ನಾಡು ಮರೆಯದ ಕೋಟಿಗೊಬ್ಬ ಕಲಾವಿದ ದಿ. ಡಾ.ವಿಷ್ಣುವರ್ಧನ್.

1275
Share

ನಾಡು ಮರೆಯದ ಕೋಟಿಗೊಬ್ಬ ಕಲಾವಿದ ವಿಷ್ಣುವರ್ಧನ್

  • ಬನ್ನೂರು ಕೆ. ರಾಜು
    ೯೪೮೧೫೩೩೧೬೭
    ಈ ಭೂಮಿ ಬಣ್ಣದ ಬುಗುರಿ
    ಆ ಶಿವನೇ ಚಾಟಿ ಕಣೋ
    ಈ ಬಾಳು ಸುಂದರ ನಗರಿ
    ನೀನಿದರ ಮೇಟಿ ಕಣೋ
    ನಿಂತಾಗ ಬುಗುರಿಯ ಆಟ
    ಎಲ್ಲಾರು ಒಂದೇ ಓಟ
    ಕಾಲ ಕ್ಷಣಿಕ ಕಣೋ….. ಘರ್ಜನೆ ನಿಲ್ಲಿಸಿದ ಸಾಹಸ ಸಿಂಹ, ನಮ್ಮೂರ ರಾಜ ಅಸ್ತಂಗತ, ಅಗಲಿದ ಆಪ್ತಮಿತ್ರ, ಗಂಡುಗಲಿರಾಮನ ನಿರ್ಗಮನ, ಮರೆಯಾಯ್ತು ಬಂಗಾರದಕಳಶ, ಮರೆಯದ ಮಹಾಪುರುಷ, ಆರಿದ ಜೀವನಜ್ಯೋತಿ, ಚಿನ್ನದಂತಮಗ ಇನ್ನಿಲ್ಲ, ಯಜಮಾನನನ್ನು ಕಳೆದುಕೊಂಡ ಚಿತ್ರರಂಗ, ಕಣ್ಮರೆಯಾದ ಕನ್ನಡದ ಕದಂಬ, ಇಹಲೋಕಯಾತ್ರೆ ಮುಗಿಸಿದ ಅಭಿನವ ಭಾರ್ಗವ, ಮೌನಕ್ಕೆ ಶರಣಾದ ಕರ್ಣ, ಸೂರ್ಯವಂಶದ ಸೂರಪ್ಪ ಇನ್ನಿಲ್ಲ. ಕೋಟಿಗೊಬ್ಬ ವಿಷ್ಣುವರ್ಧನ್ ಇನ್ನೆಲ್ಲಿ? ಕರ್ನಾಟಕ ಸುಪುತ್ರನ ಕಣ್ಮರೆ, ಜನನಾಯಕ ಇನ್ನಿಲ್ಲ, ಆರಿದ ಸತ್ಯಜ್ಯೋತಿ, ವೀರಾಧಿವೀರ ವಿಧಿವಶ, ಅಭಿಮಾನಿಗಳನ್ನು ಅಗಲಿದ ಕಿಲಾಡಿ ಕಿಟ್ಟು, ಲಾಲಿ ಹಾಡಿನ ಸುಪ್ರಭಾತ ಸ್ತಬ್ಧ, ಮುಗಿಯಿತು ಈ ಬಂಧನ, ಮತ್ತೆ ಬಾರದ ಲೋಕಕ್ಕೆ ಕರುಣಾಮಯಿ, ಮರೆಯದ ಮಾಣಿಕ್ಯ, ತೆರೆಮರೆಗೆ ಸರಿದ ರಾಮಾಚಾರಿ, ಕಳಚಿತು ಮುತ್ತಿನಹಾರ…. ಹೀಗೆ ಬಗೆ ಬಗೆಯ ಟೈಟಲ್‌ಗಳಿಂದ, ಜಗಬೆಳಗುವ ಸೂರ್ಯ ಉದಯಿಸುವ ಮುನ್ನವೇ ಚಿತ್ರ ಜಗತ್ತಿನ ಕಲಾ ಸೂರ್ಯ ಅಸ್ತಮಿಸಿದ ಸುದ್ದಿಯನ್ನು ೨೦೦೯ರ ಡಿಸೆಂಬರ್ ೩೦ ರಂದು ಟಿ.ವಿ. ಚಾನಲ್‌ಗಳು ಬಿತ್ತರಿಸತೊಡಗಿದಾಗ ಒಂದು ಕ್ಷಣ ಇಡೀ ಕನ್ನಡ ನಾಡೇ ಅಕ್ಷರಶಃ ಸ್ತಬ್ಧವಾಗಿತ್ತು. ಕನ್ನಡಿಗರು ಬೆಳಿಗ್ಗೆ ಕಣ್ಬಿಡುತ್ತಿದ್ದಂತೆಯೇ ಆದಿನ ಮೊದಲು ಕಂಡದ್ದು, ಕೇಳಿದ್ದು ಡಾ. ವಿಷ್ಣುವರ್ಧನ್ ಕಣ್ಮರೆಯಾದದ್ದು! ದುಃಖ ಸಹಿಸಲಾಗದೆ ಗಳಗಳನೆ ಅತ್ತವರೆಷ್ಟೋ, ವಿಷ್ಣು ಸಾವಿನ ಶಾಕ್‌ಗೆ ಪ್ರಜ್ಞೆ ತಪ್ಪಿದವರೆಷ್ಟೋ, ಸತ್ತವರೂ ಉಂಟು. ರಾಜ್ಯದ ಮೂಲೆ ಮೂಲೆಗಳಿಂದ ಜನ ದೌಡಾಯಿಸಿ ಬೆಂಗಳೂರಿಗೆ ಪ್ರವಾಹದೋಪಾದಿಯಲ್ಲಿ ನುಗ್ಗಿದರು, ನೆರೆ ರಾಜ್ಯಗಳಿಂದಲೂ ಧಾವಿಸಿ ಬಂದರು. ಜನಸಾಗರದ ಭೋರ್ಗರೆತದಿಂದ ಬೆಂಗಳೂರೇ ಕೊಚ್ಚಿಹೋಗುವಂತೆ ಕೆಲವೇ ಕ್ಷಣಗಳಲ್ಲಿ, ಕೆಲವೇ ಗಂಟೆಗಳಲ್ಲಿ ಇಡೀ ಬೆಂಗಳೂರು ಜನಸಮುದ್ರದಲ್ಲಿ ಮುಳುಗಿಹೋಗಿತ್ತು. ಎಲ್ಲರದ್ದೂ ’ಒಂದೇ ಗುರಿ’ ತಮ್ಮ ಅಭಿಮಾನದ ನಟ ವಿಷ್ಣುವರ್ಧನ್‌ರ ಅಂತಿಮದರ್ಶನ ಪಡೆಯುವುದು. ವರನಟ ಡಾ. ರಾಜ್‌ಕುಮಾರ್ ಸಾವಿನ ಸಂದರ್ಭ ಬಿಟ್ಟರೆ ಇಷ್ಟೊಂದು ’ಜನಸುನಾಮಿ’ಯನ್ನು ಬೆಂಗಳೂರು ಎಂದೂ ಕಂಡಿರಲಿಲ್ಲ. ಮಹಾನ್ ಕಲಾವಿದ ಸಾಹಸಸಿಂಹ ವಿಷ್ಣುವರ್ಧನ್‌ರ ಸಾವಿಗೆ ನಾಡು ಮಿಡಿದ ಬಗೆಯಿದು. ಇಂಥ ಮಹಾನ್ ಕಲಾಚೇತನ, ನಟಸಾಮ್ರಾಟ್, ಮೈಸೂರು ರತ್ನ, ಅಭಿನವ ಸೂರ್ಯ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರಜಗತ್ತಿನಲ್ಲಿ ಉದಯವಾದದ್ದು ಕೂಡ ಒಂದು ವಿಶಿಷ್ಟ ಬಗೆಯಲ್ಲೇ…. ’ಚಿತ್ರಬ್ರಹ್ಮ’ ಪುಟ್ಟಣ್ಣ ಕಣಗಾಲ್ ಅವರು ಖ್ಯಾತಿಯ ತುತ್ತತುದಿಯಲ್ಲಿದ್ದ ಕಾಲವದು. ಆಗ ಪುಟ್ಟಣ್ಣನವರ ಮೇಲೆ ಒಂದು ಆಪಾದನೆಯಿತ್ತು. ಅದೆಂದರೆ ಅವರು ಬರೀ ನಾಯಕಿ ಪ್ರಧಾನ ಚಿತ್ರಗಳನ್ನು ತೆಗೆಯುತ್ತಾರೆಂಬುದು. ಪುಟ್ಟಣ್ಣನವರಿಗೆ ನಾಯಕ ಪ್ರಧಾನ ಚಿತ್ರಗಳು ಒಗ್ಗುವುದಿಲ್ಲ. ಅವರು ಹೀರೋಯಿನ್‌ಗಳನ್ನು ಮೆರೆಸುತ್ತಾರೆಯೇ ವಿನಃ ಹೀರೋಗಳನ್ನು ಮೆರೆಸುವುದಿಲ್ಲವೆಂಬ ಮಾತುಗಳು ಪುಟ್ಟಣ್ಣನವರ ಬೆನ್ನಿಂದೆ ವ್ಯಂಗ್ಯ ಮಾಡುತ್ತಿದ್ದವು. ಇದನ್ನು ಗಮನಿಸುತ್ತಲೇ ಬಂದಿದ್ದ ಪುಟ್ಟಣ್ಣ ಒಂದು ಸಲ ತುಸು ಸಿಟ್ಟಿನಿಂದಲೇ ಈ ಸಲ ನಾನೊಂದು ಚಿತ್ರವನ್ನು ಮಾಡುತ್ತೇನೆ. ’ನಾಗರಹಾವು’ ಎಂಬ ಈ ಚಿತ್ರದ ನಾಯಕನ ಪಾತ್ರವು ದಶಕಗಳ ಕಾಲ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಆ ಪಾತ್ರವನ್ನು ಯಾರು ಮಾಡಿದರೂ ಆತ ಖಾಯಂ ಆಗಿ ಬೆಳ್ಳಿತೆರೆಯಲ್ಲಿ ನಿಲ್ಲುತ್ತಾನೆ ಎಂದು ಗುಡುಗಿದ್ದರು. ಚಿತ್ರಬ್ರಹ್ಮನ ಮಾತು ಹುಸಿಯಾಗಲಿಲ್ಲ. ’ನಾಗರಹಾವು’ ಚಿತ್ರದ ನಾಯಕನ ಪಾತ್ರ ನಿರ್ವಹಿಸಿದ ಅಂದಿನ ಸಂಪತ್‌ಕುಮಾರ್ ಎಂಬ ಸಾಮಾನ್ಯ ಹುಡುಗ ಆ ನಂತರ ಅಸಾಮಾನ್ಯ ಕಲಾವಿದನಾಗಿ ಬೆಳೆದು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದು ಈಗ ಇತಿಹಾಸ. ಆ ಹುಡುಗನೇ ಸಾಹಸಸಿಂಹ, ಅಭಿನವ ಭಾರ್ಗವ, ಮೈಸೂರು ರತ್ನ ಎಂಬೆಲ್ಲಾ ವಿಶೇಷಣಗಳನ್ನು ಅಭಿಮಾನಿಗಳಿಂದ ಪಡೆದು ಕನ್ನಡ ಚಿತ್ರಜಗತ್ತಿನಲ್ಲಿ ಶಾಶ್ವತಗೊಂಡು ಈಗ (ನಿಧನ ಡಿಸೆಂಬರ್ ೩೦, ೨೦೦೯) ಅಮರರಾಗಿರುವ ಭಾವಪೂರ್ಣ ಕಲಾವಿದ, ಬೆಳ್ಳಿತೆರೆಯ ಬಂಗಾರದ ತಾರೆ ಡಾ. ವಿಷ್ಣುವರ್ಧನ್! ಹೀಗೆ ಪುಟ್ಟಣ್ಣ ಸೃಷ್ಠಿಸಿದ ಅಪೂರ್ವ ಕಲಾರತ್ನವಾಗಿ ’ನಾಗರಹಾವು’ ಮೂಲಕ ನಾಯಕನಟರಾಗಿ ೧೯೭೨ ರಲ್ಲಿ ತಮ್ಮ ಚಿತ್ರಯಾತ್ರೆಯನ್ನು ಆರಂಭಿಸಿದ ವಿಷ್ಣುವರ್ಧನ್ ಅವರು ಮೊದಲ ಚಿತ್ರದಲ್ಲೇ ಮಹದದ್ಭುತ ಕಂಡವರು. ಒಂದು ರೀತಿ ನೂರು ಚಿತ್ರಗಳ ಯಶಸ್ಸನ್ನು ಒಂದೇ ಚಿತ್ರದಲ್ಲಿ ಕಂಡ ಅನುಭವ. ’ನಾಗರಹಾವು ಚಿತ್ರಕ್ಕೆ ದೇವರಾಜ ಅರಸು ಕೈಲಿ ಪ್ರಶಸ್ತಿ ಸ್ವೀಕರಿಸಿದೆ. ರಾಜ್‌ಕುಮಾರ್ ಜತೆ ಫಿಲಂಫೇರ್ ಪ್ರಶಸ್ತಿ ಬಂತು. ಶಿವಾಜಿ ಗಣೇಶನ್ ಜತೆ ಸಿನಿ ಎಕ್ಸ್‌ಪ್ರೆಸ್ ಪ್ರಶಸ್ತಿ ಸಿಕ್ಕಿದೆ. ನಾಗರಹಾವು ಚಿತ್ರಕ್ಕಿಂತ ಬೇರೆ ಸಿನಿಮಾ ಬೇಕೆ? ಆ ಚಿತ್ರ ನೀಡಿದ ಯಶಸ್ಸಿಗಿಂತ ಇನ್ನೇನು ಬೇಕು? ಏನೂ ಗೊತ್ತಿಲ್ಲದೇ ಇದ್ದಾಗ ಅಂತಹ ಚಿತ್ರ ಕೊಟ್ಟಿದ್ದೇನೆ. ಅದು ಬದುಕಿನಲ್ಲಿ ಕಂಡ ದೊಡ್ಡ ಯಶಸ್ಸು’ ಎಂದು ಸ್ವತಃ ವಿಷ್ಣುವರ್ಧನ್ ಅವರೇ ಅವರು ಬದುಕಿರುವ ತನಕವೂ ಆಗಾಗ್ಗೆ ಹೇಳುತ್ತಿದ್ದುದುಂಟು. ಆವತ್ತು ಏನೇನೂ ಅಲ್ಲದ ಮೈಸೂರಿನ ಹುಡುಗ ಹೀರೋ ಆಗಿ ನಟಿಸಿದ್ದ ’ನಾಗರಹಾವು’ ಒಮ್ಮೆಗೇ ಎಂಟು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಗಳಿಕೆಯಲ್ಲೂ ಅಷ್ಟೇ, ನಿರ್ಮಾಪಕನ ಬೊಕ್ಕಸಕ್ಕೆ ಹಣದ ಹೊಳೆಯನ್ನೇ ಹರಿಸಿತ್ತು. ಅಂಗ್ರಿಯಂಗ್‌ಮ್ಯಾನ್ ವಿಷ್ಣುವರ್ಧನ್ ದಿನ ಬೆಳಗಾಗುವುದರೊಳಗೆ ಏಕಮಾತ್ರ ಚಿತ್ರದಿಂದಲೇ ಏಕಮೇವಾಧಿತ್ಯ ತಾರೆಯಾಗಿಬಿಟ್ಟಿದ್ದರು. ಪುಟ್ಟಣ್ಣನಂತಹ ಅಪ್ರತಿಮ ನಿರ್ದೇಶಕನ ಶಕ್ತಿ ಮತ್ತು ವಿಷ್ಣುವರ್ಧನ್ ಅವರ ಅಭಿನಯದ ತಾಕತ್ತು ಇಂಥ ಯಶಸ್ಸಿನ ಮೂಲ ಧಾತುವಾಗಿತ್ತು. ತಮ್ಮ ಪ್ರಥಮ ಹಂತದಲ್ಲೇ ಇಂಧ ಯಶಸ್ಸು ಕಂಡವರಲ್ಲಿ ಬಹುಶಃ ವಿಷ್ಣುವರ್ಧನ್ ಅವರೇ ಮೊದಲಿಗರೆನ್ನಬಹುದು. ಅದೇ

ಯಶಸ್ಸನ್ನು ತಮ್ಮ ಚಿತ್ರ ಬದುಕಿನ ಕೊನೆತನಕವೂ ಉಳಿಸಿಕೊಂಡು ಬಂದ ಹೆಗ್ಗಳಿಕೆಯ ವಿಷ್ಣು ೨೦೦ ಚಿತ್ರಗಳಲ್ಲಿ ನಟಿಸಿ ತಮ್ಮ ಭಾವಪೂರ್ಣ ಅಭಿನಯದಿಂದ ಸರ್ವಶ್ರೇಷ್ಠ ನಟರೆನಿಸಿದ್ದರು. ಅವರು ಚಿತ್ರರಂಗ ಪ್ರವೇಶಿಸಿದ್ದ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಘಟಾನುಘಟಿ ನಟರುಗಳ ದಂಡೇ ಇತ್ತು. ಇವರೆಲ್ಲರ ನಡುವೆ ಪ್ರತ್ಯೇಕವಾಗಿ ಗುರುತಿಸಿಕೊಂಡು ಬೆಳೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅಂತಹುದರಲ್ಲಿ ತಮ್ಮ ಪ್ರತಿಭೆ ಮಾತ್ರದಿಂದಲೇ ಚಿತ್ರರಸಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಆರಂಭದಿಂದ ಅಂತ್ಯದವರೆಗೂ ಏಕಮುಖವಾಗಿ ಬೆಳ್ಳಿತೆರೆಯಲ್ಲಿ ಹಿಮಾಲಯದಂತೆ ಅವರು ಬೆಳೆದು ನಿಂತದ್ದು ಸಾಮಾನ್ಯ ಸಾಧನೆ ಏನೂ ಅಲ್ಲ. ’ಬಳ್ಳಾರಿ ನಾಗ’ ವಿಷ್ಣು ಬದುಕಿದ್ದಾಗ ಬಿಡುಗಡೆಗೊಂಡ ಅವರ ಕೊನೆಯ ಚಿತ್ರವಾದರೆ, ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಿದ್ಧವಾಗಿದ್ದ ಚಿತ್ರಗಳು ’ಸ್ಕೂಲ್ ಮಾಸ್ಟರ್’ ಮತ್ತು ವಿಷ್ಣು ಅವರ ಮಹತ್ವಾಕಾಂಕ್ಷೆಯ ಚಿತ್ರ ’ಆಪ್ತರಕ್ಷಕ’. ವಿಷ್ಣುವರ್ಧನ್‌ರ ೨೦೦ ನೇ ಚಿತ್ರವಾಗಿ ’ಆಪ್ತರಕ್ಷಕ’ ಬಿಡುಗಡೆಗೊಂಡು ಎಲ್ಲಾ ರೀತಿಯಿಂದಲೂ ಕನ್ನಡ ಚಿತ್ರರಂಗದಲ್ಲೊಂದು ಹೊಸ ದಾಖಲೆ ಬರೆದದ್ದು ಈಗ ಇತಿಹಾಸ.

ಅಭಿನಯದ ವಿಷಯಕ್ಕೆ ಬಂದರೆ ವಿಷ್ಣುವಿಗೆ ವಿಷ್ಣುವೇ ಸಾಟಿ. ನಾಗರಹಾವಿನ ರಾಮಾಚಾರಿ, ಭೂತಯ್ಯನ ಮಗ ಅಯ್ಯುವಿನ ಗುಳ್ಳ, ಗಂಧದ ಗುಡಿಯ ಕುಮಾರ್, ಬಂಧನದ ಡಾ. ಹರೀಶ್, ಮಾತಾಡ್ ಮಾತಾಡ್ ಮಲ್ಲಿಗೆಯ ಹೂವಯ್ಯ, ವೀರಪ್ಪನಾಯಕನ ನಾಯಕ, ಪೊಲೀಸ್ ಮತ್ತು ದಾದಾದ ಇನ್ಸ್‌ಪೆಕ್ಟರ್ ಧನುಷ್ ಇವರನ್ನು ಮರೆಯಲಾದೀತೆ? ಈ ಪಾತ್ರಗಳಿಗೆ ಜೀವತುಂಬಿದ ವಿಷ್ಣುವರ್ಧನ್ ಅವರ ಅಭಿನಯದ ಸುಗಂಧ ಸರ್ವಕಾಲಕ್ಕೂ ಸುವಾಸನೆ ಬೀರುವಂತಾದ್ದು, ಹಾಗೆಯೇ ಮುತ್ತಿನಹಾರದ ಸೈನಿಕ, ನಿಷ್ಕರ್ಷದ ಕಮಾಂಡರ್, ಕಳ್ಳಕುಳ್ಳದ ಕಳ್ಳ, ದಿಗ್ಗಜರುವಿನ ಕುಚುಕು ಗೆಳೆಯ, ಜಿಮ್ಮಿಗಲ್ಲಿನ ಖೈದಿ, ಹೊಂಬಿಸಿಲಿನ ವೈದ್ಯ, ಲಾಲಿಯ ಪ್ರೇಮಮಯಿ ತಂದೆ, ಸುಪ್ರಭಾತದ ಪೆಟ್ರೋಲ್‌ಬಂಕ್ ಮಾಲೀಕ, ಸಾಹಸಸಿಂಹದ ಪೊಲೀಸ್ ಅಧಿಕಾರಿ, ಜಯಸಿಂಹದ ಅರಣ್ಯಾಧಿಕಾರಿ, ಕೋಟಿಗೊಬ್ಬದ ಅಂಡರ್‌ವರ್ಲ್ಡ್ ಡಾನ್, ಗುರು ಶಿಷ್ಯರುವಿನ ಮಹಾರಾಜ, ಮಣಿಕಂಠನ ಮಹಿಮೆಯ ಮೂಗ, ವಿಷ್ಣುಸೇನಾದ ಪ್ರೊಫೆಸರ್, ಹೃದಯಗೀತೆಯ ಅಮರಪ್ರೇಮಿ, ಕರ್ಣನ ತ್ಯಾಗಿ, ಮಲೆಯ ಮಾರುತದ ಸಂಗೀತ ವಿದ್ವಾಂಸ ಮುಂತಾದವರನ್ನು ಮರೆತವರುಂಟೆ? ಇಂಥ ಅಭೂತಪೂರ್ವ ಕ್ಯಾರೆಕ್ಟರ್‌ಗಳನ್ನು ಹೊತ್ತುಬಂದ ಒಂದೊಂದು ಚಿತ್ರಗಳೂ ಪಾತ್ರ ವೈವಿಧ್ಯತೆಯಿಂದ ವಿಷ್ಣುವರ್ಧನ್ ಅವರ ಅದ್ಭುತ ಪ್ರತಿಭೆಯ ಮೈಲೇಜನ್ನು ಹೇಳುವ ಮೈಲಿಗಲ್ಲುಗಳಾಗಿ ನಿಂತಿವೆ. ಪಾತ್ರ ಯಾವುದಾದರೂ ಸರಿಯೇ ಅದರ ಒಳಹೊಕ್ಕಿ ನಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ವಿಷ್ಣುವರ್ಧನ್ ಈ ಕಾರಣಕ್ಕಾಗಿಯೇ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದ್ದರು.

ರೀಮೇಕ್ ಚಿತ್ರಗಳಲ್ಲೂ ತಮ್ಮದೇ ಆದ ಹೊಸತನದ ವಿಶಿಷ್ಟ ಅಭಿನಯ ನೀಡುತ್ತಿದ್ದದ್ದು ವಿಷ್ಣುವರ್ಧನ್ ಅವರ ವಿಶೇಷ. ಜೀವನ ಚಕ್ರ, ಸೂರ್ಯವಂಶ, ಯಜಮಾನ, ಆಪ್ತಮಿತ್ರದಂಥ ಸೂಪರ್ ಹಿಟ್ ಚಿತ್ರಗಳೇ ಇದಕ್ಕೆ ಸಾಕ್ಷಿ. ಅದರಲ್ಲೂ ಯಜಮಾನ ಮತ್ತು ಆಪ್ತಮಿತ್ರ ಚಿತ್ರಗಳು ಹಲವು ಹತ್ತು ದಾಖಲೆಗಳನ್ನು ಕನ್ನಡ ಚಿತ್ರಚರಿತ್ರೆಯಲ್ಲಿ ಬರೆದಿಟ್ಟಿವೆ. ಮತ್ತೆ ಹಾಡಿತು ಕೋಗಿಲೆ, ಮನೆ ಮನೆ ಕಥೆ, ಕರುಣಾಮಯಿ, ಅವಳ ಹೆಜ್ಜೆ, ಸಿಂಹಜೋಡಿ, ಬಿಳಿಗಿರಿಯ ಬನದಲ್ಲಿ, ಒಂದೇ ಗುರಿ, ನಾಗರಹೊಳೆ, ಸಹೋದರರ ಸವಾಲ್, ಭಾಗ್ಯಜ್ಯೋತಿ, ಕಿಲಾಡಿಜೋಡಿ, ದೇವರಗುಡಿ, ಪ್ರೊಫೆಸರ್ ಹುಚ್ಚೂರಾಯ, ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಖೈದಿ, ಜಮೀನ್ದಾರ್ರು, ದೇವ, ಸೂರಪ್ಪ, ಕರುಳಿನ ಕುಡಿ, ಆಸೆಯ ಬಲೆ, ಸಾಮ್ರಾಟ್, ಧಣಿ, ಪರ್ವ, ತುಂಬಿದ ಮನೆ, ಕದಂಬ, ಕರ್ನಾಟಕ ಸುಪುತ್ರ, ನಂಯಜಮಾನ್ರು ಮುಂತಾದ ಚಿತ್ರಗಳು ಇವರ ಅಭಿನಯಕ್ಕೆ ಹೆಚ್ಚು ಮೆರಗನ್ನಿತ್ತಿವೆ. ಸಾಟಿಯಿಲ್ಲದ ಸವ್ಯಸಾಚಿ ಕಲಾವಿದ ಇವರೆಂದು ಈಗಲೂ ಸಾರಿ ಹೇಳುತ್ತವೆ. ನಾಗರಹಾವು (೧೯೭೨-೭೩), ಹೊಂಬಿಸಿಲು (೧೯೭೭-೭೮), ಬಂಧನ (೧೯೮೪-೮೫), ಸುಪ್ರಭಾತ (೧೯೮೮-೮೯), ಲಯನ್ ಜಗಪತಿರಾವ್ (೧೯೯೦-೯೧), ಲಾಲಿ (೧೯೯೭-೯೮), ವೀರಪ್ಪ ನಾಯಕ (೧೯೯೮-೯೯) ಚಿತ್ರಗಳು ವಿಷ್ಣುವರ್ಧನ್ ಅವರಿಗೆ ಏಳು ಬಾರಿ ಕರ್ನಾಟಕ ಸರ್ಕಾರದ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ’ಸುಪ್ರಭಾತ’ ಚಿತ್ರದ ಅಭಿನಯಕ್ಕಾಗಿ ೧೯೮೯ ನೇ ಸಾಲಿನ ಪ್ರತಿಷ್ಠಿತ ಆರೆನ್ನಾರ್ ಪ್ರಶಸ್ತಿ, ತರಂಗಿಣಿ-ಬರ್ಕ್‌ಲೀ ಪ್ರಶಸ್ತಿ, ಮದ್ರಾಸ್ ಚಿತ್ರ ರಸಿಕರ ಪ್ರಶಸ್ತಿ, ಕೇರಳೀಯರ ಕಲಾವೇದಿ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ೧೯೯೦ ರಲ್ಲಿ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೪ ರಲ್ಲಿ ಫಿಲಂಫೇರ್ ಲೈಫ್‌ಟೈಂ ಅಚೀವ್‌ಮೆಂಟ್ ಅವಾರ್ಡ್, ೨೦೦೫ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ನೂರಾರು ಪ್ರಶಸ್ತಿ-ಪುರಸ್ಕಾರ, ಬಿರುದು-ಬಾವಲಿಗಳಿಗೆ ಭಾಜನರಾಗಿದ್ದ ಅವರು ಏಳು ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದರಲ್ಲದೆ, ಇವೆಲ್ಲಕ್ಕೂ ಹೊನ್ನಕಳಶವಿಟ್ಟಂತೆ ತಮ್ಮ ಬಣ್ಣದ ಬದುಕಿನ ಸಮಗ್ರ ಸಾಧನೆಗಾಗಿ ರಾಜ್ಯ ಸರ್ಕಾರದಿಂದ ೨೦೦೮ ನೇ ಸಾಲಿನ ಪ್ರತಿಷ್ಠಿತ ಡಾ|| ರಾಜ್‌ಕುಮಾರ್ ಪ್ರಶಸ್ತಿಗೆ ವಿಷ್ಣುವರ್ಧನ್ ಅವರು ಭಾಜನರಾಗಿ ಸಮಸ್ತ ಕಲಾವಿದರಿಗೆ, ಅಭಿಮಾನಿಗಳಿಗೆ ಹರ್ಷ ತಂದಿದ್ದರು. ನಿಜಕ್ಕೂ ಇದು ವಿಷ್ಣುವರ್ಧನ್ ಅವರ ಮಹತ್ಸಾಧನೆಗೆ ಸಂದ ಮಹಾಗೌರವವೇ ಸರಿ. ಹಾಗೆಯೇ ವಿಷ್ಣು ಅವರ ಮಹದದ್ಭುತ ಅಭಿನಯದಿಂದಲೇ ಅರಳಿದ ’ಮಾತಾಡ್ ಮಾತಾಡ್ ಮಲ್ಲಿಗೆ’ ಸಹ ಇದೇ ಸಂದರ್ಭದಲ್ಲಿ ಮೂರನೇ ಅತ್ಯುತ್ತಮ ಶ್ರೇಷ್ಠ ಚಿತ್ರ ಪ್ರಶಸ್ತಿಯ ಕಿರೀಟ ತೊಟ್ಟಿತ್ತು. ಇದರ ಸಂಪೂರ್ಣ ಕ್ರೆಡಿಟ್ ಸಹ ವಿಷ್ಣುವರ್ಧನ್ ಅವರ ಅಮೋಘ ನಟನೆಗೇ ಸಲ್ಲಬೇಕು.

ಇಂಥ ಪ್ರತಿಭೆಯ ಗಣಿ ಡಾ. ವಿಷ್ಣುವರ್ಧನ್ ಜನಿಸಿದ್ದು ೧೯೫೦ ರ ಸೆಪ್ಟೆಂಬರ್ ೧೮ ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ತಂದೆ ಎಚ್.ಎಲ್. ನಾರಾಯಣರಾವ್ ಪತ್ರಕರ್ತರೂ ಮತ್ತು ಚಿತ್ರಸಾಹಿತಿಗಳೂ ಆಗಿದ್ದು ಆ ಕಾಲದಲ್ಲೇ ಮಂಗಳಸೂತ್ರ, ವರದಕ್ಷಿಣೆ ಮುಂತಾದ ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ತಾಯಿ ಕಾಮಾಕ್ಷಮ್ಮ ಆಕಾಶವಾಣಿ ಕಲಾವಿದೆಯಾಗಿದ್ದರು. ಕಲೆ, ಸಾಹಿತ್ಯ, ಸಂಗೀತದ ಹಿನ್ನೆಲೆಯ ಇಂಥ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ್ದ ವಿಷ್ಣುವರ್ಧನ್ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಆರಂಭಿಸಿ ಪಿಯುಸಿ ತನಕ ಮೈಸೂರಿನಲ್ಲೇ ಕಲಿತು ಬೆಂಗಳೂರಿನ ನ್ಯಾಷನಲ್ ಕಲೇಜಿನಲ್ಲಿ ಬಿ.ಎಸ್ಸಿ. ಪದವಿ ಮುಗಿಸಿದ್ದರು. ಅಂದಿನ ಖ್ಯಾತ ಪತ್ರಕರ್ತ ವೈಎನ್ಕೆ ಅವರಿಂದಾಗಿ ಗಿರೀಶ್ ಕಾರ್ನಾಡ್-ಬಿ.ವಿ. ಕಾರಂತ್ ಜೋಡಿಯ ’ವಂಶವೃಕ್ಷ’ ಚಿತ್ರದಲ್ಲಿ ಅಭಿನಯಿಸುವ ಯೋಗ ಕೂಡಿ ಬಂದಾಗ ಮನೆಯವರು ವಿರೋಧಿಸಿದ್ದರಾದರೂ ವಿಷ್ಣುವರ್ಧನ್ ಅವರ ಅಭಿಮಾನದ ಗುರುಗಳಾಗಿದ್ದ ಎಚ್. ನರಸಿಂಹಯ್ಯ ಅವರು ತಿಳಿಹೇಳಿ ಮನೆಯವರನ್ನು ಒಪ್ಪಿಸಿದ್ದರಿಂದ ’ವಂಶವೃಕ್ಷ’ದಲ್ಲಿ ಅವರು ನಟಿಸಿದ್ದರು. ಹಾಗೆ ನೋಡಿದರೆ ವಿಷ್ಣು ಬಾಲನಟರಾಗಿ ೧೯೫೫ ರಲ್ಲೇ ಶಿವಶರಣೆ ನಂಬಿಯಕ್ಕ, ಕೋಕಿಲವಾಣಿ, ಸತಿಸುಕನ್ಯ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಂಪತ್‌ಕುಮಾರ್ ಎಂದಿದ್ದ ಅವರ ಮೂಲ ಹೆಸರು ’ವಂಶವೃಕ್ಷ’ ಕ್ಕಾಗಿ ಕುಮಾರ್ ಆಗಿ ಮೊಟಕಾಗಿತ್ತು. ನಂತರ ’ನಾಗರಹಾವು’ ಚಿತ್ರಕ್ಕಾಗಿ ಪುಟ್ಟಣ್ಣನಿಂದ ಅವರು ವಿಷ್ಣುವರ್ಧನ್ ಆದದ್ದು ಈಗ ಇತಿಹಾಸ.

೧೯೭೩ ರಲ್ಲಿ ’ಮನೆ ಬೆಳಗಿದ ಸೊಸೆ’ ಚಿತ್ರದಲ್ಲಿ ತಮಗೆ ನಾಯಕಿಯಾಗಿ ಅಭಿನಯಿಸಿದ್ದ ಅಂದಿನ ತಾರೆ ಭಾರತಿಯವರನ್ನೇ ಪ್ರೀತಿಸಿ ೧೯೭೫ರ ಫೆಬ್ರವರಿ ೨೭ ರಂದು ಮದುವೆಯಾದ ವಿಷ್ಣುವರ್ಧನ್ ಅವರು ತಮ್ಮ ತಾರಾಪತ್ನಿ ಭಾರತಿ ಜೊತೆ ದತ್ತು ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್, ಮೊಮ್ಮಗ ಜೇಷ್ಠ, ಮೊಮ್ಮಗಳು ಶ್ಲೋಕ, ಮತ್ತೊಬ್ಬ ದತ್ತು ಪುತ್ರಿ ಚಂದನಾ ಅವರೊಡನೆ ಕೌಟುಂಬಿಕವಾಗಿ ಸುಖೀಪುರುಷರಾಗಿದ್ದರು. ವೃತ್ತಿ ಜೀವನದಲ್ಲೂ ಅಷ್ಟೇ ಸಿಹಿ-ಕಹಿಗಳೆರಡರಲ್ಲೂ ಸಮಚಿತ್ತದಿಂದ ಸ್ವೀಕರಿಸಿ ಕಲಾದೇವಿಯ ಸೇವೆ ಮಾಡುತ್ತಲೇ ಆನಂದ ಕಾಣುತ್ತಿದ್ದ, ಸಂತನಂಥ ಮನಸ್ಸಿನ ಮಹಾನ್ ಕಲಾವಿದ ಡಾ. ವಿಷ್ಣುವರ್ಧನ್ ಅವರು ಇಂದು ಇಲ್ಲವಾಗಿದ್ದರೂ ತಮ್ಮ ಚಿತ್ರ ಬದುಕಿನ ಸಾಧನೆ-ಸಿದ್ಧಿಗಳ ಮೂಲಕ ಅವರು ಶಿಖರಪ್ರಾಯವಾಗಿ ಎಂದೆಂದಿಗೂ ಅಜರಾಮರರಾಗಿದ್ದಾರೆ. ಕನ್ನಡ ಚಿತ್ರರಂಗ ಮತ್ತೊಬ್ಬ ವಿಷ್ಣುವರ್ಧನ್‌ರನ್ನು ಕಾಣಲಾದೀತೆ?

Share