ನೀನೆ ನನ್ನ ಲವ್ ಗುರು..! ಮಣಿಕಂಠ ತ್ರಿಶಂಕರ್

109
Share

 

ನೀನೆ ನನ್ನ ಲವ್ ಗುರು..!

ಮಣಿಕಂಠ ತ್ರಿಶಂಕರ್, ಮೈಸೂರು

ನನ್ನ ಬದುಕಿನ ಒಲವಿನ ಜಾದುಗಾರಳಿಗೆ ನಿನ್ನ ಜಾದುವಿನಲ್ಲಿ ಕಳೆದು ಹೋದ, ನಿನ್ನ ಒಲವಿನ ನಶೆಯಲ್ಲಿ ಬಂಧಿಯಾಗಿರುವ ನಿನ್ನ ಪ್ರಿಯತಮನಿಂದ ಪುಟ್ಟ ಪತ್ರ.

ನಿನ್ನ ಪ್ರೀತಿ ಎಂದರೆ, ಅದೊಂದು ಅಕ್ಷಯ ಪಾತ್ರೆ ಇದ್ದಂತೆ. ಕಳೆದ ವರ್ಷಗಳಿಂದ ಆ ಪ್ರೀತಿಯನ್ನು ಕೊಡುತ್ತಲೇ ಇದ್ದೀಯ. ಅದು ಹೆಚ್ಚುತ್ತಲೇ ಹೋಗುತ್ತಿದೆ, ನಮ್ಮ ಪ್ರತಿ ದಿನವು ಹೊಸತನದಿಂದ ಕೂಡಿರುತ್ತದೆ. ಪ್ರೀತಿ ಎನ್ನುವುದು ಮದುವೆಯಾದ ಕೆಲವು ವರ್ಷಗಳಿಗೆ ಮುಗಿದು ಹೋಗಬಾರದು, ಕೊನೆವರೆಗೂ ನಮ್ಮ ಜೊತೆಯಲ್ಲೇ ಉಳಿಯಬೇಕಾದ ಅನುಭೂತಿ. ಅದು ದೇಹಕ್ಕೆ ಬೇಕಾದ ಆಕ್ಸಿಜನ್ನಂತೆ, ಜೀವನಕ್ಕೆ ಪ್ರೀತಿ ಅವಶ್ಯಕ. ಅದನ್ನು ಕೊನೆವರೆಗೂ ಮಕ್ಕಳಂತೆ ಪೋಷಿಸಬೇಕು ಎನ್ನುವ ಷರತ್ತಿನ ಮೇಲೆ ನಿಂತವರು ನಾವು, ಅದನ್ನು ಉಳಿಸಿಕೊಂಡಿದ್ದೇವೆ.

ಒಂದು ಅಪ್ಪುಗೆ ಹಾಗೂ ಸಿಹಿ ಮುತ್ತಿನೊಂದಿಗೆ ಶುರುವಾಗುವ ನಮ್ಮ ದಿನದ ಆರಂಭವು, ಮಧುರವಾಗಿ ಮುಂದುವರಿದು, ರಾತ್ರಿಯೂ ಕೂಡ ಇದರಿಂದಲೇ ಮುಕ್ತಾಯವಾಗುತ್ತದೆ. ಪ್ರತಿ ದಿನ ಒಬ್ಬರನ್ನೊಬ್ಬರು ನೋಡಿದಾಗ ಇದೇ ಮೊದಲನೇ ಸಾರಿ ನೋಡುತ್ತಿದ್ದೇವೆ ಎನ್ನುವಂತೆ ಪುಳಕಿತರಾಗುತ್ತೇವೆ, ಖುಷಿಪಡುತ್ತೇವೆ, ಜತೆಯಲ್ಲಿ ಯಾರಿದ್ದರೂ ಇಲ್ಲದಿದ್ದರೂ ನಮ್ಮಿಬ್ಬರ ಕಂಪನಿಯನ್ನು, ಒಡನಾಟವನ್ನು ಎಂಜಾಯ್ ಮಾಡುತ್ತೇವೆ. ನಾವಿದನ್ನ ಕೇವಲ ಸೋಶಿಯಲ್ ಮೀಡಿಯಾಗೋ, ತೋರಿಕೆಗೋ ಎಂದೂ ಮಾಡಿಲ್ಲ.

ಎಲ್ಲದರಲ್ಲೂ ಪರ್ಫೆಕ್ಟ್ ಇರುವ ನಿನಗೂ, ಆಗಾಗ ಇಂಪರ್ಫೆಕಟ್ ಎನಿಸಿರುವ ನನಗೂ ಒಂದು ರೀತಿಯ ವಿಭಿನ್ನವಾದ ಬಂಧ. ಅಪೋಸಿಟ್ ಪೋಲ್ಸ್ ಅಟ್ರಾಕ್ಟ್ ಅನ್ನೋ ಹಾಗೆ, ಪ್ರೀತಿ ಒಂದನ್ನು ಬಿಟ್ಟು ಯಾವುದರಲ್ಲೂ ಸಾಮ್ಯತೆ ಇಲ್ಲ ನಮ್ಮಿಬ್ಬರಲ್ಲಿ! ಊಟ – ತಿಂಡಿ, ಉಡುಗೆ ತೊಡುಗೆ, ವೇಷ ಭಾಷೆ ಎಲ್ಲವೂ ವಿಭಿನ್ನ. ಒಬ್ಬರಿಗೊಬ್ಬರು ಕೆಲವೊಂದು ಸ್ವಭಾವಗಳನ್ನು ಬದಲಾಯಿಸಿಕೊಂಡಿದ್ದೇವೆ ಕೆಲವೊಂದನ್ನು ಹಾಗೆಯೇ ಒಪ್ಪಿಕೊಂಡಿದ್ದೇವೆ. ಇಬ್ಬರೂ ಜಗಳ ಆಡಿದ್ದೇವೆ, ಪರಸ್ಪರ ದೂರು ನೀಡಿಕೊಂಡಿದ್ದೇವೆ, ಜೊತೆ ಜೊತೆಗೆ ಅತ್ತಿದ್ದೇವೆ. ಜಗಳ ಆದ ಎರಡು ಮೂರು ದಿನದವರೆಗೂ ಮಾತು ಬಿಟ್ಟಿದ್ದೇವೆ, ಕೆಲವೊಮ್ಮೆ ಎರಡು ಮೂರು ನಿಮಿಷಕ್ಕೆ ಸರಿ ಹೋಗಿದ್ದೇವೆ, ಯಾರೇ ಸೋತರೂ, ಪ್ರೀತಿ ಸೋಲಬಾರದು ಎನ್ನುವುದನ್ನು ತಿಳಿಸಿಕೊಟ್ಟ ನನ್ನ ಲವ್ ಗುರು ನೀನು. ಇದೇ ಅಲ್ಲವೇ ಪ್ರೀತಿಯ ತಾಕತ್ತು! ಪ್ರೀತಿಯ ಜತೆ ಸ್ನೇಹವೂ ಇದ್ದಾಗ, ಇದೆಲ್ಲವೂ ಸಾಧ್ಯ.

ಪ್ರೀತಿ ಎಂದರೆ ಕೇವಲ ಪಡೆದುಕೊಳ್ಳುವುದಷ್ಟೇ ಎಂದು ತಿಳಿದುಕೊಂಡವನಿಗೆ, ಕೆಲವನ್ನು ಕಳೆದುಕೊಳ್ಳಬೇಕು ಎಂದು ತಿಳಿಸಿದವಳು ನೀನು, ಸಾರಿ ಕೇಳುವುದು ಎಂದರೆ ಸಣ್ಣವರಾದಂತೆ ಎಂದು ತಿಳಿದುಕೊಂಡವನಿಗೆ ಯಾರದೇ ತಪ್ಪಿದ್ದರೂ ಮೊದಲು ನೀನೆ ‘ಸಾರಿ’ ಕೇಳಿ ಈಗ ನನಗೂ ಅದನ್ನೇ ಕಲಿಸಿಕೊಟ್ಟಿದ್ದೀಯ! ಸೋತು ಗೆಲ್ಲುವುದು ಎಂದರೆ ಇದೇ ಇರಬೇಕು.

ನೀನು ನೋಡುವ, ನಿನ್ನನ್ನು ನೋಡುವ ಹುಡುಗರ ಬಗ್ಗೆಯೂ ಎಲ್ಲ ಹೇಳಿ ಬೈಸಿಕೊಂಡಿದ್ದೀಯ, ನಾನು ಮಾಡುವ ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟಿದ್ದೀಯಾ, ಮೆಚ್ಚಿ ಅಪ್ಪಿಕೊಂಡಿದ್ದೀಯ, ತಪ್ಪುಗಳನ್ನು ತಿದ್ದಿದ್ದಿಯ, ಊರೇ ಎದುರಾದರೂ ನಿನ್ನೊಂದಿಗೆ ನಾನಿದ್ದೇನೆ ಎಂದು ಜತೆ ನಿಂತಿದ್ದೀಯ. ಇಷ್ಟೊಂದು ಒಳ್ಳೆ ಹುಡ್ಗಿ ನಂಗೇ ಸಿಕ್ಕಿದನಲ್ಲ ಅಂತಾ ಖುಷಿಲಿ ತೇಲಿಸಿದ್ದೀಯ.

ಗಂಡ ಎಂದರೆ ಕೇವಲ ಹೊರಗಡೆ ದುಡಿದು ಮನೆಯಲ್ಲಿ ಏನೂ ಕೆಲಸ ಮಾಡದೇ ಇರುವವನು ಎನ್ನುವ ಕಲ್ಪನೆಯನ್ನು ಸುಳ್ಳು ಮಾಡಿದ್ದೀಯಾ. ಅಮ್ಮನಿಗಿಂತಲೂ ಅಪ್ಪನೂ ಹೆಚ್ಚಿನ ಪ್ರೀತಿಯನ್ನು ಕೊಡಬಲ್ಲ ಎನ್ನುವುದನ್ನು ತೋರಿಸಿದ್ದೀಯ. ತಿಂಗಳಿನ ಯಾವ ದಿನವಾದರೂ ನನ್ನೊಂದಿಗೆ ವಾದ ಮಾಡುವ, ಜಗಳ ಮಾಡುವ ನೀನು ತಿಂಗಳಿನ ಕೆಲ ದಿನಗಳಲ್ಲಿ ಮಾತ್ರ ನನ್ನ ಸಿಟ್ಟನ್ನು, ಅದಕ್ಕೆ ಕಾರಣವನ್ನು ನೆನಪಲ್ಲಿಟ್ಟುಕೊಂಡು ನೀನೇ ಸೋತು ನನ್ನನ್ನು ಗೆಲ್ಲಿಸಿ ನನಗೆ ಸಮಾಧಾನಗೊಳಿಸುತ್ತೀಯಾ, ಒಲವೆಂದರೆ ಇದೇ ಅಲ್ಲವೇ? ಸೋತು ಗೆಲ್ಲುವುದು, ಕಲಿಸುತ್ತಾ ಕಲಿಯುವುದು, ಒಟ್ಟಾಗಿ ಬೆಳೆಯುತ್ತಾ ಹೋಗುವುದು, ನಿನ್ನಿಂದ ನಾನು, ನನ್ನಿಂದ ನೀನು ಕಲಿಯುತ್ತಿದ್ದೇವೆ, ಕೆಲ ವಿಷಯಗಳಲ್ಲಿ ನನಗೆ ನೀನು ಗುರು, ಇನ್ನು ಕೆಲವು ವಿಷಯಗಳಲ್ಲಿ ನಿನಗೆ ನಾನು ಗುರು. ಪ್ರೀತಿ ಹೀಗೆ ನಿರಂತರವಾಗಿರಲಿ ನನ್ನ ಲವ್ ಗುರುವೇ!

ಇಂತಿ

ನಿನ್ನ ಗುಂಗಿನಲ್ಲಿ ಕಳೆದು ಹೋದವನು..

 

BOX :-
ಯಾರೇ ಸೋತರೂ, ಪ್ರೀತಿ ಸೋಲಬಾರದು ಎನ್ನುವುದನ್ನು ತಿಳಿಸಿಕೊಟ್ಟ ನನ್ನ ಲವ್ ಗುರು ನೀನು. ಇದೇ ಅಲ್ಲವೇ ಪ್ರೀತಿಯ ತಾಕತ್ತು! ಪ್ರೀತಿಯ ಜತೆ ಸ್ನೇಹವೂ ಇದ್ದಾಗ, ಇದೆಲ್ಲವೂ ಸಾಧ್ಯ.


Share