M.P. ಫೋಕಸ್-ಮ ಶಾಸ್ತ್ರಿಜೀಯವರ ವಿಶೇಷತೆ ಏನು?

30
Share

✍️ಎಸ್.ಎಲ್. ವರಲಕ್ಷ್ಮೀಮಂಜುನಾಥ್.

 

ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಪ್ರತಿಯೊಬ್ಬ ಭಾರತೀಯನು ಮರೆಯದೆ ಸ್ಮರಿಸಿಕೊಳ್ಳಬೇಕು ಎಂಬುದಕ್ಕೆ ಅವರ ಇಡೀ ಜೀವನ, ಸಾಧನೆಗಳು,ದೇಶಕ್ಕಾಗಿ ಅವರು ಮಾಡಿದ ತ್ಯಾಗ ಎಲ್ಲವನ್ನೂ ಒಮ್ಮೆ ಅವಲೋಕಿಸಬೇಕಾಗುತ್ತದೆ.ಆಗ ಮಾತ್ರ ಅವರ ಮಹಾನ್ ವ್ಯಕ್ತಿತ್ವದ ಅರಿವಾಗುತ್ತದೆ.
ಲಾಲ್ ಬಹಾದ್ದೂರ್ ಶಾಸ್ತ್ರಿ ಎಂಬ ಹೆಸರು ಕೇಳಿದ ಕೂಡಲೇ ಪುಟ್ಟ ಶರೀರದ ಮಹಾನ್ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ.ಜವಾಹಾರ್ ಲಾಲ್ ನೆಹರುರವರ ನಂತರ ದೇಶದ ಕಷ್ಟದ ಪರಿಸ್ಥಿತಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು ಇಡೀ ವಿಶ್ವವೇ ಬೆರಗಾಗುವಂತೆ ಭಾರತವನ್ನು ಮುನ್ನಡೆಸಿದ ಕೀರ್ತಿ ಶಾಸ್ತ್ರಿಯವರದ್ದು.

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಸಾಮಾನ್ಯ ವರ್ಗದ ಕುಟುಂಬವೊಂದರಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು.ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ.ವಾರಣಾಸಿಯ ಬಳಿಯ ಮೊಘಲ್ ಸರಾಯಿ ಶಾಸ್ತ್ರಿಯವರ ಹುಟ್ಟೂರು.ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ಕಡುಬಡತನದಲ್ಲೇ ಬೆಳೆದು ಬಂದವರು.ಅವರಿದ್ದ ಹಳ್ಳಿಯಿಂದ ಎಲ್ಲದಕ್ಕೂ ಪಕ್ಕದ ಕಾಶಿ ಪಟ್ಟಣಕ್ಕೆ ಹೋಗಬೇಕಾಗಿತ್ತು.ಆದರೆ ಇದಕ್ಕಾಗಿ ಗಂಗಾ ನದಿಯನ್ನು ತೆಪ್ಪದಲ್ಲಿ ದಾಟಬೇಕಾಗಿತ್ತು. ಒಮ್ಮೆ ಕಾಶಿ ಪಟ್ಟಣದಲ್ಲಿ ಜಾತ್ರೆ ನಡೆಯುತ್ತಿತ್ತು. ಅದನ್ನು ನೋಡುವ ಆಸೆಯಿಂದ ಶಾಸ್ತ್ರಿಯವರು ತಮ್ಮ ಓರಗೆಯ ಮಕ್ಕಳೊಂದಿಗೆ ಕಾಶಿಗೆ ತೆರಳಿದರು. ಆದರೆ ಬರುವಾಗ ತೆಪ್ಪದವನಿಗೆ ಕೊಡಲು ಅವರ ಬಳಿ ಹಣವಿರಲಿಲ್ಲ.ಅತ್ಯಂತ ಸ್ವಾಭಿಮಾನಿಯಾದ ಶಾಸ್ತ್ರಿಯವರು ತಾನು ಆಮೇಲೆ ಬರುತ್ತೇನೆಂದು ಸ್ನೇಹಿತರಿಗೆ ತಿಳಿಸಿ ಅವರೆಲ್ಲ ತೆರಳಿದ ಬಳಿಕ,ತುಂಬಿ ಹರಿಯುತ್ತಿದ್ದ ಗಂಗಾ ನದಿಗೆ ಧುಮುಕಿ ಈಜಿ ತಮ್ಮ ಹಳ್ಳಿ ಸೇರಿದರು.ಈ ಘಟನೆ ಶಾಸ್ತ್ರಿಯವರ ಧೈರ್ಯ,ಸ್ವಾಭಿಮಾನದ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ.ಮೆಟ್ರಿಕ್ ವರೆಗೆ ಕಲಿತ ಅವರು 1921ರ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.ಅವರನ್ನು ಬಂಧಿಸಲಾಯಿತಾದರೂ ಅಪ್ರಾಪ್ತ ವಯಸ್ಕರೆಂದು ಬಿಡುಗಡೆ ಮಾಡಲಾಯಿತು. ಹೀಗೆ ಅತ್ಯಂತ ಕಿರಿ ವಯಸ್ಸಿನಲ್ಲೇ ಅಪ್ರತಿಮ ದೇಶಭಕ್ತಿ ಬೆಳೆಸಿಕೊಂಡಿದ್ದ ಶಾಸ್ತ್ರಿಯವರು ತಮ್ಮ ಇಡೀ ಜೀವನವನ್ನೇ ದೇಶ ಸೇವೆಗೆ ಮುಡಿಪಿಟ್ಟರು.ಕಾಶಿ ವಿದ್ಯಾಪೀಠದಲ್ಲಿ ವ್ಯಾಸಂಗ ಮುಂದುವರೆಸಿದ ಶಾಸ್ತ್ರಿಯವರು ಶಾಸ್ತ್ರಿ ಎಂಬ ಪದವಿ ಪಡೆದರು.ಈ ಪದವಿಯ ಬಳಿಕ ಲಾಲ್ ಬಹುದ್ದೂರ್ ಶ್ರೀ ವಾತ್ಸವ್ ಎಂಬ ಜಾತಿ ಸೂಚಕವಾಗಿದ್ದ ತಮ್ಮ ಹೆಸರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಎಂದು ಬದಲಾಯಿಸಿಕೊಂಡು ಅದೇ ಹೆಸರಿನಲ್ಲೇ ಖ್ಯಾತರಾದರು.ಇದು ಅವರ ಜಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆ.ಜಾತಿ ಸಂಘರ್ಷಗಳು ಹೆಚ್ಚಿರುವ,ಜಾತಿ ಆಧಾರಿತ ರಾಜಕಾರಣ ನಡೆಯುತ್ತಿರುವ ಇಂದಿನ ಸಮಾಜಕ್ಕೆ ಶಾಸ್ತ್ರಿಯವರ ಈ ನಡೆ ಆದರ್ಶವಾಗಿದೆ.1927ರಲ್ಲಿ ಮಿರ್ಜಾಪುರದ ಲಲಿತಾದೇವಿಯವರ ಜೊತೆ ಶಾಸ್ತ್ರಿಯವರ ವಿವಾಹವಾಗುತ್ತದೆ. ಅಂದಿನ ಕಾಲದಲ್ಲಿ ವರದಕ್ಷಿಣೆ ಎಂಬುದು ಬಹಳ ಸಾಮಾನ್ಯವಾಗಿತ್ತು. ವಧುವಿನ ಕಡೆಯವರು ಶಾಸ್ತ್ರಿಯವರಿಗೆ ವರದಕ್ಷಿಣೆ ಪಡೆಯುವಂತೆ ಬಹಳ ಒತ್ತಾಯ ಮಾಡಿದರು.ಅವರ ಒತ್ತಡಕ್ಕೆ ಮಣಿದ ಶಾಸ್ತ್ರಿಯವರು ಅವರಿಂದ ಒಂದು ಚರಕ,ಸ್ವಲ್ಪ ಹತ್ತಿಯನ್ನು ವರದಕ್ಷಿಣೆಯಾಗಿ ಪಡೆದರು.ಇದು ಅವರ ಸರಳತೆ, ಉದಾತ್ತ ಮನೋಭಾವಕ್ಕೆ ಉದಾಹರಣೆಯಾಗಿದೆ.ವೈಭವ, ಆಡಂಬರ ಬಯಸುವ ಡಾಂಭಿಕ ಜನರೇ ಹೆಚ್ಚಿರುವ ಇಂದಿನ ಕಾಲಕ್ಕೆ,ಶಾಸ್ತ್ರಿಯವರು ನೀತಿ ತಿಳಿಸುವ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ.
1930ರ ನಂತರ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು.ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಯಾಗಿ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾದರು.ಸ್ವಾತಂತ್ರ್ಯದ ಕನವರಿಕೆಯಲ್ಲಿ ತಮ್ಮ ಕುಟುಂಬವನ್ನೇ ಮರೆತುಬಿಟ್ಟರು. ಹೀಗಾಗಿ ಕುಟುಂಬ ಬಡತನದ ಬೇಗೆಗೆ ಸಿಲುಕಿತು.ಎಷ್ಟರ ಮಟ್ಟಿಗೆ ಬಡತನವಿತ್ತೆಂದರೆ ಅವರ ಮಕ್ಕಳು ಖಾಯಿಲೆ ಬಿದ್ದಾಗಲೂ ಚಿಕಿತ್ಸೆ ಕೊಡಿಸಲು ಹಣವಿರಲಿಲ್ಲ.ಹೀಗೆ ಶಾಸ್ತ್ರಿಯವರು ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಮಗಳು ಖಾಯಿಲೆ ಬಿದ್ದಾಗ,ಅವಳಿಗೆ ಔಷಧಿ ಕೊಡಿಸಲು ಶಾಸ್ತ್ರಿಯವರ ಪತ್ನಿ ಲಲಿತಾರ ಬಳಿ ಹಣವಿರುವುದಿಲ್ಲ.ಹೀಗಾಗಿ ಸಕಾಲಿಕ ಚಿಕಿತ್ಸೆ,ಔಷಧಿ ದೊರೆಯದೆ ಶಾಸ್ತ್ರಿಯವರು ಮನೆಗೆ ಬರುವ ಮುಂಚೆಯೇ ಅವರ ಮಗಳು ತೀರಿಕೊಂಡಿದ್ದಳು. ಇದು ಮಗಳ ಕಥೆಯಾದರೆ, ಪತ್ನಿ ಲಲಿತಾರ ಕಥೆಯೂ ಇದಕ್ಕಿಂತ ಭಿನ್ನವಲ್ಲ.ಮನೆಯ ಬಡತನದ ಕಾರಣದಿಂದ ಅಪೌಷ್ಟಿಕತೆಯಿಂದ ಲಲಿತಾರವರು ಖಾಯಿಲೆ ಬೀಳುತ್ತಾರೆ.ಸೆರೆಮನೆಯಲ್ಲಿದ್ದ ಶಾಸ್ತ್ರಿಯವರು ಪತ್ನಿಗೆ ನಿತ್ಯವೂ ಒಂದು ಲೋಟ ಹಾಲು ಕುಡಿಯುವಂತೆ ಹೇಳುತ್ತಾರೆ. ಆದರೆ ಲಲಿತಾರ ಬಳಿ ಒಂದು ಲೋಟ ಹಾಲು ಕೊಳ್ಳಲೂ ಹಣವಿರುವುದಿಲ್ಲ. ಪತಿಯ ಮನ ನೋಯಿಸಬಾರದೆಂದು,ಅವರ ಮಾತನ್ನು ಮೀರಬಾರದೆಂದು ಲಲಿತಾ,ಎರಡು ಮೂರು ಚಮಚ ಹಾಲು ಹಿಡಿಯಬಹುದಾದಷ್ಟು ಅತ್ಯಂತ ಸಣ್ಣ ಬಟ್ಟಲಿನಲ್ಲಿ ಹಾಲು ಕುಡಿಯುತ್ತಾರೆ!.ಇಷ್ಟಾದರೂ ಶಾಸ್ತ್ರಿಯವರ ದಿಟ್ಟತನ, ದೇಶಪ್ರೇಮ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ.ಹಣ, ಅಧಿಕಾರಕ್ಕಾಗಿ ದೇಶವನ್ನೇ ಕೊಳ್ಳೆ ಹೊಡೆಯುವ ಭ್ರಷ್ಠ ರಾಜಕಾರಣಿಗಳಿರುವ ಈ ಕಾಲದಲ್ಲಿ ಶಾಸ್ತ್ರಿಯವರ ಈ ದೇಶಪ್ರೇಮ, ತ್ಯಾಗ ಅವಿಸ್ಮರಣೀಯವಾದದ್ದು.

*ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಾಧನೆಗಳು:*

‘ಸರ್ವೆನ್ಟ್ಸ್ ಆಫ್ ದಿ ಸೊಸೈಟಿ’ ಸಂಸ್ಥೆಯನ್ನು ಸೇರಿ ಅಪೂರ್ವ ಸೇವೆಯನ್ನು ಸಲ್ಲಿಸಿದ್ದು ಗಮನಾರ್ಹವಾದದ್ದು. ಉತ್ತರ ಪ್ರದೇಶದ ಜನರು ಅವರ ಪ್ರಾಮಾಣಿಕತೆ, ನಿಸ್ಪೃಹತೆ, ಹಾಗೂ ದಕ್ಷತೆಗೆ ಮಾರು ಹೋದರು. ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿಗೆ ಅವರು ಎರಡು ಬಾರಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.1937ರಲ್ಲಿ ಸಂಯುಕ್ತ ಪ್ರಾಂತ್ಯದ ಶಾಸನ ಸಭೆಗೆ ಆಯ್ಕೆಯಾದರು.ಸ್ವಾತಂತ್ರ್ಯ ಭಾರತದಲ್ಲಿ ಅವರು 1947ರಲ್ಲಿ ಗೃಹ ಹಾಗೂ ಸಾರಿಗೆ ಸಚಿವರಾದರು. 1951ರಲ್ಲಿ ಭಾರತದ ರಾಷ್ಟೀಯ ಕಾಂಗ್ರೆಸಿನ ಕಾರ್ಯದರ್ಶಿ ಮತ್ತು 1952ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದರು.ಸ್ವತಂತ್ರ ಭಾರತದಲ್ಲಿ ಉತ್ತರ ಪ್ರದೇಶದ ಸಾರಿಗೆ ಮತ್ತು ಗೃಹ ಸಚಿವರಾಗಿ ಗಣನೀಯ ಬದಲಾವಣೆಗಳಿಗೆ ಬುನಾದಿ ಹಾಕಿದರು.ಇಂದು ಸರಕಾರಿ ಬಸ್ ಗಳಲ್ಲಿ ನಾವು ಕಾಣುವ ಮಹಿಳಾ ನಿರ್ವಾಹಕರನ್ನು ನೇಮಕ ಮಾಡಲು ಮೊದಲು ಅವಕಾಶ ಮಾಡಿಕೊಟ್ಟದ್ದೂ ಶಾಸ್ತ್ರಿಯವರೇ.ಶಾಸ್ತ್ರಿಯವರು ನೆಹರುರವರ ಸಂಪುಟದಲ್ಲಿ ರೈಲ್ವೆ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಾರೆ.ಅವರು ಈ ಖಾತೆಯಲ್ಲಿದ್ದಾಗ ಹರಿಯಳೂರು ಬಳಿ ರೈಲು ದುರಂತ ನಡೆದು ಹೋಗುತ್ತದೆ. ಇದರ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುತ್ತಾರೆ. ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಇದು ಉದಾಹರಣೆಯಾಗಿದೆ. 1961ರ ಲೋಕ ಸಭಾ ಚುನಾವಣೆಯ ನಂತರ ಕೇಂದ್ರ ಸರಕಾರದಲ್ಲಿ ಗೃಹ ಮಂತ್ರಿಯಾಗಿ ನೇಮಕಗೊಳ್ಳುತ್ತಾರೆ.ಅತ್ಯಂತ ಪ್ರಾಮಾಣಿಕರೂ, ಸರಳರೂ ಆಗಿದ್ದ ಶಾಸ್ತ್ರಿಯವರು ತಾವು ಗೃಹ ಮಂತ್ರಿಯಾಗಿದ್ದರೂ ತಮ್ಮದೇ ಸ್ವಂತ ಗೃಹವೊಂದನ್ನು ಹೊಂದಿರಲಿಲ್ಲ. ಹಾಗಾಗಿ ಅವರನ್ನು ಹಲವರು ಗೃಹವೇ ಇಲ್ಲದ ಗೃಹ ಮಂತ್ರಿ ಎಂದು ಟೀಕಿಸಿದ್ದರು.ಈಗಿನ ಸಮಯದಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ಕೂಡ ಲಕ್ಷ ಲಕ್ಷ ಹಣ ಸಂಪಾದಿಸಿರುತ್ತಾರೆ. ಆದರೆ ಕೇಂದ್ರದ ಗೃಹ ಮಂತ್ರಿಯಾಗಿದ್ದರೂ ಕೂಡ ಅವರು ಸ್ವಂತ ಗೃಹವನ್ನು ಹೊಂದಿಲ್ಲದಿದ್ದದ್ದು ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ.ಶಾಸ್ತ್ರಿಯವರು ಗೃಹಮಂತ್ರಿಗಳಾಗಿದ್ದಾಗ ಭ್ರಷ್ಟಾಚಾರ ತಡೆ ಸಮಿತಿ ರಚಿಸಿದ್ದರು ಎಂಬುದು ಮತ್ತೊಂದು ವಿಶೇಷ.
1964ರಲ್ಲಿ ನೆಹರುರವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಪ್ರಾಮಾಣಿಕ, ಧೀಮಂತ, ಅನುಭವಿ ಶಾಸ್ತ್ರಿಯವರು ಅವಿರೋಧವಾಗಿ ಆಯ್ಕೆಯಾಗಿ 9-6-1964ರಂದು ಭಾರತದ ಎರಡನೇ ಪ್ರಧಾನಿಯಾಗಿ ನೇಮಕವಾದರು.ಈ ಸಂಧರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ಶಾಸ್ತ್ರಿಯವರ ಕುಬ್ಜ ದೇಹವನ್ನು ಕಂಡು ಹಲವಾರು ಬಾರಿ ಕಿಚಾಯಿಸಿದ್ದನು. ಆದರೆ 1965ರಲ್ಲಿ ನಡೆದ ಯುದ್ಧದಲ್ಲಿ ತಮ್ಮ ಸಾಮರ್ಥ್ಯವನ್ನು ಶಾಸ್ತ್ರಿ ಜಗತ್ತಿಗೇ ತೋರಿಸಿದರು.
ಶಾಸ್ತ್ರಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಭಾರತದ ಪರಿಸ್ಥಿತಿ ಕೊಂಚವೂ ಚೆನ್ನಾಗಿರಲಿಲ್ಲ. 1962ರ ಚೀನಾ ದಾಳಿಯನ್ನು ಎದುರಿಸಲು ಭಾರತ ವಿಫಲವಾದ ನಂತರ ಭಾರತ ವಿಶ್ವ ದೃಷ್ಟಿಯಲ್ಲಿ ಕಡೆಗಣನೆಗೆ ಈಡಾಗಿತ್ತು. ಆರ್ಥಿಕವಾಗಿ ಭಾರತದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.ದೇಶ ತುಂಬ ಬಡತನದಲ್ಲಿತ್ತು. ದೇಶಕ್ಕೆ ಬೇಕಾದ ಆಹಾರ ಧಾನ್ಯ ಕೂಡ ಕೊರತೆಯಲ್ಲಿತ್ತು. ಅದನ್ನು ಹೊರದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.ಬ್ರಿಟೀಷರು ಭಾರತದ ಕೃಷಿವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದರು. ಇದನ್ನೆಲ್ಲಾ ಗಮನಿಸಿದ ಶಾಸ್ತ್ರಿಯವರು ಭಾರತದಲ್ಲಿ ಕೃಷಿಯಲ್ಲಿ ಸುಧಾರಣೆಗಳನ್ನು ತಂದು,ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದರು.ಅಂದು ಶಾಸ್ತ್ರಿಯವರು ಪ್ರಾರಂಭಿಸಿದ ಕ್ಷೀರ ಕ್ರಾಂತಿಯಿಂದ, ಇಂದು ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶಗಳಲ್ಲಿ ಒಂದಾಗಿ ಬದಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಟುಂಬಗಳಿಗೆ ಅತ್ಯಂತ ಪ್ರಮುಖ ಆರ್ಥಿಕ ಮೂಲವಾಗಿದೆ. ಅಲ್ಲದೆ ಹಸಿರು ಕ್ರಾಂತಿಯ ಬಗ್ಗೆ ಯೋಚಿಸಿದವರೂ ಕೂಡ ಶಾಸ್ತ್ರಿಯವರೇ ಅನ್ನೋದು ವಿಶೇಷ.ಇನ್ನು ಶಾಸ್ತ್ರಿಯವರು ಪ್ರಧಾನಿಯಾಗಿ ಒಂದು ವರ್ಷವಾಗುವುದರೊಳಗೆ, ಪಾಕಿಸ್ತಾನದ ಸರ್ವಾಧಿಕಾರಿ ಅಯೂಬ್ ಖಾನ್ ಭಾರತದ ಮೇಲೆ ಯುದ್ಧ ಘೋಷಿಸಿದ. 1965ರ ಆ ಯುದ್ಧದಲ್ಲಿ ಪಾಕಿಗಳು ಭಾರತವನ್ನು ಸುಲಭವಾಗಿ ಸೋಲಿಸಬಹುದೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಶಾಸ್ತ್ರಿಯವರು ಸ್ವತಃ ತಾವೇ ಮುಂದೆ ನಿಂತು ಸೈನ್ಯವನ್ನು ಹುರಿದುಂಬಿಸಿದ್ದರು. ಚೀನಾದ ಮುಂದೆ ಸೋತಿದ್ದ ಭಾರತವನ್ನು ಸುಲಭವಾಗಿ ಸೋಲಿಸಬಹುದೆಂಬ ಪಾಕಿಸ್ತಾನದ ಲೆಕ್ಕಾಚಾರವನ್ನು ಬುಡಮೇಲು ಮಾಡಿತ್ತು ಭಾರತ ಸೈನ್ಯ. ಅಂದಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ರ ನೇತೃತ್ವದಲ್ಲಿ ಭಾರತೀಯ ವಾಯುಪಡೆ ಲಾಹೋರ್ ನ ಹೊರವಲಯದವರೆಗೂ ಮುನ್ನುಗ್ಗಿ ಶತ್ರು ಸೈನ್ಯವನ್ನು ಬಗ್ಗು ಬಡಿಯಿತು. ಲಾಹೋರ್ ನ ಪ್ರತಿ ಕಛೇರಿಯ ಮೇಲೆ ತಿರಂಗ ಧ್ವಜ ಹಾರಿತು.ಭಾರತದ ಸೈನ್ಯದ ಪರಾಕ್ರಮ ಕಂಡು ಪಾಕಿಸ್ತಾನದ ಸೇನೆ ಪತರುಗುಟ್ಟಿತು.ಅಯೂಬ್ ಖಾನ್ ನ ಗರ್ವಭಂಗವಾಯಿತು. ಪಾಕ್ ಪ್ರಧಾನಿ ಅಯೂಬ್ ಖಾನ್ ಅಮೆರಿಕಾದ ಕಾಲಿಡಿದು ಭಾರತದ ಆಕ್ರಮಣ ತಡೆಯುವಂತೆ ಅಂಗಲಾಚಿದನು.ಇದಾದ ಮೇಲೆ ಶಾಸ್ತ್ರಿಯವರ ಮೇಲೆ ಅಮೇರಿಕಾದ ಒತ್ತಡ ಹೆಚ್ಚಾಯಿತು.ಶಾಸ್ತ್ರಿಯವರು ಇದಕ್ಕೆ ಬಗ್ಗದಿದ್ದಾಗ ಭಾರತಕ್ಕೆ ತಾನು ರಫ್ತು ಮಾಡುತ್ತಿದ್ದ ಗೋಧಿಯನ್ನು ನಿಲ್ಲಿಸಿತು.ಇದರಿಂದ ಧೃತಿಗೆಡದ ಶಾಸ್ತ್ರಿಯವರು ಅಮೇರಿಕಾದ ಧಮಕಿಯನ್ನು ನೇರವಾಗಿ ಭಾರತೀಯರ ಮುಂದಿಡುತ್ತಾರೆ. “ನಾವು ಪಾಕಿಸ್ತಾನದ ವಿರುದ್ಧ ಹೋರಾಟ ನಿಲ್ಲಿಸದಿದ್ದರೆ, ಅಮೇರಿಕ ಗೋಧಿ ಸರಬರಾಜು ಮಾಡುವುದಿಲ್ಲವಂತೆ. ಈಗ ನಾವೇನು ಮಾಡೋಣ?ನಮ್ಮ ಮುಂದಿರುವ ಆಯ್ಕೆ ಎರಡು. ಒಂದು ಪಾಕಿಸ್ತಾನದ ವಿರುದ್ಧ ಯುದ್ಧ ನಿಲ್ಲಿಸುವುದು. ಎರಡನೇಯದು ವಾರದಲ್ಲಿ ಒಂದು ದಿನ ಒಂದು ಹೊತ್ತಿನ ಊಟ ಬಿಡುವುದು. ನನ್ನ ಆಯ್ಕೆ ಊಟ ಬಿಡುವುದೇ ಹೊರತು ಸ್ವಾಭಿಮಾನವನ್ನಲ್ಲ. ನೀವೆಲ್ಲಾ ನನ್ನ ಜೊತೆ ಕೈ ಜೋಡಿಸುವುದಾದರೆ ವಾರದಲ್ಲಿ ಒಂದು ದಿನ ಒಂದು ಊಟ ಬಿಡೋಣ. ಪಾಕಿಸ್ತಾನದ ಕುತಂತ್ರ ಮುರಿದು ಅದರ ನಡು ಮುರಿಯೋಣ”ಎನ್ನುತ್ತಾರೆ. ಆಗ ಇಡೀ ಭಾರತದ ಜನತೆ ಶಾಸ್ತ್ರಿಯವರೊಂದಿಗೆ ನಿಂತಿತು.ಶಾಸ್ತ್ರಿಯವರು ತಾವು ಸ್ವತಃ ಸೋಮವಾರದಂದು ಉಪವಾಸವಿದ್ದು,ಸೋಮವಾರದ ಉಪವಾಸಕ್ಕೆ ದೇಶದ ಜನತೆಗೆ ಕರೆ ನೀಡುತ್ತಾರೆ.ಇಡೀ ದೇಶಕ್ಕೆ ದೇಶವೇ ಶಾಸ್ತ್ರಿಜೀ ಯವರೊಂದಿಗೆ ನಿಲ್ಲುತ್ತದೆ.ಅಂದು ಸಮಸ್ತ ಭಾರತೀಯರ, ಶಾಸ್ತ್ರಿಯವರ ನೈತಿಕ ಬೆಂಬಲ ಪಡೆದ ಭಾರತದ ಸೈನ್ಯ,ಪಾಕಿಸ್ತಾನದ ನಡುಮನೆಗೆ ನುಗ್ಗಿ ಲಾಹೋರ್ ನವರೆಗೆ ಭಾರತದ ಧ್ವಜವನ್ನು ಹಾರಿಸಿತು.1965ರ ಈ ಪಾಕ್ ವಿರುದ್ಧದ ಕಾರ್ಯಾಚಾರಣೆಯ ನಂತರ ಇಡೀ ವಿಶ್ವ ಭಾರತವನ್ನು ನೋಡುವ ರೀತಿ ಬದಲಾಯಿತು.ಶಾಸ್ತ್ರಿ ಎಂಬ ಧೀಮಂತ ನಾಯಕ ವಿಶ್ವದ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ್ದರು.ಭಾರತದ ಚಿತ್ರಣವನ್ನೇ ಜಗತ್ತಿನ ಮುಂದೆ ಬದಲಾಯಿಸಿದರು.ನಾಡು ನುಡಿ ಗಡಿ ಎಂದು ಬಂದಾಗ ಭಾರತೀಯರು ಉಪವಾಸ ಮಾಡುತ್ತಾರೆಯೇ ಹೊರತು ದೇಶದ ಒಂದಿಚೂ ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ ಎಂಬುದನ್ನು ಶಾಸ್ತ್ರಿಯವರು ಇಡೀ ವಿಶ್ವದ ಮುಂದೆ ಸಾಬೀತುಪಡಿಸಿದ್ದರು. ಅವರ ಈ ಅಚಲ ನಿರ್ಧಾರಗಳ ಹಿಂದೆ ಅವರ ಬದುಕಿನ ಹೋರಾಟದ ನೆರಳಿದ್ದದ್ದು ಸುಳ್ಳಲ್ಲ.ಈ ಸಂದರ್ಭದಲ್ಲಿಯೇ ದೇಶಕ್ಕೆ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ದೇಶದ ರಕ್ಷಣೆಯ ಮಹತ್ವ ಮನಗಂಡ ಶಾಸ್ತ್ರಿಯವರು *ಜೈ ಜವಾನ್ ಜೈ ಕಿಸಾನ್*
ಎಂಬ ಉದ್ಘೋಷ ಮಾಡುತ್ತಾರೆ.ಈ ಕ್ಷೇತ್ರಗಳ ಸುಧಾರಣೆಗೆ ಹತ್ತು ಹಲವು ಯೋಜನೆ ರೂಪಿಸುತ್ತಾರೆ.1965ರಲ್ಲಿ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ಸ್ಥಾಪಿಸಿದರು.ಆ ಮೂಲಕ ಸುಭದ್ರ ಹಾಗೂ ಸಮೃದ್ಧ ಭಾರತದ ಪರಿಕಲ್ಪನೆಗೆ ಬುನಾದಿ ಹಾಕುತ್ತಾರೆ.ಇದೇ ಸಮಯದಲ್ಲಿಯೇ ನರಿ ಬುದ್ಧಿಯ ಪಾಕಿಸ್ತಾನ ಅಮೇರಿಕಾ ಸಹಾಯದೊಂದಿಗೆ ವಿಶ್ವ ಸಂಸ್ಥೆಯ ಮೆಟ್ಟಿಲೇರುತ್ತದೆ.ಅಮೇರಿಕ ಮತ್ತು ರಷ್ಯಾ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ತಾಷ್ಕೆಂಟ್ ಒಪ್ಪಂದ ಏರ್ಪಡುತ್ತದೆ.ಇದಕ್ಕೆ ಅನಿವಾರ್ಯವಾಗಿ ಶಾಸ್ತ್ರಿಯವರು ಒಪ್ಪಬೇಕಾಗುತ್ತದೆ. ಈ ಒಪ್ಪಂದದ ಮಾರನೇಯ ದಿನವೇ ತಾಷ್ಕೆಂಟ್ ನಲ್ಲಿಯೇ ಶಾಸ್ತ್ರಿಯವರು ನಿಗೂಢವಾಗಿ ಸಾವನ್ನಪ್ಪುತ್ತಾರೆ.ಶಾಸ್ತ್ರಿಯವರದು ಸಹಜ ಸಾವಾಗಿದ್ದರೆ ಅವರ ಪಾರ್ಥಿವ ಶರೀರವೇಕೆ ನೀಲಿಯಾಗಿತ್ತು?ಅವರು ತಾಷ್ಕೆಂಟ್ ಗೆ ತೆಗೆದುಕೊಂಡು ಹೋಗಿದ್ದ ಅವರು ನಿತ್ಯ ಬರೆಯುತ್ತಿದ್ದ ಡೈರಿ ಮತ್ತು ಬಳಸಲು ತೆಗೆದುಕೊಂಡು ಹೋಗಿದ್ದ ಫ್ಲಾಸ್ಕ್ ಎಲ್ಲಿ ನಾಪತ್ತೆಯಾಯಿತು?ಪೂರ್ವ ನಿಯೋಜಿತವಾದ ಬಂಗಲೆ ಬಿಟ್ಟು ಬೇರೆ ಸ್ಥಳದಲ್ಲಿ ಶಾಸ್ತ್ರಿಯವರನ್ನು ಇರಿಸಿದ್ದೇಕೆ?ಕುತ್ತಿಗೆಯ ಹಿಂಭಾಗ ಮತ್ತು ಉದರದ ಮೇಲೆ ಇದ್ದ ಛೇಧಿಸಿದ ಗುರುತುಗಳಿಗೆ ಕಾರಣವೇನು?ದೇಹ ಅಷ್ಟೊಂದು ಊದಿಕೊಳ್ಳಲು ಕಾರಣವೇನು?ಶಾಸ್ತ್ರಿಯವರ ಹತ್ಯೆಗೆ ಅಂತರ್ರಾಷ್ಟ್ರೀಯ ಪಿತೂರಿ ನಡೆಯಿತೇ?ಕೆಲವು ಭಾರತೀಯರು ಇದರಲ್ಲಿ ಶಾಮೀಲಾಗಿದ್ದರೆ?ಅಥವಾ ಭಾರತದವರೇ ಸಂಚು ರೂಪಿಸಿದ್ದರೆ?ಈ ರೀತಿ ಶಾಸ್ತ್ರಿಯವರ ಸಾವಿನ ಹಿಂದೆ ಉತ್ತರ ಕಾಣದ ನೂರಾರು ಪ್ರಶ್ನೆಗಳು ಎದ್ದು ಇಂದಿಗೂ ಬಗೆಹರಿಯದೆ ಅನುಮಾನದ ಹುತ್ತ ನಿರ್ಮಾಣವಾಗಿದೆ.ಅದೇನೇ ಇದ್ದರೂ 11/1/1966ರಂದು ಭಾರತ ಮಾತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಎಂಬ ತನ್ನ ಅಮೂಲ್ಯ ಧೀಮಂತ ಪುತ್ರ ರತ್ನವನ್ನು ಕಳೆದುಕೊಂಡಳು.ದೇಶದ ಪ್ರಧಾನಿಯಾದ ಮೇಲೂ ಶಾಸ್ತ್ರಿ ಯವರ ಬಳಿ ಓಡಾಟಕ್ಕೆ ಸ್ವಂತ ಕಾರು ಇರಲಿಲ್ಲ.ಆಗ ಕಾರು ಖರೀದಿ ಮಾಡುವುದು ಅನಿವಾರ್ಯವಾಗಿತ್ತು.ಆದರೆ ಅದಕ್ಕೂ ಅವರ ಬಳಿ ಹಣವಿರಲಿಲ್ಲ. ಹಾಗಾಗಿ ಸಾಲ ಮಾಡಿ ಕಾರು ಖರೀದಿಸಿದ್ದರು.ಆದರೆ ಆ ಸಾಲವನ್ನು ತೀರಿಸುವ ಮುಂಚೆಯೇ ಶಾಸ್ತ್ರಿಯವರು ಅಸ್ತಂಗತರಾದರು.ಅವರ ಪತ್ನಿ ಲಲಿತಾ ತಮ್ಮ ಪಿಂಚಣಿ ಹಣದಲ್ಲಿ ಕಾರಿನ ಸಾಲ ತೀರಿಸಿ ತಾವು ತಮ್ಮ ಪತಿಗೆ ತಕ್ಕವರು ಎನಿಸಿಕೊಂಡರು.
ಒಮ್ಮೆ ಶಾಸ್ತ್ರಿಯವರು ತಮ್ಮ ಕರ್ತವ್ಯ ನಿಮಿತ್ತ ಕಾಶ್ಮೀರಕ್ಕೆ ಹೋಗಬೇಕಾಗಿ ಬಂದಿತು.ಆದರೆ ಶಾಸ್ತ್ರಿ ಯವರ ಬಳಿ ಅಲ್ಲಿನ ವಿಪರೀತ ಚಳಿಗೆ ರಕ್ಷಣೆ ನೀಡುವ ಬೆಚ್ಚಗಿನ ಉಡುಪುಗಳೂ ಇರಲಿಲ್ಲ!ಇದನ್ನು ತಿಳಿದ ನೆಹರುರವರು ಶಾಸ್ತ್ರಿಯವರಿಗೆ ಒಂದು ಕೋಟನ್ನು ಕೊಟ್ಟು ಕಾಶ್ಮೀರಕ್ಕೆ ಕಳಿಸಿದರಂತೆ.ಇವೆಲ್ಲಾ ಶಾಸ್ತ್ರಿಯವರ ಬದುಕಿನ ಪ್ರತಿ ಹೆಜ್ಜೆಯಲ್ಲೂ ಅವರಲ್ಲಿದ್ದ ಪ್ರಾಮಾಣಿಕತೆ,ಸರಳತೆ ಇತ್ಯಾದಿ ಉದಾತ್ತ ಮೌಲ್ಯಗಳಿಗೆ ಕನ್ನಡಿ ಹಿಡಿಯುತ್ತದೆ.

ಶಾಸ್ತ್ರಿಯವರು ಮತ್ತು ಅವರು ಆಚರಿಸಿಕೊಂಡು ಬಂದ ಮೌಲ್ಯಗಳು ಇಂದಿಗೂ ಎಂದಿಗೂ ಪ್ರಸ್ತುತ.ಏಕೆಂದರೆ ದೇಶ ಇಂದು ಅನೇಕ ಕೃಷಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದು,ಅಂದು ರೈತ ಆಹಾರ ಧಾನ್ಯ ಉತ್ಪಾದನೆ ಮಾಡಲು ಕಷ್ಟ ಪಡುತ್ತಿದ್ದರೆ ಇಂದು ತಾನು ಬೆಳೆದ ಬೆಳೆಯನ್ನು ಮಾರಲು ಮಾರುಕಟ್ಟೆಗಾಗಿ ಹೋರಾಟ ನಡೆಸಬೇಕಾಗಿದೆ.ಇನ್ನೂ ನಮ್ಮ ದೇಶಕ್ಕೆ ಶತ್ರು ಬಾಧೆ ತಪ್ಪಿಲ್ಲ, ಒಂದು ಕಡೆ ಪಾಕಿಸ್ತಾನ,ಚೈನಾ ದೇಶಗಳ ಕುತಂತ್ರ,ಅವುಗಳೊಂದಿಗಿನ ಗಡಿ ವಿವಾದಗಳು ಮುಂದುವರೆದೇ ಇದೆ, ಮತ್ತೊಂದು ಕಡೆ ದೇಶದೊಳಗೆ ಮತ್ತು ಹೊರಗಿನಿಂದ ಉಗ್ರಗಾಮಿ ಚಟುವಟುಕೆಗಳು ನಡೆಯುತ್ತಿದ್ದು ಭಾರತದ ಭದ್ರತೆಗೆ ಸವಾಲು ಒಡ್ಡಿವೆ.ಇತ್ತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಪ್ರಾರಂಭಗೊಂಡಿದ್ದು ದೇಶದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕಾಗಿದೆ.ಅಂದು ತಿನ್ನಲು ದೇಶದ ಜನತೆಗೆ ಅನ್ನವಿರಲಿಲ್ಲ, ನಿರುದ್ಯೋಗ ತಾಂಡವವಾಡುತ್ತಿತ್ತು.ಇಂದು ದೇಶದಲ್ಲಿ ನೂರಾರು ಕಂಪನಿಗಳಿವೆ, ಹೊರಗಿನಿಂದಲೂ ಬರುತ್ತಿವೆ.ಆದರೆ ದೊಡ್ಡ ಪ್ರಮಾಣದ ಯುವಜನತೆಯಲ್ಲಿ ದುಡಿಮೆಗೆ ಬೇಕಾದ ಅರ್ಹ ಕೌಶಲ್ಯಗಳಿಲ್ಲ.ಅಂದೂ ಆರ್ಥಿಕವಾಗಿ ಭಾರತ ಹಿಂದುಳಿದಿತ್ತು ಇಂದಿಗೂ ಹೇಳಿಕೊಳ್ಳುವಂತಹ ಆರ್ಥಿಕ ಪ್ರಗತಿಯನ್ನು ಭಾರತ ಸಾಧಿಸಿಲ್ಲ.ಈ ನಿಟ್ಟಿನಲ್ಲಿ ಶಾಸ್ತ್ರಿಯವರ ಜೈ ಜವಾನ್ ಜೈ ಕಿಸಾನ್ ಘೋಷಣೆಯ ಅರ್ಥಪೂರ್ಣ ಜಾರಿಗೆ ಸರ್ಕಾರಗಳು ಪ್ರಯತ್ನಿಸಬೇಕಿದೆ.ಭ್ರಷ್ಟಾಚಾರ ಮಾಡಿ,ತನ್ನ ತರುವಾಯ ಮೂರು ತಲೆಮಾರುಗಳು ಕುಳಿತು ತಿನ್ನುವುದಕ್ಕಾಗುವಷ್ಟು ಸಂಪತ್ತನ್ನು ಮಾಡಿ, ತನಿಖೆಯಿಂದ ಸಿಕ್ಕಿಬಿದ್ದು ಕಂಬಿ ಎಣಿಸಿ ಮತ್ತೆ ಹೊರಬಂದು ನಿರ್ಲಜ್ಜರಾಗಿ ಅಧಿಕಾರ ನಡೆಸುವ ಇಂದಿನ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ,ತನಗೆ ಬರುತ್ತಿದ್ದ ಅಲ್ಪ ವೇತನದಲ್ಲೇ ಸ್ವಲ್ಪ ಉಳಿಯುತ್ತಿದೆ, ಅಷ್ಟು ಸಂಬಳ ತನಗೆ ಬೇಡವೆಂದು ಪತ್ರ ಬರೆದ ಶಾಸ್ತ್ರಿಯವರ ಪ್ರಾಮಾಣಿಕತೆ,ಸರಳತೆ ನಮಗೆ ನೆನಪಿಗೆ ಬರದೇ ಇರದು.ಮತ್ತು ಅವರು,ಎಷ್ಟು ಇಂದಿಗೂ ಪ್ರಸ್ತುತವೆನಿಸುತ್ತಾರೆ.ವಾಮನ ದೇಹದಲ್ಲಿ ಭೀಮನ ಅಂತಃಶಕ್ತಿ ಹೊಂದಿದ್ದ ಶಾಸ್ತ್ರಿಯವರು ತಮ್ಮ ನಿರ್ಧಾರಗಳಲ್ಲಿ ಅಚಲ ನಂಬಿಕೆ ಹೊಂದಿದ್ದರು.ಅಪ್ರತಿಮ ಛಲಗಾರ ಮತ್ತು ಸ್ವಾಭಿಮಾನಿಯಾಗಿದ್ದ ಶಾಸ್ತ್ರಿಜೀ ತಮ್ಮ ದಿಟ್ಟ ನಿರ್ಧಾರಗಳಿಂದ ಅತ್ಯಲ್ಪ ಅವಧಿಯಲ್ಲಿ ಅಭಿವೃದಿಯ ಹರಿಕಾರರೆನಿಸಿದರು.ದೇಶಕ್ಕಾಗಿ ಹಲವು ಬಾರಿ ಸೆರೆಮನೆವಾಸ ಅನುಭವಿಸಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಗಾಂಧೀಜಿಯವರ ತತ್ವಾದರ್ಶಗಳನ್ನಷ್ಟೇ ಅಲ್ಲ, ಅವರ ಜನ್ಮದಿನವನ್ನೂ ಹಂಚಿಕೊಂಡು ಬಂದವರು.ಇಂತಹ ಮಹಾನ್ ವ್ಯಕ್ತಿಯನ್ನು ನಾವು ನೆನಪಿಸಿಕೊಳ್ಳದಿದ್ದರೆ ನಾವು ನಮ್ಮ ಕರ್ತವ್ಯವನ್ನು ಮರೆತಂತೆಯೇ ಹೌದು.ಅತ್ಯಂತ ಪ್ರಾಮಾಣಿಕ, ಸರಳ, ನಿಷ್ಠ ಹಾಗೂ ದಕ್ಷ ರಾಷ್ಟ್ರ ನಾಯಕ ಶಾಸ್ತ್ರಿಯವರಿಗೆ ಭಾರತ ಸರಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಶಾಸ್ತ್ರೀಜಿಯವರನ್ನು ಅವರ ಜನ್ಮದಿನದ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಅಭಿಮಾನದಿಂದ ಸ್ಮರಿಸಿಕೊಳ್ಳುತ್ತ,ಅವರು ಅಳವಡಿಸಿಕೊಂಡ ಪ್ರಾಮಾಣಿಕತೆಯೇ ಮೊದಲಾದ ಉದಾತ್ತ ಮೌಲ್ಯಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ನಿಜವಾದ ಅರ್ಥದಲ್ಲಿ ನಾವು ಅವರನ್ನು ಸ್ಮರಿಸಿದಂತಾಗುತ್ತದೆ ಎಂದು ಹೇಳುತ್ತಾ ಈ ಲೇಖನದ ಮೂಲಕ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಮಹಾನ್ ವ್ಯಕ್ತಿತ್ವಕ್ಕೆ ನಾನು ನನ್ನ ನಮನ ಸಲ್ಲಿಸುತ್ತೇನೆ.

✍️ಎಸ್.ಎಲ್. ವರಲಕ್ಷ್ಮೀಮಂಜುನಾಥ್.


Share