ನಂಜನಗೂಡು-ಕಡಕೊಳ ರೈಲ್ವೆ ಮಾರ್ಗದಲ್ಲಿ ವಿಧ್ವಂಸಕ ಯತ್ನ ವಿಫಲ

69
Share

ನಂಜನಗೂಡು-ಕಡಕೊಳ ರೈಲ್ವೆ ಮಾರ್ಗದಲ್ಲಿ ವಿಧ್ವಂಸಕ ಯತ್ನ ವಿಫಲಗೊಳಿಸಿದ ರೈಲ್ವೆನ

ನವೆಂಬರ್ 12, ಸಂಜೆ ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಲೋಕೋ ಪೈಲಟ್ (ಚಾಲಕ) ನಂಜನಗೂಡು ಮತ್ತು ಕಡಕೊಳ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಅತ್ಯಂತ ಜಾಗರೂಕವಾದ ಶ್ಲಾಘನೀಯವಾದ ಕಾರ್ಯ ಮಾಡಿದ್ದಾರೆ. ರೈಲ್ವೆ ಎಂಜಿನ್ ನ ಚಾಲಕನ ತ್ವರಿತ ಪ್ರತಿಕ್ರಿಯೆಯ ಕಾರಣವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲಾಗಿದ್ದು ರೈಲನ್ನು ಧ್ವಂಸಗೊಳಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22 ವರ್ಷ), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಈ ಮೂವರು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್. ನಂ 19/200-300 ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು. ಇದರಿಂದಾಗಿ ರೈಲು ಗಾಡಿ ಸಂಖ್ಯೆ 06275 ಅನ್ನು ಬಲವಂತವಾಗಿ ನಿಲ್ಲಿಸಬೇಕಾಯಿತು.

ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ (ಆರ್‌ಪಿಎಫ್) ಸಹಾಯಕ ರಕ್ಷಣಾ ಆಯುಕ್ತರಾದ ಶ್ರೀ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ರಾದ ಶ್ರೀ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್‌ಪಿಎಫ್ ನ ಶ್ವಾನ ದಳ ಘಟನಾ ಸ್ಥಳಕ್ಕೆ ಕ್ಷಿಪ್ರವಾಗಿ ತೆರಳಿ ಸಮಯಕ್ಕೆ ಸ್ಪಂದಿಸಿದರು. ಒಡಿಶಾದ ಮಯೂರ್‌ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ ವಿಧ್ವಂಸಕ ಕೃತ್ಯದ ಯತ್ನವನ್ನು ಒಪ್ಪಿಕೊಂಡಿದ್ದಾನೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನ.13, 2023 ರಂದು ರೈಲ್ವೆ ಕಾಯಿದೆ-1989 ರ ಅನ್ವಯ Cr.No.39/2023 U/s 150(1)(A) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯು ನಡೆಯುತ್ತಿದ್ದು ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗಬಹುದು.

ಘಟನೆಯ ಕಾರಣಕ್ಕಾಗಿ ರೈಲು ಸಂಖ್ಯೆ 06275 ಅನ್ನು ಸ್ವಲ್ಪ ಸಮಯದವರೆಗೆ – 18:39 ರಿಂದ 18:45 ಗಂಟೆಗಳವರೆಗೆ – ತಡೆಹಿಡಿಯಲಾಯಿತು. ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.

ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತವು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

 


Share