ರಾಷ್ಟ್ರಪತಿಯಾದರು ಶಿಕ್ಷಕರಾಗಿ ರಾರಾಜಿಸಿದವರು

1761
Share

ರಾಷ್ಟ್ರಪತಿಯಾದರೂ ಶಿಕ್ಷಕರಾಗಿಯೇ ರಾರಾಜಿಸಿದವರು

  • ಬನ್ನೂರು ಕೆ. ರಾಜು
    ಸಾಹಿತಿ-ಪತ್ರಕರ್ತ

ಅದು ಸ್ವಾತಂತ್ರ್ಯಪೂರ್ವದ ಕಾಲ. ಆಗಲೇ ಪ್ರಸಿದ್ಧಿಯ ಶಿಖರ ಕಂಡಿದ್ದ ಜ್ಞಾನದೇಗುಲ ಮೈಸೂರಿನ ಮಹಾರಾಜ ಕಾಲೇಜು. ಆಗ ಅಲ್ಲಿ ಅಷ್ಟೇ ಪ್ರಸಿದ್ಧಿಗಳಿಸಿದ್ದ ಆದರ್ಶ ಶಿಕ್ಷಕರೊಬ್ಬರಿದ್ದರು. ತಮ್ಮ ಮಹಾನ್ ಪ್ರತಿಭೆ, ಪಾಂಡಿತ್ಯ, ವಿನಯ, ವಿದ್ವತ್ತು, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಸಹೃದಯತೆಗಳ ಮೆಟೀರಿಯಲ್ಸ್‌ಗಳಿಂದಲೇ ಅವರು ತಮ್ಮದೇ ಆದ ಬೃಹತ್ ಶಿಷ್ಯಕೋಟೆಯನ್ನು ಕಟ್ಟಿಬಿಟ್ಟಿದ್ದರು. ಅದು ಅಂತಿಂಥಾ ಶಿಷ್ಯಕೋಟೆಯಲ್ಲ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಅಂಥಾರಲ್ಲ ಅಂಥಾದ್ದು. ಏಕೆಂದರೆ, ಅವರಲ್ಲಿ ಕಲಿತ ವಿದ್ಯೆ ಅಷ್ಟು ಗಟ್ಟಿ ಮುಟ್ಟಾದದ್ದು. ಇಂಥ ಉತ್ತಮೋತ್ತಮ ಶಿಕ್ಷಕ ಅರ್ಥಾತ್ ಶ್ರೇಷ್ಠಗುರು ಯಾರಿಗೆ ತಾನೆ ಇಷ್ಟವಾಗಲ್ಲ? ಹಾಗಾಗಿ ಅವರ ಸುತ್ತ ಯಾವಾಗಲೂ ಸುಮಧುರ ಹೂವಿಗೆ ಮುತ್ತುವ ಜೇನ್ನೊಣಗಳಂತೆ ಶಿಷ್ಯರು ತುಂಬಿರುತ್ತಿದ್ದರು. ಆಶ್ಚರ್ಯವೆಂದರೆ ಶಿಷ್ಯರಿಗಷ್ಟೇ ಅಲ್ಲದೆ ಸಹೋದ್ಯೋಗಿಗಳಿಗೂ ಅವರು ಅಷ್ಟೇ ಆಪ್ತರಾಗಿದ್ದರು.

ಇಂಥ ಶಿಕ್ಷಕರಿಗೆ ಇದ್ದಕ್ಕಿದ್ದಂತೆಯೇ ೧೯೨೧ರಲ್ಲಿ ಕೊಲ್ಕತ್ತ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಬರುವಂತೆ ನೇಮಕಾತಿ ಪತ್ರ ಕೈ ಸೇರಿತು. ಸುದ್ದಿ ತಿಳಿದ ಶಿಷ್ಯಕೋಟಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಇಂಥ ತಮ್ಮ ಮನಸೆಳೆದ ಗುರು ಕೊಲ್ಕತ್ತಗೆ ಹೊರಟು ಬಿಡುತ್ತಾರಲ್ಲ ಎಂಬ ದುಃಖ ಅವರನ್ನು ಆವರಿಸಿತು. ಆದರೇನಂತೆ ಮೆಚ್ಚಿನ ಗುರು ಕೊಲ್ಕತ್ತಾಗೆ ಹೊರಡುವ ದಿನ ಬಂದೇ ಬಿಟ್ಟಿತು. ಆದರೆ, ಅವತ್ತು ತಮ್ಮ ದುಃಖವನ್ನೆಲ್ಲಾ ಅದುಮಿಟ್ಟುಕೊಂಡು ತಮ್ಮ ಅಚ್ಚುಮೆಚ್ಚಿನ ಗುರುವನ್ನು ಆ ಶಿಷ್ಯಕೋಟಿ ಬೀಳ್ಕೊಟ್ಟ ಪರಿ ಇದೆಯಲ್ಲ ವ್ಹಾಹ್ ಅದ್ಭುತವಾದದ್ದು! ಜಗತ್ತಿನ ಯಾವ ದೇಶದ ಸರ್ವಾಧಿಕಾರಿ, ಮಹಾರಾಜ, ಸಾರ್ವಭೌಮ, ಚಕ್ರವರ್ತಿಗೂ ಸಿಗಲಾರದಂಥಾದ್ದು!.

ಅಲ್ಲಿ ಅನಗತ್ಯ ವೈಭವ-ವೈಭೋಗಗಳಿರಲಿಲ್ಲ. ಢಂಬಾಚಾರ-ಬೂಟಾಟಿಕೆಯ ದರ್ಶನವಿರಲಿಲ್ಲ. ಅಲ್ಲಿದ್ದಿದ್ದು ಬರೀ ಗುರುಭಕ್ತಿ ಮಾತ್ರ. ಅದಕ್ಕೆ ಒಂದಿನಿತೂ ಕಲ್ಮಶವಿರಲಿಲ್ಲ. ಯಾರ ನೇತೃತ್ವ, ಗುಂಪುಗಾರಿಕೆ, ಒತ್ತಾಯವಿಲ್ಲದೆ ತನ್ನಂತಾನೆ ಪರಿಶುದ್ಧ ಹಾಲ ನದಿಯಾಗಿ ಗುರುಪ್ರೇಮವೆಂಬುದು ಶಿಷ್ಯರ ಎದೆಗಡಲು ತುಂಬಿ ಹರಿದಿತ್ತು. ಅದನ್ನು ಮೈಸೂರು ಸಾಕ್ಷೀಕರಿಸಿ ಇತಿಹಾಸದ ಪುಟಗಳಲ್ಲಿ ದಾಖಲಿಸಿತ್ತು.

ಅವತ್ತು ಶಿಷ್ಯರೆಲ್ಲರೂ ಸೇರಿ ಅಲಂಕರಿಸಿ ತಂದಿದ್ದ ಟಾಂಗಾ ಗಾಡಿಯಲ್ಲಿ ಅಕ್ಷರಶಃ ಗುರುದೇವೋ ಮಹೇಶ್ವರ ಎಂಬಂತೆ ತಮ್ಮ ಗುರುದೇವನನ್ನು ಕೂರಿಸಿದ್ದರು. ಆದರೆ ಟಾಂಗಾ ಗಾಡಿ ಎಳೆಯಲು ಕುದುರೆಗೆ ಅವಕಾಶಕೊಡದೆ ಶಿಷ್ಯರೇ ಹೆಗಲು ಕೊಟ್ಟು ಲಕ್ಷ್ಮೀಪುರಂನಲ್ಲಿದ್ದ ತಮ್ಮ ಗುರುವಿನ ಮನೆಯಿಂದ ರೈಲ್ವೆ ನಿಲ್ದಾಣದವರೆವಿಗೂ ಟಾಂಗಾ ಗಾಡಿಯನ್ನು ಎಳೆದು ನಡೆದಿದ್ದರು. ಗುರುವಿಗೆ ಜೈಕಾರ ಹಾಕುತ್ತಾ ಸಾಗರದಂತೆ ವಿವಿಧ ಕಡೆಗಳಿಂದ ಹರಿದುಬಂದ ಶಿಷ್ಯಕೋಟಿಯ ಮಹಾಪ್ರವಾಹದಿಂದ ಅಂದು ಇಡೀ ರಸ್ತೆ ತುಂಬಿ ತುಳುಕಿತ್ತು. ಅಷ್ಟೇ ಅಲ್ಲ, ಆ ಒಂದು ಕ್ಷಣ ಗುರು-ಶಿಷ್ಯರ ಇಂಥ ಬಾಂಧವ್ಯ ಕಂಡು ಇಡೀ ಮೈಸೂರು ಸಂಭ್ರಮಗೊಂಡು ವಾಹ್ಹ್ ಎಂಥಾ ಗುರು? ಎಂಥಾ ಶಿಷ್ಯರು! ಎಂದು ಉದ್ಗರಿಸಿತ್ತು. ಇತ್ತ ಶಿಷ್ಯರಿಂದ ಗುರು ಮೆರವಣಿಗೆ ಸಾಗಿ ಬರುತ್ತಿದ್ದರೆ ಅತ್ತ ಒಂದು ಗುಂಪು ಮೊದಲೇ ಹೋಗಿ ತಮ್ಮ ಗುರು ಕುಳಿದುಕೊಳ್ಳುವ ರೈಲ್ವೆ ಕಂಪಾರ್ಟ್‌ಮೆಂಟನ್ನು ಚೆಂದವಾಗಿ ಸಿಂಗರಿಸಿತ್ತು. ಅಲ್ಲಿ ಕುಳೀತ ಆ ಗುರುದೇವನನ್ನು ಹೊತ್ತ ರೈಲು ಮೈಸೂರು ನಿಲ್ದಾಣವನ್ನು ಬಿಡುವಾಗ ರೈಲಿನ ವೇಗದಂತೆಯೇ ಗುರು-ಶಿಷ್ಯರ ಅಗಲಿಕೆಯ ದುಃಖವೂ ಹೆಚ್ಚಾಗಿತ್ತು. ವಿಶೇಷವಾಗಿ ಇಂಥ ಶಿಷ್ಯೋತ್ತಮರನ್ನು ಪಡೆದ ನಾನೇ ಧನ್ಯನೆಂಬ ಸಾರ್ಥಕ ಭಾವ ಅವತ್ತು ಆ ಗುರುವನ್ನು ಆವರಿಸಿ ಕಣ್ತುಂಬಿ ತುಳುಕಿತ್ತು.

ತಮ್ಮ ಶಿಷ್ಯಕೋಟಿಯಿಂದ ಇಂಥ ಬೀಳ್ಕೊಡುಗೆಯ ಮಹಾಗೌರವ ಪಡೆದ ಅಂಥ ಆದರ್ಶ ಶಿಕ್ಷಕರು ಬೇರಾರೂ ಅಲ್ಲ. ಅವರೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್. ದೇಶದ ಉಪರಾಷ್ಟ್ರಪತಿ, ರಾಷ್ಟ್ರಪತಿ ಹುದ್ದೆಗೇರಿದರೂ ಅವರು ಮೈಸೂರಿನಲ್ಲಿ ತಮ್ಮ ಶಿಷ್ಯರು ಬೀಳ್ಕೊಟ್ಟ ಬೀಳ್ಕೊಡುಗೆಯ ಸಂದರ್ಭವನ್ನು ಆಗಾಗ್ಗೆ ನೆನೆದು ಆ ದಿನ ಶಿಷ್ಯರು ನನ್ನಲ್ಲಿ ತೋರಿದ ಪ್ರೀತಿಯನ್ನು ನೆನೆದರೆ ಈಗಲೂ ಕಣ್ಣೀರು ಉಕ್ಕುತ್ತದೆ ಎಂದು ಭಾವುಕರಾಗುತ್ತಿದ್ದರಂತೆ.

ಆದರ್ಶ ಸಮಾಜದ ಕನಸುಗಳನ್ನು ಹೊತ್ತಿದ್ದ ಶಿಷ್ಯ ಪ್ರೀತಿಯ ರಾಧಾಕೃಷ್ಣನ್‌ರಂಥ ಶಿಕ್ಷಕರನ್ನು ನಾವಿಂದು ಕಾಣಲಾದೀತೆ? ಬೋಧನಾ ವೃತ್ತಿಯನ್ನೇ ಉಪ ಕಸುಬು ಮಾಡಿಕೊಂಡು, ಬಡ್ಡಿ ಲೇವಾದೇವಿ, ಲ್ಯಾಂಡ್ ಡೆವಲಪರ್, ರಾಜಕೀಯದಂತಹ ಇತರೇ ಚಟುವಟಿಕೆಗಳನ್ನು ಮುಖ್ಯ ಕಸುಬು ಮಾಡಿಕೊಂಡು ಪವಿತ್ರವಾದ ಶಿಕ್ಷಕ ವೃತ್ತಿಗೆ ದ್ರೋಹವೆಸಗುತ್ತಿರುವ ಶಿಕ್ಷಕರೇ ಹೆಚ್ಚು ತುಂಬಿರುವ ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕರನ್ನು ಭೂತಗನ್ನಡಿ ಹಿಡಿದು ಹುಡುಕಬೇಕಷ್ಟೇ! ಇಲ್ಲವೆಂದಲ್ಲ, ಕಾರ್ಗತ್ತಲಲ್ಲಿ ಕಾಣುವ ಬೆಳಕಿನ ಹನಿಗಳಂತೆ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರಷ್ಟೆ. ಆದರೆ ಇಂಥ ಆದರ್ಶ ಶಿಕ್ಷಕರನ್ನು ಹೆಚ್ಚಿಸುವ ದಿಶೆಯಲ್ಲಿ ಶಿಕ್ಷಕರಷ್ಟೇ ಅಲ್ಲ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಯೂ ಪ್ರಾಮಾಣಿಕವಾಗಿ ಇಂದು ಚಿಂತಿಸಬೇಕಾಗಿದೆ. ಏಕೆಂದರೆ ಒಂದು ನಾಡಿನ ಸುಸಂಸ್ಕೃತಿಯನ್ನು ಸಂವೃದ್ಧಿಗೊಳಿಸುವಲ್ಲಿ ಅಲ್ಲಿನ ಗುರು-ಶಿಷ್ಯ ಪರಂಪರೆಯ ಪಾತ್ರ ದೊಡ್ಡದು. ಅದರಲ್ಲೂ ಗುರುವಿನ ಪಾತ್ರ ಬಹು ಮಹತ್ವದ್ದು.

ಶಿಕ್ಷಕನೆಂಬುವ ಹೇಗಿರಬೇಕೆಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ಉಧಾತ್ತ ಧ್ಯೇಯದೊಡನೆ ಶಿಕ್ಷಕ ವೃತ್ತಿಯನ್ನು ಬಹಳ ಬಹಳವಾಗಿ ಗೌರವಿಸುತ್ತಾ ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಸಾರ್ಥಕವೆನಿಸುವ ಅರ್ಥಪೂರ್ಣ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಓರ್ವ ಶ್ರೇಷ್ಠ ಶಿಕ್ಷಕ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ ಮಾತ್ರ ಆಗಿರಲಿಲ್ಲ. ಅಪಾರ ಅನುಭವವುಳ್ಳ, ಅಸಾಧಾರಣ ಅಧ್ಯಯನವುಳ್ಳ ತತ್ವಜ್ಞಾನಿಯೂ ಆಗಿದ್ದರು. ಈ ದಿಸೆಯಲ್ಲಿ ಇವರು ರಚಿಸಿದ್ದ ದಿ ಎಥಿಕ್ಸ್ ಆಫ್ ವೇದಾಂತ ಪ್ರಬಂಧ ಪುಸ್ತಕ ಮತ್ತು ಜಿನ್ಯೂನ್ ಮ್ಯಾನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್ ಹಾಗೂ ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ ಮುಂತಾದ ಕೃತಿಗಳು ಮಹತ್ವವೆನಿಸಿದ್ದು ವಿಶ್ವ ಮನ್ನಣೆಗಳಿಸಿವೆ. ಯಾವುದೇ ವ್ಯಕ್ತಿಯಾಗಲಿ ಬಡವನಾಗಿ ಹುಟ್ಟಿರಲಿ, ಸಿರಿವಂತನಾಗಿ ಹುಟ್ಟಿರಲಿ ಸಾಧನೆಗೆ ಇದಾವುದೂ ಅಡ್ಡಿಯಾಗದು. ಗುರಿ ಸಾಧಿಸುವ ಛಲದ ಜೊತೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿ ಇದ್ದರೆ ಎಂಥಾ ಅದ್ಭುತವನ್ನಾದರೂ ಸಾಧಿಸಬಹುದು ಎಂಬುದಕ್ಕೆ ರಾಧಾಕೃಷ್ಣನ್ ಅವರ ಜೀವನವೊಂದು ಮಹಾಪಠ್ಯವಾಗಿ ನಮ್ಮ ಮುಂದಿದೆ. ಪ್ರತಿಯೊಬ್ಬರೂ ಅದನ್ನು ಅರಿತು ನಡೆಯಬೇಕಷ್ಟೆ.

೧೯೫೧ರಲ್ಲಿ ದೇಶದ ಮೊದಲ ಉಪರಾಷ್ಟ್ರಪತಿಯೂ ಆಗಿ ೧೯೬೨ರಲ್ಲಿ ರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅವರ ಶಿಷ್ಯಕೋಟಿ ಬಯಸಿತು. ಆದರೆ ಆಗ ರಾಧಾಕೃಷ್ಣರು ಶಿಕ್ಷಕ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ತಮಗಿದ್ದ ಅಭಿಮಾನದಿಂದ ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಸಲಹೆ ನೀಡಿದರು. ಅದರಂತೆ ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ ರಾಷ್ಟ್ರಪತಿಗಳಾದರೂ ಶಿಕ್ಷಕರಾಗಿಯೇ ರಾರಾಜಿಸಿದವರು.


Share