ಶ್ರೀನಿವಾಸ್ ಪ್ರಸಾದ್ ನಿಧನ : ಪ್ರಧಾನಿ , ಮುಖ್ಯಮಂತ್ರಿ ಇತರ ಗಣ್ಯರಿಂದ ಸಂತಾಪ

114
Share

ಪ್ರಧಾನಿ ನರೇಂದ್ರ ಮೋದಿ : ಚಾಮರಾಜನಗರದ ಹಿರಿಯ ನಾಯಕ ಹಾಗೂ ಸಂಸದರಾದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ವಿವಿಧ ಸಮಾಜ ಸೇವೆಗಾಗಿ ಬಹಳ ಜನಪ್ರಿಯರಾಗಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.
ಮುಖ್ಯಮಂತ್ರಿ ಸಿದ್ದರಾಮಯ್ಯ : ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ.
ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಬಿ ಎಸ್ ಯಡಿಯೂರಪ್ಪ : ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಸಂಸದರು, ಆತ್ಮೀಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿಯಾಗಿದ್ದು, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ರಾಜ್ಯ ಹಾಗೂ ದೇಶದ‌ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಪ್ರಭಾವಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ನಾಡು ಒಬ್ಬ ಹಿರಿಯ ನೇತಾರರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
ಯದುವೀರ್ ವಡಯರ್ : ವಿ ಶ್ರೀನಿವಾಸ್ ಪ್ರಸಾದ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಿಲಿ.


Share