ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ. ದಸರಾ ಸಂದರ್ಭದಲ್ಲಿ ಡ್ಯಾಂಗೆ ನೀರು ಬಂದಿರಲಿಲ್ಲ. ಸ್ವಲ್ಪ ಆತಂಕ ಆಗಿತ್ತು. ಆಗ ಬಸವರಾಜ ಬೊಮ್ಮಾಯಿ ದಂಪತಿ ಪೂಜೆ ಸಲ್ಲಿಸಿದ 24 ಗಂಟೆ ಅವಧಿಯಲ್ಲೇ ಅರ್ಧ ಅಡಿ ನೀರು ಬಂತು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಸುಮಾರು 60 ಕೋಟಿ ವೆಚ್ಚದಲ್ಲಿ 136 ಗೇಟ್‌ಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿಪಿಪಿ ಮಾದರಿಯಲ್ಲಿ ಬೃಂದಾವನ ಗಾರ್ಡನ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ ಕಾರಜೋಳ, ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್, ತೋಟಗಾರಿಕೆ ಸಚಿವ ಮುನಿರತ್ನ, ಶ್ರೀರಂಗಪಟ್ಟಣ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾಅಂಬರೀಶ್, ಮೈಸೂರು,ಕೊಡಗು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶಾಸಕರಾದ , ಸಿ.ಎಸ್ ಪುಟ್ಟರಾಜು, ತನ್ವೀರ್ ಸೇಠ್, ಎಂ.ಶ್ರೀನಿವಾಸ್, ಕೆ.ಅನ್ನದಾನಿ,ಸುರೇಶ್ ಗೌಡ, ಅಶ್ವಿನ್ ಕುಮಾರ್, ಹೆಚ್.ಬಿ ಮಂಜುನಾಥ್,ಜಿ.ಟಿ ದೇವೇಗೌಡ, ಎಲ್ ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಮರಿತಿಬ್ಬೆಗೌಡ, ಎನ್.ಅಪ್ಪಾಜಿಗೌಡ, ಆರ್ ಧರ್ಮಸೇನ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಹಾಗೂ ಮತ್ತಿತರರು ಭಾಗವಹಿಸಿದ್ದರು.


Share