ವಿ. ಪ್ರಭಾಕರ್ ಸ್ಮರಣಾರ್ಥ ಲೆಜೆಂಡ್ಸ್ T10 ಕ್ರಿಕೆಟ್ ಪಂದ್ಯಾವಳಿ

460
Share

 

ವಿ. ಪ್ರಭಾಕರ್ ಸ್ಮರಣಾರ್ಥ ಲೆಜೆಂಡ್ಸ್ T10 ಕ್ರಿಕೆಟ್ ಪಂದ್ಯಾವಳಿ

ಮೈಸೂರು: ಮೈಸೂರಿನ ನವೋದಯ ಕ್ರಿಕೆಟ್ ಕ್ಲಬ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಮಾರ್ಚ್ 19 ಮತ್ತು 20ರಂದು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ(ಗಂಗೋತ್ರಿ ಗ್ಲೇಡ್ಸ್)ದಲ್ಲಿ “ವಿ. ಪ್ರಭಾಕರ್ ಸ್ಮರಣಾರ್ಥ ಲೆಜೆಂಡ್ಸ್ T10 ಕ್ರಿಕೆಟ್ ಪಂದ್ಯಾವಳಿ” ಆಯೋಜಿಸಲಾಗಿದೆ.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ನವೋದಯ ಕ್ರಿಕೆಟ್ ಕ್ಲಬ್ನ ಪದಾಧಿಕಾರಿ ಎಂ.ಆರ್. ಸುರೇಶ್, ಮೈಸೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ರಣಜಿ ಟ್ರೋಫಿ, ಕರ್ನಾಟಕ ರಾಜ್ಯ, ಮೈಸೂರು ವಿಭಾಗ ಮತ್ತು ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದ 75ಕ್ಕೂ ಹೆಚ್ಚು ಹಿರಿಯ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಪ್ರತಿ ತಂಡ 10 ಓವರ್ಗಳನ್ನ ಆಡಲಿದ್ದು, 3 ಓವರ್ಗಳ ಪವರ್-ಪ್ಲೇ ಇರಲಿದೆ. ಪ್ರತಿ ಬೌಲರ್ 2 ಓವರ್ಗಿಂತ ಹೆಚ್ಚು ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ. ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಲಿದ್ದು, ಲೀಗ್ ಆಧಾರದಲ್ಲಿ ಪಂದ್ಯಗಳು ನಡೆಯಲಿದೆ. ಪ್ರತಿ ತಂಡ ನಾಲ್ಕು ಪಂದ್ಯಗಳನ್ನು ಆಡಲಿದ್ದು, ಅಗ್ರ ಸ್ಥಾನ ಪಡೆಯಲಿರುವ ಎರಡು ತಂಡಗಳು ಮಾರ್ಚ್ 20ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಫೈನಲ್ನಲ್ಲಿ ಆಡಲು ಅರ್ಹತೆ ಪಡೆಯಲಿವೆ.

ಮಾರ್ಚ್ 19ರಂದು ಬೆಳಗ್ಗೆ 7.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಹೇಮಂತ್ ಕುಮಾರ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 20ರಂದು ಸಂಜೆ 4.30ಕ್ಕೆ ನಡೆಯಲಿದ್ದು, ರಣಜಿ ಮಾಜಿ ಕ್ರಿಕೆಟಿಗರಾದ ಎಸ್. ವಿಜಯ್ ಪ್ರಕಾಶ್, ನವೋದಯ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಕೆ.ಆರ್. ಮೋಹನ್ ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ. ಕೃಷ್ಣಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೋವಿಡ್-19 ನಂತರದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ನಮ್ಮ ಸಹ ಕ್ರಿಕೆಟಿಗರು ತಮ್ಮನ್ನು ಫಿಟ್ ಆಗಿ ಇರಿಸಿಕೊಳ್ಳುವ ಹಾಗೂ ಕ್ರಿಕೆಟ್ನ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ಯುವಕರಿಗೆ ಸ್ಫೂರ್ತಿ ನೀಡಬೇಕೆಂದು ಬಯಸುತ್ತೇವೆ ಎಂದ ಅವರು, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಳು ಹೊರಗಿನಿಂದ ಬರುವವರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ದರವನ್ನು ನಿಗದಿ ಮಾಡಿಲ್ಲ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ. ಕೃಷ್ಣಯ್ಯ ಮಾತನಾಡಿ, ಎಲ್ಲಾ ಆಟಗಾರರು ಪಂದ್ಯಾವಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಟಗಾರರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದನ್ನ ನಾವು ನೋಡಬಹುದು. 1980ರಿಂದ ಇಲ್ಲಿಯವರೆಗೆ ಕ್ರಿಕೆಟ್ ಆಡಿದ ಕ್ರಿಕೆಟಿಗರಗಳಿಗೆ ಈ ಪಂದ್ಯಾವಳಿ ಹಳೆಯ ಸಂಪರ್ಕವಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ನಿರಂತರ ಅಭ್ಯಾಸ ಮಾಡಿದ್ದು, ಆ ಮೂಲಕ ತಮ್ಮನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ಸಂದರ್ಭದಲ್ಲಿ ಆಟಗಾರರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಈ ಪಂದ್ಯಾವಳಿ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ನವೋದಯ ಕ್ರಿಕೆಟ್ ಕ್ಲಬ್ನ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್ ಹಾಜರಿದ್ದರು.

ಪಂದ್ಯಾವಳಿಯ ಹಿನ್ನೆಲೆ:
ನವೋದಯ ಕ್ರಿಕೆಟ್ ಕ್ಲಬ್ ಸಂಸ್ಥಾಪಕರು ಹಾಗೂ ಕ್ರಿಕೆಟ್ ವಲಯದಲ್ಲಿ ಪ್ರಸಿದ್ಧಿ ಪಡೆದಿದ್ದ ವಿ. ಪ್ರಭಾಕರ್ ಅವರ ನೆನಪಿಗಾಗಿ ಈ ಪಂದ್ಯಾವಳಿ ನಡೆಸಲಾಗುತ್ತಿದೆ. ಪ್ರಭಾಕರ್ ಅವರು ಮೈಸೂರು ರಾಜ್ಯ, ಮೊಫುಸಿಲ್ X1, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿಭಾಗದ ತಂಡಗಳನ್ನು ಪ್ರತಿನಿಧಿಸಿದ್ದರು. 1970ರಲ್ಲಿ ತಮ್ಮ ವೃತ್ತಿಯ ಮೂಲಕ ಐಡಿಯಲ್ ಜಾವಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಅವರು, 1992ರಲ್ಲಿ ಕೇವಲ 38 ಎಸೆತಗಳಲ್ಲಿ ವೇಗದ ಶತಕ ಗಳಿಸಿದ್ದು ಸೇರಿದಂತೆ ಕ್ರಿಕೆಟ್ನಲ್ಲಿ ಅವರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಅನೇಕ ಕ್ರಿಕೆಟ್ ಕ್ಲಬ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಭಾಕರ್ ಅವರು ಪ್ರಮುಖ ಪಾತ್ರವಹಿಸಿದ್ದರು. ಕ್ರಿಕೆಟಿಗ ಮತ್ತು ತರಬೇತುದಾರರಾಗಿ ಮಾತ್ರವಲ್ಲದೇ, ಆಯ್ಕೆ ಸಮಿತಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಮೈಸೂರು ವಿಭಾಗದ ವ್ಯವಸ್ಥಾಪಕರಾಗಿ ಹಾಗೂ 1989ರಲ್ಲಿ ಕರ್ನಾಟಕ ರಣಜಿ ತಂಡದ ಸ್ಥಳೀಯ ವ್ಯವಸ್ಥಾಪಕರಾಗಿ, ಮೈಸೂರು ಜಿಲ್ಲಾ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ನ (MDWCA) ಸಂಸ್ಥಾಪಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ನವೋದಯ ಕ್ರಿಕೆಟ್ ಕ್ಲಬ್ ತರಬೇತಿ ವಿಭಾಗವಾಗಿರುವ “ಪ್ರಭಾಕರ್ ಕ್ರಿಕೆಟ್ ಕ್ಲಿನಿಕ್”, 1989ರಿಂದ ಹಲವು ಕ್ರಿಕೆಟಿಗರಿಗೆ ತರಬೇತಿ ನೀಡಿದೆ . ಇವರುಗಳಲ್ಲಿ ಅನೇಕರು ರಣಜಿ ಟ್ರೋಫಿ, ಕರ್ನಾಟಕ ರಾಜ್ಯ ತಂಡ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿಭಾಗದ ತಂಡಗಳಲ್ಲಿ ಆಡಿದ್ದರು.


Share