ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ: ಶ್ರೀಪಾದವಲ್ಲಭ ಚರಿತ್ರೆ

808
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ – ಅಧ್ಯಾಯ 1

ಪುಟ – 2

ಮರುದಮಲೈ ಗ್ರಾಮದಲ್ಲಿರುವ ಆ ಬೆಟ್ಟವು ನೋಡಲು ಬಹಳ ಮುದ್ದಾಗಿದೆ. ಆ ಬೆಟ್ಟದಲ್ಲಿ ಕೆಲವು ಗುಹೆಗಳೂ ಇವೆ. ಆ ಗುಹೆಗಳಲ್ಲಿ ಸಿದ್ಧಪುರುಷರು ಅದೃಶ್ಯ ರೂಪದಿಂದ ಈಗಲೂ ತಪಸ್ಸನ್ನು ಆಚರಿಸುತ್ತಿರುವರೆಂದು ತಿಳಿಯಿತು. ನನ್ನ ಅದೃಷ್ಟರೇಖೆ ಚೆನ್ನಾಗಿದ್ದಲ್ಲಿ ಯಾರಾದರೂ ಮಹಾಪುರುಷರ ದರ್ಶನವು ಲಭಿಸುವುದೇನೋ ಎಂಬ ನಿರೀಕ್ಷಣೆಯಿಂದ ಆ ಗುಹೆಗಳತ್ತ ನೋಡುತ್ತಿದ್ದೆ. ಒಂದು ಗುಹೆಯ ದ್ವಾರದಲ್ಲಿ ಮಾತ್ರ ಒಂದು ದೊಡ್ಡ ಹುಲಿಯು ನಿಂತಿರುವುದನ್ನು ನೋಡಿದೆ. ನನ್ನ ದೇಹವೆಲ್ಲವೂ ಹೆದರಿಕೆಯಿಂದ ನಡುಗುತ್ತಿತ್ತು. ಭಯವಿಹ್ವಲನಾದ ನಾನು ಏಕಾಏಕಿ ` ಶ್ರೀಪಾದ | ಶ್ರೀವಲ್ಲಭ ! ದತ್ತ ಪ್ರಭು ! ‘ ಎಂದು ಗಟ್ಟಿಯಾಗಿ ಕೂಗಿದನು. ಆ ದೊಡ್ಡ ಹುಲಿ ಸಾಧು ಜಂತುವಿನಂತೆ ನಿಶ್ಚಲವಾಗಿ ನಿಂತಿತ್ತು. ಈ ಗುಹೆಯಿಂದ ಒಬ್ಬ ವೃದ್ಧ ತಪಸ್ವಿಯು ಹೊರಗೆ ಬಂದನು. ಮರುದಮಲೈ ಪ್ರಾಂತವೆಲ್ಲಾ ಒಂದೇಸಾರಿ ಶ್ರೀಪಾದ ಶ್ರೀವಲ್ಲಭರ ಹೆಸರಿನಿಂದ ಪ್ರತಿಧ್ವನಿಸಿತು . ಅಷ್ಟರಲ್ಲಿ ಆ ವೃದ್ಧ ತಪಸ್ವಿಯು, ‘ ಮಗೂ ! ನೀನು ಧನ್ಯ , ಶ್ರೀದತ್ತ ಪ್ರಭುವು ಈ ಕಲಿಯುಗದಲ್ಲಿ ಶ್ರೀಪಾದ ಶ್ರೀವಲ್ಲಭರೆಂಬ ಹೆಸರಿನಿಂದ ಅವತರಿಸಿರುವರೆಂದು ಮಹಾಸಿದ್ಧ ಪುರುಷರಿಗೆ, ಯೋಗಿಗಳಿಗೆ, ಜ್ಞಾನಿಗಳಿಗೆ, ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರುವ ಪರಮಹಂಸರಿಗೆ ಮಾತ್ರ ಗೊತ್ತು, ನೀನು ಅದೃಷ್ಟವಂತನಾದುದರಿಂದಲೇ ಇಲ್ಲಿಗೆ ಬಂದಿದ್ದೀಯೆ. ಇದು ತಪೋಭೂಮಿ, ಸಿದ್ದಭೂಮಿ, ನಿನ್ನ ಕೋರಿಕೆಯು ಸಿದ್ಧಿಸುವುದು. ತಪ್ಪದೆ ನಿನಗೆ ಶ್ರೀವಲ್ಲಭರ ದರ್ಶನವು ಲಭಿಸುವುದು. ಈ ಗುಹೆಯ ಬಾಗಿಲಲ್ಲಿರುವ ಈ ದೊಡ್ಡ ಹುಲಿಯು ಒಬ್ಬ ಜ್ಞಾನಿ. ಆ ಜ್ಞಾನಿಗೆ ನಮಸ್ಕಾರ ಮಾಡು ‘ ಎಂದು ಹೇಳಿದನು .
ಆಗ ನಾನು ಹುಲಿರೂಪದಲ್ಲಿದ್ದ ಆ ಜ್ಞಾನಿಗೆ ನಮಸ್ಕರಿಸಿದೆನು. ತಕ್ಷಣವೇ ಆ ದೊಡ್ಡ ಹುಲಿಯು ಓಂಕಾರ ಮಾಡಿತು. ಆ ಧ್ವನಿಯು ಆ ಮರುದಮಲೈ ಬೆಟ್ಟದಲ್ಲೆಲ್ಲಾ ಪ್ರತಿಧ್ವನಿಸಿತು. ಸುಶ್ರಾವ್ಯವಾಗಿ, ‘ ಶ್ರೀಪಾದರಾಜಂ ಶರಣಂ ಪ್ರಪದ್ಯೆ’ ಎಂದು ಆಲಾಪಿಸಿತು. ನಾನು ಈ ವಿಸ್ಮಯಕರವಾದ ದೃಶ್ಯವನ್ನು ನೋಡುತ್ತಿದ್ದೆನು. ತಕ್ಷಣವೇ ಆ ಹುಲಿಯು ಧೂಳೀಕಣಗಳಾಗಿ ಪರಿವರ್ತನೆ ಹೊಂದಿ ಆ ಕಣಗಳಿಂದ ಕಾಂತಿಮಯ ದಿವ್ಯದೇಹಧಾರಿಯಾದ ಒಬ್ಬ ಪುರುಷನು ಮೈದೋರಿದನು. ಆ ದಿವ್ಯಪುರುಷನು ಆ ವೃದ್ಧ ತಪಸ್ವಿಗೆ ನಮಸ್ಕಾರ ಮಾಡಿ ತನ್ನ ಕಾಂತಿಮಯ ಶರೀರದೊಂದಿಗೆ ಆಕಾಶಮಾರ್ಗವಾಗಿ ಹೊರಟು ಹೋದನು. ನನ್ನ ಎದುರಿಗಿದ್ದ ವೃದ್ಧ ತಪಸ್ವಿಯು ಮಂದಹಾಸಯುಕ್ತನಾದನು, ನನ್ನನ್ನು ಗುಹೆಯೊಳಕ್ಕೆ ಬರುವಂತೆ ಆಹ್ವಾನಿಸಿದನು. ನಾನು ಮೌನವಾಗಿ ಗುಹೆಯೊಳಗೆ ಪ್ರವೇಶಿಸಿದೆನು.
ವೃದ್ಧ ತಪಸ್ವಿಯ ನೇತ್ರಗಳಿಂದ ಕರುಣರಸವು ಪ್ರವಹಿಸುತ್ತಿತ್ತು. ತನ್ನ ಸಂಕಲ್ಪ ಮಾತ್ರದಿಂದಲೇ ಆತನು ಅಗ್ನಿಯನ್ನು ಸೃಷ್ಟಿಸಿದನು. ಆ ದಿವ್ಯಾಗ್ನಿಯಲ್ಲಿ ಆಹುತಿ ಕೊಡುವುದಕ್ಕಾಗಿ ಪವಿತ್ರ ಪೂಜಾಸಾಮಗ್ರಿಗಳನ್ನು , ಕೆಲವು ಮಧುರ ಪದಾರ್ಥಗಳನ್ನು ಸೃಷ್ಟಿಸಿದನು. ವೈದಿಕ ಮಂತ್ರೋಚ್ಚಾರಣೆ ಮಾಡುತ್ತಾ ಆತನು ಅವುಗಳನ್ನು ದಿವ್ಯಾಗ್ನಿಗೆ ಆಹುತಿಗೈದನು. ಆ ವೃದ್ಧ ತಪಸ್ವಿಯು, “ ಲೋಕದಲ್ಲಿ ಯಜ್ಞಯಾಗಾದಿ ಸತ್ಕರ್ಮಗಳು ಲುಪ್ತವಾಗಿ ಹೋಗುತ್ತಿವೆ. ಪಂಚಭೂತಗಳಿಂದ ದೇಹವನ್ನು ಹೊಂದಿದ ಮಾನವನು ಪಂಚಭೂತಾತ್ಮಕವಾದ ದೈವವನ್ನು ಮರೆತು ಬಿಡುತ್ತಿದ್ದಾನೆ. ದೇವತಾಪ್ರೀತ್ಯರ್ಥ ಯಜ್ಞಗಳನ್ನು ಮಾಡಬೇಕು . ಅವುಗಳಿಂದ ದೇವತೆಗಳು ಸಂತೃಪ್ತಿಯನ್ನು ಹೊಂದುತ್ತಾರೆ. ಅವರ ಅನುಗ್ರಹದಿಂದ ಪ್ರಕೃತಿಯು ಪ್ರಸನ್ನಳಾಗುವಳು. ಪ್ರಕೃತಿಯಲ್ಲಿನ ಯಾವುದೇ ಶಕ್ತಿಯು ಅತಿರೇಕಗೊಂಡರೂ ಮಾನವನು ಸಹಿಸಲಾರನು. ಪ್ರಕೃತಿ ಶಕ್ತಿಗಳನ್ನು ಶಾಂತಗೊಳಿಸದಿದ್ದರೆ ಅನಿಷ್ಟಗಳು ಸಂಭವಿಸುವವು. ಮಾನವನು ಧರ್ಮಮಾರ್ಗದಿಂದ ವಿಮುಖನಾದುದರಿಂದ ಪ್ರಕೃತಿಶಕ್ತಿಗಳಿಂದ ಉಪದ್ರವಗಳು ಸಂಭವಿಸುತ್ತಿವೆ. ಲೋಕಹಿತಾರ್ಥವಾಗಿ ನಾನು ಈ ಯಜ್ಞವನ್ನು ಮಾಡಿದೆನು. ಯಜನವೆಂದರೆ ಒಂದುಗೂಡುವಿಕೆ. ಅದೃಷ್ಟವಶದಿಂದ ನೀನು ಈ ಯಜ್ಞವನ್ನು ನೋಡಿದೆ. ಇದರ ಫಲವಾಗಿ ನಿನಗೆ ದತ್ತಾವತಾರಿಗಳಾದ ಶ್ರೀ ಪಾದವಲ್ಲಭರ ಬಹಳ ಅಲಭ್ಯಕರವಾದ ದರ್ಶನವು ಲಭಿಸುವುದು. ಅನೇಕ ಜನ್ಮಗಳಲ್ಲಿ ಮಾಡಿದ ಎಲ್ಲಾಪುಣ್ಯಗಳೂ ಒಮ್ಮೆಗೇ ಫಲಿತಹೊಂದಿದರೆ ಮಾತ್ರ ಇಂತಹ ಅಲಭ್ಯ ಯೋಗವು ಸಂಭವಿಸಲು ಸಾಧ್ಯ ” ಎಂದು ಹೇಳಿದನು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 3

ಬನ್ನಿ ಬನ್ನಿ – ನಿಮ್ಮ ಕೈಲಿ ನನ್ನೆತ್ಕೊಂಡಿದೀರಿ
ನಾನು ನಿಮ್ಮ ಅಕ್ಷರ ಮಗುವಾಗಿ ಆಡ್ತೀನಿ
ಎತ್ಕೋತೀರೋ,
ಎತ್ತು ಬಿಸಾಡ್ತೀರೋ ನಾಕಾಣೆ ಸಚ್ಚಿದಾನಂದ.

  • ಶ್ರೀ ಸ್ವಾಮೀಜಿ

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share