ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 13

267
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 13
ಓಂ ನಮೋ ಹನುಮತೇ ನಮಃ

ಆಂಜನೇಯ ಜನನ

109) ಅಂಜನಾ ದೇವಿಯನ್ನು ದತ್ತು ಪುತ್ರಿಯಾಗಿ ಸ್ವೀಕರಿಸಿದ ಕುಂಜರ ವಾನರನು, ಅವಳನ್ನು ಕೇಸರಿಗೆ ಕೊಟ್ಟು ಮದುವೆ ಮಾಡಿದನು.
110) ಆ ದಂಪತಿಗಳಿಗೆ ಬೇಗನೆ ಸಂತಾನ ಆಗಲಿಲ್ಲ.
111) ಮತಂಗ ಮಹರ್ಷಿ ಆ ದಂಪತಿಗಳಿಗೆ ಗುರು. ಸಂತಾನಾರ್ಥ ತಪಸ್ಸು ಮಾಡುವಂತೆ ಅವನು ಅಂಜನಾದೇವಿಗೆ ಹೇಳಿದನು.
112) ಅವಳು ತನ್ನ ಗಂಡನ ಅನುಮತಿ ಪಡೆದು, ವೃಷಭಾದ್ರಿಯ ಮೇಲೆ (ಅರ್ಥಾತ್ ಇಂದಿನ ತಿರುಪತಿ ಬೆಟ್ಟದಮೇಲೆ) ಶಿವನನ್ನು ಕುರಿತು ತಪಸ್ಸು ಪ್ರಾರಂಭಿಸಿದಳು.
113) ಹಾಗೆ ತಪಸ್ಸು ಮಾಡುತ್ತಿರುವಾಗ ವಾಯುದೇವನು ಪ್ರತಿದಿನವೂ ಅವಳಿಗೆ ಒಂದೊಂದು ಹಣ್ಣನ್ನು ಕಳಿಸುತ್ತಿದ್ದ.
114) ಅವಳು ಅದನ್ನೇ ಆಹಾರವನ್ನಾಗಿ ಸ್ವೀಕರಿಸಿ ತಪಸ್ಸನ್ನು ಮುಂದುವರೆಸುತ್ತಿದ್ದಳು.
115) ಒಂದು ದಿನ ವಾಯುದೇವನು ತನ್ನೊಳಗೆ ಇದ್ದ ಶಿವತೇಜಸ್ಸನ್ನು ಒಂದು ಹಣ್ಣಾಗಿ ಮಾಡಿ, ಅಂಜನಾದೇವಿಗೆ ಕಳಿಸಿಕೊಟ್ಟ.
116) ಆ ಹಣ್ಣನ್ನು ತಿಂದು ಕೆಲಕಾಲದ ನಂತರ ಅಂಜನಾದೇವಿಗೆ ‘ನಾನು ಗರ್ಭವತಿ ಆಗಿದ್ದೇನೆ’ ಎಂದು ತಿಳಿಯಿತು.
117) ಇದೇನಿದು! ಎಂದು ಅವಳಿಗೆ ಭಯವಾಯಿತು.
118) ಆದರೆ ಆ ಸಮಯದಲ್ಲಿ ಅಶರೀರವಾಣಿಯೊಂದು ಅವಳಿಗೆ ಕೇಳಿ ಬಂತು “ಅಂಜನಾದೇವಿ! ಭಯಪಡಬೇಡ. ಇದು ಶಿವನ ಸಂಕಲ್ಪ. ನಿನ್ನ ಗರ್ಭದಿಂದ ಮಹಾತ್ಮನೊಬ್ಬ ಜನ್ಮಿಸಲಿದ್ದಾನೆ” ಎಂದು.
119) ಅದೇ ಆಕಾಶವಾಣಿಯು ಕೇಸರಿಗೂ ಕೇಳಿಸಿತು.

120) ದಂಪತಿಗಳಿಬ್ಬರೂ ಪರಮಾನಂದ ಪಟ್ಟರು.
121) ನಂತರ ವೈಶಾಖ ಕೃಷ್ಣ ದಶಮಿ, ಶನಿವಾರದಂದು ಮಧ್ಯಾಹ್ನ ಅಂಜನಾ ದೇವಿಗೆ ಗಂಡುಮಗು ಆಯಿತು.
ಶ್ಲೋಕ –
ವೈಶಾಖೇ ಮಾಸಿ ಕೃಷ್ಣಾಯಾಂ
ದಶಮೀ ಮಂದ ಸಂಯುತಾ
ಪೂರ್ವ ಪ್ರೋಷ್ಠಪದಾಯುಕ್ತಾ
ತಥಾ ವೈಧೃತಿ ಸಂಯುತಾ
ತಸ್ಯಾಂ ಮಧ್ಯಾಹ್ನ ವೇಳಾಯಾಂ
ಜನಯಾಮಾಸ ವೈ ಸುತಮ್
122) ಆ ಬಾಲಕನು ಹುಟ್ಟುವಾಗಲೇ ಅವನ ಮೈಮೇಲೆ ಯಜ್ಞೋಪವೀತ, ಬಂಗಾರದ ಕುಂಡಲಗಳು, ರೇಶ್ಮೆ ಬಟ್ಟೆಗಳು ಇದ್ದವು.
123) ಅವನ ದವಡೆಗಳು ಬಹಳ ದೊಡ್ಡದಾಗಿದ್ದವು.
124) ಅವನು ಹುಟ್ಟಿದಾಗ ಆಕಾಶದಿಂದ ಹೂಮಳೆ ಸುರಿಯಿತು. ಎಲ್ಲೆಡೆಗಳಲ್ಲೂ ಶುಭ ಶಕುನಗಳು ಕಾಣಿಸಿಕೊಂಡವು. ಆಕಾಶದಲ್ಲಿ ಇದ್ದ ದೇವತೆಗಳು ಸಂತೋಷದಿಂದ ಆಂಜನೇಯನನ್ನು ಸ್ತುತಿಸಿದರು.
125) ಹೀಗೆ ಅಂಜನಾಗರ್ಭ ಸಂಭೂತನಾದ ಆಂಜನೇಯನಿಗೆ ವಾಲಿಸುಗ್ರೀವರು ಸೋದರ ಮಾವಂದಿರಾದರು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share