ಸಂಪಾದಕೀಯ : ಕಾಂಗ್ರೆಸ್ ಗಾಂಧಿ ಕುಟುಂಬಕ್ಕೆ ಸೀಮಿತ : ಅಪವಾದ ಕಳಚಿದ ಖರ್ಗೆ

143
Share

1885 ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷ ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ ಎಂದೇ ಕರೆಯಲ್ಪಟ್ಟಿರುತ್ತದೆ. ಸುಮಾರು 136 ವರ್ಷಗಳ ಇತಿಹಾಸವುಳ್ಳ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜನಾನುರಾಗಿ ಮುತ್ಸದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಸ್ವಾಗತಾರ್ಹ.
1947 ಭಾರತ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿಯನ್ನು ಭೋಗರಾಜ ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮ್ ದಾಸ್ ಟಂಡನ್, ಜವಾಹರ್ ಲಾಲ್ ನೆಹರೂ, ಯು ಎನ್ ಧೆಬರ್, ಇಂದಿರಾ ಗಾಂಧಿ, ನೀಲಂ ಸಂಜೀವ ರೆಡ್ಡಿ, ಕೆ ಕಾಮರಾಜ್, ಎಸ್ ನಿಜಲಿಂಗಪ್ಪ, ಜಗಜೀವನ್ ರಾಮ್ , ಶಂಕರ್ ದಯಾಳ್ ಶರ್ಮಾ, ದೇವಕಾಂತ ಬರುವಾ, ಕಾಸು ಬ್ರಹ್ಮಾನಂದ ರೆಡ್ಡಿ , ಪಿವಿ ನರಸಿಂಹ ರಾವ್, ಸೀತಾರಾಮ್ ಕೇಸರಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರವರುಗಳು ಪ್ರಮುಖವಾಗಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿ ಹಿಡಿದ ವರಾಗಿದ್ದಾರೆ. ಸೋನಿಯಾ ಗಾಂಧಿ ಅವರು ಅತ್ಯಂತ ದೀರ್ಘ ಅವಧಿಯ ಅಧ್ಯಕ್ಷರು ಎನ್ನಿಸಿಕೊಂಡಿದ್ದಾರೆ.
ಇದೀಗ ಇವರುಗಳ ಸಾಲಿನಲ್ಲಿ ಕರ್ನಾಟಕದ ಹಿರಿಯ ಮುತ್ಸದಿ ಪ್ರಬಲ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೇವಲ ಗಾಂಧಿ ಕುಟುಂಬಕ್ಕಷ್ಟೇ ಮೀಸಲಾಗಿದೆ ಎಂಬ ಅಪವಾದವನ್ನು ತೊಡೆದು ಹಾಕಿದ್ದಾರೆ.
ಭವ್ಯ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿಯನ್ನು ನಡೆಸುವುದು ಅಷ್ಟು ಸುಲಭವಲ್ಲ .
ಭಾರತದಾದ್ಯಂತ ಅದೇ ಪಕ್ಷಕ್ಕೆ ನಿಷ್ಠರಾಗಿರುವ ಅನೇಕ ಹಿರಿಯ ಮುಖಂಡರುಗಳು ಇದ್ದಾಗಿಯೂ ಪಕ್ಷವನ್ನು ಪ್ರಭಾವಿ ಯೊಬ್ಬರ ಹಿಡಿತದಲ್ಲಿ ಇರಬೇಕೆಂದು, ಯಾವುದೇ ಕಾರಣಕ್ಕೂ ಪಕ್ಷ ಒಡೆದು ಹೋಳಾಗಬಾರದು ಎಂಬ ಕಾರಣಕ್ಕಾಗಿ ಎಲ್ಲರೂ ಸೇರಿ ಇಷ್ಟು ವರ್ಷಗಳು ಗಾಂಧಿ ಕುಟುಂಬಕ್ಕೆ ಮೀಸಲಿರಿಸಿಕೊಂಡು ಬರುತ್ತಿದ್ದರು.
ದೀರ್ಘಾವಧಿಯ ಹಾಗೂ ಅನಾರೋಗ್ಯ ದಿಂದಾಗಿ ಸೋನಿಯಾ ಗಾಂಧಿಯವರು ಅಧ್ಯಕ್ಷ ಸ್ಥಾನ ವನ್ನು ಬಿಟ್ಟು ಕೊಡಲು ಮುಂದಾದರೂ ಅವರ ಏಕ ಮೇವ ಪುತ್ರ,ರಾಹುಲ್ ಗಾಂಧಿ ಒಮ್ಮೆ ಅಧ್ಯಕ್ಷರಾದ ಅನುಭವ ಇದ್ದರೂ ಸಹ ಪುನಃ ಅವರನ್ನು ಆ ಸ್ಥಾನಕ್ಕೆ ತರಲು ಸೋನಿಯಾಗಾಂಧಿ ಒಪ್ಪಲಿಲ್ಲ.
ಹಲವಾರು ಪ್ರಸಂಗಗಳಲ್ಲಿ ರಾಹುಲ್ ಗಾಂಧಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಅವರ ವಿರುದ್ಧ ತಮ್ಮದೇ ಪಕ್ಷದ ಹಿರಿಯರು ತಿರುಗಿ ಬೀಳಬಹುದೆಂಬ ಅನುಮಾನದ ಮೇಲೆ ಹಾಗೂ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಭಾರತೀಯ ಜನತಾ ಪಕ್ಷಕ್ಕೆ ಪ್ರಬಲ ಪೈಪೋಟಿ ಯನ್ನು ನೀಡಬಲ್ಲ, ಸಮರ್ಥವಾಗಿ ವಾಕ್ ಸಾಮರ್ಥ್ಯದಿಂದಲೂ ಎದುರಿಸಬಲ್ಲ ಉತ್ತಮ ನಾಯಕನಿಗಾಗಿ 24 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಾತ್ಮಕವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೋನಿಯಾ ಗಾಂಧಿ ಮುಂದಾದರು. ಇದೀಗ ಖರ್ಗೆರವರು ಕಾಂಗ್ರೆಸ್ ಪಕ್ಷದ ಇನ್ನೋರ್ವ ಹಿರಿಯ ಮುಖಂಡ ಶಶಿ ತರೂರ್ ರವರನ್ನು ಹಿಂದಿಕ್ಕುವ ಮೂಲಕ ಐತಿಹಾಸಿಕ ಸ್ಥಾನವನ್ನು ಅಲಂಕರಿಸಿದ್ದಾರೆ .
ಕಾಂಗ್ರೆಸ್ ಪಕ್ಷವು ಒಂದು ದೊಡ್ಡ ಹಡಗು,
ಇದು ವಿದ್ಯಾರ್ಥಿ, ಮಹಿಳಾ ,ಕಾರ್ಮಿಕ, ರೈತ ಹೀಗೆ ಹಲವು ವಿಭಾಗಗಳನ್ನು ಹೊಂದಿದೆ. ಯುನೈಟೆಡ್ ಪ್ರೊಗ್ರೇಸಿವ್ ಅಲೈಯನ್ಸ್ ,ತಮಿಳುನಾಡಿನ ಜಾತ್ಯಾತೀತ ಪ್ರಗತಿಪರ ಒಕ್ಕೂಟ, ಬಿಹಾರ ಮತ್ತು ಜಾರ್ಖಂಡ್ ನ ಮಹಾಘಟಬಂಧನ್ ಕೇರಳದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್, ಮಣಿಪುರದ ಜಾತ್ಯಾತೀತ ಪ್ರಗತಿರಂಗ, ಮೇಘಾಲಯದ ಡೆಮೊ ಡೆಮಾಕ್ರೆಟಿಕ್ ಅಲಯನ್ಸ್ ಹೀಗೆ ಹಲವು ಮೈತ್ರಿಕೂಟಗಳನ್ನು ಹೊಂದಿದೆ.
ಲೋಕಸಭೆಯ 543 ಕ್ಷೇತ್ರಗಳ ಪೈಕಿ 53 ಸ್ಥಾನಗಳನ್ನು,
245 ರಾಜ್ಯಸಭಾ ಸ್ಥಾನಗಳ ಪೈಕಿ 31ಸ್ಥಾನಗಳು,
ರಾಜ್ಯ ಮತ್ತು ಕೇಂದ್ರಾಡಳಿತ 31 ಪ್ರದೇಶಗಳ ಪೈಕಿ 5 ಮಾತ್ರ ಕಾಂಗ್ರೆಸ್ ಹೊಂದಿದೆ.
4036- ರಾಜ್ಯ ಶಾಸನಸಭೆಗಳಲ್ಲಿ 681 ಸ್ಥಾನಗಳನ್ನು ಹೊಂದಿದ್ದರೆ,
426 ರಾಜ್ಯ ವಿಧಾನಪರಿಷತ್ ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಹೊಂದಿದೆ.
ಈ ಅಂಕಿ ಅಂಶಗಳು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೈಗನ್ನಡಿಯಾಗಿದೆ.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದು ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ ಹಾಗೂ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲು ಸಹ ಹಿಂಜರಿಯುವವರಲ್ಲ ಆದ್ದರಿಂದಲೇ ಅವರು ಜನಾನುರಾಗಿಯಾಗಿದ್ದಾರೆ.ಪಕ್ಷಾ ತೀತವಾಗಿ ಎಲ್ಲರೂ ಖರ್ಗೆ ಅವರ ರಾಜಕಾರಣವನ್ನು ಮೆಚ್ಚಿ ಕೊಂಡವರೇ ಆಗಿದ್ದಾರೆ.
ದೀರ್ಘ ಅನುಭವ ಹೊಂದಿರುವ ಗಾಂಧಿ ಕುಟುಂಬದವರ ಸಲಹೆ ಸೂಚನೆಯನ್ನು ತೆಗೆದುಕೊಂಡು ತಾವು ಸಮರ್ಥವಾಗಿ ಪಕ್ಷವನ್ನು ಮುನ್ನಡೆಸುವ ವುದಾಗಿಯೂ ತಾವು ಯಾವುದೇ ಕಾರಣಕ್ಕೂ ರಬ್ಬರ್ ಸ್ಟ್ಯಾಂಪ್ ಅಲ್ಲವೆಂದು ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ಸಿಗರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಖರ್ಗೆ ರವರು ಭವ್ಯ ಇತಿಹಾಸವುಳ್ಳ ಕಾಂಗ್ರೆಸ್ ಅನ್ನು ಮತ್ತೊಮ್ಮೆ ಅಖಿಲ ಭಾರತ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುವರು ಎಂಬುದರಲ್ಲಿ ಸಂದೇಹವಿಲ್ಲ.


Share