ದಸರಾ: ಕವನ,ಮನ ತುಂಬಿ, ಮನದಣಿಯೆ ಆಸ್ವಾದಿಸಿರಿ -ಆಶಾಲತಾ.

1628
Share

‘ದಸರಾ ಹಬ್ಬ’

ಎನಿತು ಸುಂದರವೋ ನಮ್ಮ ಈ ದಸರಾ ಹಬ್ಬವು,
ನೋಡಬನ್ನಿರಿ ಎಲ್ಲರು, ನೋಡ ಬನ್ನಿರಿ ಕಣ್ ತುಂಬಿ
ಮನ ತುಂಬಿ, ಮನದಣಿಯೆ ಆಸ್ವಾದಿಸಿರಿ
ಚಾಂಮುಂಡಿ ತಾಯಿಯ ಕೃಪೆಗೆ ಪಾತ್ರರಾಗಿರಿ.
ಎಲ್ಲೆಲ್ಲೂ ತಳಿರು-ತೋರಣಗಳಿಂದ ರಾಶಿ ರಾಶಿ ಕುಸುಮ ಮಾಲೆಗಳಿಂದ
ಸಿಂಗಾರಗೊಂಡು ರಾರಾಜಿಸುತ್ತಿದೆ ಮೈಸೂರು
ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು
ನವವಧುವಿನಂತೆ ಕಂಗೊಳಿಸುತಿದೆ ನಮ್ಮಿ ಮೈಸೂರು || ೧ ||

ಇಂದ್ರನ ಅಮರಾವತಿಯನ್ನೇ ನಾಚಿಸುವಂತೆ ಶೋಭಾಯಮಾನವಾಗಿ ಕಾಣುತ್ತಿದೆ ಮೈಸೂರ ಅರಮನೆ
ಐತಿಹಾಸಿಕ ಮಹತ್ವವುಳ್ಳ ದಸರಾ ‘ಜಂಬೂ ಸವಾರಿ’ಹಬ್ಬವೆಂದೆ ಪಡೆದಿದೆ ಪ್ರಸಿದ್ಧಿ
ವಿಜಯನಗರದ ಅರಸ ಕೃಷ್ಣದೇವರಾಯನೇ ನಾಡ ಹಬ್ಬಕ್ಕೆ ಬುನಾದಿ,
ಮೈಸೂರಿನ ರಾಜ ವಂಶಸ್ಥರು ನವರಾತ್ರಿ ಹಬ್ಬಕ್ಕೆ ಹಾಡಿದರು ನಾಂದಿ
ವಿಜಯದ ಸಂಕೇತವಾಗಿ ಆಚರಿಸುವ ದಸರಾ ವಿಜಯದಶಮಿಯೆಂದೆ ಪಡೆದಿದೆ ಪ್ರಖ್ಯಾತಿ || ೨ ||

ನಮ್ಮ ನಾಡು-ನುಡಿ, ಕಲೆ-ಸಂಸ್ಕೃತಿಯ ದ್ಯೋತಕವಾಗಿದೆ ದಸರಾ
‘ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ’ಯ ಪ್ರತೀಕವಾಗಿದೆ ದಸರಾ
ರಾಮ ರಾವಣನನ್ನು ಸಂಹರಿಸಿದ ದಿನ
ದಸರಾ
ತಾಯಿ ಪಾರ್ವತಿ ನವ ದುರ್ಗೆಯರ ಅವತಾರವೆತ್ತಿ ಮಹಿಷಾಸುರನನ್ನು ವಧಿಸಿದ ದಿನ ದಸರಾ
ಮಹಾಭಾರತದ ಪಾಂಡವರು ಶಸ್ತ್ರಾಸ್ತ್ರಗಳನ್ನು ಪೂಜಿಸಿದ ದಿನ ದಸರಾ || ೩ ||

ವಿಜಯನಗರದ ಅರಸರ ಶಕ್ತಿ-ಸಾಮರ್ಥ್ಯ, ಸಿರಿ-ಸಂಪತ್ತು,
ವೈಭವ-ವೈಭೋಗದ ಪ್ರತಿರೂಪವಾಗಿದೆ ದಸರಾ
ದಸರಾ ಹಬ್ಬದಿಂದಲೇ ವಿಶ್ವ ಪ್ರಸಿದ್ಧಿ ಪಡೆದಿದೆ ಮೈಸೂರು
ಶರದೃತುವಿನಲ್ಲಿ ಆಚರಿಸುವ ದಸರಾ ‘ಶರನ್ನವರಾತ್ರಿ’ಯೆಂದೆ ಖ್ಯಾತಗೊಂಡಿದೆ
ಪುರಾಣ ಪ್ರಸಿದ್ಧವಾದ ದಸರಾ ‘ಬೊಂಬೆ ಹಬ್ಬ’ವೆಂದೆ ಪ್ರಸಿದ್ಧಿ ಪಡೆದಿದೆ || ೪ ||

ಕನ್ನಡನಾಡಿನ ಕೀರ್ತಿಯನ್ನು ವಿಶ್ವ ವಿಖ್ಯಾತಗೊಳಿಸಿದೆ ದಸರಾ
ನೋಡ ಬನ್ನಿರಿ ಎಲ್ಲರು ನೋಡ ಬನ್ನಿರಿ
ನಮ್ಮಿ ನಾಡಹಬ್ಬವ ನೋಡಿ ಆನಂದಿಸಿರಿ
ಕನ್ನಡಾಂಬೆಯ ಕೃಪೆಗೆ ಪಾತ್ರರಾಗಿರಿ
ತಾಯಿ ಭುವನೇಶ್ವರಿದೇವಿಯ ಒಮ್ಮನದಿಂದ ಸ್ಮರಿಸಿರಿ || ೫ |

ಎಂ. ಎಸ್. ಆಶಾಲತಾ, ಸಹಾಯಕ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಮದ್ದೂರು


Share