ಸಂಪಾದಕೀಯ, ಮೇಲ್ಮನೆ ಗಲಾಟೆ: ರಾಜ್ಯಪಾಲರ ಶಿಸ್ತುಕ್ರಮ ಅಗತ್ಯ

322
Share

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಮೇಲ್ಮನೆಯಲ್ಲಿ ಮಂಗಳವಾರ ನಡೆದ ಘಟನೆ ಅತ್ಯಂತ ಅಮಂಗಳಕರ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕಾರಣಿಗಳಿಗೆ ಇರುವ ಅಧಿಕಾರದಾಸೆ ಯನ್ನು ಈ ಕಲಾಪ ಬಯಲುಮಾಡಿದೆ. ಮೇಧಾವಿಗಳ ಮನೆ, ಮಾನ ಮರ್ಯಾದೆ ಇಲ್ಲದ ಮನೆಯಾಗಿದೆ. ಕೆಲವೇ ಕೆಲವು ಪಟ್ಟಭದ್ರ ರಾಜಕಾರಣಿಗಳಿಂದ ಕಪ್ಪುಚುಕ್ಕೆಯಾಗಿ ಹೋಗಿದೆ.
ಸಮಾಜಸೇವೆ, ಸಹಕಾರ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಿಂದ ತಜ್ಞರನ್ನು ರಾಜ್ಯ ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲರು ನೇಮಕ ಮಾಡುವರು, ಶಿಕ್ಷಣ ಕ್ಷೇತ್ರದ ಪ್ರಮುಖರು, ಪದವೀಧರ ಕ್ಷೇತ್ರದ ತಜ್ಞರು ಹಾಗೂ ಸ್ಥಳೀಯ ಸಂಸ್ಥೆಗಳ ಅನುಭವಿಗಳು ಮೇಲ್ಮನೆ ಸದಸ್ಯರಾಗಬೇಕು ಎಂಬ ಉನ್ನತ ಆಲೋಚನೆಯಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಡಿ.ವಿ.ಜಿ., ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಸಿದ್ಧಲಿಂಗಯ್ಯ ಮುಂತಾದ ಸಾಹಿತಿಗಳೂ ಮೇಲ್ಮನೆ ಸದಸ್ಯರಾಗಿದ್ದರು. ಎಚ್‌.ನರಸಿಂಹಯ್ಯ, ಎಂ.ಪಿ.ಎಲ್‌.ಶಾಸ್ತ್ರಿ, ಪದ್ಮಾವತಿ ವಿಠಲರಾವ್, ಏಜಾಸುದ್ದೀನ್‌ ಮುಂತಾದ ಶಿಕ್ಷಣ ತಜ್ಞರೂ ಇಲ್ಲಿದ್ದರು. ಎಂ.ವೆಂಕಟಕೃಷ್ಣಯ್ಯ, ಖಾದ್ರಿ ಶಾಮಣ್ಣ, ಪಿ.ರಾಮಯ್ಯ ಅವರಂತಹ ಹಿರಿಯ ಪತ್ರಕರ್ತರೂ ಮೇಲ್ಮನೆ ಸದಸ್ಯರಾಗಿದ್ದರು.
ಮಲ್ಲಿಕಾರ್ಜುನ ಮನ್ಸೂರ್‌, ಗಂಗೂಬಾಯಿ ಹಾನಗಲ್‌, ಕೆ.ಸಿ.ರೆಡ್ಡಿ, ಎಚ್‌.ಬಿ.ಗುಂಡಪ್ಪ, ಕೆ.ಬಿ.ಮಲ್ಲಾರಾಧ್ಯ, ಸಿ.ಹಯವದನರಾವ್, ಜೆ.ಮಹಮದ್‌ ಇಮಾಂ, ಕೆ.ಟಿ.ಪುಟ್ಟಣ್ಣ ಚೆಟ್ಟಿ, ಎಸ್‌.ನಿಜಲಿಂಗಪ್ಪ ಮುಂತಾದ ಹಿರಿಯರು ಮೇಲ್ಮನೆ ಸದಸ್ಯರಾಗಿದ್ದರು. ಇಂತಹ ಸರ್ವಶ್ರೇಷ್ಠ ರನ್ನು ಕಂಡ ಮೇಲ್ಮನೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಜನತಾದಳ ಕಾಂಗ್ರೆಸ್ ಪಕ್ಷದವರ ಮಂಗಳವಾರದ ನಡವಳಿಕೆ ಖಂಡನೀಯ! ಖಂಡನೀಯ!! ಖಂಡನೀಯ!!!. ಆಡಳಿತರೂಢ ಬಿಜೆಪಿ ಮತ್ತು ದಳ ಒಂದಾಗಿ ಅವಿಶ್ವಾಸ ಮಂಡನೆ ಮಾಡಲಿದೆ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಕ್ಷಣವೇ ರಾಜೀನಾಮೆ ನೀಡಿದ್ದಾರೆ ಅವರ ಘನತೆ ಹೆಚ್ಚಾಗುತ್ತಿತ್ತು ಆದರೆ ಬಿಜೆಪಿ ಮತ್ತು ದಳದವರು ಉಪಸಭಾಪತಿ ಧರ್ಮೆ ಗೌಡರನ್ನು ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳಲು ಚಿತಾವಣೆ ನಡೆಸಿ ನಗೆಪಾಟಲಿಗೆ ಸಿಲುಕಿದರು.
ಸಭಾ ಮರ್ಯಾದೆ ತೊರೆದ ಕಾಂಗ್ರೆಸ್ಸಿಗರು ಧರ್ಮೇಗೌಡ ರನ್ನು ಕುರ್ಚಿಯಿಂದ ಹೊರಗೆಳೆದು ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧವಾಗಿದೆ. ರಾಜ್ಯಪಾಲರು ಕೂಡಲೇ ಘಟನಾವಳಿಗಳಿಗೆ ಕಾರಣರಾದ ಪ್ರತಿಯೊಬ್ಬ ಸದಸ್ಯರನ್ನು ಗುರ್ತಿಸಿ ಮನೆಯಿಂದ ವಜಾಗೊಳಿಸುವುದು ಒಳಿತು.
ಚೆಂಡು ಈಗ ರಾಜ್ಯಪಾಲರಾದ ಅಂಗಳದಲ್ಲಿದೆ. ಮೇಲ್ಮನೆಯ ಘನತೆ ಮತ್ತೆ ಮರುಕಳಿಸಬೇಕಾದರೆ ರಾಜ್ಯಪಾಲರ ನಿರ್ಣಯ ಅಂತಿಮವಾಗಲಿದೆ.


Share