ನಿಯಮಿತವಾಗಿ ರಕ್ತದಾನ ಹೃದಯ ಸಂಬಂಧಿ ಕಾಯಿಲೆಯಿಂದ ದೂರ

21
Share

 

ನಿಯಮಿತವಾಗಿ ರಕ್ತದಾನ ಮಾಡುವುದರಿಂದ

ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇರಬಹುದು

 

– ಭಾರತ್ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ (ಎಚ್‌ಸಿಜಿ-ಬಿಎಚ್‌ಐಒ) ಕಾರ್ಯ ನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಕಿವಿಮಾತು ಮೈಸೂರು: ನಿಯಮಿತವಾಗಿ ರಕ್ತದಾನ ಮಾಡುವ‌ ದಾನಿಗಳಲ್ಲಿ ಹೃದಯ ರಕ್ತನಾಳದ ಕಾಯಿಲೆಯ ಅಪಾಯ ಕಡಿಮೆಯಾಗಿರುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಆದ್ದರಿಂದ ಇನ್ನೊಬ್ಬರ ಜೀವವನ್ನು ಉಳಿಸುವುದರ ಜೊತೆಗೆ, ನೀವು ಆರೋಗ್ಯವಂತರಾಗಿರಿ ಎಂದು ಖ್ಯಾತ ಆಂಕೊಲಾಜಿಸ್ಟ್ ಮತ್ತು ಭಾರತ್ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ (ಎಚ್‌ಸಿಜಿ-ಬಿಎಚ್‌ಐಒ) ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಕಿವಿಮಾತು ಹೇಳಿದರು.

 

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಭಾರತ್ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ ಹಾಗೂ ಲಯನ್ ಬ್ಲಡ್ ಸೆಂಟರ್ ಜೀವಧಾರ ಸಹಯೋಗದೊಂದಿಗೆ (ಎಚ್‌ಸಿಜಿ-ಬಿಎಚ್‌ಐಒ) ಬುಧವಾರ ಇಲ್ಲಿನ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

 

ವಿಶ್ವದಾದ್ಯಂತ ಜೂನ್ 14ರಂದು ಸ್ವಯಂಪ್ರೇರಿತವಾಗಿ ಮತ್ತು ಯಾವುದೇ ಪ್ರತಿಪಲಾಕ್ಷೆ ಬಯಸದ ತಮ್ಮ ರಕ್ತವನ್ನು ದಾನ ಮಾಡುವ ವ್ಯಕ್ತಿಗಳನ್ನು ಸ್ಮರಣೆ ಮಾಡುವ ದಿನವಾಗಿದೆ. ರಕ್ತದಾನಿಗಳು ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೆ ಅದ್ಭುತ ಸೇವೆಯನ್ನು ನೀಡಿದ್ದಾರೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ (WHO) “ರಕ್ತ ನೀಡಿ, ಪ್ಲಾಸ್ಮಾ ನೀಡಿ, ಬದುಕನ್ನು ಹಂಚಿಕೊಳ್ಳಿ, ಆಗಾಗ್ಗೆ ಹಂಚಿಕೊಳ್ಳಿ” ಎಂಬ ವಿಷಯವನ್ನು ಸರಿಯಾಗಿ ರೂಪಿಸಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡುವ ಉದಾತ್ತ ಕಾರ್ಯವನ್ನು ಮಾಡಬೇಕು. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಜೀವನಪೂರ್ತಿ ಕೆಲವರಿಗೆ ರಕ್ತ ವರ್ಗಾವಣೆ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಹಾಗಾಗಿ ಯಾವುದೂ ಒಂದು ಜೀವವನ್ನು ಉಳಿಸಲು ನಿಮ್ಮ ರಕ್ತವನ್ನು ದಾನ ಮಾಡುವುದಕ್ಕಿಂತ ಹೆಚ್ಚು ನಿಸ್ವಾರ್ಥ ಮತ್ತು ಉದಾತ್ತವಾದ ಮತ್ತೊಂದು ಕೆಲಸವಿಲ್ಲ ಎಂದರು.

 

“ನಮ್ಮ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ರಕ್ತದ ಅಗತ್ಯವಿರುವ ನೂರಾರು ರೋಗಿಗಳನ್ನು ನಾವು ನೋಡುತ್ತೇವೆ. ಇಂದು ಭಾರತ್ ಆಸ್ಪತ್ರೆ ನಡೆಸಿರುವ ಈ ಕಾರ್ಯಕ್ರಮವು ಹೆಚ್ಚಿನ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಜೀವಗಳನ್ನು ಉಳಿಸಲು ರಕ್ತದಾನ ಮಾಡುವಂತೆ ಕರೆ ನೀಡುತ್ತದೆ. ಕ್ಯಾನ್ಸರ್ ಕೋಶಗಳ ಉಪಸ್ಥಿತಿಯಿಂದಾಗಿ ಕ್ಯಾನ್ಸರ್ ರೋಗಿಗಳು ರಕ್ತವನ್ನು ಸ್ವತಃ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ರಕ್ತದಾನ ಮಾಡುವುದರಿಂದ ಜೀವ ಉಳಿಸಿದಂತಾಗುತ್ತದೆ” ಎನ್ನುತ್ತಾರೆ ಡಾ.ಅಜಯ್.

 

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ದಾನ ಮಾಡಿದ ರಕ್ತವನ್ನು BHIO ನಲ್ಲಿ ಅಗತ್ಯವಿರುವ ಕ್ಯಾನ್ಸರ್ ರೋಗಿಗಳಿಗೆ ಬಳಸಲಾಗುತ್ತದೆ. ಆಸ್ಪತ್ರೆಯಲ್ಲಿ ರಕ್ತದ ಬೇಡಿಕೆ ಇರುವುದರಿಂದ ಪ್ರತಿ ವರ್ಷ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ರೋಗಿಗಳಿಗೆ ರಕ್ತದ ಅವಶ್ಯಕತೆ ತಿಳಿದಿರುವ ಆಸ್ಪತ್ರೆ ಸಿಬ್ಬಂದಿ (BHIO) ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಎ ಚ್‌ಸಿಜಿ ಬಿಎಚ್‌ಐಒ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ, ಡಾ.ಕೆ.ಜಿ.ಶ್ರೀನಿವಾಸ್, ಡಾ.ಎಂ.ವಿಜಯಕುಮಾರ್, ಡಾ.ವಿನಯಕುಮಾರ್ ಮುತ್ತಗಿ, ಡಾ.ಆರ್.ರಕ್ಷಿತ್ ಶೃಂಗೇರಿ, ಡಾ.ಜಿ.ಎಚ್.ಅಭಿಲಾಷ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿರ್ಮಲಾ ಕೆ.ಮೂರ್ತಿ, ಡಾ.ಬಿ.ಕವಿತಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

—————


Share