ಸಂಪಾದಕೀಯ: ಯಡಿಯೂರಪ್ಪ ನವರೆ ಹಿಡಿತ ಕಳೆದುಕೊಳ್ಳಬೇಡಿ!!

617
Share

ಮೊದಲು ಕರ್ನಾಟಕ ರಾಜ್ಯದ ರಾಜಕೀಯ ಪಟುಗಳ ಮಾತುಗಳನ್ನು ಆಲಿಸೋಣ—
ಮಾಜಿ ಸಚಿವ ಎಂಎಲ್ಸಿ ಯೋಗೀಶ್ವರ್ ರವರಿಗೆ ಮತ್ತೆ ಸಚಿವ ಸ್ಥಾನ ನೀಡಬಾರದೆಂದು ರೇಣುಕಾಚಾರ್ಯ, ಕೊಡಲೇಬೇಕೆಂದು ರಮೇಶ್ಜಾರ್ಕಿಹೊಳಿ.
ನೂರಕ್ಕೆ ನೂರು ಯೋಗೀಶ್ವರ್ ಮಂತ್ರಿಯಾಗುವುದು ಖಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ. ಸಾರಾ ಮಹೇಶ್ ಕೊಚ್ಚೆ ಇದ್ದಂಗೆ, ಯೋಗೀಶ್ವರ್ ತಮ್ಮ ಹಣ ಎತ್ತಿಕೊಂಡು ಹೋದವ ಮಂತ್ರಿಸ್ಥಾನ ಹೇಗೆ ಕೊಡುವರು?ಎಂದು ಸಚಿವಾಕಾಂಕ್ಷಿ ಎಚ್ ವಿಶ್ವನಾಥ್.
ದೇವಿ ಚಾಮುಂಡಿ ವಿಶ್ವನಾಥರಿಗೆ ಸರಿಯಾಗಿ ಬುದ್ದಿಕಲಿಸಿದ್ದಾಳೆಂದು ಅವರ ರಾಜಕೀಯ ವೈರಿ ಸಾ ರಾ ಮಹೇಶ್. ಮೂಲ ಹಾಗೂ ವಲಸಿಗರ ಮುಸುಕಿನ ಗುದ್ದಾಟಕ್ಕೆ ಯಡಿಯೂರಪ್ಪ ತೆರೆ ಎಳೆಯುವರು ಎನ್ನುವ ಬಿಎಸ್ ವಿಜಯೇಂದ್ರ….
ಹೀಗೆ ಹತ್ತು ಹಲವು ವಿಷಯಗಳು ಪ್ರಸ್ತುತ ಪ್ರಸ್ತಾಪವಾಗುತ್ತಿದೆ.
ಇದನ್ನೆಲ್ಲಾ ಅವಲೋಕಿಸಿದರೆ ಇಂದು ರಾಜ್ಯದ ಸ್ಥಿತಿ ಏನಾಗಿದೆ? ರಾಜಕೀಯ ವ್ಯಕ್ತಿಗಳ ಮೇಲೆ ಜನರಿಗೆ ಅಸಹ್ಯ ಮೂಡಿಸುತ್ತದೆ ಎಂದು ಇವರುಗಳಿಗೆ ಅನ್ನಿಸುತ್ತಿಲ್ಲವೇ? ಅಧಿಕಾರ ಇದ್ದರಷ್ಟೇ ಇವರು ಜನಸೇವೆ ಮಾಡಲು ಸಾಧ್ಯ ಎಂದು ಕೊಂಡಿದ್ದಾರೆಯೇ? ಲಂಗುಲಗಾಮಿಲ್ಲದೆ ಮಾತನಾಡುವ ಇವರಿಗೆ ಕಡಿವಾಣ ಹಾಕುವವರು ಯಾರು?
ಸಚಿವರಾಗ ಬೇಕೆನ್ನುವ ಏಕೈಕ ಮನೋಭಾವದಿಂದ ಮಾತೃ ಪಕ್ಷವನ್ನು ತೊರೆದು ಬಂದು, ಸೇರಿದ ಪಕ್ಷದಲ್ಲಿನ ಕಾರ್ಯಕರ್ತರನ್ನು ಕ್ಯಾರೆ ಅನ್ನದೆ ,ತಮ್ಮ ಹಿತಾಸಕ್ತಿಗೆ ಮೊಂಡುತನ ಪ್ರದರ್ಶಿಸುವವರನ್ನು ಸಮಾಜ ಒಪ್ಪಿಕೊಳ್ಳಬೇಕೆ?ಮುಖ್ಯಮಂತ್ರಿಗಳಿಗೆ ತಮ್ಮ ಮಾತಿನ ಮೇಲೆ ಹಿಡಿತವಿಲ್ಲ ಎಂದರೆ ಏನು ಅರ್ಥ?
ಸಚಿವ ಸ್ಥಾನಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕೆಂದು ಪಟ್ಟಿ ಕೊಟ್ಟು ಬರುವವರು ಇವರೇ, ನಂತರ ಹೈಕಮಾಂಡ್ ನತ್ತ ಬೆರಳು ತೋರಿಸಿ ಅವರು ನಿರ್ಧರಿಸಿದ ಹಾಗೆ ಎಲ್ಲಾ ನಡೆಯುತ್ತೆ ಎನ್ನುವುದು ಇನ್ನೊಂದೆಡೆ . ಹೈಕಮಾಂಡ್ ಪ್ರಕಟಣೆ ಹೊರಡಿಸುವ ಮುನ್ನವೇ ತಮಗೆ ಬೇಕಾದವರನ್ನು ನೂರಕ್ಕೆ ನೂರು ಸಚಿವರಾಗಿ ಮಾಡುವುದಾಗಿ ಕೆಲವರ ಪರವಾಗಿ ಹೇಳಿಕೆ ಕೊಡುವುದು ಎಷ್ಟು ಸಮಂಜಸ? ಯಾರು ಯಾರನ್ನು ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದ್ದರೂ ಸಹ ಏಕೆ ತಮ್ಮ ಮನಸೋ ಇಚ್ಛೆ ಹೇಳಿಕೆಗಳನ್ನು ಕೊಟ್ಟು ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ? ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳದ ಇವರು ಬೇರೆಯವರು ಸುಮ್ಮನೆ ಇರಲು ಸಾಧ್ಯವೇ? ಯಡಿಯೂರಪ್ಪನವರೆ ನಿಮ್ಮರಾಜಕೀಯ ಮುತ್ಸದ್ದಿತನಕ್ಕೆ ಬೆಲೆ ಬೆಲೆ ಕೊಡಿ ಸ್ವಾಮಿ. ವೋಟು ಕೊಟ್ಟ ಜನತೆಗೂ ವಿರೋಧಪಕ್ಷಗಳಿಗೂ ನಗೆಪಾಟಲಾಗದಿರಿ.


Share