ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಅಂತ್ಯ: ಸಂಗೀತ ರಸಿಕರ ಮನತಣಿಸಿದ ಲಯತರಂಗ.

346
Share

ಮೈಸೂರು, –
ಲಯವಾದ್ಯಗಳ ನಾದವಿನ್ಯಾಸದ ಲಾಲಿತ್ಯದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರಿನ ಸುಪ್ರಸಿದ್ಧ ‘ಲಯತರಂಗ’ ಸಂಗೀತ ತಂಡದವರು ಕರ್ನಾಟಕ ಶಾಸ್ತ್ರೀಯದಲ್ಲಿ ಲಯಬದ್ಧ ಹಾಗೂ ಕುತೂಹಲ ಕೆರಳಿಸುವ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅತ್ಯುತ್ತಮ ಸಂಗೀತವನ್ನು ಪ್ರಸ್ತುತಪಡಿಸಿದರು.

ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದದಲ್ಲಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಯ ದಿನವಾದ ಶನಿವಾರದಂದು ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದವರು ಹಲವಾರು ಸುಪ್ರಸಿದ್ಧ ಸಂಗೀತ ರಚನೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ನಾಂದಿ ಹಾಡಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಾದ್ಯಗಳ ಮೂಲಕ ತಮ್ಮ ಶ್ರೀಮಂತ ಸಂಗೀತ ಜ್ಞಾನವನ್ನು ಬಳಸಿಕೊಂಡು ವಿಶಿಷ್ಟವಾದ ಸಂಗೀತ ಶೈಲಿಯನ್ನು ಹೊರತಂದು ಸಂಗೀತ ರಸಿಕರ ಮನತಣಿಸಿದರು.

ಪ್ರಮುಖವಾಗಿ ಹೇಮಾವತಿ ರಾಗದಲ್ಲಿ ರಾಗ-ತಾನ-ಪಲ್ಲವಿ ಎಂಬ ವಿಶಿಷ್ಟ ಪ್ರಕಾರವನ್ನು ಮನೋಜ್ಞವಾಗಿ ಸಂಗೀತದ ಸುಂದರ ಸಮ್ಮಿಶ್ರಣ ಮಾಡುವ ಮೂಲಕ ಶ್ರೋತೃಗಳಿಗೆ ಉಣಬಡಿಸಿದರು.

ಪುರಂದರದಾಸರ ರಚನೆಯ ಕೃಷ್ಣಾ ನೀ ಬೇಗನೆ ಬಾರೋ, ಜೈ ಜಗದೀಶ್ವರಿ ಮಾತಾ ಸರಸ್ವತಿ, ಹರಿಕುಣಿದಾ ನಮ್ಮ ಹರಿಕುಣಿದಾ, ಜಗದ್ಧೊದ್ದಾರನ ಹಾಡಿಸಿದಳೆ ಯಶೋಧೆ, ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಗಳನ್ನು ಸುಮಧುರವಾಗಿ ಹಾಡಿದರು.

ನಮ್ಮ ದೇಶದ ಕೆಲವೇ ಕೆಲವು ಸುಪ್ರಸಿದ್ಧ ಫ್ಯೂಷನ್ ಬ್ಯಾಂಡ್‌ಗಳಲ್ಲಿ ವಿಶೇಷವಾದ ಮಾನ್ಯತೆ ಪಡೆದಿರುವ ಲಯತರಂಗ ತಂಡವು ಶಾಸ್ತ್ರೀಯತೆಯ ಜೊತೆಗೆ ನವೀನತೆಯ ನೆರಳನ್ನು ತೊರಿಸುತ್ತಾ ಪ್ರೇಕ್ಷಕರ ಮನಸೂರೆಗೊಂಡಿತು.

ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ, ವೇಣು ವಾದನದಲ್ಲಿ ಕೂಳೂರು ರವಿಚಂದ್ರ, ಮೃದಂಗದಲ್ಲಿ ಕೂಳೂರು ಜಯಚಂದ್ರರಾವ್, ಡ್ರಮ್ಸ್‌ನಲ್ಲಿ ಅರುಣ್ ಕುಮಾರ್, ತಬಲಾ ಮತ್ತು ಲಾಟಿನ್ ಪರ್ಕಷನ್‌ನಲ್ಲಿ ಪ್ರಮತ್ ಕಿರಣ್, ಸಿದ್ದಾರ್ಥ್ ಬೆಳಮಣ್ಣು ಇವರುಗಳು ಲಯವಿನ್ಯಾಸಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.


Share