ಜನಪದ ಉಳಿಯಲಿ, ಬೆಳೆಯಲಿ… ಸಚಿವ ಸೋಮಶೇಖರ್

241
Share

ಜನಪದ ಉಳಿಯಲಿ, ಬೆಳೆಯಲಿ…

ಜನಪದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ. ಇದು ನಮ್ಮ ಸಂಸ್ಕೃತಿಯನ್ನು ಸಾರಿ ಹೇಳುತ್ತದೆ. ಒಂದು ದೇಶ/ರಾಜ್ಯ ಅಥವಾ ಪ್ರದೇಶದ ಹಿನ್ನೆಲೆ, ಪರಂಪರೆ ಹಾಗೂ ಸತ್ವ ಈ ಜಾನಪದದಲ್ಲಿ ಅಡಗಿರುತ್ತದೆ. ಜನಪದವನ್ನು ತುಂಬಾ ಸರಳವಾಗಿ ಹೇಳಬೇಕೆಂದರೆ, ಜನರಿಂದ ಜನರಿಗೆ, ಮಾತಿನಿಂದ ಮಾತಿನ ಮೂಲಕ ಬೆಳೆದುಕೊಂಡು ಬಂದ ಒಂದು ಕಲೆ ಎಂದು ಬಣ್ಣಿಸಬಹುದಾಗಿದೆ.

ಜನಪದ ಸಂಗೀತವನ್ನಷ್ಟೆ ಜನಪದ ಕಲೆ ಎಂದು ಹೇಳಲಾಗದು. ಕಲೆ -ಸಾಹಿತ್ಯ -ನೃತ್ಯ- ನಾಟಕ ಹೀಗೆ ಹಲವು ಕ್ಷೇತ್ರಗಳು ಜನಪದದ ಒಳಗೆ ಅಡಗಿವೆ. ಇದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಜೊತೆಗೆ ಈ ಆಚರಣೆಗಳ ಹಿಂದೆ ಅದರದ್ದೇ ಆದ ಮಹತ್ವ ಕೂಡ ಇವೆ.

ನಮ್ಮ ಕರ್ನಾಟಕದಲ್ಲೂ ಅನೇಕ ಜನಪದ ಸಾಹಿತ್ಯಗಳು, ಗೀತೆಗಳು, ಕ್ರೀಡೆಗಳು ಸೇರಿದಂತೆ ವಿವಿಧ ಹಲವು ಪ್ರಾಕಾರಗಳು ಜನಮನ ಗೆದ್ದಿವೆ. ನಮ್ಮ ನಾಡಿನ ವಿವಿಧ ಭಾಗಗಳ ಜನಪದ ಸೊಗಡನ್ನು ನಮ್ಮ ಪೂರ್ವಜರು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದು, ನಾವು ಇದನ್ನು ಮುಂದೂ ಸಹ ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ.

ಈ ಜನಪದದ ಬಗ್ಗೆ ನಮ್ಮ ಹೆಸರಾಂತ ಸಾಹಿತಿಗಳು ಸಹ ತಮ್ಮದೇ ಆದ ಮಾತುಗಳಲ್ಲಿ ಕೊಂಡಾಡಿದ್ದಾರೆ. “ಬಾಲ ಬಾಯಿಯಲ್ಲಿ ಬ್ರಹ್ಮಾಂಡವು ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆ” ಎಂದು ಖ್ಯಾತ ಸಾಹಿತಿಗಳಾದ ದೇ.ಜವರೇಗೌಡರು ಹೇಳಿದರೆ, “ಜನತೆಯ ನಾಲಿಗೆಯ ತೂಗು ತೊಟ್ಟಿಲಿನ ಮೇಲೆ ನರ್ತಿಸುತ್ತಾ ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿಯಾಗಿದೆ” ಎಂದು ಹೆಸರಾಂತ ಸಾಹಿತಿಗಳು, ಜನಪದ ತಜ್ಞರೂ ಆಗಿರುವ ಗೊ.ರು.ಚನ್ನಬಸವಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಹಮ್ಮಿಕೊಂಡಿರುವ ಜಾನಪದ ಸುಗ್ಗಿ ಕಾರ್ಯಕ್ರಮ ನಿಜಕ್ಕೂ ಒಂದು ಪ್ರಶಂಸನೀಯ ನಡೆ ಎಂದೇ ಹೇಳಬಹುದು. ಜಾನಪದದ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳಬಾರದು. ಜೊತೆಗೆ ಈ ಕಲೆ ಸಹ ನಶಿಸಿಹೋಗಬಾರದು.

ಈಗ ಜನಪದ ಎಂಬುದು ಒಂದು ಕಲೆಯಾಗಿ ಉಳಿದಿದೆಯೇ ವಿನಃ ಅಥವಾ ಸಾಹಿತ್ಯ ರೂಪದಲ್ಲಿ ಇದೆಯೇ ವಿನಃ ಹೆಚ್ಚಿನ ಜನಾಕರ್ಷಣೆ ಹೊಂದುವಲ್ಲಿ ಒಂದು ರೀತಿಯ ವೈಫಲ್ಯಗಳನ್ನು ಕಾಣುತ್ತಿದೆ ಎಂದೇ ಹೇಳಬಹುದು. ಇದಕ್ಕೆ ನಮ್ಮ ಇಂದಿನ ಆಧುನಿಕ ಪದ್ಧತಿ, ಜೀವನ ಶೈಲಿ ಹಾಗೂ ಸಂಪ್ರದಾಯ ಸಹ ಇರಬಹುದು. ಇಂತಹ ಕಾರ್ಯಕ್ರಮಗಳು ಯುವ ಮನಸ್ಸುಗಳನ್ನು ಜನಪಥದತ್ತ ಸೆಳೆಯುವಲ್ಲಿ ಸಹಾಯಕವಾಗಲಿದೆ ಎಂದೇ ನಾನು ಭಾವಿಸುತ್ತೇನೆ.

ಜನಪದ ಸುಗ್ಗಿ ಎಂಬ ಕಾರ್ಯಕ್ರಮದ ಶೀರ್ಷಿಕೆ ಬಹಳ ಚೆನ್ನಾಗಿದೆ. ಸುಗ್ಗಿ ಎಂದರೆ ಹಬ್ಬ. ಜನಪದವನ್ನು ಹಬ್ಬದಂತೆ ಆಚರಿಸುವ “ಸುಗ್ಗಿಯ ಕಾಲ” ಈಗ ನಮ್ಮದಾಗಿದೆ. ಅದೂ ಸಾಂಸ್ಕೃತಿಕ ನಾಡು ಮೈಸೂರಿನಲ್ಲಿ ಆಗುತ್ತಿರುವುದು ಸಹ ಒಂದು ಸಂತೋಷದ ವಿಚಾರ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ನಾನು ಹೇಳಲು ಬಯಸುತ್ತೇನೆ. ಕೊನೆಯದಾಗಿ ಹೇಳುವುದೇನೆಂದರೆ ಜನಪದ ಉಳಿಯಲಿ, ಬೆಳೆಯಲಿ…


Share