ಮೈಸೂರು ಜಿಲ್ಲೆಯಲ್ಲಿ 547 ಕೆರೆ ಅಭಿವೃದ್ಧಿ

298
Share

 

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 42 ಲಕ್ಷ ಮಾನವ ದಿನ ಸೃಜನೆ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ಯೋಗೀಶ್

ಮೈಸೂರು, ಫೆ.2: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಗೆ ನಿಗದಿಯಾಗಿದ್ದ 34 ಲಕ್ಷ ಮಾನವ ದಿನಗಳ ಗುರಿಗೂ ಮೀರಿ 42 ಲಕ್ಷ ಮಾನವ ದಿನ ಸೃಜನೆ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ಯೋಗೀಶ್ ಅವರು ತಿಳಿಸಿದರು‌.

ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ತಿ.ನರಸೀಪುರ ತಾಲ್ಲೂಕಿನ ತಲಕಾಡು ವೈದ್ಯನಾಥೇಶ್ವರ ದೇವಾಲಯದ ಆವರಣದಲ್ಲಿ ಶ್ರಮದಾನ ಮಾಡುವ ಮೂಲಕ ನರೇಗಾ ದಿವಸವನ್ನು ಆಚರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ಗ್ರಾಮೀಣ ಜನರ ಜೀವನೋಪಾಯಕ್ಕೆ ವರದಾನವಾಗಿರುವ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 42 ಲಕ್ಷ ಗುರಿ ಸಾಧಿಸುವ ಮೂಲಕ ಶೇ.120 ರಷ್ಟು ಸಾಧನೆ ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೋವಿಡ್ ಕಾಲಗಟ್ಟದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು ಎಂಬ ಆಶಯದೊಂದಿಗೆ ಕಾಮಗಾರಿಗಳನ್ನು ಹೆಚ್ಚಿನ ಮಟ್ಟದಲ್ಲಿ ಕೈಗೊಳ್ಳಲಾಗಿತ್ತು‌. ನಗರ ಪ್ರದೇಶದಲ್ಲಿ ವಾಸವಿದ್ದವರು ಉದ್ಯೊಗದಿಂದ ವಂಚಿತರಾಗಿ ಗ್ರಾಮಕ್ಕೆ ಹಿಂತಿರುಗಿದರು. ಆ ಸಂದರ್ಭದಲ್ಲಿ ಎಲ್ಲರಿಗೂ ಕೆಲಸ ನೀಡಬೇಕು ಉದ್ದೇಶ ಗಮನದಲ್ಲಿರಿಸಿ ಪ್ರಗತಿ ಸಾಧಿಸಲಾಗಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಸಮಗ್ರ ಕೆರೆ ಅಭಿಯಾನ ಕೈಗೊಂಡು 547 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಕೆರೆ ಅಭಿವೃದ್ಧಿಪಡಿಸುವಲ್ಲಿ ರಾಜ್ಯದಲ್ಲೆ ಮೈಸೂರು ಜಿಲ್ಲೆ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಮೂಲಕ ಗ್ರಾಮದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡುವಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಜಿಲ್ಲೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಎಲ್ಲಾ ಸಿಬ್ಬಂದಿಗಳು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡಿದ್ದಾರೆ ಹೀಗಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿ, ಇದೇ ರೀತಿಯ ಕಾರ್ಯಕ್ಷಮತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು‌.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಕೆ.ಸಿ.ದೇವರಾಜೇಗೌಡ ಅವರು ಮಾತನಾಡಿ, ಭಾರತವು ಗ್ರಾಮಗಳ ದೇಶವಾಗಿದ್ದು, ಗ್ರಾಮೀಣ ಜನರ ಉದ್ಯೋಗ ಮತ್ತು ಜೀವನ ಮಟ್ಟ ಸುಧಾರಣೆಗೆ ಹಲವಾರು ಯೋಜನೆಗಳು ಜಾರಿಗೆ ಬಂದಿದೆ. ಆದರೆ ಪರಿಪೂರ್ಣವಾಗಿ ಗ್ರಾಮ ಹಾಗೂ ಗ್ರಾಮೀಣ ಜನರಿಗೆ ಜೀವನೋಪಾಯಕ್ಕೆ ಹಾಗೂ ಗ್ರಾಮದ ಅಭ್ಯುದಯಕ್ಕೆ ನರೇಗಾ ಯೋಜನೆಯು ನೆರವಾಗಿದ್ದು, ಈ ಯೋಜನೆಯು ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ ತರುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಎಲ್ಲಾ ಜನರ ಮೂಲ ಗ್ರಾಮೀಣ ಪ್ರದೇಶವೇ ಆಗಿದೆ. ಗ್ರಾಮದ ಜನರ ಸಂಪೂರ್ಣ ಅಭಿವೃದ್ಧಿಗೆ ನರೇಗಾ ಯೋಜನೆಯಲ್ಲಿ ಅವಕಾಶವಿದ್ದು, ಈ ಯೋಜನೆ ಮುಖೇನ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ. ಈ ಹಿನ್ನೆಲೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ಷೇತ್ರಮಟ್ಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಾರ್ಥಕತೆ ತರಬೇಕಿದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜರುಗಿದ ಸಮುದಾಯ ಕಾಮಗಾರಿಗಳಲ್ಲಿ 100 ದಿನ ಸಕ್ರಿಯವಾಗಿ ಭಾಗವಹಿಸಿದ ನಾಗಮಣಿ, ಪುಟ್ಟಸಿದ್ದಮ್ಮ, ಮುದ್ದಮ್ಮ ಹಾಗೂ ಚಿನ್ನಮ್ಮಣ್ಣಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಪುಟ್ಟಸಿದ್ದಮ್ಮ ಅವರು ಮಾತನಾಡಿ, ಕೋರಾನ ವೇಳೆ ಎಲ್ಲಿಯೂ ಕೆಲಸ ದೊರಕದಂತಾಗಿತ್ತು. ಈ ಸಂದರ್ಭದಲ್ಲಿ ಕೆಲಸ ಮಾಡಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಹಕಾರಿಯಾಗಿತು. ಜೀವನ ಸಾಗಿಸಲು ನಮಗೆ ನೆರವಾಯಿತು ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಸಹಾಯಕ ಯೋಜನಾಧಿಕಾರಿ ವಿ.ಪಿ.ಕುಲದೀಪ್, ತಿ‌.ನರಸೀಪುರ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಪಿರಿಯಾಪಟ್ಟಣದ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ಮೈಸೂರು ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ&ಉ) ಕೆ.ಎಂ.ರಘುನಾಥ್, ತಿ.ನರಸೀಪುರ ತಾ.ಪಂ. ಸಹಾಯಕ ನಿರ್ದೇಶಕರಾದ ಮಹದೇವ್, ಜಿಲ್ಲಾ ಸಮಾಜಿಕ ಲೆಕ್ಕ ಪರಿಶೋಧಕರಾದ ರೂಪ, ತಲಕಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಂಪಯ್ಯ, ಪಿಡಿಒ ಶ್ರೀನಿವಾಸಮೂರ್ತಿ, ಸಂಘದ ಅಧ್ಯಕ್ಷರಾದ ಪಿ.ಸುಗಂಧರಾಜು, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಎಸ್.ಸಂಧ್ಯಾರಾಣಿ, ಗೌರವಾಧ್ಯಕ್ಷರಾದ ಎಚ್.ಎಲ್.ಲೋಕೇಶ್, ಸಹ ಕಾರ್ಯದರ್ಶಿ ರಕ್ಷಿತ್ ಸೇರಿದಂತೆ ತಾಂತ್ರಿಕ ಸಂಯೋಜಕರು, ಜಿಲ್ಲಾ ಹಾಗೂ ತಾಲ್ಲೂಕು ಐ.ಇ.ಸಿ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯ ಅಭಿಯಂತರರು ಹಾಜರಿದ್ದರು.


Share